
ಮುಂಬೈ: ಅಪ್ರಾಪ್ತ ಮಗನ ಕೈಗೆ ಐಷಾರಾಮಿ ಪೋರ್ಶೆ ಕಾರು ಕೊಟ್ಟು ಇಬ್ಬರ ಸಾವಿಗೆ ಕಾರಣನಾದ ಪುಣೆಯ ಬಿಲ್ಡರ್ ಒಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರಂತದಲ್ಲಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಟೆಕ್ಕಿಗಳು ಪ್ರಾಣ ಕಳೆದುಕೊಂಡಿದ್ದರು. ಪುಣೆಯ ಬ್ರಹ್ಮ ರಿಯಾಲಿಟಿಯ ಸ್ಥಾಪಕ ವಿಶಾಲ್ ಅಗರ್ವಾಲ್ ಅವರ ಅಪ್ರಾಪ್ತ ಪುತ್ರ ಕುಡಿದ ಮತ್ತಿನಲ್ಲಿ ಅತೀ ವೇಗವಾಗಿ ಕಾರು ಓಡಿಸಿ ಬೈಕ್ ಸೇರಿದಂತೆ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಯುವ ಟೆಕ್ಕಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗ ಮಗ ಮಾಡಿದ ತಪ್ಪಿಗೆ ಉದ್ಯಮಿ ವಿಶಾಲ್ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ನಸುಕಿನ ಜಾವ ಈ ಘಟನೆ ನಡೆದಿತ್ತು. ದುರಂತ ನಡೆಯುವ ವೇಳೆ ಕಾರು 200 ಕಿಲೋ ಮೀಟರ್ ವೇಗದಲ್ಲಿ ಇತ್ತು ಹಾಗೂ 17 ವರ್ಷದ ಅಪ್ರಾಪ್ತ ಕುಡಿದ ಮತ್ತಿನಲ್ಲಿದ್ದ ಎಂಬುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಖಚಿತವಾಗಿತ್ತು.
ಅಪ್ರಾಪ್ತನಿಗೆ ಘಟನೆಯ ನಂತರ ಪಿಜ್ಜಾ ಬಿರಿಯಾನಿ ನೀಡಿದ್ರ ಪೊಲೀಸರು?
ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರವೀಂದ್ರ ದಂಗೇಕರ್ ಮಾತನಾಡಿದ್ದು, ಘಟನೆ ನಡೆದ ಬಳಿಕ ಅಪ್ರಾಪ್ತ ಬಾಲಕನಿಗೆ ಪೊಲೀಸರು ಪೊಲೀಸ್ ಠಾಣೆಯಲ್ಲಿ ಪಿಜ್ಜಾ ಹಾಗೂ ಬಿರಿಯಾನಿ ನೀಡಿದರು ಎಂಬ ಆರೋಪವಿದೆ. ಅಲ್ಲದೇ 11 ಗಂಟೆಯೊಳಗೆ ತರುಣನ ರಕ್ತದ ಮಾದರಿಯನ್ನು ಕೂಡ ಪೊಲೀಸರು ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಾರು ಹತ್ತಿಸಿ ಇಬ್ಬರ ಸಾಯಿಸಿದ್ದ ಉದ್ಯಮಿ ಪುತ್ರನಿಗೆ ಪ್ರಬಂಧ ಬರೆಯುವ ಷರತ್ತುಬದ್ಧ ಜಾಮೀನು!
14 ಗಂಟೆಯೊಳಗೆ ಜಾಮೀನು, ಪ್ರಬಂಧ ಬರೆಯುವ ಶಿಕ್ಷೆ:
ಅಪ್ರಾಪ್ತನಿಗೆ 17 ವರ್ಷ ತುಂಬಿರುವುದರಿಂದ ಪ್ರಾಪ್ತ ವಯಸ್ಕ ಎಂದು ಪರಿಗಣಿಸಲು ಪುಣೆ ಪೊಲೀಸರು ಹೈಕೋರ್ಟ್‌ನಿಂದ ಅನುಮತಿ ಪಡೆಯಲು ಕೂಡ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಈಗ ಅಪ್ರಾಪ್ತನ ಅಪ್ಪನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಂಧಿಸಲಾಗಿದೆ. ಇನ್ನು ಈ ಅಪ್ರಾಪ್ತನಿಗೆ 14 ಗಂಟೆಯೊಳಗೆ ಜಾಮೀನು ಮಂಜೂರಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ಜಾಮೀನು ನೀಡುವ ವೇಳೆ, ಬಾಲಾರೋಪಿ 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡಬೇಕು, ಮನೋವೈದ್ಯಕೀಯ ಮೌಲ್ಯಮಾಪನ ಮತ್ತು ಚಿಕಿತ್ಸೆಗೆ ಒಳಗಾಗಬೇಕು, ರಸ್ತೆ ಅಪಘಾತಗಳ ಪರಿಣಾಮ ಮತ್ತು ಅದಕ್ಕೆ ಪರಿಹಾರ ಎನ್ನುವ ವಿಷಯದ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು, ಪುನರ್ವಸತಿ ಕೇಂದ್ರದಲ್ಲಿ ವ್ಯಸನಮುಕ್ತರಾಗಬೇಕು, ಸಂತ್ರಸ್ತೆಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಆದರೆ ಇಬ್ಬರ ಜೀವ ಬಲಿ ಪಡೆದ ಈತನಿಗೆ ಇಷ್ಟು ಸಣ್ಣ ಶಿಕ್ಷೆ ಸಾಕೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.
ಅಪ್ರಾಪ್ತನಿಗೆ ಎಂಟ್ರಿ ನೀಡಿದ ಪಬ್ ವಿರುದ್ಧವೂ ಕೇಸ್
ಭಾನುವಾರ ನಸುಕಿನ ಜಾವ, ಕೊರೆಗಾಂವ್ ಪಾರ್ಕ್ ಬಳಿ ಅಪಘಾತ ಸಂಭವಿಸಿತ್ತು, ಅತ್ಯಂತ ವೇಗದಲ್ಲಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಐಷಾರಾಮಿ ಪೋರ್ಶೆ ಕಾರು ಬೈಕ್ ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಬೈಕ್‌ನಲ್ಲಿದ್ದ ಯುವ ಜೋಡಿಗಳಾದ ಅನೀಸ್ ಅವಧಿಯಾ ಹಾಗೂ ಅಶ್ವಿನಿ ಕೋಸ್ಟಾ ಸ್ಥಳದಲ್ಲ ಸಾವನ್ನಪ್ಪಿದ್ದರು. ಘಟನೆಗೆ ನಡೆಯುವುದಕ್ಕೂ ಮೊದಲು 17 ವರ್ಷದ ಅಪ್ರಾಪ್ತ ಪಬ್‌ಗೆ ಹೋಗಿದ್ದ, ಅಲ್ಲಿ ಕಂಠಪೂರ್ತಿ ಕುಡಿದು ಮಜ ಮಾಡಿ ವಾಪಸ್ ಬರುವ ವೇಳೆ ಈ ದುರಂತ ನಡೆದಿತ್ತು. ಆದರೆ ಅಪ್ರಾಪ್ತರಿಗೆ ಪಬ್‌ಗೆ ತೆರಳಲು ಅವಕಾಶ ನೀಡುವಂತಿಲ್ಲ, ಹೀಗಾಗಿ ಆತನಿಗೆ ಎಂಟ್ರಿ ನೀಡಿದ ಪಬ್ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.
ಇದು ಕೊಲೆ, ಅಪಘಾತ ಅಲ್ಲ:
ಈ ದುರಂತದಲ್ಲಿ ಸಾವಿಗೀಡಾದ 24 ವರ್ಷದ ಟೆಕ್ಕಿ ಅನೀಶ್ ಅವಧಿಯಾ ಚಿಕ್ಕಪ್ಪ, ಇದೊಂದು ಅಪಘಾತ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅಪ್ರಾಪ್ತನ ಬಳಿ ಚಾಲನಾ ಪರವಾನಗಿ ಇರಲಿಲ್ಲ, ಅಲ್ಲದೇ ಆತ ಕಂಠಪೂರ್ತಿ ಕುಡಿದಿದ್ದು, ಗಂಟೆಗೆ 240 ಮೀಟರ್ ವೇಗದಲ್ಲಿ ಆತನ ಕಾರಿತ್ತು. ಇದೊಂದು ಅಪಘಾತವಲ್ಲ ಕೊಲೆ, ಕೂಡಲೇ ಆತನ ಜಾಮೀನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್ ಪುತ್ರ: ಹಿಗ್ಗಾಮುಗ್ಗಾ ಥಳಿಸಿದ ಜನ
ಘಟನೆ ನಡೆಯುವ ಮೊದಲು ಪಬ್‌ನಲ್ಲಿ ಎಂಜಾಯ್ ಮಾಡುತ್ತಿರುವ ಆರೋಪಿ ವೀಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ