ನವೆದೆಹಲಿ(ಸೆ.28): ಪಂಜಾಬ್ ಕಾಂಗ್ರೆಸ್‌ನಲ್ಲಿ(Punjab Congress) ಎದ್ದಿರುವ ಬಿರುಗಾಳಿ ಇನ್ನು ನಿಂತಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್(amarinder singh) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಎಲ್ಲವೂ ಶಾಂತವಾಗಿದೆ ಅಂದುಕೊಂಡಿರುವಾಗಲೇ ಕ್ಯಾಪ್ಟನ್ ಕೆಳಗಿಳಿಸಿದ ನವಜೋತ್ ಸಿಂಗ್ ಸಿಧು(Navjot singh Sidhu) ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರಿಂದರ್ ಸಿಂಗ್ ಇದೀಗ ಬಿಜೆಪಿ ಸೇರುವು ಸಾಧ್ಯತೆ ಹೆಚ್ಚಾಗಿದೆ. ಇಂದು(ಸೆ.28) ದೆಹಲಿ ತಲುಪಿರುವ ಅಮರಿಂದರ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದಾರೆ.
ಪಂಜಾಬ್ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!
ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ(BJP) ಬಹುದೊಡ್ಡ ಮುನ್ನಡೆ ಸಿಕ್ಕಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಅನ್ನೋ ಮಾತುಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಈಗಾಗಲೇ ದೆಹಲಿ ತಲುಪಿರುವ ಅಮರಿಂದರ್ ಸಿಂಗ್, ಅಮಿತ್ ಶಾ(Amit Shah) ಹಾಗೂ ಜೆಪಿ ನಡ್ಡಾ(JP nadda) ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಅಮರಿಂದರ್ ಸಿಂಗ್ ಹಾಗೂ ಬಿಜೆಪಿ ಪ್ರಮುಖರ ಭೇಟಿಗೆ ಸಮಯ ನಿಗದಿಯಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಬಿಜೆಪಿ ಅಥವಾ ಅಮರಿಂದರ್ ಸಿಂಗ್ ಈ ಕುರಿತು ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿಟ್ಟಿದ್ದಾರೆ. ಇತ್ತ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್, ಕೆಲ ಸೂಚನೆಗನ್ನು ನೀಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನವದೆಹಲಿ ಭೇಟಿ ಖಾಸಗಿ ಭೇಟಿಯಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಅಡಗಿಲ್ಲ ಎಂದಿದ್ದಾರೆ. ಇದೇ ವೇಳೆ ಕೆಲ ಆಪ್ತರನ್ನು ಅಮರಿಂದರ್ ಸಿಂಗ್ ಭೇಟಿಯಾಗಲಿದ್ದಾರೆ ಎಂದು ತುಕ್ರಾಲ್ ಹೇಳಿದ್ದಾರೆ. ತುಕ್ರಾಲ್ ಹೇಳಿದ ಆಪ್ತರು ಅಮಿತ್ ಶಾ ಹಾಗೂ ಜೆಪಿ ನಡ್ಡಾ ಆಗಿರಬಹುದು ಅನ್ನೋ ಅನುಮಾನವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
5 ತಿಂಗಳ ವಿದ್ಯಮಾನ, ಅಮರೀಂದರ್ ಬೇಸರ: ರಾಜೀನಾಮೆಗೂ ಮುನ್ನ ಸೋನಿಯಾಗೆ ಪತ್ರ!
ದೆಹಲಿ ತೆರಳಿರುವ ಅಮರಿಂದರ್ ಸಿಂಗ್, ನವದೆಹಲಿಯ ಕಪುರ್ತಲಾ ನಿವಾಸ ಖಾಲಿ ಮಾಡಿದ್ದಾರೆ. ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿಗೆ ಈ ನಿವಾಸವನ್ನು ಹಸ್ತಾಂತರಿಸಲು ಅಮರಿಂದರ್ ಮುಂದಾಗಿದ್ದಾರೆ. ಹೀಗಾಗಿ ದೆಹಲಿ ಭೇಟಿಯಲ್ಲಿ ಹೆಚ್ಚಿನ ವಿಶೇಷತೆಗಳು, ಕುತೂಹಲವಿಲ್ಲ ಎಂದು ತುಕ್ರಾಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮೂಲಗಳ ಪ್ರಕಾರ, ಇಂದು ಸಂಜೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಅಮರಿಂದರ್ ಸಿಂಗ್ ದೆಹಲಿ ಭೇಟಿ ಪಂಜಾಬ್ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಲಿದೆ ಅನ್ನೋದು ಸತ್ಯ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು 5 ತಿಂಗಳು ಮಾತ್ರ ಬಾಕಿ ಇದೆ. ಈ ಮಹತ್ವದ ಸಂದರ್ಭದಲ್ಲಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನವಜೋತ್ ಸಿಂಗ್ ಸಿಧು ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಇಷ್ಟೇ ಅಲ್ಲ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದರು.
ಸಿಧು, ಹೈಕಮಾಂಡ್ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್ ಸಿಂಗ್: ಬಿಗ್ ಚಾಲೆಂಜ್!
ಮುಂದಿನ ರಾಜಕೀಯ ನಡೆ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ. ಬಿಜೆಪಿ ಸೇರುವ ಕುರಿತು ಯಾವುದೇ ಸ್ಪಷ್ಟ ನಿಲುವನ್ನು ಅಮರಿಂದರ್ ಹೇಳಿರಲಿಲ್ಲ. ಎಲ್ಲಾ ಪಕ್ಷದಲ್ಲೂ ನನ್ನ ಸ್ನೇಹಿತರಿದ್ದಾರೆ ಎಂದು ಹೇಳಿ ತೇಲಿಕೆಯ ಉತ್ತರ ನೀಡಿದ್ದರು. ಬೆಂಬಲಿಗರು, ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ರಾಜಕೀಯ ನಡೆ ಕುರಿತು ತಿಳಿಸುವುದಾಗಿ ಹೇಳಿದ್ದರು.
2002 ರಿಂದ 2007ರ ವರೆಗೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್, ಬಳಿಕ 10 ವರ್ಷ ರಾಜಕೀಯದಿಂದ ದೂರ ಉಳಿದಿದ್ದರು. 2017ರಲ್ಲಿ ಮತ್ತೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾದರು. ರಾಜಕೀಯ ಜೀವನಕ್ಕೂ ಮೊದಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.