RIP Rahul Bajaj: ಮಧ್ಯಮ ವರ್ಗದ ಸ್ಕೂಟರ್‌ ಕನಸಿಗೆ ಜೀವಕೊಟ್ಟ ಉದ್ಯಮಿ

By Kannadaprabha NewsFirst Published Feb 13, 2022, 2:15 AM IST
Highlights

1970-80ರ ದಶಕದಲ್ಲಿ ಭಾರತದಲ್ಲಿ ಬಜಾಜ್‌ ಚೇತಕ್‌ ಸ್ಕೂಟರ್‌ ಮಾಡಿದ ಮೋಡಿ ಬಹುಶಃ ಯಾರೂ ಮರೆತಿಲ್ಲ. ಹಮಾರಾ ಬಜಾಜ್‌ ಎನ್ನುವ ಜಾಹೀರಾತು ಇನ್ನೂ ಹಲವರ ಮನದಲ್ಲಿ ಹಾಗೇ ಉಳಿದಿದೆ.

ನವದೆಹಲಿ (ಫೆ.13): 1970-80ರ ದಶಕದಲ್ಲಿ ಭಾರತದಲ್ಲಿ ಬಜಾಜ್‌ ಚೇತಕ್‌ (Bajaj Chetak) ಸ್ಕೂಟರ್‌ ಮಾಡಿದ ಮೋಡಿ ಬಹುಶಃ ಯಾರೂ ಮರೆತಿಲ್ಲ. ಹಮಾರಾ ಬಜಾಜ್‌ ಎನ್ನುವ ಜಾಹೀರಾತು ಇನ್ನೂ ಹಲವರ ಮನದಲ್ಲಿ ಹಾಗೇ ಉಳಿದಿದೆ. ಹೌದು, 80ರ ದಶಕದಲ್ಲಿ ಕೈಗೆಟಕುವ ದರದಲ್ಲಿ ಮಧ್ಯಮ ವರ್ಗಗಳ ದ್ವಿಚಕ್ರ ವಾಹನ ಕೊಳ್ಳುವ ಮಹದಾಸೆಯನ್ನು ಪೂರ್ಣ ಮಾಡಿದ್ದು ರಾಹುಲ್‌ ಬಜಾಜ್‌ (Rahul Bajaj) ಅವರ ಚೇತಕ್‌ ಅಥವಾ ಸೂಪರ್‌ ಸ್ಕೂಟರ್‌.

1965ರಲ್ಲಿ ಬಜಾಜ್‌ ಗ್ರೂಪಿನ ಹೊಣೆ ಹೊತ್ತ ರಾಹುಲ್‌ ಬಜಾಜ್‌ ಕೆಲವೇ ವರ್ಷಗಳಲ್ಲಿ ಸಣ್ಣ ಉದ್ಯಮ ಸಂಸ್ಥೆಯನ್ನು ವಿಶ್ವದ ನಕ್ಷೆಯಲ್ಲಿ ಗುರುತಿಸುವಷ್ಟರ ಮಟ್ಟಿಗೆ ಎತ್ತರಕ್ಕೆ ಕೊಂಡೊಯ್ದರು. ಮೊದಲಿಗೆ ಉದಾರೀಕರಣ ನೀತಿ, ಕುಸಿದ ಆರ್ಥಿಕತೆ ಮೊದಲಾದ ಸವಾಲುಗಳ ನಡುವೆಯೂ ಪ್ರಬಲ ಪ್ರತಿಸ್ಪರ್ಧೆಯೊಡ್ಡಿದ್ದ ಜಪಾನಿನ ಮೋಟಾರ್‌ ಸೈಕಲ್‌ ಸಂಸ್ಥೆಗೆ ಸೆಡ್ಡು ಹೊಡೆದು ತಮ್ಮ ಬಜಾಜ್‌ ಬ್ರ್ಯಾಂಡಿಗೆ ಜಾಗತಿಕ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಂಡರು.

Latest Videos

60ರ ದಶಕದಲ್ಲಿ ಇಟಲಿಯ ಪಿಯಾಜಿಯೊ ಜೊತೆ ಬಜಾಜ್‌ ಪಾಲುದಾರಿಕೆ ಪಡೆದು ಸ್ಕೂಟರ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿತ್ತು. ಇದು ಯುರೋಪ್‌ನಲ್ಲಿಯೂ ಭಾರೀ ಜನಪ್ರಿಯತೆ ಪಡೆದಿತ್ತು. 1971ರಲ್ಲಿ ಇಂದಿರಾಗಾಂಧಿ ಸರ್ಕಾರ ಪಿಯಾಜಿಯೋಗೆ ಉತ್ಪಾದನಾ ಪರವಾನಗಿಯನ್ನು ನೀಡಲಿಲ್ಲ. ಆಗ ಪಿಯಾಜಿಯೋ ಭಾರತವನ್ನು ಬಿಟ್ಟು ತನ್ನ ವೆಸ್ಪಾ ವಿನ್ಯಾಸವನ್ನು ಬಜಾಜಿಗೆ ಕೊಟ್ಟು ಹೋಗಿತ್ತು. ಹೀಗೆ 1983ರಲ್ಲಿ ಚೇತಕ್‌ ಹುಟ್ಟಿತು. ವೆಸ್ಪಾ ಮತ್ತೊಂದು ಅವತಾರದಲ್ಲಿ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಮರು ಪ್ರವೇಶ ಪಡೆಯಿತು. 

ವೆಸ್ಪಾ ಮಾದರಿಯನ್ನು ಇಟ್ಟುಕೊಂಡು ಬಿಡುಗಡೆ ಮಾಡಿದ ಬಜಾಜ್‌ ಚೇತಕ್‌ ಸ್ಕೂಟರ್‌ ಭಾರತೀಯರ ಮನಸ್ಸನ್ನು ಸೂರೆಗೊಳಿಸಿತ್ತು. ಚೇತಕ್‌ ಸ್ಕೂಟರ್‌ ಖರೀದಿ ಪ್ರತಿ ಭಾರತೀಯನ ಕನಸಾಗಿತ್ತು. ಪೋಷಕರು ಮಗಳ ಮದುವೆಗೆ ಚೇತಕ್‌ ಸ್ಕೂಟರ್‌ ಅನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಮನೆಗೆ ತಂದ ದ್ವಿಚಕ್ರ ವಾಹನವನ್ನು ಮಗುವಿನಂತೆ ಕಾಣುತ್ತಿದ್ದರು. ಬಾರೀ ಬೇಡಿಕೆಯಿಂದಾಗಿ ಸ್ಕೂಟರ್‌ ಬುಕ್‌ ಮಾಡಿ ಅದನ್ನು ಪಡೆದುಕೊಳ್ಳಲು ವರ್ಷಗಟ್ಟಲೆ ಕಾಯಬೇಕಾಗಿತ್ತು.

RIP Rahul Bajaj: ಉದ್ಯಮಕ್ಕೆ ಹೊಸ ಸ್ವರೂಪ ಕೊಟ್ಟ ರಾಹುಲ್‌ ಬಜಾಜ್‌

ಆದರೆ 2 ದಶಕದ ನಂತರ ಚೇತಕ್‌ ವಿನ್ಯಾಸ ಹಳೆದಾಗುತ್ತಾ ಬಂದು, ಬೇಡಿಕೆಯೂ ಕುಸಿಯಿತು. ಇದೇ ಸಂದರ್ಭದಲ್ಲಿ 2001ರಲ್ಲಿ ಭಾರತದ ಮಾರುಕಟ್ಟೆಗೆ ಹೋಂಡಾ, ಯಮಹಾ ಮತ್ತು ಸುಝುಕಿ ಕಂಪನಿಗಳು ಹೊಸ ಮಾದರಿಯ ಬೈಕುಗಳನ್ನು ಪರಿಚಯಿಸಿದ ಕಾರಣ ಬಜಾಜ್‌ನ ಮಾರುಕಟ್ಟೆಮೌಲ್ಯ ಕುಸಿಯಿತು. ಆದರೆ ಈ ಹಂತದಲ್ಲೂ ಎದೆಗುಂದದ ರಾಹುಲ ಬಜಾಜ್‌ ಡಿಸ್ಕವರ್‌ ಸೇರಿದಂತೆ ಹೊಸ ಹೊಸ ಮಾಡೆಲ್‌ಗಳನ್ನು ಪರಿಚಯಿಸುವ ಮೂಲಕ ಮತ್ತೆ ಆಟೋಮೊಬೈಲ್‌ ವಲಯದಲ್ಲಿ ಕಂಪನಿಯನ್ನು ಮುಂಚೂಣಿಗೆ ತಂದರು.

ಚೇತಕ್‌ ಹೆಸರು ಬಂದಿದ್ದು ಹೇಗೆ?: ಬಜಾಜ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಚೇತಕ್‌ ಸ್ಕೂಟರ್‌ಗೆ ಮೊಘಲ್ ಸಾಮ್ರಾಜ್ಯಕ್ಕೆ ಸವಾಲೆಸೆದ ಮಹಾರಾಣಾ ಪ್ರತಾಪ್‌ ಅವರ ಅಶ್ವದಳದ ಚಾಣಾಕ್ಷ ಕುದುರೆಯ ಹೆಸರಿನ ಸ್ಮರಣಾರ್ಥ ಚೇತಕ್‌ ಎಂದು ಹೆಸರಿಡಲಾಗಿತ್ತು.

ರಾಹುಲ್‌ ಬಜಾಜ್‌ ಇನ್ನಿಲ್ಲ: ದೇಶದ ಖ್ಯಾತನಾಮ ಉದ್ಯಮಿ, ಬಜಾಜ್‌ ಸಮೂಹದ ಮಾಜಿ ಅಧ್ಯಕ್ಷ, ‘ಹಮಾರಾ ಬಜಾಜ್‌ ಸ್ಕೂಟರ್‌’ ಖ್ಯಾತಿಯ ರಾಹುಲ್‌ ಬಜಾಜ್‌ (83) ಅಲ್ಪ ಕಾಲದ ಅನಾರೋಗ್ಯದ ಬಳಿಕ ಶನಿವಾರ ಇಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾನುವಾರ ಪುಣೆಯಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ನಡೆಯಲಿವೆ. ಇದರೊಂದಿಗೆ ಸ್ವಾತಂತ್ರೋತ್ತರ ಸಮಯದಲ್ಲಿ ದೇಶ ಕಂಡ ಮಹಾನ್‌ ಉದ್ಯಮಿ, ಕನಸುಗಾರ, ದಾನಿ, ನಿಷ್ಠುರವಾದಿಯೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.

RIP Rahul Bajaj: ಬಜಾಜ್ ಆಟೋ ಮಾಜಿ ಅಧ್ಯಕ್ಷ, ಭಾರತದ ಅಗ್ರಗಣ್ಯ ಉದ್ಯಮಿ ರಾಹುಲ್ ಬಜಾಜ್ ನಿಧನ!

ರಾಹುಲ್‌ ಬಜಾಜ್‌ರ ನಿಧನಕ್ಕೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ್‌ ರಾಹುಲ್‌ ಗಾಂಧಿ, ಉದ್ಯಮ ವಲಯದ ಎಲ್ಲಾ ಪ್ರಮುಖರು ಕಂಬನಿ ಮಿಡಿದಿದ್ದಾರೆ. ಜೊತೆಗೆ ದೇಶದ ಉದ್ಯಮ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರ ಜೊತೆಗೆ, ಜಾಗತಿಕ ಮಟ್ಟದಲ್ಲೂ ಭಾರತೀಯ ಉದ್ಯಮದ ಛಾಪು ಮೂಡಿಸಿ, ಇತರೆ ಉದ್ಯಮಗಳಿಗೆ ದಾರಿದೀಪವಾಗಿದ್ದ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

click me!