ಮಂಗಳೂರು ರೈಲ್ವೆಗಾಗಿ ಕೇರಳ ಬೀದಿ ಹೋರಾಟ; ಹಿಂಸಾ ರೂಪ ಪಡೆದ ಪ್ರತಿಭಟನೆ, ಪ್ರಧಾನಿಗೆ ಪತ್ರ

Published : Aug 25, 2026, 08:30 AM IST
Mangaluru

ಸಾರಾಂಶ

ಮಂಗಳೂರು ರೈಲ್ವೆ ವಿಭಾಗವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ಪ್ರಸ್ತಾಪವು ಕೇರಳದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆದಾಯ ನಷ್ಟದ ಕಾರಣ ನೀಡಿ ಕೇರಳ ಸರ್ಕಾರ ಈ ನಿರ್ಧಾರವನ್ನು ವಿರೋಧಿಸಿದರೆ, ಇದು ಕರ್ನಾಟಕದ 23 ವರ್ಷಗಳ ಹೋರಾಟದ ನ್ಯಾಯಯುತ ಹಕ್ಕು ಎಂದು ಕೇಂದ್ರ ಸಚಿವರು ಮತ್ತು ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಪಾಲಕ್ಕಾಡ್‌: ಕೇರಳಂನ ಪಾಲಕ್ಕಾಡ್‌ ರೈಲ್ವೆ ವಿಭಾಗದ ಭಾಗವಾದ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸುವ ರೈಲ್ವೆ ಸಚಿವಾಲಯದ ಪ್ರಸ್ತಾಪ ವಿರೋಧಿಸಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ್ದು, ಅದು ಹಿಂಸಾ ರೂಪ ಪಡೆದಿದೆ.

ಸಿಪಿಎಂನ ಯುವ ಘಟಕವಾದ ಡೆಮಾಕ್ರೆಟಿಕ್‌ ಯೂಥ್‌ ಫೆಡರೇಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ಕಾರ್ಯಕರ್ತರು ಸೋಮವಾರ ಬೆಳಗ್ಗೆ 8ಕ್ಕೆ ಇಲ್ಲಿನ ವಿಭಾಗೀಯ ರೈಲ್ವೆ ವ್ವವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಈ ವೇಳೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಅವರನ್ನು ತಡೆಗಟ್ಟುವ ಯತ್ನ ಮಾಡಿದರಾದರೂ, ಕಾರ್ಯಕರ್ತರು ಬ್ಯಾರಿಕೇಡ್‌ ಹಾರಿ ಕಚೇರಿಯ ಕಾಂಪೌಂಡ್‌ ನುಗ್ಗಿ ಕಚೇರಿ ಎದುರು ಧರಣಿ ಕುಳಿತು ಘೋಷಣೆ ಕೂಗಿ, ನಿರ್ಧಾರ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ಬಳಿಕ ಯುವ ಕಾಂಗ್ರೆಸ್‌ ಕೂಡಾ ಇದೇ ರೀತಿಯ ಪ್ರತಿಭಟನೆ ಹಮ್ಮಿಕೊಂಡು, ರೈಲ್ವೆ ಕಚೇರಿಯತ್ತ ತೆರಳುವ ಯತ್ನ ಮಾಡಿತಾದರೂ ಪೊಲೀಸರು ಅವರನ್ನು ಮಾರ್ಗ ಮಧ್ಯದಲ್ಲೇ ತಡೆಗಟ್ಟಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಈ ನಡುವೆ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್‌ ಸಂಸದರು ಓಣಂ ಹಬ್ಬದ ದಿನದಂದು ಉಪವಾಸ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದ್ದಾರೆ.

ಬಿಜೆಪಿ ಸಮರ್ಥನೆ

ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಅನ್ಯಾಯ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇರಳ ವಿರೋಧ ಏಕೆ

ಮಂಗಳೂರು ಬಂದರಿನ ಮೂಲಕ ಆಗಮಿಸುವ ಸರಕು ಮಂಗಳರಿನಿಂದ ದೇಶದ ವಿವಿಧ ಭಾಗಗಳಿಗೆ ಸಾಗಾಟ ಆಗುತ್ತದೆ. ಪಾಲಕ್ಕಾಡ್‌ ವಲಯಕ್ಕೆ ಹೆಚ್ಚಿನ ಆದಾಯ ಬರುವುದೇ ಮಂಗಳೂರು ವಿಭಾಗದಿಂದ. ಹೀಗಾಗಿ ಮಂಗಳೂರು ಕೈತಪ್ಪಿದರೆ ಪಾಲಕ್ಕಾಡ್‌ ವಲಯಕ್ಕೆ ಭಾರೀ ಆದಾಯ ನಷ್ಟವಾಗುತ್ತದೆ ಎಂಬುದು ಕೇರಳಂನ ವಾದ.=

23 ವರ್ಷದ ಹೋರಾಟದ ಬಳಿಕ ನಮ್ಮ ಹಕ್ಕು ನಮಗೆ

ಕರ್ನಾಟಕದ 23 ವರ್ಷದ ಹೋರಾಟಕ್ಕೆ ಸಿಕ್ಕ ಜಯ. ನಮ್ಮ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಇದರಲ್ಲಿ ಕೇರಳಕ್ಕೆ ಅನ್ಯಾಯ ಎಲ್ಲಿಂದ ಬಂತು. ಯಾವ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ‌. ಕರ್ನಾಟಕ ನಿರಂತರ ಹೋರಾಟದ ಮೂಲಕ ತನ್ನ ಹಕ್ಕು ಪಡೆದುಕೊಂಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿಜಭಜನೆ ತಡೆ ಕೋರಿ ಮೋದಿಗೆ ಕೇರಳ ಸಿಎಂ

ತಿರುವನಂತಪುರಂ: ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಬರೆದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ಗೇನು ಕಷ್ಟ?: ಆರ್‌ಸಿ

ಇದು ಆಡಳಿತಾತ್ಮಕ ಬದಲಾವಣೆ. ಕರ್ನಾಟಕದ ಮೈಸೂರಿಗೆ ಮಂಗಳೂರು ಸೇರಿದರೆ ಕಾಂಗ್ರೆಸ್‌ಗೇನು ಕಷ್ಟ. ಇದರಿಂದ ಕೇರಳಂಗೆ ಯಾವುದೇ ನಷ್ಟವಾಗದು. ಆಡಳಿತದ ವೈಫಲ್ಯ ಮುಚ್ಚಿಡಲು ಕಾಂಗ್ರೆಸ್‌ ವಿವಾದ ಸೃಷ್ಟಿಸಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಆರೋಪಿಸಿದ್ದಾರೆ.

ನೈಋತ್ಯ ರೈಲ್ವೆಗೆ ಮಂಗಳೂರು ಸೇರ್ಪಡೆಗೆ ತಡೆ ಕೋರಿ ಪ್ರಧಾನಿ ಮೋದಿಗೆ ಕೇರಳಂ ಸಿಎಂ ಪತ್ರ

ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಮೋದಿಯವರಿಗೆ ಪತ್ರ ಬರೆದಿರುವ ಅವರು, ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

‘ಭಾರತೀಯ ರೈಲ್ವೆಯ ಕಾರ್ಯನಿರ್ವಹಣೆಯಲ್ಲಿ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಕೇರಳ ಸಂಪೂರ್ಣವಾಗಿ ಗೌರವಿಸುತ್ತದೆ. ಆದರೆ, ಯಾವುದೇ ಆಡಳಿತಾತ್ಮಕ ರ್ನಿರ್ಧಾರ ಕೈಗೊಳ್ಳುವ ಮೊದಲು, ಸಂಬಂಧಪಟ್ಟ ಎಲ್ಲಾ ಪ್ರದೇಶಗಳ ಮೇಲೆ ಅದರ ಪರಿಣಾಮಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಬೇಕು. ಇದರಿಂದ ಯಾವುದೇ ರಾಜ್ಯ ಅಥವಾ ಪ್ರದೇಶದ ರೈಲ್ವೆ ಮೂಲಸೌಕರ್ಯ ಹಾಗೂ ಅಭಿವೃದ್ಧಿಯ ಅವಕಾಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮಂಗಳೂರು ರೈಲ್ವೆಯನ್ನು ನೈಋತ್ಯ ವಿಭಾಗಕ್ಕೆ ಸೇರಿಸುವ ಈ ನಿರ್ಧಾರವನ್ನು ತಕ್ಷಣವೇ ತಡೆಹಿಡಿಯಬೇಕು. ಈ ವಿಚಾರದಲ್ಲಿ ಪ್ರಧಾನಿಗಳು ಮಧ್ಯಪ್ರವೇಶಿಸಬೇಕು. ಕೇರಳ ಸರ್ಕಾರ ಹಾಗೂ ಸಂಬಂಧಪಟ್ಟ ಇತರೆ ಪಾಲುದಾರರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವಂತೆ ರೈಲ್ವೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್‌ ಕಿಡಿ, ಬಿಜೆಪಿ ಸಮರ್ಥನೆ
India Latest News Live: ಮಂಗಳೂರು ರೈಲ್ವೆಗಾಗಿ ಕೇರಳ ಬೀದಿ ಹೋರಾಟ; ಹಿಂಸಾ ರೂಪ ಪಡೆದ ಪ್ರತಿಭಟನೆ, ಪ್ರಧಾನಿಗೆ ಪತ್ರ