
ನವದೆಹಲಿ(ಆ.31): ಆತ್ಮನಿರ್ಭರ ಭಾರತಕ್ಕೆ (ಸ್ವಾವಲಂಬಿ ಭಾರತ) ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ದೇಶಿ ತಳಿಯ ನಾಯಿಗಳ ಸಂರಕ್ಷಣೆ ಹಾಗೂ ಸಾಕಣೆಗೂ ಕರೆ ನೀಡಿದ್ದಾರೆ. ‘ದೇಶಿ ಶ್ವಾನಗಳ ಸಂರಕ್ಷಣೆ, ಪಾಲನೆ-ಪೋಷಣೆ ಕೂಡ ಆತ್ಮನಿರ್ಭರ ಭಾರತದಲ್ಲಿ ಒಂದು. ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಎಂದು ಜನ ಬಯಸಿದರೆ ಮುಧೋಳ ಸೇರಿದಂತೆ ದೇಶಿ ತಳಿ ನಾಯಿಯನ್ನೇ ತರಬೇಕು’ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ ಸೇನೆ ಹಾಗೂ ಇತರ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಧೋಳ ನಾಯಿಗಳು ಹಾಗೂ ಇತರ ದೇಶಿ ತಳಿಯ ‘ಶೂರ ಶ್ವಾನ’ಗಳ ಪಾತ್ರವನ್ನೂ ಮೋದಿ ಕೊಂಡಾಡಿದ್ದಾರೆ.
ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಮೋದಿ, ‘ಕರ್ನಾಟಕದ ಮುಧೋಳ ಹಾಗೂ ಹಿಮಾಚಲಿ ನಾಯಿಗಳ ತಳಿ ವಿಶಿಷ್ಟವಾದುದು. ಅಂತೆಯೇ ರಾಜಪಾಳ್ಯಂ, ಕಣ್ಣಿ, ಚಿಪ್ಪಿಪಾರೈ ಹಾಗೂ ಕೊಂಬೈ ಉತ್ತಮ ದೇಶಿ ನಾಯಿ ತಳಿಗಳು. ಭಾರತೀಯ ವಾತಾವರಣಕ್ಕೆ ಇವುಗಳ ಹೊಂದಾಣಿಕೆ ಇರುತ್ತದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ದೇಶಿ ನಾಯಿ ತಳಿಗಳ ಸಂಶೋಧನೆಯಲ್ಲಿ ನಿರತವಾಗಿದೆ. ತಳಿಗಳ ಅಭಿವೃದ್ಧಿಯೇ ಇದರ ಉದ್ದೇಶ’ ಎಂದರು.
ಸ್ವದೇಶಿ ಆಟಿಕೆ ನಿರ್ಮಿಸುವ ಸಮಯ, ಸ್ವಾವಲಂಬಿ ಭಾರತ ನಿರ್ಮಾಣದತ್ತ ಮತ್ತೊಂದು ಹೆಜ್ಜೆ!
‘ಮುಧೋಳ ನಾಯಿಗಳನ್ನು ತರಬೇತುಗೊಳಿಸಿ ಸೇನೆ, ಸಿಐಎಸ್‌ಎಫ್ ಹಾಗೂ ಎನ್‌ಎಸ್‌ಜಿ ಪಡೆಗಳಲ್ಲಿ ಸೇರಿಸಲಾಗಿದೆ’ ಎಂದೂ ಮೋದಿ ಅವರು ಮುಧೋಳ ನಾಯಿಗಳ ಕ್ಷಮತೆಯ ಬಗ್ಗೆ ಒತ್ತಿ ಹೇಳಿದರು.
‘ಮುಂದಿನ ಸಲ ನೀವು ನಾಯಿ ಸಾಕಬೇಕು ಎನ್ನಿಸಿದರೆ ಭಾರತೀಯ ನಾಯಿಗಳನ್ನೇ ಸಾಕಿ. ಆತ್ಮನಿರ್ಭರ ಭಾರತದಲ್ಲಿ ಇದೂ ಒಂದು ಅಂಶವಾಗಬೇಕು’ ಎಂದು ಕರೆ ನೀಡಿದರು.
ಮುಧೋಳ ನಾಯಿ ಇತಿಹಾಸ ರೋಚಕ
ಕ್ರಿಸ್ತಪೂರ್ವ 500ರಲ್ಲೇ ಮುಧೋಳ ನಾಯಿ ಇತ್ತು. ಮುಧೋಳ ಭಾಗದಲ್ಲಿ ಈ ನಾಯಿ ಕಂಡುಬರುತ್ತಿತ್ತು. ಹೀಗಾಗಿ ಇದಕ್ಕೆ ‘ಮುಧೋಳ ನಾಯಿ’ ಎನ್ನುತ್ತಾರೆ. ಮುಧೋಳರ ರಾಜ ಮಾಲೋಜಿರಾವ್ ಘೋರ್ಪಡೆ ಅವರು ಈ ನಾಯಿಯ ತಳಿ ನಶಿಸದಂತೆ 19ನೇ ಶತಮಾನದಲ್ಲಿ ಪೋಷಿಸಿದರು. ರಾಜ-ಮಹಾರಾಜರ ಕಾಲದಲ್ಲಿ ಇವನ್ನು ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಈಗಲೂ ಅನೇಕ ಕುಟುಂಬಗಳು ಮುಧೋಳ ನಾಯಿಯ ಸಂರಕ್ಷಣೆ ಮಾಡುತ್ತಿವೆ. ಸಪೂರ ದೇಹ, ವೇಗದ ಓಟ ಇದರ ವೈಶಿಷ್ಟ್ಯ.
'ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ: 40,000 ಉದ್ಯೋಗವಕಾಶ'
ದೇಸೀ ನಾಯಿಗಳನ್ನೇ ಸಾಕಿ
ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ನಾವು ಎಲ್ಲ ಕ್ಷೇತ್ರದಲ್ಲೂ ಸ್ವದೇಶಿ ಚಿಂತನೆ ಅಳವಡಿಸಿಕೊಳ್ಳಬೇಕು. ಹೀಗಾಗಿ ಸಾಕುಪ್ರಾಣಿಗಳನ್ನು ಸಾಕುವವರು ದೇಸೀ ಪ್ರಾಣಿಗಳನ್ನೇ ಸಾಕಬೇಕು. ನಾಯಿ ಸಾಕುವವರು ಭಾರತೀಯ ತಳಿಯ ನಾಯಿಗಳನ್ನೇ ಸಾಕಿ. ಭಾರತೀಯ ತಳಿಯ ನಾಯಿಗಳನ್ನು ಸೇನೆಗೆ ಕೂಡ ಸೇರಿಸಿಕೊಳ್ಳಲಾಗಿದೆ. ನಮ್ಮ ದೇಶದ ನಾಯಿಗಳು ಅನೇಕ ಬಾಂಬ್ ದಾಳಿಗಳನ್ನು ತಪ್ಪಿಸಿವೆ. ಅನೇಕ ಭಯೋತ್ಪಾದಕ ಕೃತ್ಯಗಳನ್ನು ಮೊದಲೇ ಪತ್ತೆಹಚ್ಚಿವೆ. ರಕ್ಷಣಾ ಕಾರ್ಯಾಚರಣೆಯಲ್ಲೂ ಈ ನಾಯಿಗಳು ಅವಶೇಷಗಳಡಿ ಸಿಲುಕಿದವರನ್ನು ಪತ್ತೆಹಚ್ಚುವ ಮೂಲಕ ಮಹತ್ವದ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಸ್ವಾತಂತ್ರ್ಯ ದಿನಾಚರಣೆ ವೇಳೆ ಸೋಫಿ ಹಾಗೂ ವಿದಾ ಎಂಬ ಸೇನೆಯಲ್ಲಿನ ನಾಯಿಗಳನ್ನು ಗಮನಿಸಿದೆ. ದೇಶ ರಕ್ಷಣೆಯಲ್ಲಿ ಪಾಲ್ಗೊಂಡಿದ್ದಕ್ಕೆ ಇವುಗಳ ಕಾರ್ಯನಿರ್ವಹಣೆಗೆ ಪ್ರಶಂಸಾ ಪತ್ರವೂ ಬಂದಿದೆ. ಅಡಗಿದ ಉಗ್ರರನ್ನು, ಬಾಂಬ್‌ಗಳನ್ನು ಪತ್ತೆ ಮಾಡಿ ದೇಶಕ್ಕಾಗಿ ತ್ಯಾಗ ಮಾಡಿದ, ಹುತಾತ್ಮನಾದ ಇಂಥ ಅನೇಕ ಶೂರ ನಾಯಿಗಳು ಇವೆ’ ಎಂದು ಶ್ಲಾಘಿಸಿದರು.
ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಪ್ರಧಾನಿ ಮೋದಿ ಶಹಬ್ಬಾಶ್..!
‘ಪ್ರಾಕೃತಿಕ ವಿಕೋಪದ ವೇಳೆ ರಕ್ಷಣಾ ಕಾರ್ಯದಲ್ಲೂ ಶ್ವಾನಗಳು ಮಹತ್ವದ ಪಾತ್ರ ವಹಿಸಿವೆ. ರಾಷ್ಟ್ರೀಯ ವಿಪತ್ತು ಪಡೆ (ಎನ್‌ಡಿಆರ್‌ಎಫ್), ನಾಯಿಗಳಿಗೆ ಇಂಥ ತರಬೇತಿ ನೀಡಿದೆ. ಭೂಕಂಪ ಅಥವಾ ಕಟ್ಟಡ ದುರಂತವಾದಾಗ ಅವಶೇಷಗಳಲ್ಲಿ ಸಿಲುಕಿ ಜೀವಂತ ಇದ್ದ ಅನೇಕರನ್ನು ಶ್ವಾನಗಳು ಗುರುತಿಸಿವೆ’ ಎಂದು ಪ್ರಧಾನಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ