ಈ ಅಧಿವೇಶನದಲ್ಲಿ ಹೊಸದಾಗಿ ಮಂಡಿಸಲಿರುವ ವಿವಾದಿತ ದಿಲ್ಲಿ ಸುಗ್ರೀವಾಜ್ಞೆ ಸೇರಿ 21 ಮಸೂದೆ, ಈಗಾಗಲೇ ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ 12 ಮಸೂದೆಗಳು ಸೇರಿ ಒಟ್ಟು 32 ಮಸೂದೆಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.
ನವದೆಹಲಿ (ಜುಲೈ 20, 2023): ಭಾರಿ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆ ಇರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಗುರುವಾರ ಚಾಲನೆ ಸಿಗಲಿದೆ. ಜುಲೈ 20ರಿಂದ ಆಗಸ್ಟ್ 11ರವರೆಗೆ ಒಟ್ಟು 23 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಈ ಪೈಕಿ 17 ದಿನಗಳ ಕಲಾಪಕ್ಕೆ ಲಭ್ಯವಿರಲಿದೆ. ಈ ಅಧಿವೇಶನದಲ್ಲಿ ಹೊಸದಾಗಿ ಮಂಡಿಸಲಿರುವ ವಿವಾದಿತ ದಿಲ್ಲಿ ಸುಗ್ರೀವಾಜ್ಞೆ ಸೇರಿ 21 ಮಸೂದೆ, ಈಗಾಗಲೇ ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ 12 ಮಸೂದೆಗಳು ಸೇರಿ ಒಟ್ಟು 32 ಮಸೂದೆಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.
ಇದೇ ವೇಳೆ, ಮಣಿಪುರ ಹಿಂಸಾಚಾರ ವಿಷಯವು ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದ್ದು, ಈ ವಿಷಯದ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸರ್ಕಾರವು ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದೆ. ಇದೇ ವೇಳೆ ಟೊಮ್ಯಾಟೋ ಸೇರಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಸದ್ದು ಮಾಡಲಿವೆ.
ಇದನ್ನು ಓದಿ: ಇನ್ಮುಂದೆ ಡೇಟಾ ದುರ್ಬಳಕೆ ಮಾಡಿದ್ರೆ ಬರೋಬ್ಬರಿ 250 ಕೋಟಿ ರೂ. ದಂಡ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ಮುಗಿಬೀಳಲು ವಿಪಕ್ಷ ಸಜ್ಜು:
ದೆಹಲಿಯಲ್ಲಿನ ಸೇವೆಗಳ ಮೇಲಿನ ಅಧಿಕಾರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ, ಮಣಿಪುರ ಹಿಂಸಾಚಾರ, ವಿವಿಧ ರಾಜ್ಯಗಳಲ್ಲಿ ವಿಪಕ್ಷ ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ, ಟೊಮ್ಯಾಟೋ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೂಡಾ ತಿರುಗೇಟಿಗೆ ಸಜ್ಜಾಗಿದೆ. ಹೀಗಾಗಿ ಮುಂಗಾರು ಅಧಿವೇಶನ ‘ಎನ್‌ಡಿಎ’ ಮೈತ್ರಿಕೂಟ ಮತ್ತು ಹೊಸದಾಗಿ ರಚನೆಯಾದ ‘I.N.D.I.A’ ಮೈತ್ರಿಕೂಟದ ನಡುವಿನ ಮೊದಲ ಸದನ ಸಮರಕ್ಕೆ ವೇದಿಕೆಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆ ಇದೆ.
ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಇಂದು ಎನ್‌ಡಿಎ ಸಭೆ: 38 ಪಕ್ಷ ಭಾಗಿ; ಹ್ಯಾಟ್ರಿಕ್ ಜಯಕ್ಕೆ ರಣತಂತ್ರ
ಕಳೆದ ಜನವರಿಯಲ್ಲಿ ನಡೆದ ಬಜೆಟ್ ಅಧಿವೇಶನವನ್ನು ರಾಹುಲ್ ಮತ್ತು ಅದಾನಿ ವಿಷಯ ಆಪೋಷನ ತೆಗೆದುಕೊಂಡಿತ್ತು. ಲಂಡನ್‌ನಲ್ಲಿ ಪ್ರಜಾಪ್ರಭುತ್ವ ಕುರಿತು ನೀಡಿದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದ್ದರೆ, ಅದಾನಿ ಸಮೂಹದ ಕುರಿತು ಹಿಂಡನ್‌ಬರ್ಗ್ ಸಂಸ್ಥೆಯ ವರದಿಯ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ವಿಪಕ್ಷಗಳು ಪಟ್ಟು ಹಿಡಿದ ಕಾರಣ, ಇಡೀ ಅಧಿವೇಶನ ಗದ್ದಲದಲ್ಲಿ ಕೊಚ್ಚಿ ಹೋಗಿತ್ತು.
ಮಹತ್ವದ ಮಸೂದೆ:
ಮುಂಗಾರು ಅಧಿವೇಶನದಲ್ಲಿ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ, ದೆಹಲಿ ಸುಗ್ರೀವಾಜ್ಞೆಗೆ ಪರ್ಯಾಯವಾಗಿ ಮಸೂದೆ, ಜೈವಿಕ ವೈವಿಧ್ಯತಾ ಮಸೂದೆ, ಜನ ವಿಶ್ವಾಸ್ ಮಸೂದೆ, ಬಹುರಾಜ್ಯ ಸಹಕಾರ ಸಂಘಗಳ ಮಸೂದೆ, ಮಧ್ಯಸ್ಥಿಕೆ ಮಸೂದೆ, ಸಿನಿಮಟೋಗ್ರಾಫಿ ತಿದ್ದುಪಡಿ ಮಸೂದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ, ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆ, ರಾಷ್ಟ್ರೀಯ ದಾದಿಯರ ಮಸೂದೆ ಮೊದಲಾದವುಗಳನ್ನು ಮುಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಭ್ರಷ್ಟಾಚಾರವೇ ಅವರ ಗ್ಯಾರಂಟಿ: ಕುಟುಂಬವೇ ಮೊದಲು, ದೇಶ ಲೆಕ್ಕಕ್ಕಿಲ್ಲ; ವಿಪಕ್ಷ ಸಭೆಗೆ ಮೋದಿ ಕೆಂಡಾಮಂಡಲ
ಸರ್ವಪಕ್ಷ ಸಭೆ:
ಅಧಿವೇಶನ ಆರಂಭದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಇದರಲ್ಲಿ ಭಾಗಿಯಾಗಿದ್ದ ಹಲವು ವಿಪಕ್ಷಗಳು, 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಇತ್ತೀಚಿನ ಮಣಿಪುರದ ಜನಾಂಗೀಯ ಹಿಂಸಾಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಲ್ಲದೇ, ಈ ಕುರಿತು ವಿಸ್ತೃತ ಚರ್ಚೆಗೆ ಪಟ್ಟು ಹಿಡಿದವು. ಇದಕ್ಕೆ ಸರ್ಕಾರ ಕೂಡಾ ಸ್ಪಂದಿಸಿದ್ದು, ಸಂಸದೀಯ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರು ಚರ್ಚೆಗೆ ಕಾಲಾವಕಾಶ ನೀಡುವ ಭರವಸೆ ನೀಡಿದರು.
ಇದನ್ನೂ ಓದಿ: 26 ಪ್ರತಿಪಕ್ಷಗಳಿಂದ ‘ಗೇಮ್ ಚೇಂಜರ್’ ಸಭೆ! ‘ಯುನೈಟೆಡ್ ವಿ ಸ್ಟ್ಯಾಂಡ್’ ಘೋಷವಾಕ್ಯದಡಿ ಸಮಾಲೋಚನೆ
ಇಂದು ‘ಇಂಡಿಯಾ’ ಮೈತ್ರಿಕೂಟದ ಮೊದಲ ಸಭೆ
ಮಂಗಳವಾರವಷ್ಟೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ I.N.D.I.A (ಇಂಡಿಯಾ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್) ಎಂಬ ಮೈತ್ರಿಕೂಟ ರಚಿಸಿದ್ದ 26 ವಿಪಕ್ಷಗಳು, ಗುರುವಾರ ದೆಹಲಿಯಲ್ಲಿ ತಮ್ಮ ಮೊದಲ ಸಭೆ ನಡೆಸಲಿವೆ.
ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ರೀತಿ ಮೊದಲಾದ ವಿಷಯಗಳ ಬಗ್ಗೆ ಗುರುವಾರದ ಸಭೆಯಲ್ಲಿ ನಿರ್ಧರಿಸಲಾಗುವುದು. ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಈ ಸಭೆ ಆಯೋಜಿಸಲಾಗಿದೆ.
ಇಂಡಿಯಾ ಮೈತ್ರಿಕೂಟ ತನ್ನ ಆಂತರಿಕ ವಿಷಯಗಳ ಕುರಿತು ಮುಂದಿನ ಸಭೆಯನ್ನು ಮುಂಬೈನಲ್ಲಿ ನಡೆಸಲು ಈಗಾಗಲೇ ನಿರ್ಧರಿಸಿದೆ. ಅದರ ದಿನಾಂಕ ಇನ್ನೂ ನಿಗದಿಯಾಗಬೇಕಿದೆ.