ಪಂಜಾಬ್ ಲೋಕ ಕಾಂಗ್ರೆಸ್ ಪಾರ್ಟಿ; ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್!

By Suvarna NewsFirst Published Nov 2, 2021, 6:31 PM IST
Highlights
  • ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್
  • ಹೊಸ ಪಕ್ಷ ಘೋಷಿಸಿದ ಪಂಜಾಬ್ ಮಾಜಿ ಮುಖ್ಯಮಂತ್ರಿ
  • ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಉದಯ

ಪಂಜಾಬ್(ನ.02): ಮಾಜಿ ಮುಖ್ಯಮಂತ್ರಿ, ಕ್ಯಾಪ್ಟನ್ ಅಮರಿಂದರ್ ಸಿಂಗ್(Captain Amarinder Singh ) ಅವರ ಸುದೀರ್ಘ ವರ್ಷಗಳ ಕಾಂಗ್ರೆಸ್(Congress) ಸಂಬಂಧ ಅಂತ್ಯಗೊಂಡಿದೆ. ಇಂದು(ನ.02) ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್, ಹೊಸ ಪಕ್ಷ ಘೋಷಿಸಿದ್ದಾರೆ. ಮಾಜಿ ಸಿಎಂ ನೇತೃತ್ವದಲ್ಲಿ ಪಂಜಾಬ್ ಲೋಕ ಕಾಂಗ್ರೆಸ್(Punjab Lok Congress) ಪಕ್ಷ ಉದಯವಾಗಿದೆ. 

ಮಾಜಿ ಸಿಎಂ ಷರತ್ತಿಗೆ ಒಪ್ಪಿದ ಬಿಜೆಪಿ, ಮೈತ್ರಿಗೆ ಸಿದ್ಧ!

ಪಂಜಾಬ್ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ, ಹೈಕಮಾಂಡ್ ನಿರ್ಲಕ್ಷ್ಯಕ್ಕೆ ಬೇಸತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕಾಂಗ್ರೆಸ್‌ ಪಕ್ಷದಲ್ಲಿ ಮುಂದುವರಿದಿದ್ದರು. ಆದರೆ ಹೊಸ ಪಕ್ಷ ಘೋಷಿಸುವುದಾಗಿ ಅಮರಿಂದರ್ ಸಿಂಗ್ ಹೇಳಿದ್ದರು. ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ(Sonia Gandhi) ಪತ್ರ ಬರೆದು ಕಾಂಗ್ರೆಸ್ ಪಕ್ಷಕ್ಕೆ ವಿದಾಯ(resigned) ಹೇಳಿದ್ದಾರೆ.

ಸುದೀರ್ಘ ಪತ್ರದಲ್ಲಿ ಕಾಂಗ್ರೆಸ್ ತನ್ನನ್ನು ನಡೆಸಿಕೊಂಡ ರೀತಿ, ಪಂಜಾಬ್ ಜನ ಹಾಗೂ ಪಕ್ಷದ ನಾಯಕ ವಿರೋಧಧ ನಡುವೆಯೂ ನವಜೋತ್ ಸಿಂಗ್ ಸಿಧು(Navjot Singh Sidhu) ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಸೇರಿದಂತೆ ಹಲವು ತಪ್ಪು ನಿರ್ಧಾರಗಳನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿದೆ. ಪಂಜಾಬ್ ಕಾಂಗ್ರೆಸ್ ಪಕ್ಷವನ್ನು, ನಾಯಕರನ್ನು, ಸರ್ಕಾರವನ್ನು ಜೊತೆಯಾಗಿ ತೆಗೆದುಕೊಂಡು ಹೋಗಲು ಶ್ರಮಿಸಿದ್ದೇನೆ. ಆದರೆ ನನ್ನ ಪ್ರಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷಿಸಿತು. ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಮರಿಂದರ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.

ಮಾಧ್ಯಮದವರೇ, ನಾನು ಪಂಜಾಬ್ ಮಾಜಿ ಸಿಎಂ ಅಲ್ಲವೆಂದ ಫುಟ್ಬಾಲಿಗ ಅಮ್ರಿಂದರ್‌ ಸಿಂಗ್‌..!

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ್ದಾರೆ. ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಮುಂಬರುವ ಪಂಜಾಬ್ ವಿಧಾನ ಸಭಾ ಚುನಾವಣೆ ಅಖಾಡಕ್ಕೆ ಇಳಿಯುತ್ತಿದೆ. ಬಿಜೆಪಿ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ಕ್ಯಾಪ್ಟನ್ ಅಮರಿಂದರ್, ಪಂಜಾಬ್‌ನಿಂದ ಕಾಂಗ್ರೆಸ್ ದೂರವಿಡಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.

ಹೊಸ ಪಕ್ಷ ಪಂಜಾಬ್ ನಾಗರೀಕರ, ಕಳೆದೊಂದು ವರ್ಷದಿಂದ ಹೊರಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಿಸಲಿದೆ. ಪಂಜಾಬ್ ಜನತೆ, ರೈತರ ಧನಿಯಾಗಿ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕೆಲಸ ಮಾಡಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಗಡಿ ಹೊಂದಿರುವ ಪಂಜಾಬ್ ರಾಜ್ಯದಲ್ಲಿ ಜನರ ಸುರಕ್ಷತೆಗೆ ಹೆಚ್ಚಿನ ಅದ್ಯತೆ ನೀಡಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ನಾನು ಮೊದಲೇ ಹೇಳಿದ್ದೆ...': ಸಿಧು ರಾಜೀನಾಮೆ ಬೆನ್ನಲ್ಲೇ ಮೌನ ಮುರಿದ ಕ್ಯಾಪ್ಟನ್!

ಕಾಂಗ್ರೆಸ್ ಪಕ್ಷದ ಅವಮಾನ ಸಹಿಸಲಾಗದೆ ಸೆಪ್ಟೆಂಬರ್ 18 ರಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಕಳೆದ ತಿಂಗಳು ತಾನು ಕಾಂಗ್ರೆಸ್ ಪಕ್ಷದ ಜೊತೆ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇಷ್ಟೇ ಅಲ್ಲ ಬಿಜೆಪಿ ಹಾಗೂ ಇತರ ಪಕ್ಷ ಸೇರುವುದಿಲ್ಲ ಎಂದು ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದರು.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಕಳೆದ 3 ವರ್ಷಗಳಿಂದ ಅಮರಿಂದರ್ ವಿರುದ್ಧ ಸಿಧು ಕತ್ತಿ ಮಸೆಯುತ್ತಲೇ ಇದ್ದರು. ಕಾಂಗ್ರೆಸ್ ಒಳಜಗಳ ಹೆಚ್ಚಾಗುತ್ತಿದ್ದಂತೆ ಇತ್ತ ಹೈಕಮಾಂಡ್ ಅಮರಿಂದರ್ ಸಿಂಗ್ ಅವರನ್ನು ಕಡೆಗಣಿಸಿತು. ಭಾರಿ ವಿರೋಧದ ನಡುವೆ ನವವೋಜ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿತು. ಇದು ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿತು. 

ಸಿಧು ಹಾಗೂ ಅಮರಿಂದರ್ ಹಗ್ಗಜಗ್ಗಾಟ ಹೆಚ್ಚಾಗುತ್ತಿದ್ದಂತೆ ಅಮರಿಂದರ್ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಇತ್ತ ಸಿಧು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ನೊಂದಿದ್ದ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟಿದ್ದಾರೆ.
 

click me!