
ನವದೆಹಲಿ: ಇಂದು ಚಳಿಗಾಲದ ಅಧಿವೇಶನದ ಆರಂಭವಾಗಿದ್ದು, ಮೊದಲ ದಿನವೇ ಪ್ರತಿಪಕ್ಷಗಳ ಸದಸ್ಯರ ತೀವ್ರ ಗಲಾಟೆಯಿಂದಾಗಿ ಸಂಸತ್ ಕಲಾಪಗಳು ಸರಿಯಾಗಿ ನಡೆಯಲೇ ಇಲ್ಲ. ಎಸ್‌ಐಆರ್‌ಗೆ ಸಂಬಂಧಿಸಿದಂತೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರು ನಿರಂತರ ಗಲಾಟೆ ಮಾಡಿದ್ದರಿಂದ ಮೊದಲ ದಿನವೇ ಕಲಾಪ ಸರಿಯಾಗಿ ನಡೆಯಲೇ ಇಲ್ಲ. ಇದರ ಮಧ್ಯೆ ಕಾಂಗ್ರೆಸ್ ಹಿರಿಯ ಸಂಸದೆ ರೇಣುಕಾ ಚೌಧರಿ ಅವರು ಬೀದಿ ನಾಯಿಯನ್ನು ಸಂಸತ್ತಿನ ಮೈದಾನಕ್ಕೆ ಕರೆತರುವ ಮೂಲಕ ವಿವಾದವನ್ನು ಇನ್ನಷ್ಟು ಹೆಚ್ಚು ಮಾಡಿದರು. ಇದರ ಜೊತೆಗೆ ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ ಅವರು ನಿಯಮಿತವಾಗಿ ಜನರನ್ನು ಕಚ್ಚುತ್ತವೆ ಎಂದು ಹೇಳುವ ಮೂಲಕ ಗಲಾಟೆಗೆ ತುಪ್ಪು ಸುರಿದಿದ್ದಾರೆ. ಆದರೆ ತಮ್ಮ ನಡೆ ವಿವಾದಕ್ಕೀಡಾಗುತ್ತಿದ್ದಂತೆ ಬೆಳಗ್ಗೆ ಸಂಸತ್ತಿಗೆ ಹೋಗುವ ದಾರಿಯಲ್ಲಿ ನಾಯಿಮರಿ ಸಿಕ್ಕಿತು ಎಂದು ಚೌಧರಿ ಹೇಳಿಕೊಂಡಿದ್ದಾರೆ.
ವಾಹನಗಳ ಅಡಿಗೆ ಬಿದ್ದರೆ ಎಂದು ಜೊತೆಗೆ ಕರೆತಂದೆ:
ತಾವು ಸಂಸತ್‌ಗೆ ಬರುವ ದಾರಿಯಲ್ಲಿ ಸ್ಕೂಟರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದನ್ನು ನೋಡಿದ ನಂತರ ಅಲ್ಲೇ ರಸ್ತೆಬದಿ ನಾಯಿಮರಿ ಇರುವುದನ್ನು ಗಮನಿಸಿದೆ. ಅದರ ಸುರಕ್ಷತೆಯ ಬಗ್ಗೆ ಕಳವಳಗೊಂಡು ಅದನ್ನು ತಮ್ಮ ವಾಹನದಲ್ಲಿ ಕರೆತಂದೆ. ನಾಯಿ ಕಾರಿನೊಳಗೆ ಉಳಿದುಕೊಂಡಿತು ಮತ್ತು ವಾಹನವು ನನ್ನನ್ನು ಇಳಿಸಿದ ನಂತರ ಹೊರಟುಹೋಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಏನಾದರೂ ಕಾನೂನು ಇದೆಯೇ ನಾನು ಬರುತ್ತಿದ್ದಾಗ. ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪುಟ್ಟ ನಾಯಿಮರಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದು ವಾಹನಗಳ ಚಕ್ರಕ್ಕೆ ಸಿಲುಕಿ ಬಿಡಬಹುದು ಎಂದೆನಿಸಿತು. ಹಾಗಾಗಿ ನಾನು ಅದನ್ನು ಎತ್ತಿಕೊಂಡು ಕಾರಿನಲ್ಲಿ ಇರಿಸಿಕೊಂಡು ಸಂಸತ್ತಿಗೆ ಬಂದು ವಾಪಸ್ ಕಳುಹಿಸಿದೆ. ಕಾರು ಹೊರಟು ಹೋಯಿತು, ಮತ್ತು ನಾಯಿಯೂ ಹೊರಟು ಹೋಯಿತು. ಹೀಗಿದ್ದರೂ ಈ ಚರ್ಚೆಯ ಅರ್ಥವೇನು? ಎಂದು ಚೌಧರಿ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ ಎಂದ ಚೌಧರಿ:
ಇದೇ ವೇಳೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಮತ್ತು ಸರ್ಕಾರವನ್ನು ಟೀಕಿಸುತ್ತಾ ಮಾತನಾಡಿದ ಚೌಧರಿ, ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ. ಕಚ್ಚುವವರು ನಿಜವಾಗಿಯೂ ಸಂಸತ್ತಿನಲ್ಲಿ ಕುಳಿತಿರುತ್ತಾರೆ. ಅವರು ಸರ್ಕಾರವನ್ನು ನಡೆಸುತ್ತಾರೆ. ನಾವು ಮೂಕ ಪ್ರಾಣಿಯನ್ನು ನೋಡಿಕೊಳ್ಳುತ್ತೇವೆ ಮತ್ತು ಇದು ದೊಡ್ಡ ವಿಷಯ ಮತ್ತು ಚರ್ಚೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೇ? ನಾನು ನಾಯಿಯನ್ನು ಮನೆಗೆ ಕಳುಹಿಸಿ ಮನೆಯಲ್ಲಿಯೇ ಸಾಕಲು ಹೇಳಿದೆ. ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್, ರೇಣುಕಾ ಚೌಧರಿ ಅವರನ್ನು ಟೀಕಿಸಿದ್ದು, ಅವರು ನಾಟಕ ಮಾಡಿದ್ದಾರೆ. ನಾಯಿಯನ್ನು ಸಂಸತ್ತಿಗೆ ಕರೆತರುವ ಮೂಲಕ ಅವರು ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಸರಿಯಾದ ದಾಖಲೆಗಳಿಲ್ಲದೆ ಸದಸ್ಯರು ಏನನ್ನೂ ಸಂಸತ್ ಆವರಣದೊಳಗೆ ಕರೆತರಲು ಅನುಮತಿ ಇಲ್ಲ ಹೀಗಿರುವಾಗ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ನೀವು ಮಹತ್ವದ ವಿಷಯಗಳನ್ನು ಚರ್ಚಿಸುವ ಬಗ್ಗೆ ಗಂಭೀರವಾಗಿಲ್ಲ, ಇಂತಹ ತಮಾಷೆಯ ಮೂಲಕ ನೀವು ಸಂಸತ್ತನ್ನು ತಮಾಷೆ ಮಾಡುತ್ತಿದ್ದೀರಿ, ಅವರೊಬ್ಬ ಸಂಸತ್ ಸದಸ್ಯೆ ಮತ್ತು ಅವರು ಇಂತಹ ನಾಟಕದಲ್ಲಿ ತೊಡಗಿಸಿಕೊಳ್ಳುವ ಬದಲು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಬೇಕು ಎಂದು ಜಗದಾಂಬಿಕಾ ಪಾಲ್ ಹೇಳಿದ್ದಾರೆ. ಜೊತೆಗೆ ಸದನದ ಅಧ್ಯಕ್ಷರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಮಧ್ಯೆ ಚಳಿಗಾಲದ ಅಧಿವೇಶನದಲ್ಲಿ, ವಿಶೇಷವಾಗಿ ಲೋಕಸಭೆಯಲ್ಲಿ, ದೇಶಾದ್ಯಂತ ಪ್ರಸ್ತುತ ನಡೆಯುತ್ತಿರುವ ಚುನಾವಣಾ ಆಯೋಗದ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ನಿರಂತರ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗಿದರು. ವಿರೋಧ ಪಕ್ಷದ ಸದಸ್ಯರು ವೋಟ್ ಚೋರ್, ಗಡ್ಡಿ ಚೋಡ್ ಎಂದು ಘೋಷಣೆ ಕೂಗುತ್ತಿದ್ದಂತೆ, ಸ್ಪೀಕರ್ ಸ್ಥಾನ ನಿರ್ವಹಿಸಿದ್ದ ಸಂಸದೆ ಸಂಧ್ಯಾ ರೈ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಿಕೆ ಮಾಡಿದರು.
ಇದನ್ನೂ ಓದಿ: ಮಹಿಳೆಯರ ಗೌರವ ರಕ್ಷಿಸಲು ಹೋಗಿ ಪ್ರಾಣತೆತ್ತ ರಾಷ್ಟ್ರಮಟ್ಟದ ಬಾಡಿಬಿಲ್ಡರ್
ಹಾಗೆಯೇ ರಾಜ್ಯಸಭಾ ಕಲಾಪವೂ ಕೂಡ 2 ಗಂಟೆಯವರೆಗೆ ಮುಂದೂಡಿಕೆ ಆಗಿತ್ತು. ಸೆಪ್ಟೆಂಬರ್‌ನಲ್ಲಿ ತಮ್ಮ ಕರ್ತವ್ಯಗಳನ್ನು ಆರಂಭಿಸಿದ ರಾಜ್ಯಸಭೆಯ ಹೊಸ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಸನ್ಮಾನದ ಕುರಿತು ಚರ್ಚೆಗಳು ನಡೆದ ನಂತರ, ರಾಜ್ಯಸಭೆಯು ಮಧ್ಯಾಹ್ನ 2 ಗಂಟೆಯವರೆಗೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ