80000 ಕೇಸ್| ದೇಶದಲ್ಲಿ ನಿನ್ನೆ ಮತ್ತೆ ಕೊರೋನಾ ಸ್ಫೋಟ| ಒಂದೇ ದಿನ ಇಷ್ಟುಕೇಸ್ ಯಾವ ದೇಶದಲ್ಲೂ ಇಲ್ಲ| 958 ಮಂದಿ ಸಾವು| 36 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ| 65000 ಗಡಿಗೆ ಮೃತರ ಸಂಖ್ಯೆ
ನವದೆಹಲಿ(ಆ.31): ದಾಖಲೆ ಪ್ರಮಾಣದಲ್ಲಿ ನಡೆಯುತ್ತಿರುವ ಪರೀಕ್ಷೆ ಹಾಗೂ ಜನಜೀವನ ಸಹಜ ಸ್ಥಿತಿಯತ್ತ ದಾಪುಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದೇಶದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ. ಭಾನುವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 80 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೊರೋನಾ ಹಾವಳಿ ಆರಂಭವಾದಾಗಿನಿಂದ ವಿಶ್ವದ ಯಾವುದೇ ದೇಶದಲ್ಲೂ ಒಂದೇ ದಿನ ಇಷ್ಟೊಂದು ಸಂಖ್ಯೆಯ ಕೊರೋನಾ ಪ್ರಕರಣಗಳು ಪತ್ತೆಯಾದ ನಿದರ್ಶನವೇ ಇಲ್ಲ.
ಭಾನುವಾರ 80,078 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 36,12,164ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ 958 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆ 64536ಕ್ಕೆ ಹೆಚ್ಚಳವಾಗಿದೆ. 59,403 ಮಂದಿ ಭಾನುವಾರ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಕೊರೋನಾ ವಿರುದ್ಧ ಹೋರಾಡಿ ಜಯಿಸಿದವರ ಸಂಖ್ಯೆ 27,65,540ಕ್ಕೆ ಏರಿಕೆಯಾಗಿದೆ.
ಅಮೆರಿಕದಲ್ಲಿ ಜು.24ರಂದು 78586 ಸೋಂಕಿತರು ಪತ್ತೆಯಾಗಿದ್ದರು. ಅದು ದೇಶವೊಂದರಲ್ಲಿ ದಾಖಲಾದ ಅತ್ಯಧಿಕ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆಯಾಗಿತ್ತು. ಆದರೆ ಶನಿವಾರ 78,751 ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತ ಇದನ್ನು ಮುರಿದಿತ್ತು. ಅದಾದ ಮರುದಿನವೇ 80 ಸಾವಿರ ಪ್ರಕರಣಗಳು ದಾಖಲಾಗಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.
ಶನಿವಾರ ಒಂದೇ ದಿನ ದಾಖಲೆಯ 10.55 ಲಕ್ಷ ಮಂದಿಗೆ ಕೊರೋನಾ ಪತ್ತೆ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ದೇಶಾದ್ಯಂತ ಈವರೆಗೂ 4.14 ಕೋಟಿ ಮಂದಿಗೆ ಕೊರೋನಾ ಪರೀಕ್ಷೆ ನಡೆಸಿದಂತಾಗಿದೆ ಎಂದು ಭಾನುವಾರ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.