ರಾಗಾಗೆ ಶಿಕ್ಷೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ತಳಮಳ, ಸಂಸದ ಸ್ಥಾನ ಕಳೆದುಕೊಳ್ತಾರಾ ರಾಹುಲ್‌ ಗಾಂಧಿ?

By Santosh Naik  |  First Published Mar 23, 2023, 1:45 PM IST

ಮೋದಿ ಸರ್‌ನೇಮ್‌ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿಯನ್ನು ಸೂರತ್‌ ಕೋರ್ಟ್‌ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. 2 ವರ್ಷ ಜೈಲು ಶಿಕ್ಷೆ ನೀಡಲಾಗಿದ್ದರೂ, ಜಾಮೀನು ಪಡೆದು ರಾಹುಲ್‌ ಗಾಂಧಿ ಹೊರಬಂದಿದ್ದಾರೆ. ದೋಷಿ ಎಂದ ಬಳಿಕ ಮೊದಲ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ ಮಹಾತ್ಮಾ ಗಾಂಧಿ ಮಾತನ್ನು ಪೋಸ್ಟ್‌ ಮಾಡಿದ್ದಾರೆ.


ನವದೆಹಲಿ (ಮಾ.23): ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ಇಡೀ ಮೋದಿ ಜಾತಿಯನ್ನೇ ಕಳ್ಳರು ಎನ್ನುವ ಅರ್ಥದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿಯನ್ನು ದೋಷಿ ಎಂದು ಸೂರತ್‌ ಕೋರ್ಟ್‌ ತೀರ್ಪು ನೀಡಿದೆ. ರಾಹುಲ್‌ ಗಾಂಧಿ ದೋಷಿ ಎಂದಿರುವ ಕೋರ್ಟ್‌ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದೆ.ಬಳಿಕ ಜಾಮೀನು ಪಡೆದ ರಾಹುಲ್‌ ಗಾಂಧಿಗೆ ಮೇಲಿನ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಕೋರ್ಟ್‌ ದೋಷಿ ಎಂದು ತೀರ್ಪು ನೀಡಿದ ಬಳಿಕ ಮಾಡಿದ ಮೊದಲ ಟ್ವೀಟ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಮಾತನ್ನು ನೆನಪಿಸಿಕೊಂಡಿದ್ದರು. 'ಸತ್ಯವೇ ದೇವರು. ಅಹಿಂಸೆ ಅದನ್ನು ತಲುಪುವ ಮಾರ್ಗ' ಎಂದು ಬರೆದಿದ್ದರು. ಇನ್ನು ರಾಹುಲ್‌ ಗಾಂಧಿ ದೋಷಿ ಎಂದು ಹೇಳಿರುವ ತೀರ್ಪಿಗೆ ಇಡೀ ಕಾಂಗ್ರೆಸ್‌ನಲ್ಲಿ ತಳಮಳ ಆರಂಭವಾಗಿದೆ. ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯ ಸ್ಥಾನ ಕಳೆದುಕೊಳ್ಳುತ್ತಾರಾ ಎನ್ನುವ ಅನುಮಾನವೂ ಕಾಡಿದೆ. 

ನಿಯಮದ ಪ್ರಕಾರವೇ ಹೋದಲ್ಲಿ ರಾಹುಲ್‌ ಗಾಂಧಿ ಅನರ್ಹರಾಗುತ್ತಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಸಲಹೆಗಾರ ಕಾಂಚನ್‌ ಗುಪ್ತಾ, 2013ರ ಜುಲೈ 10 ರಂದು ಲಿಲಿ ಥಾಮಸ್ ವಿರುದ್ಧ ಯೂನಿಯನ್ ಆಫ್ ಇಂಡಿಯಾದ ತೀರ್ಪನ್ನು ಉಲ್ಲೇಖಿಸಿದ್ದಾರೆ., ಸುಪ್ರೀಂ ಕೋರ್ಟ್ 'ಯಾವುದೇ ಸಂಸದರು, ಎಂಎಲ್ಎ ಅಥವಾ ಎಂಎಲ್ಸಿ ಅಪರಾಧದಲ್ಲಿ ತಪ್ಪಿತಸ್ಥರೆಂದು ಮತ್ತು ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದರೆ, ತಕ್ಷಣವೇ ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ' ಎಂದು ತೀರ್ಪು ನೀಡಿತ್ತು ಎಂದಿದ್ದಾರೆ. ಆದರೆ, ಇದರ ನಿರ್ಧಾರ ಮಾಡುವ ಹಕ್ಕು ಸ್ಪೀಕರ್‌ಗೆ ಇರುತ್ತದೆ.  

In Lily Thomas vs Union of India judgement of 10 July 2013, Supreme Court of India ruled that 'any MP, MLA or MLC who is convicted of a crime and given a minimum of 2 years' jail, loses membership of the House with immediate effect'.
n2

— Kanchan Gupta 🇮🇳 (@KanchanGupta)

ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರ ಪ್ರಕಾರ, ಯಾವುದೇ ಅಪರಾಧದ ಅಪರಾಧಿ ಮತ್ತು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಬಿಡುಗಡೆಯಾದ ಮುಂದಿನ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗುತ್ತದೆ. 

ಅನರ್ಹವಾಗಲಿದ್ದಾರಾ ರಾಹುಲ್‌ ಗಾಂಧಿ?: ಕೋರ್ಟ್‌ನಿಂದ ಕ್ರಿಮಿನಲ್‌ ಮೊಕದ್ದಮೆಯಲ್ಲಿ ದೋಷಿ ಎಂದು ತೀರ್ಪು ಬಂದಿರುವ ಕಾರಣ ರಾಹುಲ್‌ ಗಾಂಧಿ ಅವರ ಸಂಸದ ಸ್ಥಾನ ಅನರ್ಹವಾಗಲಿದೆಯೇ ಎನ್ನುವ ಅನುಮಾನ ಮಾಡಿದೆ. ಆದರೆ, ಸಂಸತ್‌ ಸದಸ್ಯ ಸ್ಥಾನದಿಂದ ತಕ್ಷಣವೇ ಅವರು ಅನರ್ಹರಾಗೋದಿಲ್ಲ ಎಂದು ಸುಪ್ರೀಂ ಕೋರರ್ಟ್‌ ವಕೀಲ ಉಪಮನ್ಯು ಹಜರಿಕಾ ತಿಳಿಸಿದ್ದಾರೆ. 'ಅಮಾನತುಗೊಂಡ ಶಿಕ್ಷೆಯನ್ನು ರಾಹುಲ್‌ ಗಾಂಧಿಗೆ ನೀಡಲಾಗಿದೆ. ಅವರಿಗೆ ಶಿಕ್ಷೆ ನೀಡಲಾಗಿದ್ದರೂ ಇದು ತಕ್ಷಣವೇ ಜಾರಿಗೆ ಬರೋದಿಲ್ಲ. ಮುಂದಿನ 30 ದಿನಗಳು ರಾಹುಲ್‌ ಗಾಂಧಿ ಪಾಲಿಗೆ ಪ್ರಮುಖವಾದುದಾಗಿದೆ. ಸಂಸತ್‌ ಸದಸ್ಯರಾಗಿ ಮುಂದುವರಿಯಲು ಸೂರತ್‌ ಜಿಲ್ಲಾ ಕೋರ್ಟ್‌ ನೀಡಿದ್ದ ಆದೇಶವನ್ನು ಮೇಲಿನ ಕೋರ್ಟ್‌ಗೆ ತೆರಳು ರದ್ದು ಮಾಡಿಸಬೇಕು ಅಥವಾ ತಡೆಯಾಜ್ಞೆ ತರಬೇಕು ಎಂದು ಹೇಳಿದ್ದಾರೆ.

Tap to resize

Latest Videos



'ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ, ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತಿದೆ ಮತ್ತು ವಿವಿಧ ರಾಜಕೀಯ ಪಕ್ಷಗಳ ಜನರ ವಿರುದ್ಧ ಈ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ' ಎಂದು ಪ್ರಕರಣದ ಕುರಿತು ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮಾನನಷ್ಟ ಕೇಸ್‌: ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ, ಜಾಮೀನು ಪಡೆದ ರಾಗಾ!

'ಹೇಡಿ, ಸರ್ವಾಧಿಕಾರಿ ಬಿಜೆಪಿ ಸರ್ಕಾರ ಇಂದು ರಾಹುಲ್‌ ಗಾಂಧಿಗೆ ಕುಟುಕಿದೆ. ಆದರೆ, ವಿರೋಧ ಪಕ್ಷದವರು ನಾವು ಅವರ ಕರಾಳ ಕೃತ್ಯಗಳನ್ನು ಬಯಲಿಗೆಳೆಯುತ್ತಿದ್ದೇವೆ. ಮೋದಿ ಸರಕಾರ ರಾಜಕೀಯ ದಿವಾಳಿತನಕ್ಕೆ ಬಲಿಯಾಗಿದೆ. ED ಪೊಲೀಸರನ್ನು ಕಳುಹಿಸುತ್ತದೆ. ರಾಜಕೀಯ ಭಾಷಣಗಳ ಮೇಲೆ ಕೇಸುಗಳನ್ನು ಹಾಕುತ್ತಾರೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ' ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಭೇಟಿಯಿಂದ ರಾಜ್ಯಕ್ಕೆ ಯಾವುದೇ ಪರಿಣಾಮ ಬೀರಿಲ್ಲ: ಸಿಎಂ ಬೊಮ್ಮಾಯಿ

'ಹೆದರಿರುವ ಇಡೀ ಆಡಳಿತ ಯಂತ್ರವು ನಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ರಾಹುಲ್‌ ಗಾಂಧಿಗೆ ಶಿಕ್ಷೆ ನೀಡುವ ಮೂಲಕ ಇದನ್ನು ಮಾಡಲಾಗುತ್ತಿದೆ. ಆದರೆ, ನನ್ನ ಸಹೋದರ ಭಯಪಡೆದೋದಿಲ್ಲ. ಆತ ಎಂದಿಗೂ ಭಯಪಟ್ಟಿಲ್ಲ. ಸತ್ಯವನ್ನೇ ಹೇಳುತ್ತಾ ಬದುಕಿದ್ದಾನೆ. ಅದನ್ನು ಹೇಳುತ್ತಲೇ ಇರುತ್ತಾನೆ.  ದೇಶದ ಜನರ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ. ಸತ್ಯದ ಶಕ್ತಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವರ ಬಳಿ ಇದೆ' ಎಂದು ರಾಹುಲ್‌ ಸಹೋದರಿ ಪ್ರಿಯಾಂಕಾ ವಾದ್ರಾ ಟ್ವೀಟ್‌ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷ, 'ಗಾಂಧಿ ಹೆದರೋದಿಲ್ಲ' ಎಂದು ಟ್ವೀಟ್‌ ಮಾಡಿದೆ.

click me!