ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಪಕ್ಷವು ರಾಜೀವ್ ಅವರ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಸೋಮವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ತಿರುವನಂತಪುರ (ಮಾ.24): ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ, ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷವು ಈಗಾಗಲೇ ರಾಜೀವ್ ಅವರ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಈ ಕುರಿತು ಅಧಿಕೃತ ಘೋಷಣೆ ಸೋಮವಾರ ಹೊರಬೀಳುವ ಸಾಧ್ಯತೆ ಇದೆ.
ತಿರುವನಂತಪುರಂನಲ್ಲಿ ಭಾನುವಾರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಕೇರಳ ಘಟಕದ ಪ್ರಭಾರಿ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿಯ ರಾಷ್ಟ್ರೀಯ ವೀಕ್ಷಕ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜೀವ್ ಚಂದ್ರಶೇಖರ್ ಹೆಸರನ್ನು ಘೋಷಿಸಿದರು. ಇದರ ನಡುವೆ ಅಧ್ಯಕ್ಷ ಹುದ್ದೆಗೆ ರಾಜೀವ್ ನಾಮಪತ್ರ ಸಲ್ಲಿಸಿದರು.
ರಾಜೀವ್ ಚಂದ್ರಶೇಖರ್ ಅವರು ಕೆ.ಸುರೇಂದ್ರನ್ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.
2 ದಶಕಗಳ ಅನುಭವ:
2 ದಶಕಗಳ ರಾಜಕೀಯ ಅನುಭವ ಹೊಂದಿರುವ ರಾಜೀವ್ ಅವರು ಕರ್ನಾಟಕದಿಂದ 3 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾಗಿಯೂ ಮೋದಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಚಂದ್ರಶೇಖರ್ ಅವರು ವರಿಷ್ಠರ ಸೂಚನೆಯಂತೆ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್ ವಿರುದ್ಧ ಸ್ಪರ್ಧಿಸಿ ಕೇವಲ 16,077 ಮತಗಳ ಅಂತರದಿಂದ ಸೋತಿದ್ದರು. ಅಲ್ಲಿಂದಲೇ ರಾಜೀವ್ ಚಂದ್ರಶೇಖರ್ ಅವರು ಕೇರಳ ರಾಜಕೀಯದ ಕುರಿತು ಹೆಚ್ಚಿನ ಗಮನಹರಿಸುತ್ತಿದ್ದಾರೆ. ವರಿಷ್ಠರ ಸೂಚನೆಯಂತೆ ಅವರು ಕೇರಳ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಟೆಕೇಡ್: ತಂತ್ರಜ್ಞಾನ ಎಂಬ ಆಧುನಿಕ ಶಸ್ತ್ರಸಜ್ಜಿತ ಸ್ಪರ್ಧೆ ಮತ್ತು ಭಾರತದ ಭವಿಷ್ಯ - ರಾಜೀವ್ ಚಂದ್ರಶೇಖರ್ ಅಂಕಣ
ಇನ್ನು ಮುಂದೆ ಕೇರಳದಲ್ಲಿ ಬಿಜೆಪಿಯ ಅಭಿವೃದ್ಧಿಯ ಮುಖವಾಗಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಕೇರಳದ ಮುಖಂಡರು ಹರ್ಷಿಸಿದ್ದಾರೆ.
ಅಚ್ಚರಿಯಾಗಿದೆ
ನನ್ನನ್ನು ಕೇರಳ ಬಿಜೆಪಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ಅಚ್ಚರಿಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅರ್ಹನೆಂದು ಪರಿಗಣಿಸಿದ ಪಕ್ಷದ ಸಹೋದ್ಯೋಗಿಗಳ ನಿರ್ಧಾರಕ್ಕೆ ಆಭಾರಿಯಾಗಿದ್ದೇನೆ.
- ರಾಜೀವ್ ಚಂದ್ರಶೇಖರ್, ಬಿಜೆಪಿ ನಾಯಕ