
ವರದಕ್ಷಿಣೆ ವಿರೋಧಿ ಕಾನೂನು ಬಂದು ಅದೆಷ್ಟೋ ದಶಕಗಳು ಕಳೆದು ಹೋಗಿದ್ದರೂ, ಇದಂತೂ ಇಂದಿಗೂ ನಿಂತಿಲ್ಲ. ಹಲವು ಗಂಡಿನ ಮನೆಯವರ ಹಣದ ದಾಹಕ್ಕೆ ಬಲಿಯಾದವರು ಅದೆಷ್ಟೋ ಹೆಣ್ಣುಮಕ್ಕಳು. ಮಗಳ ಮದುವೆಯಾದರೆ ಸಾಕು ಎಂದು ಕೇಳಿದಷ್ಟು ದುಡ್ಡು ಕೊಟ್ಟು, ಆಮೇಲೆ ಇನ್ನಷ್ಟು ಬೇಕೆಂದಾಗ ಕೊಡಲು ಆಗದೇ ಮಗಳನ್ನೇ ಸಾವಿನ ಬಾಯಿಗೆ ನೂಕುವ ಅಪ್ಪ ಅಮ್ಮ ಒಂದೆಡೆಯಾದರೆ, ಧನಪಿಶಾಚಿ ಗಂಡ, ಅತ್ತೆ-ಮಾವಂದಿರ ದುಡ್ಡಿನ ಮೋಹಕ್ಕೆ ನಲುಗುವ ಹೆಣ್ಣುಗಳು ಅದೆಷ್ಟೋ ಮಂದಿ. ವರದಕ್ಷಿಣೆ ತೆಗೆದುಕೊಳ್ಳುವುದು ಮಾತ್ರವಲ್ಲ, ಕೊಡುವುದೂ ಅಪರಾಧವೇ ಎನ್ನುವುದು ಕಾನೂನಾದರೂ ಹೆಣ್ಣು ಹೆತ್ತವರಿಗೆ ಮಗಳ ಮದುವೆ ಆಗುವುದಿಲ್ಲ ಎನ್ನುವ ಸಂಕಷ್ಟವೇ, ಗಂಡು ಹೆತ್ತವರಿಗೆ ಬಂಡವಾಳ!
ಎಷ್ಟೇ ಕಾನೂನುಗಳಿದ್ದರೂ, ಅದು ಜಾರಿಯಾಗುವುದು ಅತಿ ವಿರಳ. ವರದಕ್ಷಿಣೆ ಸಾವಿನ ಪ್ರಕರಣ ದಾಖಲಾದಾಗಲೂ ಸೂಕ್ತ ಸಾಕ್ಷಿಗಳು ಇಲ್ಲವೆಂದು ಅಪರಾಧಿಗಳು ಖುಲಾಸೆಗೊಳ್ಳುವ ಘಟನೆಗಳೂ ನಡೆಯುತ್ತವೆ. ಆದ್ದರಿಂದ ಇದೀಗ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ. ಅದೇನೆಂದರೆ, ವರದಕ್ಷಿಣೆ ಕೇಳಿದ್ದು ಗೊತ್ತಾದರೆ ಅವರ ಮನೆಯ ಗ್ಯಾಸ್ ಕನೆಕ್ಷನ್ ಕಟ್ ಮಾಡುವ ಯೋಜನೆ ಇದಾಗಿದೆ.
ರಾಜಸ್ಥಾನ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೊಳಿಸಿದೆ. ಸದ್ಯ ಅಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಈಗ ಮದುವೆಯಾಗುವ ಗಂಡು ಮಕ್ಕಳ ಪಾಲಕರು ಹೆಣ್ಣಿನ ಮನೆಯವರಿಗೆ ವರದಕ್ಷಿಣೆಯ ರೂಪದಲ್ಲಿ ಗ್ಯಾಸ್ ಸಿಲಿಂಡರ್ ಕೇಳುತ್ತಿದ್ದಾರೆ. ಇದರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸ್ಟ್ರಿಕ್ಟ್ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ.
ಸದ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಿಂಗಳಿಗೆ ಒಮ್ಮೆ ಬುಕ್ ಮಾಡಿದರೆ ನೀಡಲಾಗುತ್ತದೆ. ಇದರ ಹೊರತಾಗಿಯೂ ವರದಕ್ಷಿಣೆ ಕೇಳಿರುವುದು ತಿಳಿದರೆ, ಅವರ ಮನೆಯ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕಟ್ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಿದೆ ಸರ್ಕಾರ. ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಪೂರೈಕೆ ಸಾಮಾನ್ಯವಾಗಿ ಮುಂದುವರಿಯುತ್ತಿದೆ ಮತ್ತು ನಾಗರಿಕರು ಭಯಭೀತರಾಗಬಾರದು. ಎಲ್ಲವೂ ಸುಸೂತ್ರವಾಗಿದೆ ಎಂದು ಹೇಳಿದ್ದಾರೆ. ಅಥವಾ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದು ಕೇವಲ ಗ್ಯಾಸ್ ಸಿಲಿಂಡರ್ ಕೇಳಿದರೆ ಮಾತ್ರವಲ್ಲದೇ, ಪ್ರತಿಯೊಂದು ವರದಕ್ಷಿಣೆಗೂ ಈ ಕ್ರಮ ತೆಗೆದುಕೊಳ್ಳಬೇಕು, ಗ್ಯಾಸ್ನಂಥ ಅಗತ್ಯ ಪೂರೈಕೆಗಳನ್ನು ಕಟ್ ಮಾಡಿದರೆ ತಾವಾಗಿಯೇ ಗಂಡು ಹೆತ್ತವರು ದಾರಿಗೆ ಬರುತ್ತಾರೆ ಎಂದು ಹಲವರು ಹೇಳುತ್ತಿದ್ದಾರೆ. ಇದನ್ನು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರುವ ಅಗತ್ಯವಿದೆ ಎನ್ನುವ ಕೂಗು ಜೋರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ