
ನವದೆಹಲಿ: ‘ಭಾರತ ಈಗ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಜನಪ್ರಿಯ ದೇಶವಾಗಿದೆ. ಹಾಗಾಗಿ ಭಾರತ ತನ್ನ ಹಕ್ಕಾಗಿರುವ ಸ್ಥಾನವನ್ನು ಪಡೆದುಕೊಳ್ಳಬೇಕಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ದೊರೆಯಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಫ್ರಾನ್ಸ್ ಭೇಟಿಗೂ ಮುನ್ನ ಅಲ್ಲಿನ ‘ಲೆಸ್ ಇಕೋಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ಇದು ಕೇವಲ ವಿಶ್ವಾಸಾರ್ಹತೆಯ ಪ್ರಶ್ನೆಯಲ್ಲ. ಅದಕ್ಕಿಂತ ಹಿರಿದಾದುದು. ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೇ ತನ್ನ ಸದಸ್ಯನಲ್ಲದಿದ್ದಾಗ, ತಾನು ವಿಶ್ವದ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಭದ್ರತಾ ಸಮಿತಿ ಹೇಗೆ ಹೇಳಿಕೊಳ್ಳಲು ಸಾಧ್ಯ. ಕಾಲಕ್ಕೆ ತಕ್ಕಂತೆ ವಿಶ್ವಸಂಸ್ಥೆಯ ಸದಸ್ಯತ್ವ ಬದಲಾಗಿಲ್ಲ. ಹಾಗಾಗಿ ಪ್ರಸ್ತುತ ಇರುವ ಸದಸ್ಯತ್ವ ಈಗಿನ ಸವಾಲುಗಳನ್ನು ಎದುರಿಸಲು ಅಸಾಹಾಯಕವಾಗಿದೆ. ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಸ್ಥಾನ, ಸೇರಿದಂತೆ ಹಲವು ದೇಶಗಳು ಏನನ್ನು ನೋಡಲು ಬಯಸುತ್ತಿವೆ ಎಂಬುದನ್ನು ನಾನು ಬಲ್ಲೆ ಎಂದು ಹೇಳಿದ್ದಾರೆ.
ಸಾಟಿಯಿಲ್ಲದ ಸಾಮಾಜಿಕ ಮತ್ತು ಆರ್ಥಿಕ ವೈವಿಧ್ಯತೆಯೊಂದಿಗೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಾವು ಪ್ರಜಾಪ್ರಭುತ್ವಕ್ಕೆ ಯಶಸ್ಸು ನೀಡಲಿದ್ದೇವೆ ಎಂಬುದು ಸಾಬೀತಾಗಿದೆ. ಅದೇ ಸಮಯದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಜಾಗತಿಕವಾಗಿ ಸ್ಥಾನಮಾನ ಸಿಗಬೇಕು ಎಂಬುದು ಸಹಜ ನಿರೀಕ್ಷೆಯಾಗಿದೆ ಎಂದು ಹೇಳಿದರು.
ಭಾರತ-ಫ್ರಾನ್ ಸಂಬಂಧ ಇನ್ನಷ್ಟು ನಿಕಟ: ಮೋದಿ
ಪ್ಯಾರಿಸ್: ಭಾರತ ಹಾಗೂ ಫಾನ್ಸ್ ನಡುವೆ ಸಂಬಂಧ ಇನ್ನಷ್ಟು ನಿಕಟವಾಗಲಿದೆ. ಇದಕ್ಕೆ ಫ್ರಾನ್ಸ್‌ನಲ್ಲಿನ ಭಾರತೀಯರ ಕೊಡುಗೆ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪ್ಯಾರಿಸ್‌ನಲ್ಲಿನ ಭಾರತೀಯ ಸಮುದಾಯ ಉದ್ದೇಶಿಸಿ ಗುರುವಾರ ರಾತ್ರಿ ಮಾತನಾಡಿದ ಅವರು, ಭಾರತ ಹಾಗೂ ಫ್ರಾನ್ಸ್ ಸಂಬಂಧ ಮುಂದುವರಿಯಲಿದೆ. ಚರೈವೇತಿ ಚರೈವೇತಿ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಫ್ರಾನ್ಸ್ ನಾಣ್ಣುಡಿ ಕೂಡ ಮುನ್ನಡೆಯಿರಿ ಎಂದು ಹೇಳುತ್ತದೆ. ಸಮಾನತೆ, ಏಕತೆ ಭಾರತ ಹಾಗೂ ಫ್ರಾನ್ಸ್ ಧ್ಯೇಯಗಳು. ಭಾರತ ಹಾಗೂ ಫ್ರಾನ್ಸ್ ಅನೇಕ ಸವಾಲುಗಳನ್ನು 21ನೇ ಶತಮಾನದಲ್ಲಿ ಒಟ್ಟಾಗಿ ಎದುರಿಸಲಿವೆ ಎಂದರು.
ಅಲ್ಲದೆ, ‘ಫ್ರಾನ್ಸ್ ಫುಟ್ಬಾಲಿಗ ಎಂಬಾಪೆಗೆ ಫ್ರಾನ್ಸ್‌ಗಿಂತ ಭಾರತದಲ್ಲೇ ಅಭಿಮಾನಿಗಳು ಹೆಚ್ಚು’ ಎಂದು ಮೋದಿ ಚಟಾಕಿ ಹಾರಿಸಿದರು. ಶುಕ್ರವಾರ ಫ್ರಾನ್ಸ್ ರಾಷ್ಟ್ರೀಯ ದಿನ. ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ನನ್ನ-ಫ್ರಾನ್ಸ್ ನಂಟು ಹಳೆಯದು. ಇಂಡೋ-ಫ್ರಾನ್ಸ್ ಸಾಂಸ್ಕೃತಿಕ ಕೇಂದ್ರ ಗುಜರಾತಲ್ಲಿ ಸ್ಥಾಪನೆ ಆದಾಗ ನಾನು ಅದರ ಸದಸ್ಯನಾಗಿದ್ದೆ. 20015ಕ್ಕೆ ಫ್ರಾನ್ಸ್‌ಗೆ ಬಂದಿದ್ದೆ. ವಿಶ್ವಯುದ್ಧದಲ್ಲಿ ಮಡಿದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೆ’ ಎಂದು ಅವರು ಸ್ಮರಿಸಿದರು. ಫ್ರಾನ್ಸ್‌ಗೆ ಬಂದರೆ ಭಾರತಕ್ಕೇ ಬಂದಂತೆ ಎನ್ನಿಸುತ್ತಿದೆ. ಎಲ್ಲೆಡೆ ಭಾರತ್ ಮಾತಾ ಕೀ ಜೈ ಜೈಘೋಷ ಕೇಳಿಬರುತ್ತಿದೆ’ ಎಂದರು.
15 ವರ್ಷದಲ್ಲಿ 41 ಕೋಟಿ ಬಡವರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದು ಅಮೆರಿಕ, ಫ್ರಾನ್ಸ್ ಜನಸಂಖ್ಯೆಗಿಂತ ಹೆಚ್ಚು. ಭಾರತದ ಕಡುಬಡತನ ಅಂತ್ಯವಾಗಲಿದೆ ಎಂದು ಐಎಂಎಫ್ ಹೇಳಿದೆ. ಇದು ಭಾರತಕ್ಕೆ ಅಷ್ಟೇ ಅಲ್ಲ, ಇಡೀ ಮಾನವತೆಗೆ ಅನುಕೂಲ. ಭಾರತದ ಇಂದಿನ ಅಭಿವೃದ್ಧಿಗೆ ಮೋದಿ ಕಾರಣ ಎಂದು ನೀವು ಹೇಳುತ್ತಿದ್ದೀರಿ. ಆದರೆ ಅದು ಹಾಗಲ್ಲ. ನೀವೆಲ್ಲ ಕಾರಣ. ಛಲದಿಂದ ಭಾರತ ಇಂದು ವಿಶ್ವದ ಅತಿದೊಡ್ಡ 5ನೇ ಆರ್ಥಿಕತೆ ಆಗಿದೆ’ ಎಂದರು.
ಚಂದ್ರಯಾನಕ್ಕೆ ಶುಭಾಶಯ:
ಚಂದ್ರಯಾನ-3ರ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಐತಿಹಾಸಿಕ ಉಡ್ಡಯನ ಆಗಲಿದೆ. ಬಾಹ್ಯಾಕಾಶದ ರೀತಿ ಅನೇಕ ಕೊಡುಗೆಗಳನ್ನು ಭಾರತ ನೀಡಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ