
ಪಟನಾ (ಏಪ್ರಿಲ್ 25, 2023): ಮೋದಿ ಸರ್‌ನೇಮ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಗೂ ಸಂಸತ್ ಸದಸ್ಯತ್ವ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಇದೇ ಆರೋಪದಡಿ ಬಿಹಾರದಲ್ಲಿ ಹೂಡಲಾಗಿರುವ ಇನ್ನೊಂದು ಮಾನನಷ್ಟ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಮೋದಿ ಹೂಡಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜಾರಿ ನ್ಯಾಯಾಲಯ ನಡೆಸುವುದಕ್ಕೆ ಪಟನಾ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಇಂತಹುದೇ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯದಿಂದ ತಾನು ಶಿಕ್ಷೆಗೆ ಒಳಗಾಗಿರುವುದರಿಂದ ಮತ್ತೆ ಇದೇ ತಪ್ಪಿಗಾಗಿ ಇನ್ನೊಂದು ವಿಚಾರಣೆ ನಡೆಸಬಾರದು ಎಂದು ರಾಹುಲ್ ಗಾಂಧಿ ಹೈಕೋರ್ಟ್‌ಗೆ ಹೋಗಿದ್ದರು. ಅದನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್, ಮೇ 15ರವರೆಗೆ ಕೆಳ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದೆ.
ಇದನ್ನು ಓದಿ: ರಾಹುಲ್ ಗಾಂಧಿಗೆ ತೀವ್ರ ಹಿನ್ನೆಡೆ: 2 ವರ್ಷ ಜೈಲು ಶಿಕ್ಷೆ ಎತ್ತಿ ಹಿಡಿದ ಸೂರತ್ ಕೋರ್ಟ್
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ‘ಮೋದಿ ಸರ್‌ನೇಮ್ ಉಳ್ಳವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ’ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ಕೆಲ ದಿನಗಳಲ್ಲೇ ಅದರ ವಿರುದ್ಧ ಸುಶೀಲ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಮೊಕದ್ದಮೆಯ ವಿಚಾರಣೆ ಈಗ ನಡೆಯುತ್ತಿದೆ. ಇತ್ತೀಚೆಗಷ್ಟೇ ಗುಜರಾತ್‌ನ ಸೂರತ್ ನ್ಯಾಯಾಲಯ ಇದೇ ಆರೋಪದ ಸಂಬಂಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪರಿಣಾಮ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವ ಕಳೆದುಕೊಂಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಅಗ್ನಿಪರೀಕ್ಷೆ: ಜೈಲು ಶಿಕ್ಷೆ ಬಗ್ಗೆ ಇಂದು ತೀರ್ಮಾನ; ಶಿಕ್ಷೆಗೆ ತಡೆಯಾದ್ರೆ ಅನರ್ಹತೆ ರದ್ದು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ