
ಜೈಪುರ: ಸಚಿವರು ಪೇಪರ್‌ನಲ್ಲಿ ಬರೆದು ಸಹಿ ಹಾಕಿ ಭರವಸೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಸಚಿವರೊಬ್ಬರು ಮಹಿಳೆಯ ಕೈಯಲ್ಲಿ ಪೆನ್‌ನಿಂದ ಬರೆದು ಭರವಸೆ ನೀಡಿದ್ದು, ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಸಚಿವರು ಮಹಿಳೆಯ ಕೈಯಲ್ಲಿ ಬರೆದಿದ್ದೇನು?
ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ ಇಲ್ಲಿನ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಅವರು ಮಹಿಳೆಯೊಬ್ಬರ ಕೈಯಲ್ಲಿ ಸಂದೇಶ ಬರೆದು ಭರವಸೆ ನೀಡಿದ್ದರು, 'ಗೋಶಾಲೆಯ ಕೆಲಸವನ್ನು ಯಾರೂ ತಡೆಯುವುದಿಲ್ಲ. ಗೋಶಾಲೆಯ ಭೂಮಿಯನ್ನು ಅತಿಕ್ರಮಣ ಮಾಡುವುದಿಲ್ಲಎಂದು ಬರೆದು ಸಚಿವರು ಮಹಿಳೆಯ ಕೈಯಲ್ಲೇ ಸಹಿ ಹಾಕಿದ್ದಾರೆ. ಸೋಮವಾರ ಜೈಪುರ ವಿಮಾನ ನಿಲ್ದಾಣದ ಬಳಿಯ ಚಹಾ ಅಂಗಡಿಯಲ್ಲಿ ಅವರು ನಡೆಸಿದ ಸಾರ್ವಜನಿಕರ ಅಹಾವಲು ಆಲಿಸುತ್ತಿದ್ದ ಸಮಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಸಿಕ್ರೈ (ದೌಸಾ) ಪ್ರದೇಶದ ಮಹಿಳೆಯೊಬ್ಬರು, ತಮ್ಮ ಸ್ಥಳೀಯ ದನದ ಕೊಟ್ಟಿಗೆಯ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಕೃಷಿ ಸಚಿವರ ಬಳಿ ದೂರು ಸಲ್ಲಿಸಿದರು. ಆ ಮಹಿಳೆಗೆ ಧೈರ್ಯ ತುಂಬಲು ಸಚಿವರು ತಮ್ಮ ಬದ್ಧತೆಯನ್ನು ನೇರವಾಗಿ ಅವರ ಕೈಯ ಮೇಲೆ ಬರೆದು, ಯಾವುದೇ ಸಂದರ್ಭದಲ್ಲೂ ಅಂತಹ ಅತಿಕ್ರಮಣಕ್ಕೆ ಅನುಮತಿ ಇಲ್ಲ ಎಂದು ಹೇಳಿದರು. ಅಲ್ಲದೇ ಡಿಸೆಂಬರ್ 4 ರಂದು ದೌಸಾದಲ್ಲಿರುವ ಸಂತ ಆಶ್ರಮ ನಿಕಟಪುರಿ ಸಿಕ್ರೈ ಗೋಶಾಲೆಗೆ ಭೇಟಿ ನೀಡುವುದಾಗಿ ಅವರು ಮಹಿಳೆಗೆ ಭರವಸೆ ನೀಡಿದರು. ಹುಣ್ಣಿಮೆ ದಿನ ಆಶ್ರಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಇದೇ ವೇಳೆ ಸಚಿವರನ್ನು ಔಪಚಾರಿಕವಾಗಿ ಆಹ್ವಾನಿಸಲಾಯ್ತು.
ಇದನ್ನೂ ಓದಿ: ಸಂಸತ್‌ಗೆ ಬೀದಿನಾಯಿಯನ್ನು ಕರೆದುಕೊಂಡು ಬಂದು ನಿಜವಾದ ನಾಯಿಗಳು ಸಂಸತ್ತಿನಲ್ಲಿವೆ ಎಂದ ಕಾಂಗ್ರೆಸ್ ಸಂಸದೆ
ಮಹಿಳೆಯ ಕೈ ಮೇಲೆ ಭರವಸೆ ಬರೆದ ನಂತರ, ಸಚಿವರು ಅದಕ್ಕೆ ಸಹಿ ಹಾಕಿದ್ರು ಈ ರೀತಿ ಲಿಖಿತ ಭರವಸೆ ನೀಡಿದ ನಂತರ ಸಚಿವರು ಮಹಿಳೆಯ ಜೊತೆ ಫೋಟೋ ತೆಗೆಸಿಕೊಂಡರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಚಿವರು, ನಾನು ಮಾತು ತಪ್ಪಿದರೆ, ನಾನು ಅಲ್ಲೇ ಒಂದು ಮಂಚ ಹಾಕಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು. ಇದಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಮಹಿಳೆ, ನಾನು ನಿಮಗೆ ಹೇಳುತ್ತಿದ್ದೇನೆ, ಒಂದು ವೇಳೆ ಅತಿಕ್ರಮಣ ನಡೆದರೆ, ನಾನು ಅಲ್ಲಿಯೇ ಮಣ್ಣಿನಲ್ಲಿ ನನ್ನನ್ನು ನಾನು ಹೂತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಸಚಿವರು ಸ್ಥಳೀಯರಿಂದ ಹಲವಾರು ದೂರುಗಳನ್ನು ಆಲಿಸಿದರು. ಅವುಗಳಲ್ಲಿ ಹೆಚ್ಚಿನವು ವಿದ್ಯುತ್ ಮತ್ತು ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದ್ದವಾಗಿತ್ತು.. ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ನೋಡಿಕೊಳ್ಳಲು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೇಪರ್‌ನಲ್ಲಿ ಬರೆದು ಸಹಿ ಹಾಕಿ ನೀಡಿದ ಅನೇಕ ಭರವಸೆಗಳನ್ನೇ ಕೆಲವರು ಪಾಲಿಸುವುದಿಲ್ಲ, ಹೀಗಿರುವಾಗ ಸಚಿವರ ಈ ಭರವಸೆಯನ್ನು ನಂಬಬಹುದೇ? ಈ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ…
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ