ದೆಹಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸುಟ್ಟ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ನ್ಯಾಯಾಧೀಶರ ಮನೆಯಲ್ಲಿ ಸುಟ್ಟ 500 ರುಪಾಯಿ ನೋಟಿನ ಗೋಣಿಚೀಲಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನವದೆಹಲಿ (ಮಾ.24): ದಿಲ್ಲಿ ಹೈಕೋರ್ಟ್ ನ್ಯಾ। ಯಶವಂತ ವರ್ಮಾ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಹಿರಂಗಪಡಿಸಿರುವ ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ಕೆ. ಉಪಾಧ್ಯಾಯ ಸಲ್ಲಿಸಿದ್ದ ಆಂತರಿಕ ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳಿವೆ. ‘ಜಡ್ಜ್ ವರ್ಮಾ ಮನೆಯಲ್ಲಿ ಸುಟ್ಟ 500 ರು. ನೋಟಿನ 4-5 ಗೋಣಿಚೀಲ ಪತ್ತೆ ಆಗಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾ। ಉಪಾಧ್ಯಾಯ ವರದಿಯಲ್ಲಿ ವಿಡಿಯೋ ಲಗತ್ತಿಸಲಾಗಿದ್ದು, ಸುಟ್ಟಿರುವ ರಾಶಿರಾಶಿ ಹಣ ತುಂಬಿದ ಚೀಲಗಳ ದೃಶ್ಯಗಳಿವೆ. ಮಾ.15ರಂದು ನ್ಯಾ। ವರ್ಮಾ ಅವರ ದಿಲ್ಲಿ ನಿವಾಸದಲ್ಲಿ ಬೆಂಕಿ ಸಂಭವಿಸಿತ್ತು. ಆಗ ವರ್ಮಾ ಅವರ ಮನೆಗೆ ಬಿದ್ದ ಬೆಂಕಿ ನಂದಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ನೋಟಿನ ಕಂತೆಗಳು ಕಂಡುಬಂದಿದ್ದವು. ಇದರ ವಿಡಿಯೋ ಚಿತ್ರೀಕರಣ ಮಾಡಿ ದಿಲ್ಲಿ ಪೊಲೀಸ್ ಆಯುಕ್ತರು ದಿಲ್ಲಿ ಹೈಕೋರ್ಟ್‌ಗೆ ಮಾ.16ರಂದು ವಿಡಿಯೋ ಸಮೇತ ವರದಿ ನೀಡಿದ್ದರು.
ಈ ವರದಿಯನ್ನು ಉಲ್ಲೇಖಿಸಿ ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ। ಉಪಾಧ್ಯಾಯರು ಸುಪ್ರೀಂ ಕೋರ್ಟ್‌ಗೆ ವರದಿ ನಡಿದ್ದು, ‘ಬೆಂಕಿ ಹೊತ್ತಿಕೊಂಡ ಕೋಣೆಯಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ, 4-5 ಅರ್ಧ ಸುಟ್ಟ ಚೀಲಗಳು ಕಂಡುಬಂದಿವೆ. ಅವುಗಳೊಳಗೆ ಭಾರತೀಯ ಕರೆನ್ಸಿಯ ಅವಶೇಷಗಳು ಕಂಡುಬಂದಿವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ನ್ಯಾಯಾಧೀಶರ ಮನೆಯಲ್ಲಿ ಸುಟ್ಟ ನೋಟಿನ ದೃಶ್ಯ ಬಯಲು
ಈ ಬೆಚ್ಚಿ ಬೀಳಿಸುವ ಅಂಶದ ಕಾರಣ, ತ್ರಿಸದಸ್ಯ ಆಂತರಿಕ ನ್ಯಾಯಾಂಗ ತನಿಖೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆರೋಪ ಸಾಬೀತಾದರೆ ವಜಾ ಸಂಭವ
ನವದೆಹಲಿ: ಸುಪ್ರೀಂ ಕೋರ್ಟ್ ನೇಮಿತ ತ್ರಿಸದಸ್ಯ ನ್ಯಾಯಾಧೀಶರ ಸಮಿತಿಯು ನ್ಯಾ। ಯಶವಂತ ವರ್ಮಾ ವಿರುದ್ಧ ಕೈಗೊಂಡಿರುವ ತನಿಖೆ ಗಂಭೀರ ಸ್ವರೂಪದ್ದಾಗಿದೆ. ಒಂದು ವೇಳೆ ಆರೋಪಗಳು ಸಾಬೀತಾದಲ್ಲಿ ಈ ಸಮಿತಿಯು ವಜಾ ಪ್ರಕ್ರಿಯೆಗೆ ಶಿಫಾರಸು ಮಾಡಬಹುದು ಎಂದು ಮೂಲಗಳು ಹೇಳಿವೆ.