ನೋಟು ರದ್ದತಿ ಸಮಯದಲ್ಲಿ 3.2 ಕೋಟಿ ನಗದು ಹಣ ತೆಗೆದುಕೊಳ್ಳಲು ನಿರಾಕರಿಸಿದ ಬ್ಯಾಂಕ್‌ಗೆ 1.92 ಕೋಟಿ ದಂಡ ಹಾಕಿದ ಕೋರ್ಟ್‌!

Published : Mar 14, 2026, 04:06 PM IST
demonetisation

ಸಾರಾಂಶ

2016ರ ನೋಟು ಅಮಾನ್ಯೀಕರಣದ ವೇಳೆ ದೆಹಲಿ ಮೂಲದ ಕಂಪನಿಯ 3.2 ಕೋಟಿ ರೂ. ನಗದು ಜಮಾ ಮಾಡಲು ನಿರಾಕರಿಸಿದ್ದ ಆಕ್ಸಿಸ್ ಬ್ಯಾಂಕ್‌ಗೆ ರಾಷ್ಟ್ರೀಯ ಗ್ರಾಹಕ ಆಯೋಗವು ಭಾರಿ ದಂಡ ವಿಧಿಸಿದೆ. ಬ್ಯಾಂಕಿನ ಏಕಪಕ್ಷೀಯ ನಿರ್ಧಾರವು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್‌ ಹೇಳಿದೆ.

ನವದೆಹಲಿ (ಮಾ.14): 2016ರ ನೋಟು ಅಮಾನ್ಯೀಕರಣದ ಸಮಯದಲ್ಲಿ ದೆಹಲಿ ಮೂಲದ ಕಂಪನಿಯೊಂದರ 3.2 ಕೋಟಿ ರೂ. ನಗದನ್ನು ಜಮಾ ಮಾಡಿಕೊಳ್ಳಲು ನಿರಾಕರಿಸಿದ್ದ ಆಕ್ಸಿಸ್ ಬ್ಯಾಂಕ್‌ಗೆ 'ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ' (NCDRC) ಭಾರಿ ದಂಡ ವಿಧಿಸಿದೆ. ಬ್ಯಾಂಕಿನ ಈ ನಿರ್ಧಾರದಿಂದಾಗಿ ಕಂಪನಿಯ ಬಳಿಯಿದ್ದ ನಗದು, ಬರೀ ಕಾಗದವಾಗಿ ಮಾರ್ಪಟ್ಟು, ಕಂಪನಿಯ ಪಾಲಿಗೆ ಮುಂದೆಂದೂ ಸರಿಪಡಿಸಲಾಗದ ನಷ್ಟಕ್ಕೆ ಕಾರಣವಾಗಿತ್ತು ಎಂದು ಆಯೋಗ ತೀರ್ಪು ನೀಡಿದೆ.

ಆಕ್ಸಿಸ್ ಬ್ಯಾಂಕ್ ಈಗ ಕಂಪನಿಗೆ 3.2 ಕೋಟಿ ರೂ. ಅಸಲು ಮೊತ್ತದ ಜೊತೆಗೆ ಶೇ. 6ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ. ರಾಜೇಂದ್ರ ಮತ್ತು ಎ.ಕೆ. ಮೆಂದಿರಟ್ಟಾ ಅವರ ಪೀಠವು ಆದೇಶಿಸಿದೆ. ಇದರರ್ಥ ಕಳೆದ 10 ವರ್ಷಕ್ಕೆ ಬ್ಯಾಂಕ್‌ 3.2 ಕೋಟಿ ರೂಪಾಯಿಯೊಂದಿಗೆ ಬಡ್ಡಿ ರೂಪದಲ್ಲಿ 1.92 ಕೋಟಿ ರೂಪಾಯಿ ನೀಡಬೇಕಿದೆ.

ಬ್ಯಾಂಕಿನ ಏಕಪಕ್ಷೀಯ ಕ್ರಮಕ್ಕೆ ತರಾಟೆ

ಠೇವಣಿಯು 'ಅನುಮಾನಾಸ್ಪದ'ವಾಗಿದೆ ಎಂಬ ಕಾರಣ ನೀಡಿ ಬ್ಯಾಂಕ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಆದರೆ ಆಯೋಗ ಇದನ್ನು ಒಪ್ಪಲಿಲ್ಲ. "ದೂರುದಾರ ಕಂಪನಿಯಾದ 'ಪ್ರೊಕ್ಯೂರ್ ಲಾಜಿಸ್ಟಿಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್' ಅನ್ನು ಬ್ಯಾಂಕ್ ಏಕಪಕ್ಷೀಯವಾಗಿ 'ಹೈ-ರಿಸ್ಕ್' (ಅಪಾಯಕಾರಿ) ಖಾತೆ ಎಂದು ವರ್ಗೀಕರಿಸಿದೆ. ಕೆವೈಸಿ (KYC) ನಿಯಮ ಪಾಲನೆಯಾಗಿದ್ದರೂ, ನಿರ್ಣಾಯಕ ಸಮಯದಲ್ಲಿ ಸ್ವಂತ ಖಾತೆಗೆ ಹಣ ಜಮಾ ಮಾಡುವುದನ್ನು ತಡೆದಿರುವುದು ಸರ್ಕಾರದ ನೀತಿಗಳು ಮತ್ತು ಆರ್‌ಬಿಐ ಅಧಿಸೂಚನೆಗಳ ಉಲ್ಲಂಘನೆಯಾಗಿದೆ" ಎಂದು ಆಯೋಗ ಹೇಳಿದೆ.

ಕಾನೂನುಬದ್ಧ ಹಾದಿ ಇದಾಗಿರಲಿಲ್ಲ

"ಒಂದು ವೇಳೆ ಬ್ಯಾಂಕ್‌ಗೆ ಹಣದ ಬಗ್ಗೆ ಅನುಮಾನ ಅಥವಾ ಸಂಶಯವಿದ್ದಿದ್ದರೆ, ಮೊದಲು ಠೇವಣಿಯನ್ನು ಸ್ವೀಕರಿಸಬೇಕಿತ್ತು. ಆ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದು, ನಂತರ ನಿಯೋಜಿತ ಅಧಿಕಾರಿಗಳ ಮೂಲಕ ತನಿಖೆ ನಡೆಸಲು ವರದಿ ಮಾಡಬೇಕಿತ್ತು. ಅದನ್ನು ಬಿಟ್ಟು ಹಣ ಜಮಾ ತಡೆಯುವುದು ಸರಿಯಲ್ಲ" ಎಂದು ಆಯೋಗ ತಿಳಿಸಿದೆ.

ಬ್ಯಾಂಕಿನಿಂದಲೇ ನಷ್ಟ ಉಂಟಾಗಿದೆ

"ಈ ಹಣಕಾಸು ವಂಚಿತ ಸ್ಥಿತಿಯು ಯಾವುದೇ ಸಕ್ಷಮ ಪ್ರಾಧಿಕಾರದ ತೀರ್ಪಿನಿಂದ ಉಂಟಾಗಿಲ್ಲ, ಬದಲಾಗಿ ಕಂಪನಿಯು ಎಲ್ಲಾ ನಿಯಮಗಳನ್ನು ಪಾಲಿಸಲು ಸಿದ್ಧವಿದ್ದರೂ ಬ್ಯಾಂಕ್ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದಿಂದ ಸಂಭವಿಸಿದೆ. ಆದ್ದರಿಂದ, ಬ್ಯಾಂಕ್ ಕಂಪನಿಗೆ ಉಂಟಾದ 3,19,58,500 ರೂ.ಗಳ ನಷ್ಟವನ್ನು ಭರಿಸಲು ಹೊಣೆಯಾಗಿದೆ" ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಕಂಪನಿಯ ವಾದವೇನಿತ್ತು?

ಪ್ರೊಕ್ಯೂರ್ ಲಾಜಿಸ್ಟಿಕ್ಸ್ ಕಂಪನಿಯು ನೋಟು ಅಮಾನ್ಯೀಕರಣದ ಸಮಯದಲ್ಲಿ ಈಗಾಗಲೇ 1.3 ಕೋಟಿ ರೂ.ಗಳನ್ನು ವಿವಿಧ ದಿನಾಂಕಗಳಲ್ಲಿ ಜಮಾ ಮಾಡಿತ್ತು. ಆದರೆ ನಂತರ ಹೆಚ್ಚಿನ ಹಣ ಜಮಾ ಮಾಡದಂತೆ ಬ್ಯಾಂಕ್ ತಡೆ ಹೇರಿತ್ತು. ಇದರಿಂದಾಗಿ ಕಂಪನಿಯ ಬಳಿ 3.2 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಉಳಿದುಕೊಂಡಿದ್ದವು. "ನಿರ್ದಿಷ್ಟ ಸಮಯದ ಮಿತಿಯೊಳಗೆ ಕಂಪನಿಯು ತನ್ನ ಬಳಿಯಿರುವ ನಗದಿನ ವಿವರಗಳನ್ನು ಬಹಿರಂಗಪಡಿಸಿತ್ತು. ಹಿಂದಿನ ವರ್ಷಗಳ ಆಡಿಟ್ ವರದಿ ಮತ್ತು ಬ್ಯಾಲೆನ್ಸ್ ಶೀಟ್‌ಗಳನ್ನು ಸಲ್ಲಿಸಿ ಹಣ ಜಮಾ ಮಾಡಲು ಪದೇ ಪದೇ ವಿನಂತಿಸಿತ್ತು. ಆದರೂ ಬ್ಯಾಂಕ್ ಯಾವುದೇ ನಿರ್ದಿಷ್ಟ ಆರ್‌ಬಿಐ ಅಥವಾ ಸರ್ಕಾರದ ಅಧಿಸೂಚನೆಗಳಿಲ್ಲದೆ ಹಣ ಸ್ವೀಕರಿಸಲು ನಿರಾಕರಿಸಿದೆ" ಎಂದು ಆಯೋಗವು ಬ್ಯಾಂಕಿನ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ
ಅಯ್ಯೋ, ಇದು ನಮ್ ಮಗ ಅಲ್ವಾ? ಮಾಲ್‌ನಲ್ಲಿ ಪುತ್ರನ ಪೋಸ್ಟರ್ ನೋಡಿ ಅಪ್ಪ-ಅಮ್ಮ ಫುಲ್ ಖುಷ್