) ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ| ವರ್ಷಾಂತ್ಯಕ್ಕೆ ಕೊರೋನಾ ಲಸಿಕೆ:ಹರ್ಷವರ್ಧನ್| ಕೊರೋನಾ ನಿಯಂತ್ರಣದಲ್ಲಿ ಭಾರತ ನಂ.1
ಬೆಂಗಳೂರು(ಆ.31): ದೇಶದಲ್ಲಿ ಕೊರೋನಾ ಸೋಂಕಿನ ವಿರುದ್ಧದ ಮೂರು ಔಷಧಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದು, ವರ್ಷಾಂತ್ಯಕ್ಕೆ ನಮ್ಮ ದೇಶದಲ್ಲೇ ಕೊರೋನಾಗೆ ವ್ಯಾಕ್ಸಿನ್ ಲಭ್ಯವಾಗಲಿದೆ. ಅಲ್ಲದೆ, ದೀಪಾವಳಿ ಹಬ್ಬದ ವೇಳೆಗೆ, ಈಗ ತಾರಕಕ್ಕೇರಿರುವ ಕೊರೋನಾ ಸೋಂಕು ವಿರುದ್ಧ ದೇಶವು ಬಿಗಿ ನಿಯಂತ್ರಣ ಸಾಧಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಜತೆಗೆ, ಕೊರೋನಾ ನಿಯಂತ್ರಣದ ಪರಿಣಾಮಕಾರಿ ಕ್ರಮಗಳ ಮೂಲಕ ದೇಶವು ಕೊರೋನಾ ನಿಯಂತ್ರಣದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದೂ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
undefined
ಭಾನುವಾರ ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಹೆಸರಿನಲ್ಲಿರುವ ಅನಂತಕುಮಾರ್ ಪ್ರತಿಷ್ಠಾನವು ಆಯೋಜಿಸಿದ್ದ ‘ಕೊರೋನಾ ಕಾಲದಲ್ಲಿ ಸಮರ್ಥ ನಾಯಕತ್ವ ಹಾಗೂ ದೇಶ ಮೊದಲು’ ಎಂಬ ವೀಡಿಯೋ ಕಾನ್ಫರೆನ್ಸ್ ಸಭೆಯನ್ನು ಸಚಿವರು ದೆಹಲಿಯಿಂದಲೇ ಉದ್ಘಾಟಿಸಿ ಮಾತನಾಡಿದರು.
‘ಕೊರೋನಾ ಆರಂಭದಲ್ಲಿ ದೇಶಕ್ಕೆ ಆಗಮಿಸಿದ್ದ ಹಾರ್ವರ್ಡ್ ಹಾಗೂ ಪ್ರಮುಖ ಸಂಶೋಧನಾ ತಜ್ಞರು ಜೂನ್ ತಿಂಗಳ ವೇಳೆಗೆ 3 ಕೋಟಿ ಭಾರತೀಯರಿಗೆ ಸೋಂಕು ಹರಡಲಿದೆ. ಇದರಿಂದ 50 ರಿಂದ 60 ಲಕ್ಷ ಜನ ಸಾವನ್ನಪ್ಪಲಿದ್ದಾರೆ ಎಂದು ಅಂದಾಜಿಸಿದ್ದರು. ಈಗ ನಾವು ಆಗಸ್ಟ್ ತಿಂಗಳ ಅಂತ್ಯದಲ್ಲಿದ್ದು, 35 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 27 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಶೇ.77 ರಷ್ಟುಚೇತರಿಕೆ ಹಾಗೂ ಕೇವಲ ಶೇ.1.8 ರಷ್ಟುಸಾವಿನ ದರದ ಮೂಲಕ ವಿಶ್ವದಲ್ಲೇ ಕೊರೋನಾ ನಿಯಂತ್ರಣದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ’ ಎಂದು ತಿಳಿಸಿದರು.
ಕೊರೋನಾ ಸಮರ್ಥವಾಗಿ ಎದುರಿಸಿದ್ದೇವೆ:
‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಕೊರೋನಾ ಸೋಂಕನ್ನು ಸಮರ್ಥವಾಗಿ ಎದುರಿಸಿದ್ದೇವೆ. ನಿತ್ಯ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಮಾಡುತ್ತಿದ್ದೇವೆ. ಅಲ್ಲದೆ, ಪಿಪಿಇ ಕಿಟ್, ಎನ್-95 ಮಾಸ್ಕ್, ವೆಂಟಿಲೇಟರ್ ಕೊರತೆ ನೀಗಿಸಿ ದೇಶದಲ್ಲೇ ಉತ್ಪಾದನೆ ಮಾಡುತ್ತಿದ್ದೇವೆ. 109 ಸ್ವದೇಶಿ ಉತ್ಪಾದಕರು ನಿತ್ಯ 5 ಲಕ್ಷ ಪಿಪಿಇ ಕಿಟ್ ಉತ್ಪಾದಿಸುತ್ತಿದ್ದಾರೆ. ರಾಜ್ಯಗಳು ಸಾಕು ಎನ್ನುವಷ್ಟುಪೂರೈಕೆ ನಮ್ಮಲ್ಲಿದೆ’ ಎಂದು ಹೇಳಿದರು.
‘ಇಡೀ ವಿಶ್ವದಲ್ಲಿ ಕೊರೋನಾ ವ್ಯಾಕ್ಸಿನ್‌ಗೆ ಸಂಶೋಧನೆ ನಡೆಯುತ್ತಿದ್ದು ದೇಶದಲ್ಲಿ 9 ಸಂಶೋಧನೆಗಳು ನಡೆಯುತ್ತಿವೆ. ಈ ಪೈಕಿ 3 ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಬಂದಿವೆ. ಹೀಗಾಗಿ ವರ್ಷಾಂತ್ಯಕ್ಕೆ ದೇಶದಲ್ಲೇ ವ್ಯಾಕ್ಸಿನ್ ಲಭ್ಯವಾಗಲಿದೆ’ ಎಂದರು.
ಮಾಸ್ಕ್, ದೈಹಿಕ ಅಂತರವೇ ಮದ್ದು- ಡಾ| ಮಂಜುನಾಥ್:
ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ದೇಶ ಹಾಗೂ ರಾಜ್ಯ ಕೊರೋನಾ ಹಾಗೂ ನೆರೆಯ ನಡುವೆ ಸ್ಯಾಂಡ್‌ವಿಚ್ ಆಗಿದೆ. ಕೊರೋನಾ ಲಕ್ಷಣಗಳು ಬದಲಾಗಿ ತಲೆನೋವು, ಡಯೇರಿಯಾನಂತಹವು ಸಹ ಲಕ್ಷಣಗಳಾಗಿ ಬದಲಾಗಿವೆ. ವ್ಯಾಕ್ಸಿನ್ ಇನ್ನೂ ಲಭ್ಯವಾಗಿಲ್ಲದ ಕಾರಣ ದೈಹಿಕ ಅಂತರ ಹಾಗೂ ಮಾಸ್ಕ್ ಬಳಕೆಯನ್ನೇ ಸಾಮಾಜಿಕ ವ್ಯಾಕ್ಸಿನ್‌ಗಳಾಗಿ ಪಾಲಿಸಬೇಕಿದೆ’ ಎಂದರು.
ಕ್ರಾಂತಿಕಾರಿ ಬದಲಾವಣೆ- ಡಿಸಿಎಂ:
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಕೊರೋನಾ ಪರಿಸ್ಥಿತಿ ಬಳಸಿಕೊಂಡು ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದೇವೆ. ಭೂ ಸುಧಾರಣೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ, ಹೊಸ ಕೈಗಾರಿಕಾ ನೀತಿ, ಕೈಗಾರಿಕಾ ಸೌಲಭ್ಯ ಕಾಯಿದೆ, ಬಂಡವಾಳ ಹೂಡಿಕೆಗೆ ನೀತಿ ನಿಯಮಗಳ ಸಡಲಿಕೆ ಹೀಗೆ ಹಲವು ಕ್ರಮ ಕೈಗೊಂಡಿದ್ದೇವೆ. ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲೂ ನಾವು ತೆಗೆದುಕೊಂಡ ಕ್ರಮ ದೇಶಕ್ಕೆ ಮಾದರಿಯಾಗಿವೆ’ ಎಂದು ಹೇಳಿದರು.
ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿತೇಜಸ್ವಿನಿ ಅನಂತಕುಮಾರ್ ಮಾತನಾಡಿ, ‘ಪ್ರತಿಷ್ಠಾನವು ಅನಂತಕುಮಾರ್ ರಾಷ್ಟ್ರೀಯ ನಾಯಕತ್ವ ಮತ್ತು ನೀತಿ ನಿರೂಪಣೆ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಇದರಲ್ಲಿ ನಾಯಕತ್ವ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು ಸಂಶೋಧನೆಯನ್ನು ಕೈಗೊಳ್ಳಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದೆ.ಉದ್ದೇಶಿತ ಸಂಸ್ಥೆಯ ಆರಂಭಕ್ಕೆ ಪೂರಕವಾಗಿ ವೆಬಿನಾರ್ ಸಂವಾದದ ಸರಣಿಯನ್ನು ಈ ಮೂಲಕ ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.
ನಾರಾಯಣ ಹೆಲ್ತ್‌ನ ಡಾ.ದೇವಿ ಶೆಟ್ಟಿ, ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯಂ, ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿಡಾ.ಬಿ.ಎಸ್. ಶ್ರೀನಾಥ್ ಸೇರಿದಂತೆ ಹಲವರು ಹಾಜರಿದ್ದರು.