ಸ್ಕಿಲ್ ಹಬ್ ಪೋರ್ಟಲ್‌ ಉದ್ಘಾಟಿಸಿದ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕ ಯುವಕರ ಉದ್ಯಮಕ್ಕೆ ನೆರವು!

By Suvarna News  |  First Published Mar 25, 2023, 9:32 PM IST

15 ಲಕ್ಷ ಕನ್ನಡಿಗ ಯುವಕರು ಉದ್ಯಮಕ್ಕೆ ಅಗತ್ಯವಾದ ಹಾಗೂ ಉದ್ಯೋಗ ಮತ್ತು ಭವಿಷ್ಯಕ್ಕೆ ಪೂರಕವಾದ ಕೌಶಲಗಳನ್ನು ಪಡೆಯಲು ಈ ಸ್ಕಿಲ್ ಹಬ್ ಪೋರ್ಟಲ್ ನೆರವಾಗಲಿದೆ. ಈ ಕುರಿತು ಸಚಿವ ರಾಜೀವ್ ಚಂದ್ರಶೇಖರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
 


ಬೆಂಗಳೂರು(ಮಾ.25): ಭಾರತದ ಎಲ್ಲ ಜಿಲ್ಲೆಗಳಲ್ಲಿ ಯುವ ಭಾರತೀಯರಿಗೆ ಕೌಶಲಗಳನ್ನು ಒದಗಿಸುವ ಮೂಲಕ ಉದ್ಯಮಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದರ ಭಾಗವಾಗಿ ಇದೀಗ ಸ್ಕಿಲ್ ಹಬ್ ಪೋರ್ಟಲ್‌ನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟಿಸಿದ್ದಾರೆ. ಇದೇ ವೇಳೆ ಸ್ಕಿಲ್ ಇಂಡಿಯಾ ನೆಟ್‌ವರ್ಕ್ ಭಾಗವಾಗಲು ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ರಾಜೀವ್ ಚಂದ್ರಶೇಖರ್ ಆಹ್ವಾನಿಸಿದರು.  ಶಿಕ್ಷಣ ತಜ್ಞರು ಮತ್ತು ಉದ್ಯಮದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ಯುವ ಭಾರತೀಯರಿಗೆ ಉದ್ಯಮಕ್ಕೆ ಅಗತ್ಯವಾದ ಮತ್ತು ಭವಿಷ್ಯಕ್ಕೆ ಪೂರಕವಾದ ಕೌಶಲ್ಯಗಳ ಮಹತ್ವವನ್ನು ಸಾರುತ್ತಿದೆ ಎಂದರು.

2014 ರವರೆಗೆ, ಸುಮಾರು 30 ಕೋಟಿ ಭಾರತೀಯ ಉದ್ಯೋಗಿಗಳಿಗೆ ಕೌಶಲದ ಅಭಾವವಿತ್ತು. ಅಂದರೆ, ಉದ್ಯೋಗದಲ್ಲಿದ್ದ ಭಾರತೀಯರಲ್ಲಿ ಮುಕ್ಕಾಲು ಪಾಲು ಜನರಿಗೆ ಕೌಶಲಗಳೇ ಇರಲಿಲ್ಲ ಅಥವಾ ಆ ಕೌಶಲಗಳನ್ನು ಗಳಿಸಿಕೊಳ್ಳುವ ಅವಕಾಶಗಳೂ ಲಭ್ಯವಿರಲಿಲ್ಲ. ಇದಲ್ಲದೆ, ಕೌಶಲಗಳಿಲ್ಲದ ಸುಮಾರು 1.9 ಕೋಟಿ ಜನರು ಈ ಉದ್ಯೋಗದ ಪಡೆಯನ್ನು ಸೇರಿಕೊಂಡಿದ್ದರು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಪೂರ್ವದಲ್ಲಿ ಅಂತಹ ಪರಂಪರೆಯೇ ಇತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Tap to resize

Latest Videos

 

ಧಾರವಾಡಕ್ಕೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕೌಶಲ್ಯಾಭಿವೃದ್ಧಿಯ ಕ್ಷೇತ್ರದಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸಿದ ಸಚಿವರು, 2014ರ ಅನಂತರ ಕೌಶಲಗಳನ್ನು ಒದಗಿಸುವ ಜಾಲಗಳನ್ನು ವ್ಯಾಪಕವಾಗಿ ರಚಿಸಲಾಗಿದೆ ಮತ್ತು 2022ರ ವೇಳೆಗೆ ಒಟ್ಟು ಆರು ಕೋಟಿ ಯುವ ಭಾರತೀಯರು ಕೌಶಲವನ್ನೂ, ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನೂ ಪಡೆದಿದ್ದಾರೆ ಎಂದು ಹೇಳಿದರು.

ಕೌಶಲವಿಲ್ಲದೆ ಉದ್ಯೋಗಗಳಿಗೆ ಸೇರುತ್ತಿದ್ದ 1.9 ಕೋಟಿ ಜನರಿಗೆ ಸಂಬಂಧಿಸಿದ ಸಮಸ್ಯೆಯನ್ನೂ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಪರಿಹರಿಸಲಾಗಿದೆ ಎಂದರು. “ಇನ್ನು ಯಾವುದೇ ಯುವ ಭಾರತೀಯ ಕೌಶಲರಹಿತರಾಗಿ ಇರುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ (NEP)ಯು ಪ್ರವೇಶ ಮತ್ತು ನಿರ್ಗಮನದ ಬಹು ಆಯ್ಕೆಗಳನ್ನು ನೀಡುತ್ತದೆ,” ಎಂದ ಅವರು, ಶಿಕ್ಷಣದ ಜೊತೆಗೆ, ಉದ್ಯಮಕ್ಕೆ ನಿರ್ದಿಷ್ಟವಾದ, ಭವಿಷ್ಯಕ್ಕೆ ಅಗತ್ಯವಾದ ಕೌಶಲಗಳನ್ನು ಪಡೆದು ಸಜ್ಜುಗೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬೇಕು.

ಕರ್ನಾಟಕದ ಕೌಶಲ್ಯ ಯೋಜನೆಗಳ ಕುರಿತು ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ಆರ್ಥಿಕತೆಯ ವಿಸ್ತರಣೆ ಮತ್ತು ವೈವಿಧ್ಯದ ದೃಷ್ಟಿಯಿಂದ, ಕೌಶಲಗಳಿಗೆ ಬೇಡಿಕೆಗಳಿರುತ್ತವೆ. "ಆದ್ದರಿಂದ, ಜಿಲ್ಲಾವಾರು ಕೌಶಲ ನಕ್ಷೆಯನ್ನು ರಚಿಸಿ, ಕರ್ನಾಟಕದ ಪ್ರತಿ ಜಿಲ್ಲೆಗೆ ವಿಶಿಷ್ಟವಾದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಭಾರತ ಸರ್ಕಾರವು ಸಿದ್ಧಪಡಿಸಿದೆ" ಎಂದರು.

ಸುತ್ತೂರು ಶಾಖಾ ಮಠಕ್ಕೆ ಭೇಟಿಕೊಟ್ಟ ಕೇಂದ್ರ‌ ಸಚಿವ ರಾಜೀವ್‌ ಚಂದ್ರಶೇಖರ್

ಮುಂದಿನ ಮೂರು ವರ್ಷಗಳಲ್ಲಿ 15 ಲಕ್ಷ ಯುವ ಕನ್ನಡಿಗರಿಗೆ ಉದ್ಯಮಕ್ಕೆ ಅಗತ್ಯವಾದ, ಕೆಲಸದಲ್ಲಿ ಬಳಸಿಕೊಳ್ಳಬಹುದಾದ, ಭವಿಷ್ಯಕ್ಕೆ ಪೂರಕವಾದ ಕೌಶಲಗಳನ್ನು ಪಡೆಯಲು ಸಹಾಯ ಮಾಡುವುದು ಸರ್ಕಾರದ ಸಂಕಲ್ಪ ಎಂದು ಪುನರುಚ್ಚರಿಸಿದ ಸಚಿವರು, “ಭವಿಷ್ಯದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಯುವ ಕನ್ನಡಿಗರ ಶಕ್ತಿ, ಸಾಮರ್ಥ್ಯ ಮತ್ತು ಸಂಕಲ್ಪದಿಂದ ಮುನ್ನಡೆಸಲಾಗುವುದು. ಇದು ನವ ಕರ್ನಾಟಕದ ಕನಸು” ಎಂದರು.

ಸ್ಕಿಲ್ಸ್ ಹಬ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳನ್ನು ಆಗ್ರಹಿಸಿದ್ದಾರೆ. “ಪ್ರತಿ ಕಾಲೇಜು, ವಿಶ್ವವಿದ್ಯಾನಿಲಯ, ಐಟಿಐ, ಜನ್ ಶಿಕ್ಷಣ ಸಂಸ್ಥಾನ ಮುಂತಾದವುಗಳು ನೋಂದಾಯಿಸಿಕೊಂಡು ಭಾರತದ ಕೌಶಲ್ಯ ನೆಟ್‌ವರ್ಕ್‌ನ ಭಾಗವಾಗಬಹುದು. ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ಅತ್ಯುತ್ತಮ ಕೌಶಲ ತರಬೇತಿ ಕೇಂದ್ರವನ್ನೇ ಆಯ್ಕೆ ಮಾಡುವುದರಿಂದ ಕೌಶಲ ತರಬೇತಿ ನೀಡುವ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

click me!