
ನವದೆಹಲಿ (ಫೆ. 13): ಯಾರೇ ಆದರೂ ಹಿಜಾಬ್ ಮುಟ್ಟಲು ಬಂದರೆ ಅವರ ಕೈಯನ್ನ ಕತ್ತರಿಸುವುದಾಗಿ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಬೇಗಂ ಎಚ್ಚರಿಸಿದ್ದಾರೆ. ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿ ನಿರಾಕರಿಸಿದ್ದನ್ನು ವಿರೊಧಿಸಿ ಅಲಿಗಢ ಮುಸ್ಲಿಂ ವಿವಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು ‘ಹೆಣ್ಣುಮಕ್ಕಳ ಘನತೆಯೊಂದಿಗೆ ಆಟವಾಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್‌ರಂತೆ ಹಿಜಾಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು’ ಎಂದರು.
ದೇಶ ಸಂವಿಧಾನದಿಂದ ನಡೆಯುತ್ತೇ ಹೊರತೂ ಷರಿಯಾದಿಂದಲ್ಲ: ಯೋಗಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು ಎಂಬ ಹಕ್ಕೊತ್ತಾಯದ ಕುರಿತು ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶವನ್ನು ಸಂವಿಧಾನದ ರೀತಿಯಲ್ಲಿ ಮುನ್ನಡೆಸಲಾಗುತ್ತದೆಯೋ ಹೊರತೂ ಷರಿಯಾ ಕಾನೂನಿನ ರೀತಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: News Hour ಎಬಿವಿಪಿ ಪ್ರತಿಭಟನೆಗೆ ಮುಸ್ಲಿಂ ವಿದ್ಯಾರ್ಥಿಗಳು ಹಾಜರ್, ಇಲ್ಲಿಂದ ಶುರುವಾಯ್ತು ಹಿಜಾಬ್ ವಿವಾದಕ್ಕೆ ವೇದಿಕೆ!
‘ಭಾರತ ಸಂವಿಧಾನವನ್ನು ಆಧಾರವಾಗಿ ಹೊಂದಿದೆ. ಅದರಂತೆ ಪ್ರತಿ ಸಂಸ್ಥೆಗಳಿಗೂ ತನ್ನದೇ ಆದ ವಸ್ತ್ರ ಸಂಹಿತೆ ರೂಪಿಸುಕೊಳ್ಳುವ ಅಧಿಕಾರವಿದೆ. ಆದರೆ ಆ ಸಂಸ್ಥೆಗಳು ಇದನ್ನು ಭಾರತದ ಸಂವಿಧಾನದ ಆಧಾರವಾಗಿ ಮಾಡಬೇಕು’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳು ವಸ್ತ್ರ ಸಂಹಿತೆ ಪಾಲಿಸಬೇಕು ಎಂದಿದ್ದಾರೆ.
ಮ.ಪ್ರದೇದಲ್ಲೂ ದಿಢೀರ್ ಹಿಜಾಬ್ ಕ್ರೇಜ್: ಕರ್ನಾಟಕದ ಕಾಲೇಜುಗಳಲ್ಲಿ ಕಾಣಿಸಿಕೊಂಡ ದಿಢೀರ್ ಹಿಜಾಬ್ ಕ್ರೇಜ್ ರಾಜಸ್ಥಾನದ ಬಳಿಕ ಇದೀಗ ಮಧ್ಯಪ್ರದೇಶದಕ್ಕೂ ವಿಸ್ತರಿಸಿದೆ. ರಾಜ್ಯದ ಸತ್ನಾ ನಗರದ ಸ್ವಾಯತ್ತ ಕಾಲೇಜೊಂದರಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರದ ಪರೀಕ್ಷೆಗೆ ಬುರ್ಖಾ ಮತ್ತು ಹಿಜಾಬ್ ಧರಿಸಿಕೊಂಡು ಆಗಮಿಸಿದ್ದಾರೆ.
ಇಷ್ಟುದಿನವೂ ಸಾಮಾನ್ಯ ವಸ್ತ್ರದಲ್ಲೇ ಬರುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಈ ದಿಢೀರ್ ಬದಲಾವಣೆ ತೋರಿದ್ದಾಳೆ. ಈ ಹಿನ್ನೆಲೆಯಲ್ಲಿ ಉಳಿದ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಾವಶ್ಯವಾಗಿ ಕಾಲೇಜಿನ ವಾತಾವರಣ ಕದಡಲು ಯತ್ನಿಸಿದ ಕಾರಣಕ್ಕಾಗಿ ಕಾಲೇಜಿನ ಶಿಕ್ಷಕರು ಆಕೆಯಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Hijab Row: 6 ವಿದ್ಯಾರ್ಥಿನಿಯರಿಗೆ ಜೆಎನ್‌ಯುವರೆಗೂ ಸಂಪರ್ಕ, CFI ನಂಟು, ಏನಿದು ಷಡ್ಯಂತ್ರ.?
ಸುಪ್ರೀಂಗೆ ಅರ್ಜಿ ಸಲ್ಲಿಕೆ: ದೇಶಾದಲ್ಲಿ ಎಲ್ಲಾ ನೊಂದಾಯಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗೆ ಸಮಾನ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸುಪ್ರೀಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ. ನಿಖಿಲ್ ಉಪಾಧ್ಯಾಯ ಎಂಬುವವರು, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ನಡೆದ ಪ್ರತಿಭಟನೆ ಉಲ್ಲೇಖಿಸಿರುವ ಅರ್ಜಿದಾರರು, ‘ಶೈಕ್ಷಣಿಕ ಸಂಸ್ಥೆಗಳು ಜಾತ್ಯತೀತ ಸಾರ್ವಜನಿಕ ಸ್ಥಳಗಳಾಗಿದ್ದು, ಅವು ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ ಭರಿತ ಉದ್ಯೋಗ ದೊರಕಿಸುವ, ಉತ್ತಮ ಆರೋಗ್ಯ ಹಾಗೂ ದೇಶವನ್ನು ಕಟ್ಟುವ ಕೆಲಸಗಳಿಗೆ ನೆರವಾಗುವ ಕೇಂದ್ರಗಳೇ ಹೊರತೂ ಅಗತ್ಯ ಮತ್ತು ಅನಗತ್ಯ ಧಾರ್ಮಿಕ ಆಚರಣೆಗಳನ್ನು ಪಾಲನೆ ಮಾಡುವ ಕೇಂದ್ರಗಳಲ್ಲ.
ಹೀಗಾಗಿ ಶೈಕ್ಷಣಿಕ ಸಂಸ್ಥೆಗಳ ಜಾತ್ಯತೀಯ ತತ್ವವನ್ನು ಪಾಲನೆ ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಸಮಾನ ವಸ್ತ್ರ ಸಂಹಿತೆ ಜಾರಿ ಅಗತ್ಯವಿದೆ. ಇಲ್ಲದೆ ಹೋದಲ್ಲಿ ನಾಳೆ ನಾಗಾ ಸಾಧುಗಳು ಕಾಲೇಜುಗ ಸೇರಿ ಅಗತ್ಯ ಧಾರ್ಮಿಕ ಆಚರಣೆ ಹೆಸರಲ್ಲಿ ನಗ್ನರಾಗಿ ಕಾಲೇಜಿಗೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಇಂಥ ನೀತಿ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ ವಿದ್ಯಾರ್ಥಿಗಳಲ್ಲಿ ಭ್ರಾತೃತ್ವ, ಘನತೆ, ಐಕ್ಯತೆ ಬೆಳೆಸುವ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಮಾಜವಾದ, ಜಾತ್ಯತೀತವಾದ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಅಂಶಗಳನ್ನು ಸೇರಿಸಲು ನ್ಯಾಯಾಂಗ ಆಯೋಗ ಅಥವಾ ತಜ್ಞರ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಸೂಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ