ಮಂಗಳೂರಿನಿಂದ ಮುಂಬೈಗೆ ಇದೀಗ ರೈಲು ಪ್ರಯಾಣ ಕನಿಷ್ಠ 15 ಗಂಟೆ ಬೇಕು. ಇದೀಗ ಕೇಂದ್ರ ಸರ್ಕಾರ ಮುಂಬೈ-ಮಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ.
ಮಂಗಳೂರು(ಮಾ.23) ಭಾರತದ ಬಹುತೇಕ ಮಾರ್ಗಗಳಲ್ಲಿ ಇದೀಗ ವಂದೇ ಭಾರತ್ ರೈಲು ಸೇವೆ ಲಭ್ಯವಾಗುತ್ತಿದೆ. ಇದೀಗ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸೇವೆ ಲಭ್ಯವಾಗುತ್ತಿದೆ. ಹೌದು ಮುಂಬೈ ಮಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ಇದರ ಪರಿಣಾಮ ಸದ್ಯ 15 ಗಂಟೆ ಇರುವ ಮುಂಬೈ-ಮಂಗಳೂರು ರೈಲು ಪ್ರಯಾಣ ವಂದೇ ಭಾರತ್ ಮೂಲಕ 12 ಗಂಟೆಗೆ ಇಳಿಕೆಯಾಗಲಿದೆ. ಇಷ್ಟೇ ಅಲ್ಲ ಆರಾಮಾದಾಯಕ ಪ್ರಯಾಣವೂ ಸಿಗಲಿದೆ.
ಕೇಂದ್ರ ರೈಲ್ವೇ ಇಲಾಖೆ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಂಗಳೂರು ಗೋವಾ ಹಾಗೂ ಗೋವಾ-ಮುಂಬೈ ವಂದೇ ಭಾರತ್ ರೈಲು ಸೇವೆ ಲಭ್ಯವಿದೆ. ಆದರೆ ಈ ಎರಡು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 70. ಅದರಲ್ಲೂ ಮಂಗಳೂರು ಗೋವಾ ರೈಲಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 40 ಮಾತ್ರ. ಹೀಗಾಗಿ ಇದೀಗ ಮುಂಬೈ-ಮಂಗಳೂರು ನೇರ ರೈಲು ಪ್ರಯಾಣಕ್ಕೆ ರೈಲ್ವೇ ಇಲಾಖೆ ಮುಂದಾಗಿದೆ.
ಆರಂಭಿಕ ಹಂತದಲ್ಲಿ ಮುಂಬೈ-ಮಂಗಳೂರು-ಕೋಝಿಕ್ಕೋಡ್ ರೈಲು ಯೋಜನೆಗೆ ಪ್ರಸ್ತಾವನೆ ಇಡಲಾಗಿತ್ತು. ಆದರೆ ಪ್ರತಿ ಭಾರಿ ಮಂಗಳೂರು ಡಿವಿಶನ್‌ನಲ್ಲಿ ರೈಲು ಸೇವೆ ಕೇರಳದ ಲಾಭಿಗೆ ಮಣಿಯುತ್ತಿದೆ ಅನ್ನೋ ಆರೋಪ ಕೇಳಿಬರುತ್ತಲೇ ಇತ್ತು. ಹೀಗಾಗಿ ಕರ್ನಾಟಕದ ನಾಯಕರು ಮುಂಬೈ-ಮಂಗಳೂರು ವಂದೇ ಭಾರತ್ ರೈಲನ್ನು ಕೋಝಿಕ್ಕೋಡ್‌ಗೆ ವಿಸ್ತರಣೆ ಮಾಡುವ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲು ಯೋಜನೆ ಅಂತಿಮಗೊಂಡಿದೆ.
ಸದ್ಯ ಮುಂಬೈ-ಗೋವಾ ರೈಲು ಮುಂಬೈ ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ 5.25ಕ್ಕೆ ಹೊರಡಲಿದೆ. ಗೋವಾ ನಿಲ್ದಾಣಕ್ಕೆ ಮಧ್ಯಾಹ್ನ 1.10ಕ್ಕೆ ತಲುಪಲಿದೆ. ಇದೀಗ ಈ ರೈಲು ಸೇವೆ ಮಂಗಳೂರಿಗೆ ವಿಸ್ತರಣೆಗೊಳ್ಳಲಿದೆ. ಮಂಗಳೂರಿಗೆ ಸಂಜೆ 6 ಗಂಟೆಗೆ ತಲುಪಲಿದೆ. ಇನ್ನು ಮಂಗಳೂರು ಗೋವಾ ವಂದೇ ಭಾರತ್ ರೈಲು ಮಂಗಳೂರು ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಗೋವಾಗೆ ಮಧ್ಯಾಹ್ನ 1.10ಕ್ಕೆ ತಲುಪಲಿದೆ. ಈ ರೈಲು ಸೇವೆ ಮುಂಬೈ ವರೆಗೆ ವಿಸ್ತರಣೆಯಾಗುತ್ತಿದೆ. ರಾತ್ರಿ 9 ಗಂಟೆಗೆ ಮುಂಬೈ ತಲುಪಲಿದೆ.