ಪಂಜಾಬ್‌ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!

By Suvarna NewsFirst Published Sep 28, 2021, 3:23 PM IST
Highlights

* ಪಂಜಾಬ್ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ

* ಪಂಜಾಬ್ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್ ಸಿಧು

ಚಂಡೀಗಢ(ಸೆ.28): ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ ಎನ್ನುವಷ್ಟರಲ್ಲಿ ಪಂಜಾಬ್‌ ರಾಜಕೀಯ(Punjab Politics) ವಲಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಹೌದು ಕೆಲ ದಿನಗಳ ಹಿಂದಷ್ಟೇ ಕ್ಯಾಪ್ಟನ್‌ ಅಮರಿಂದರ್ ಸಿಂಗ್(Amarinder Singgh) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೀಗ ಈ ಬೆಳವಣಿಗೆ ಬೆನ್ನಲ್ಲೇ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot Singh Sidhu) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭಾರೀ ಚರ್ಚೆ ಸೃಷ್ಟಿಸಿದೆ. 

ಪಂಜಾಬಿನಲ್ಲಿ ಮುಖ್ಯಮಂತ್ರಿಯನ್ನು ಬದಲಾಗಿದ್ದರೂ ರಾಜಕೀಯ ಸಮಸ್ಯೆಗಳು ಬಗೆಹರಿದಿಲ್ಲ. ಒಂದೆಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂದು ಸಂಜೆ ದೆಹಲಿ ತಲುಪುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುತ್ತಾರೆ ಎಂಬ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಇತ್ತ ನವಜೋತ್ ಸಿಂಗ್ ಸಿಧು ಪಂಜಾಬ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಧು ಪತ್ರದಲ್ಲೇನಿದೆ?

ಇತ್ತೀಚೆಗಷ್ಟೇ ಭಾರೀ ವಿವಾದಗಳ ಬಳಿಕ ಪಂಜಾಬ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ನವಜೋತ್ ಸಿಂಗ್ ಸಿಧು ಏಕಾಏಕಿ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ರಾಜೀನಾಮೆ ಜೊತೆ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವೊಂದನ್ನೂ ಬರೆದಿದ್ದಾರೆ. ಈ ಪತ್ರದಲ್ಲಿ ಸಿಧು ವ್ಯಕ್ತಿಯೊಬ್ಬನ ಚಾರಿತ್ರ್ಯದ ಒಪ್ಪಂದಗಳಿಂದ ಆರಮಭವಾಗುತ್ತದೆ. ಹೀಗಿರುವಾಗ ನಾನು ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಅಭಿವೃದ್ಧಿ ಅಜೆಂಡಾದೊಂದಿಗೆ ರಾಜಿ ಮಾಡಿಕೊಳ್ಳಲಾರೆ ... ಆದ್ದರಿಂದ, ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾಂಗ್ರಸ್‌ ಸೇವೆ ಮುಂದುವರೆಸುತ್ತೇನೆ ಎಂದಿದ್ದಾರೆ.

ಸಿಧು ಮತ್ತು ಕ್ಯಾಪ್ಟನ್ ಜಗಳಕ್ಕೆ ಸಿಎಂ ಸ್ಥಾನ ಕಳೆದುಕೊಂಡ ಕ್ಯಾಪ್ಟನ್

ವಾಸ್ತವವಾಗಿ, ಪಂಜಾಬ್ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹವು ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಲ್ಲಿದೆ. ಆಗಿನ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯದ ನಂತರ, ದೆಹಲಿ ದರ್ಬಾರ್‌ನಲ್ಲಿ ಹಲವಾರು ಸಭೆಗಳನ್ನು ನಡೆಸಲಾಯಿತು. ಆದಾಗ್ಯೂ, ಕ್ಯಾಪ್ಟನ್ ಇಷ್ಟಕ್ಕೆ ವಿರುದ್ಧವಾಗಿ ಕಾಂಗ್ರೆಸ್ ವರಿಷ್ಠರು ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್‌ನ ಮುಖ್ಯಸ್ಥರನ್ನಾಗಿ ಮಾಡಿದರು. ಇದರ ನಂತರ ಸಿಧು, ಕ್ಯಾಪ್ಟನ್ ವಿರುದ್ಧ ನಿಡುತ್ತಿದ್ದ ಹೇಳಿಕೆಗಳು ಮತ್ತಷ್ಟು ಹೆಚ್ಚಾದವು. ಇಬ್ಬರ ನಡುವಿನ ಘರ್ಷಣೆ ಉಲ್ಬಣಗೊಂಡ ನಂತರ, ಪಂಜಾಬಿನ ಶಾಸಕರು ಕೂಡ ಕ್ಯಾಪ್ಟನ್ ಅಮರೀಂದರ್ ವಿರುದ್ಧ ದನಿಯೆತ್ತಲು ಆರಂಭಿಸಿದ್ದರು.

ಸಿಎಂ ಬದಲಾದ್ರೂ ನಿಂತಿಲ್ಲ ಬಗೆಹರಿಯದ ಸಮಸ್ಯೆ

ಶಾಸಕರ ವಿರೋಧದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕ್ಯಾಪ್ಟನ್ ರಾಜೀನಾಮೆ ನಂತರ ಸಿಧು ಸ್ವತಃ ಮುಖ್ಯಮಂತ್ರಿಯಾಗಲು ಬಯಸಿದ್ದರೂ, ಕಾಂಗ್ರೆಸ್ ಹೈಕಮಾಂಡ್, ದಲಿತ ಕಾರ್ಡ್ ಮುಂದಿಟ್ಟು, ಚರಣ್ಜಿತ್ ಸಿಂಗ್ ಚನ್ನಿಯನ್ನು ಪಂಜಾಬಿನ ಮುಖ್ಯಮಂತ್ರಿಯನ್ನಾಗಿ ಮಾಡಿತು. ಇದು ಸಿಧುವನ್ನು ಮತ್ತಷ್ಟು ಕೋಪಕ್ಕೀಡು ಮಾಡಿತ್ತು ಎನ್ನಲಾಗಿದೆ. ಪಂಜಾಬ್ ಕ್ಯಾಬಿನೆಟ್ ವಿಸ್ತರಣೆಯಲ್ಲೂ ಅವರ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿಲ್ಲ ಎನ್ನಲಾಗಿದೆ. ಅದಕ್ಕಾಗಿಯೇ ಸಿದ್ದು ರಾಜೀನಾಮೆ ನೀಡುವ ಮೂಲಕ ಮತ್ತೊಮ್ಮೆ ರಾಜಕೀಯ ಒತ್ತಡ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಸಂಜೆ ದೆಹಲಿ ತಲುಪಲಿದ್ದಾರೆ ಕ್ಯಾಪ್ಟನ್

ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು, ಮಂಗಳವಾರ ಸಂಜೆ 6 ಗಂಟೆಗೆ ತಲುಪಲಿದ್ದಾರೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ದೆಹಲಿಯಲ್ಲಿ ಅವರು ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಆದರೆ ಕ್ಯಾಪ್ಟನ್ ಬಿಜೆಪಿ ನಾಯಕರನ್ನು ಏಕೆ ಭೇಟಿ ಮಾಡುತ್ತಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಹೀಗಿದ್ದರೂ ಅವರು ಬಿಜೆಪಿಗೆ ಸೇರುತ್ತಾರೆಂಬ ವರದಿಗಳು ಸದ್ದು ಮಾಡಿವೆ.

ಭವಿಷ್ಯದ ರಾಜಕೀಯ ಆಯ್ಕೆಗಳು ನನಗೆ ಮುಕ್ತವಾಗಿವೆ

ಸಿಎಂ ಸ್ಥಾನದಿಂದ ಕ್ಯಾಪ್ಟನ್ ರಾಜೀನಾಮೆ ನೀಡಿದ ನಂತರ, ಅವರ ಮುಂದಿನ ಹೆಜ್ಜೆ ಏನೆಂಬುದರ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ಸೇರುವ ಪ್ರಶ್ನೆಗೆ, ಭವಿಷ್ಯದ ರಾಜಕೀಯದಲ್ಲಿ ಏನಾಗುತ್ತದೆ ಎಂಬುದರ ಕುರಿತು ನಾನು ಏನನ್ನೂ ಹೇಳಲಾರೆ ಎಂದು ಅವರು ಹೇಳಿದ್ದರು. ಎಲ್ಲಾ ರೀತಿಯ ಆಯ್ಕೆಗಳು ನನಗೆ ಮುಕ್ತವಾಗಿವೆ. ನನಗೆ ಅವಕಾಶ ಸಿಕ್ಕಾಗ ಈ ಆಯ್ಕೆಗಳನ್ನು ಬಳಸುತ್ತೇನೆ. ನಾನು ಕಾಂಗ್ರೆಸ್‌ನಲ್ಲಿ ಉಳಿಯುತ್ತೇನೆಯೋ ಇಲ್ಲವೋ ಎಂಬುದರ ಕುರಿತು ನಾನು ಏನನ್ನೂ ಹೇಳಲಾರೆ. ನಾನು ನನ್ನ ಹಳೆಯ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತೇನೆ ನಂತರವೇ ಮುಂದಿನ ಹಂತದ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು.

click me!