ಅವಿವಾಹಿತ, ಅತ್ಯಾಚಾರ ಸಂತ್ರಸ್ತ ಮಕ್ಕಳ ಕುರಿತು ಮಹತ್ವದ ತೀರ್ಪು, ತಾಯಿ ಹೆಸರು ಮಾತ್ರ ನಮೂದಿಸಲು ಆದೇಶ!

By Suvarna News  |  First Published Jul 25, 2022, 5:06 PM IST

ಅವಿವಾಹಿತ, ಅತ್ಯಾಚಾರ ಸಂತ್ರಸ್ತರ ಮಕ್ಕಳು ದೇಶದ ಪ್ರಜೆ. ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಜನನ ಪ್ರಮಾಣಪತ್ರ ಸೇರಿದಂತೆ ಸರ್ಕಾರಿ ದಾಖಲೆಗಳಲ್ಲಿ ತಾಯಿ ಹೆಸರು ಮಾತ್ರ ಉಲ್ಲೇಖಿಸಿ ಪ್ರಮಾಣ ಪತ್ರ ನೀಡಿ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
 


ಕೊಚ್ಚಿ(ಜು.25):  ತಂದೆ ಯಾರು ಎಂದು ತಿಳಿಯದೆ ಮಹಾಭಾರತದ ಕರ್ಣ ಅನುಭವಿಸಿದ ಮಾನಸಿಕ ಸಂಕಟ, ಸಂಕಷ್ಟ, ಅವಮಾನವನ್ನು ಈಗಿನ ಕಾಲದ ಮಕ್ಕಳು ಅನುಭವಿಸಬಾರದು. ಅತ್ಯಾಚಾರ ಸಂತ್ರಸ್ತರ ಮಕ್ಕಳು, ಅವಿವಾಹಿತೆಯರ ಮಕ್ಕಳ  ಸಾಂವಿಧಾನಿಕ ಹಾಗೂ ಮೂಲಭೂತಕನ್ನು ಕಸಿಯಲು ಸಾಧ್ಯವಿಲ್ಲ.  ಹೀಗಾಗಿ ಅತ್ಯಾಚಾರ ಸಂತ್ರಸ್ತರ ಮಕ್ಕಳು, ಅವಿವಾಹಿತೆಯರ ಮಕ್ಕಳ ಜನನ ಪ್ರಮಾಣಪತ್ರ ಸೇರಿದಂತೆ ಸರ್ಕಾರಿ ದಾಖಲೆಗಳಲ್ಲಿ ತಾಯಿ ಹೆಸರನ್ನು ಮಾತ್ರ ಉಲ್ಲೇಖಿಸಲು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅವಿವಾಹಿತ, ಅತ್ಯಾಚಾರ ಸಂತ್ರಸ್ತರ ಮಗು ಈ ದೇಶ ಪ್ರಜೆಯಾಗಿದೆ. ಅವರ ಖಾಸಗಿ ಬದುಕಿಗೆ ಪ್ರವೇಶಿಸುವ ಅಧಿಕಾರ ಯಾರಿಗೂ ಇಲ್ಲ. ಇಷ್ಟೇ ಅಲ್ಲ ಈ ಮಕ್ಕಳ ಖಾಸಗಿತನ, ಸ್ವಾತಂತ್ರ್ಯ, ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅವರ ಸಾಂವಿಧಾನಿಕ ಹಕ್ಕುಗಳನ್ನು ನ್ಯಾಯಾಲಾಯ ರಕ್ಷಿಸಲಿದೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತರ ಮಕ್ಕಳು, ಅವಿವಾಹಿತೆಯರ ಮಕ್ಕಳ  ಜನನ ಪ್ರಮಾಣಪತ್ರ, ಗುರುತಿನ ಚೀಟಿ ಸೇರಿದಂತೆ(birth and other documents) ಇತರ ಸರ್ಕಾರಿ ದಾಖಲೆಗಳಲ್ಲಿ ವ್ಯಕ್ತಿಗೆ ತನ್ನ ತಾಯಿಯ ಹೆಸರನ್ನಷ್ಟೇ ಸೇರಿಸುವುದು ಅವರ ಹಕ್ಕಾಗಿದೆ. ಇದು ಅವರ ಖಾಸಗಿತನದ ಹಕ್ಕಾಗಿದೆ. ಇದನ್ನು ಯಾವುದೇ ಅಧಿಕಾರಿಗಳು ಕಸಿದುಕೊಳ್ಳಲು ಅಥವಾ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್(Kerala High Court) ಹೇಳಿದೆ. ಈ ಮಕ್ಕಳ ಗುರುತು ಬಹಿರಂಗಪಡಿಸದೆ ಗೌಪ್ಯತೆ ಕಾಪಾಡಬೇಕು. ಇತರ ನಾಗರೀಕರಂತೆ ಸಮಾನ ರಕ್ಷಣೆ, ಸೌಲಭ್ಯಗಳನ್ನು ನೀಡಬೇಕು.  ಇಲ್ಲಿ ಕೊಂಚ ಏರುಪೇರಾದರು ಈ ಮಕ್ಕಳು ಮಾನಸಿಕ ಹಿಂಸೆ ಅನುಭವಿಸುತ್ತಾರೆ ಎಂದು ಕೋರ್ಟ್ ಹೇಳಿದೆ.

Tap to resize

Latest Videos

ಪತ್ನಿ ದುಡಿಮೆಯಲ್ಲಿ ಜೀವನ ನಡೆಸೋ ಗಂಡ, ಡಿವೋರ್ಸ್ ನೀಡಿದ ಕೋರ್ಟ್

ಅವಿವಾಹಿತ ಅಥವಾ ಅತ್ಯಾಚಾರ ಸಂತ್ರಸ್ತರ ಮಕ್ಕಳು ಈ ದೇಶದ ಮಕ್ಕಳು. ಈ ಮಕ್ಕಳ ವಿಚಾರದಲ್ಲಿ, ಅವರ ಹಕ್ಕುಗಳ ವಿಚಾರದಲ್ಲಿ ಯಾವುದೇ ಉಲ್ಲಂಘನೆಯಾದರೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ. ಅವರ ಹಕ್ಕಗಳು ರಕ್ಷಣೆಗೆ ನ್ಯಾಯಾಲಯ ಬದ್ಧವಾಗಿದೆ ಎಂದಿದೆ. 

ಕೇರಳ ಹೈಕೋರ್ಟ್ ವಿಶೇಷ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಈ ಆದೇಶ ನೀಡಿದೆ. ಅರ್ಜಿದಾರ ಅವಿವಾಹಿತೆಯ ಮಗ ತನ್ನ ಮೂರು ದಾಖಲೆಗಳಲ್ಲಿ ತಂದೆಯ ಹೆಸರು ಭಿನ್ನವಾಗಿತ್ತು. ಹೀಗಾಗಿ ತನಗೆ ತಾಯಿ ಮಾತ್ರ ಪೋಷಕ ಎಂದು ಉಲ್ಲೇಖಿಸಿರುವ ದಾಖಲೆ ಪ್ರಮಾಣಪತ್ರ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ನೋಂದಣಿ ಕಚೇರಿಗೆ ಖಡಕ್ ಸೂಚನೆ ನೀಡಿದೆ. 

ಪತಿ ತನ್ನ ಹೆಂಡತಿಯನ್ನು ಕೇವಲ 'ಆದಾಯದ ಸಾಧನ'ವಾಗಿ ಪರಿಗಣಿಸುವುದು ಮಾನಸಿಕ ಕ್ರೌರ್ಯ:- ಕರ್ನಾಟಕ ಹೈಕೋರ್ಟ್

ಈ ತೀರ್ಪಿನ ವೇಳೆ ಮಹಾಭಾರತದ ಕರ್ಣನನ್ನು ನ್ಯಾಯಾಲಯ ಉಲ್ಲೇಖಿಸಿದೆ. ಅಟ್ಟಕಥ ಅನ್ನೋ ಮಹಭಾರತದ ಪುರಾಣ ಕತೆಯನ್ನೊಳಗೊಂಡ ಕಥಕ್ಕಳಿಯಿಂದ ಕರ್ಣಶಪಥಂ ಅನ್ನೋ ಅಧ್ಯಾಯವನ್ನು ಉಲ್ಲೇಖಿಸಿದೆ. ಇಲ್ಲಿ ತಂದೆ ಯಾರು ಎಂದು ತಿಳಿಯದ ಕರ್ಣ ಅನುಭವಿಸು ಮಾನಸಿಕ ತೊಳಲಾಟ, ಅವಮಾನಗಳನ್ನು ಚಿತ್ರಿಸಲಾಗಿದೆ. ಈ ರೀತಿಯ ಮಾನಸಿಕ ತೊಳಲಾಟ ಈ ಮಕ್ಕಳಿಗೆ ಆಗಬಾರದು ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ಐತಿಹಾಸಿಕ ತೀರ್ಪು ಎಂದೇ ಬಣ್ಣಿಸಲಾಗುತ್ತಿದೆ.

click me!