ಜಮ್ಮು ಕಾಶ್ಮೀರದಲ್ಲಿ ರಾಹುಲ್ ಭಾರತ್ ಜೋಡೋ ಯಾತ್ರೆ ಸ್ಧಗಿತ, ಭದ್ರತಾ ವೈಫಲ್ಯ ಆರೋಪ!

By Suvarna NewsFirst Published Jan 27, 2023, 4:12 PM IST
Highlights

ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಅಂತಿಮ ಹಂತದಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಚರಿಸುತ್ತಿರುವ ಯಾತ್ರೆ ಇದೀಗ ಎರಡನೇ ಬಾರಿಗೆ ಸ್ಥಗಿತಗೊಂಡಿದೆ. ಈ ಬಾರಿ ಭದ್ರತಾ ವೈಫಲ್ಯದಿಂದ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಶ್ರೀನಗರ(ಜ.27): ರಾಹುಲ್ ಗಾಂಧಿ ನಾಯಕತ್ವದಲ್ಲಿ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ಇದೀಗ ಅಂತಿಮ ಹಂತದಲ್ಲಿದೆ. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದ ವರೆಗಿನ ಈ ಯಾತ್ರೆ ಹಲವು ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗಿದೆ. ಇದೀಗ ಜಮ್ಮ ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಎರಡನೇ ಬಾರಿ ಸ್ಥಗಿತಗೊಂಡಿದೆ. ಇಂದು 20 ಕಿಲೋಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಭಾರತ್ ಜೋಡೋ ಯಾತ್ರೆ ಸೇರಿಕೊಂಡಿದ್ದರು. ಆದರೆ ಒಂದೆರೆಡು ಕಿಲೋಮೀಟರ್ ಕ್ರಮಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಯಾತ್ರೆ ಸ್ಥಗಿತಗೊಳಿಸಿದ್ದಾರೆ. ತೀವ್ರ ಭದ್ರತಾ ವೈಫಲ್ಯ ಕಾರಣ ಯಾತ್ರೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬನಿಹಾಲ್ ಸುರಂಗದ ಮೂಲಕ ಸಾಗಿದ ಭಾರತ್ ಜೋಡೋ ಯಾತ್ರೆ ಸುರಂಗದಿಂದ ಹೊರಬಂದ ಬೆನ್ನಲ್ಲೇ ಅತೀವ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿಕೊಂಡರು. ಇದು ಭದ್ರತಾ ವೈಫಲ್ಯಕ್ಕೆ ಎಡೆ ಮಾಡಿಕೊಟ್ಟಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸಪಟ್ಟರು. ಇತ್ತ ರಾಹುಲ್ ಗಾಂಧಿ ಭದ್ರತಾ ಜವಾಬ್ದಾರಿ ವಹಿಸಿಕೊಂಡ ಪಡೆಗಳು ಯಾತ್ರೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಇದರಂತೆ ರಾಹುಲ್ ಗಾಂಧಿ ಇಂದಿನ ಯಾತ್ರೆ ಸ್ಥಗಿತಗೊಳಿಸಿದ್ದಾರೆ.

ಜೋಡೋ ಯಾತ್ರೆ ಕಾಶ್ಮೀರ ಪ್ರವೇಶಕ್ಕೂ ಮೊದಲೇ ಶಾಕ್, J&K ಪ್ರಮುಖ ನಾಯಕಿ ರಾಜೀನಾಮೆ!

ಜನರನ್ನು ನಿಯಂತ್ರಿಸುವುದು ಇಲ್ಲಿನ ಸ್ಥಳೀಯ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಆದರೆ ಸ್ಥಳೀಯ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅತೀ ಹಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇಲ್ಲಿಂದ ಭದ್ರತಾ ಪಡೆಗಳನ್ನು ಬೇರಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಭದ್ರತಾ ವೈಫಲ್ಯ ಎದುರಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

15 ನಿಮಿಷಗಳ ಕಾಲ ರಾಹುಲ್ ಗಾಂಧಿ ಯಾತ್ರೆಯಲ್ಲಿ ಯಾವುದೇ ಭದ್ರತಾ ಪಡೆಗಳು ಇರಲಿಲ್ಲ. ಇದು ಅತೀ ದೊಡ್ಡ ವೈಫಲ್ಯವಾಗಿದೆ. ಅತೀ ದೊಡ್ಡ ಸಂಖ್ಯೆಯಲ್ಲಿ ಜನರಿದ್ದರು. ಇಲ್ಲಿಂದ ಭದ್ರತಾ ಪಡಗಳನ್ನು ಸ್ಥಳಾಂತರಿಸಿದ್ದು ಯಾರು? ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಆಕ್ರೋಶ ಹೊರಹಾಕಿದ್ದಾರೆ. ಜೊತಗೆ ಪರೋಕ್ಷವಾಗಿ ಇದರ ಹಿಂದೆ ಕೇಂದ್ರದ ಕೈವಾಡವಿದ ಎಂದಿದ್ದಾರೆ.

ಜಮ್ಮ ಮುತ್ತು ಕಾಶ್ಮೀರದಲ್ಲಿ ಎರಡನೇ ಬಾರಿಗೆ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳ್ಳುತ್ತಿದೆ. ಬುಧವಾರ ಹವಾಮಾನ ಕಾರಣದಿಂದ ಯಾತ್ರೆ ಸ್ಥಗಿತಗೊಂಡಿತ್ತು. ಇದೀಗ ಭದ್ರತೆ ಕಾರಣದಿಂದ ಯಾತ್ರೆ ಸ್ಥಗಿತಗೊಂಡಿದೆ. ಜ.30ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಳ್ಳಲಿದೆ.

ರಾಹುಲ್ ಗಾಂಧಿ ಯಾತ್ರೆ ನಡುವೆ ಕಾಂಗ್ರೆಸ್‌ಗೆ ಶಾಕ್, ಮಾಜಿ ವಿತ್ತ ಸಚಿವ ರಾಜೀನಾಮೆ, ಬಿಜೆಪಿ ಸೇರ್ಪಡೆ!

ಭಾರತ್‌ ಜೋಡೋ ಸಮಾರೋಪಕ್ಕೆ ಸಿದ್ದು, ಡಿಕೆಶಿ
 ಜಮ್ಮುಕಾಶ್ಮೀರದ ಚಳಿಗಾಲದ ರಾಜಧಾನಿ ಶ್ರೀನಗರದಲ್ಲಿ ಜ.30ರಂದು ನಡೆಯಲಿರುವ ‘ಭಾರತ್‌ ಜೋಡೋ ಯಾತ್ರೆ’ಯ ಸಮಾರೋಪದಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಕಾರ್ಯಕ್ರಮದ ಹಿಂದಿನ ದಿನವೇ (ಜ.29) ಶ್ರೀನಗರಕ್ಕೆ ತೆರಳಲಿದ್ದಾರೆ.ರಾಹುಲ್‌ಗಾಂಧಿಯವರು ಕನ್ಯಾಕುಮಾರಿಯಿಂದ ಆರಂಭಿಸಿರುವ ಯಾತ್ರೆ ಅಂತಿಮ ಘಟ್ಟತಲುಪುತ್ತಿದ್ದು ಜ.30ರಂದು ಬೃಹತ್‌ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಳ್ಳಲಿದೆ.ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರ ಜತೆಗೆ ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಎಚ್‌.ಕೆ.ಪಾಟೀಲ್‌ ಸೇರಿ ಹಲವರು ಜ.29ಕ್ಕೆ ಹೊರಡಲಿದ್ದಾರೆ. ಬೆಂಗಳೂರಿನಿಂದ ಪಂಜಾಬ್‌ನ ಅಮೃತಸರಕ್ಕೆ ತೆರಳಲಿರುವ ನಾಯಕರು, ಅಲ್ಲಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

click me!