ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮುಗಿದ ನಂತರ ಬಜೆಟ್ ಅಧಿವೇಶನದ ಮೊದಲು ಪ್ರಧಾನಿ ಮೋದಿ ಸಂಪುಟ ಸರ್ಜರಿಗೆ ಕೈಹಾಕಲಿದ್ದು, ಜನವರಿ 20ರ ಆಸುಪಾಸು ಕೆಲ ಸಣ್ಣಪುಟ್ಟ ಬದಲಾವಣೆಗಳು ಆಗಲಿವೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಹೇಳುತ್ತಿವೆ.
ಪ್ರಶಾಂತ್ ನಾತು
ಕಳೆದ ತಿಂಗಳು ಮುಖ್ಯಮಂತ್ರಿ ಬೊಮ್ಮಾಯಿ ದಿಲ್ಲಿಗೆ ಹೋಗಿ ಈಶ್ವರಪ್ಪ, ಜಾರಕಿಹೊಳಿ ಮತ್ತು ಇನ್ನೂ ಮೂವರು ಸೇರಿ ಒಟ್ಟು ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿ ಕೇಳಿದಾಗ ಅಮಿತ್ ಶಾ ಯತ್ನಾಳ್, ಬೆಲ್ಲದ, ಸಿ.ಪಿ.ಯೋಗೇಶ್ವರ್ ಪೈಕಿ ಯಾರನ್ನಾದರೂ ಸೇರಿಸಿಕೊಳ್ಳಲು ಹೋಗಿ ಯಡಿಯೂರಪ್ಪ ಮುನಿಸಿಕೊಂಡರೆ ಏನು ಮಾಡುವುದು ಎಂದು ಕೇಳಿದ್ದರು.
ರಾಷ್ಟ್ರೀಯ ಕಾರ್ಯಕಾರಿಣಿ ಮುಗಿದ ನಂತರ ಬಜೆಟ್ ಅಧಿವೇಶನದ ಮೊದಲು ಪ್ರಧಾನಿ ಮೋದಿ ಸಂಪುಟ ಸರ್ಜರಿಗೆ ಕೈಹಾಕಲಿದ್ದು, ಜನವರಿ 20ರ ಆಸುಪಾಸು ಕೆಲ ಸಣ್ಣಪುಟ್ಟ ಬದಲಾವಣೆಗಳು ಆಗಲಿವೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಹೇಳುತ್ತಿವೆ. ಒಂದು ಕಡೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈಗಿನ ಅಧ್ಯಕ್ಷ ಜೆ.ಪಿ.ನಡ್ಡಾ ಇನ್ನೊಂದು ವರ್ಷ ಮುಂದುವರೆಯುವ ನಿರ್ಧಾರ ಆಗುವ ಸಾಧ್ಯತೆಗಳಿವೆ. ಅದಾದ ಮೇಲೆ ಕೆಲ ಕೇಂದ್ರ ಮಂತ್ರಿಗಳನ್ನು ಪಾರ್ಟಿ ಕೆಲಸಕ್ಕೆ ಕಳುಹಿಸಲು, ಕೆಲವರನ್ನು ಕೈಬಿಡಲು ಹಾಗೂ ಮುಂಬರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತ್ರಿಪುರಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲವರನ್ನು ಸೇರ್ಪಡೆ ಮಾಡಲು ತೀರ್ಮಾನ ಆಗಿದೆ ಎಂದು ತಿಳಿದು ಬಂದಿದೆ. ಆದರೆ ನಿರ್ದಿಷ್ಟವಾಗಿ ಯಾರು ಪಾರ್ಟಿ ಕೆಲಸಕ್ಕೆ ಹೋಗುತ್ತಾರೆ, ಯಾರು ಸೇರ್ಪಡೆ ಆಗುತ್ತಾರೆ ಅನ್ನುವುದನ್ನು ಮೋದಿ ಮತ್ತು ಅಮಿತ್ ಶಾ ಯೋಚನೆ ಮಾಡಿರಬಹುದು ಬಿಟ್ಟರೆ ಆರ್‌ಎಸ್‌ಎಸ್‌ನ ಬಿಜೆಪಿ ಸಮನ್ವಯಕಾರ ಅರುಣ್ ಕುಮಾರ್, ಜೆ.ಪಿ.ನಡ್ಡಾ, ರಾಜನಾಥ ಸಿಂಗ್, ಬಿ.ಎಲ್.ಸಂತೋಷ್ ಅವರ ಜೊತೆ ಯಾವುದೇ ಚರ್ಚೆ ನಡೆದಿಲ್ಲ. ಹಿಂದಿನ ಪರಿಪಾಠ ಗಮನಿಸಿದರೆ ಸಂಪುಟ ದರ್ಜೆ ಮತ್ತು ಸ್ವತಂತ್ರ ಪ್ರಭಾರದ ಸಚಿವರು ಯಾರಾಗಬೇಕು ಎನ್ನುವ ತೀರ್ಮಾನವನ್ನು ಪ್ರಧಾನಿ ಮೋದಿ ಅವರೇ ಸ್ವತಃ ತೆಗೆದುಕೊಂಡರೆ, ರಾಜ್ಯಗಳಲ್ಲಿ ಜಾತಿ ಪ್ರಾತಿನಿಧ್ಯ ಕೊಡಲು ಮಾಡಲಾಗುವ ರಾಜ್ಯ ಮಂತ್ರಿಗಳ ನಿರ್ಣಯಗಳನ್ನು ಅಮಿತ್ ಶಾ ತೆಗೆದುಕೊಳ್ಳುತ್ತಾರೆ. ಈ ಬಾರಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಜೊತೆ ಬಂದಿರುವ 13 ಶಿವಸೇನಾ ಸಂಸದರ ಪೈಕಿ ಒಬ್ಬರನ್ನು ಕೇಂದ್ರದಲ್ಲಿ ಮಂತ್ರಿ ಮಾಡುವ ಯೋಚನೆಯೂ ಇದೆಯಂತೆ. ಮೋದಿ ಸಾಹೇಬರು ಸಂಪುಟ ಸರ್ಕಸ್ ಬಗ್ಗೆ ಕೊನೆ ಕ್ಷಣದವರೆಗೂ ರಹಸ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದರೆ ಪತ್ರಕರ್ತರಾದ ನಮಗೆ ಅದನ್ನು ಭೇದಿಸುವ ತವಕ.
India Gate: ಮೋದಿ, ಶಾ ಬರ್ತಾರೆ, ಎಲ್ಲ ಸರಿ ಮಾಡ್ತಾರೆ!
ಕರ್ನಾಟಕದಿಂದ ಯಾರು ಹೊಸ ಮಂತ್ರಿ?
ಕರ್ನಾಟಕದಿಂದ ಈಗಾಗಲೇ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮತ್ತು ಭಗವಂತ್ ಖೂಬಾ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಈಗ ಯಾರನ್ನೂ ಕೂಡ ಕೈಬಿಡುವ ಸಾಧ್ಯತೆ ಕಡಿಮೆ. ಆದರೆ ಯಡಿಯೂರಪ್ಪ, ಓಲೈಕೆ, ಜಾತಿ ಸಮೀಕರಣದ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕಲಬುರಗಿ ಸಂಸದ ಉಮೇಶ ಜಾಧವ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು. ಕಳೆದ ತಿಂಗಳು ಮುಖ್ಯಮಂತ್ರಿ ಬೊಮ್ಮಾಯಿ ದಿಲ್ಲಿಗೆ ಹೋಗಿ ಈಶ್ವರಪ್ಪ, ಜಾರಕಿಹೊಳಿ ಮತ್ತು ಇನ್ನೂ ಮೂವರು ಸೇರಿ ಒಟ್ಟು ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿ ಕೇಳಿದಾಗ ಅಮಿತ್ ಶಾ ಯತ್ನಾಳ್, ಬೆಲ್ಲದ, ಸಿ.ಪಿ.ಯೋಗೇಶ್ವರ್ ಪೈಕಿ ಯಾರನ್ನಾದರೂ ಸೇರಿಸಿಕೊಳ್ಳಲು ಹೋಗಿ ಯಡಿಯೂರಪ್ಪ ಮುನಿಸಿಕೊಂಡರೆ ಏನು ಮಾಡುವುದು ಎಂದು ಕೇಳಿದ್ದರು.
ವಿಜಯೇಂದ್ರರನ್ನು ಮಂತ್ರಿ ಮಾಡದೆ ತಮ್ಮನ್ನು ವಿರೋಧಿಸುವವರನ್ನು ಮಂತ್ರಿ ಮಾಡಲು ಬೊಮ್ಮಾಯಿ ಹೊರಟಿದ್ದಾಗ ಅಮಿತ್ ಶಾ ಬೆಂಗಳೂರಿಗೆ ಬರುವ ವೇಳೆಯೇ ಯಡಿಯೂರಪ್ಪ ವಿದೇಶಕ್ಕೆ ಹೋಗಿದ್ದರು. ಯಡಿಯೂರಪ್ಪ ವಿದೇಶಕ್ಕೆ ಹೋದ ಮೇಲೆ ಬೊಮ್ಮಾಯಿ ಸಂಪುಟ ವಿಸ್ತರಣೆ ವಿಷಯ ಹಿಂದಕ್ಕೆ ಹೋಗಿದ್ದು ಕಾಕತಾಳೀಯ ಏನೂ ಅಲ್ಲ. ಈಗ ಒಂದು ವೇಳೆ ಕೇಂದ್ರ ಸಂಪುಟ ಪುನಾರಚನೆ ಮಾಡುವಾಗ ಎರಡು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಹೆಸರನ್ನು ದಿಲ್ಲಿ ನಾಯಕರು ಪರಿಗಣಿಸಿದರೂ ಆಶ್ಚರ್ಯ ಇಲ್ಲ. ಬಹುತೇಕ ಬಿಜೆಪಿ ಕಾರ್ಯಕಾರಿಣಿ ಮುಗಿದ ಮೇಲೆ ಈ ಎಲ್ಲ ಸಾಧ್ಯಾಸಾಧ್ಯತೆಗಳ ಚರ್ಚೆ ಶುರು ಆಗಲಿದೆ.
ಅಧಿಕಾರಿ ಒಬ್ಬರ ಕಥೆ
ದೃಶ್ಯ 1
ಆಗ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮನೆಗೆ ಬಂದ ಕರ್ನಾಟಕ ಮೂಲದ ಅಧಿಕಾರಿಯೊಬ್ಬರು ‘ನಮ್ಮ ಮನೆತನ ಕಟ್ಟಾಕಾಂಗ್ರೆಸ್ ಸರ್, ನನಗೆ ಪ್ರಮೋಷನ್ ಕೊಡಿಸಿ’ ಎಂದು ನೋಡನೋಡುತ್ತಾ ನಡು ಬಗ್ಗಿಸಿದ್ದರು.
ದೃಶ್ಯ 2
ದಿಲ್ಲಿಯ ದೀನದಯಾಳ್ ಶೋಧ ಸಂಸ್ಥಾನದಲ್ಲಿ ಸಂಘದ ಹಿರಿಯರೊಬ್ಬರ ಹುಟ್ಟುಹಬ್ಬದ ಅನೌಪಚಾರಿಕ ಕಾರ್ಯಕ್ರಮ. ಆಗಿನ ಸಂಘದ ಸರಕಾರ್ಯವಾಹರಿಗೆ ಶಿರಸಾಷ್ಟಾಂಗ ಹಾಕಿದ ಅದೇ ಅಧಿಕಾರಿ, ‘ನಾವು ಹುಟ್ಟಾಸ್ವಯಂಸೇವಕರು, ಸಂಘ ನಮ್ಮ ರಕ್ತದ ಕಣ ಕಣಗಳಲ್ಲಿದೆ’ ಎಂದು ಹೇಳಿದ್ದೇ ಹೇಳಿದ್ದು.
ಈ ಎರಡು ದೃಶ್ಯಗಳನ್ನು ಕಣ್ಣಾರೆ ನೋಡಿದ್ದ ನನಗೆ ದಿಗ್ಭ್ರಮೆ ಆಗುವುದೊಂದು ಬಾಕಿ ಇತ್ತು. ಅಧಿಕಾರಿಗಳಿಗೆ ಇದು ಅನಿವಾರ್ಯತೆಯೋ ಅಥವಾ ಉದಯಿಸುತ್ತಿರುವ ಸೂರ್ಯನಿಗೆ ಸಾಷ್ಟಾಂಗ ಹಾಕುವ ಉದಾತ್ತ ಚಿಂತನೆಯೋ ಎಂಬುದು ನನಗಂತೂ ಆಗ ಮಾತ್ರವಲ್ಲ ಈಗ ಕೂಡ ಅರ್ಥ ಆಗುತ್ತಿಲ್ಲ.
ಕಾಂಗ್ರೆಸ್ ಹೊಸ ಆಫೀಸಿನ ಚೋದ್ಯ
1978-2022ರ ವರೆಗೆ ಅಂದರೆ 44 ವರ್ಷ ಕಾಂಗ್ರೆಸ್ ಕಚೇರಿ ಆಗಿದ್ದ 24 ಅಕ್ಬರ್ ರೋಡ್‌ನಿಂದ ಈ ವರ್ಷದ ಮಾಚ್‌ರ್‍ನಲ್ಲಿ ಲ್ಯೂಟನ್ ದಿಲ್ಲಿಯ ಹೊರಗಡೆ ಇರುವ ಪಂಡಿತ್ ದೀನದಯಾಳ್ ರಸ್ತೆಯ ಹೊಸ ಸುಸಜ್ಜಿತ ಕಟ್ಟಡಕ್ಕೆ ಕಾಂಗ್ರೆಸ್ ಕಚೇರಿ ಶಿಫ್ಟ್ ಆಗುತ್ತಿದೆ. ಬಿಜೆಪಿ ನಾಯಕನ ಹೆಸರು ಇರುವ ರಸ್ತೆ ಬೇಡ ಎಂದು ಕಾಂಗ್ರೆಸ್ ಕಚೇರಿಗೆ ಹಿಂಬದಿಯಿಂದ ಪ್ರವೇಶ ನೀಡಲಾಗುತ್ತಿದ್ದು, 9 ಕೋಟ್ಲಾ ರೋಡ್ ಎಂದು ಕರೆಸಿಕೊಳ್ಳಲಿದೆ. 78ರಲ್ಲಿ ಕಾಂಗ್ರೆಸ್ ಒಡೆದಾಗ ಚುನಾವಣೆ ಸೋತಿದ್ದ ಇಂದಿರಾ ಗಾಂಧಿಯವರಿಗೆ ಇರಲು ಮನೆ ಇರಲಿಲ್ಲ. ಆಗ ಉದ್ಯಮಿ ಮಿತ್ರರಾಗಿದ್ದ ಸಂಸದ ಮೊಹಮ್ಮದ್ ಯೂನುಸ್ ಬಿಟ್ಟುಕೊಟ್ಟ12 ವಿಲ್ಲಿಂಗ್ಡನ್ ರಸ್ತೆಯ 3 ಬೆಡ್ ರೂಮ್ ಮನೆಯಲ್ಲಿ ಇಂದಿರಾ, ರಾಜೀವ್, ಸೋನಿಯಾ, ಪ್ರಿಯಾಂಕಾ, ರಾಹುಲ್ ಜೊತೆಗೆ ಸಂಜಯ ಗಾಂಧಿ ಮತ್ತು ಮನೇಕಾ ಇರುತ್ತಿದ್ದರು. ಜೊತೆಗೆ 5 ನಾಯಿಗಳು ಇರುತ್ತಿದ್ದವು. ಅಲ್ಲಿ ರಾಜಕೀಯ ಚಟುವಟಿಕೆಗೆ ಜಾಗ ಇರಲಿಲ್ಲ. ಆಗ ಆಂಧ್ರದ ಇನ್ನೊಬ್ಬ ಸಂಸದ ವೆಂಕಟಸ್ವಾಮಿ ಕೊಟ್ಟಮನೆಯೇ 24 ಅಕ್ಬರ್ ರೋಡ್. ಅಂದಹಾಗೆ 1961ರಲ್ಲಿ ಇದು ಬರ್ಮಾ ಹೌಸ್ ಆಗಿತ್ತು. 15 ವರ್ಷದ ಆಂಗ್ ಸ್ಯಾನ್ ಸೂಕಿ ತನ್ನ ತಾಯಿಯ ಜೊತೆ ಇದೇ ಮನೆಯಲ್ಲಿ ಇದ್ದರು. ಆಗ ಸಂಜಯ ಗಾಂಧಿ ಹಾಗೂ ರಾಜೀವ್ ಗಾಂಧಿ ಇಬ್ಬರನ್ನೂ ತನ್ನ ಜೊತೆ ಆಟ ಆಡಲು 24 ಅಕ್ಬರ್ ರೋಡ್‌ಗೆ ಇಂದಿರಾ ಕಳುಹಿಸುತ್ತಿದ್ದರು, ನಂತರ ನಾವು ಮೂವರೂ ರಾಷ್ಟ್ರಪತಿ ಭವನಕ್ಕೆ ಹೋಗಿ ಕುದುರೆ ಸವಾರಿ ಕಲಿಯುತ್ತಿದ್ದೆವು ಎಂದು ಆಂಗ್ ಸ್ಯಾನ್ ಸೂಕಿ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ 24 ಅಕ್ಬರ್ ರೋಡ್ ಪಕ್ಕದಲ್ಲೇ ಇರುವ ಸೋನಿಯಾ ಗಾಂಧಿ ವಾಸಿಸುವ 10 ಜನಪಥ್ ನಿವಾಸ ಮೊದಲು ಸಂಜಯ ಗಾಂಧಿ ಅವರ ಯುವ ಕಾಂಗ್ರೆಸ್ ಕಚೇರಿ ಆಗಿತ್ತು.
India Gate: ಹಿಂದೂ ಅವಹೇಳನದ ಇಳಿಜಾರು ಹಾದಿ: ಕಾಂಗ್ರೆಸ್‌ಗೆ ಇಕ್ಕಟ್ಟು
ಮರಣಶಯ್ಯೆಯಲ್ಲಿ ಮದನದಾಸ್
ಸಂಘ ಪರಿವಾರದ ಉಚ್ಛ್ರಾಯದಲ್ಲಿ ಡಾಕ್ಟರ್ ಹೆಡಗೆವಾರ್, ಗುರೂಜಿ ಗೊಳವಾಲ್ಕರ್, ದೀನದಯಾಳ್ ಉಪಾಧ್ಯಾಯ ನಂತರ ಭಾರತೀಯ ಮಜದೂರ ಸಂಘವನ್ನು ಬೆಳೆಸಿದ ದತ್ತೋಪಂತ ಥೇಂಗಡಿ, ವಿಶ್ವ ಹಿಂದೂ ಪರಿಷತ್ ಬೆಳೆಸಿದ ಅಶೋಕ ಸಿಂಘಾಲ್, ಜನಸಂಘಕ್ಕೊಂದು ದಿಕ್ಕು ಕೊಟ್ಟನಾನಾಜಿ ದೇಶಮುಖ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳೆಸಿದ ಮದನದಾಸ್ ದೇವಿಜಿ ಅವರದು ದೊಡ್ಡ ಹೆಸರು. 2002ರಲ್ಲಿ ಅಟಲ್‌ಜಿ ಗುಜರಾತ್ ದಂಗೆಗಳ ನಂತರ ನರೇಂದ್ರ ಮೋದಿ ಅವರನ್ನು ಬದಲಾಯಿಸಬೇಕೆಂದು ಹೊರಟಾಗ ಮೊದಲು ಗಟ್ಟಿಧ್ವನಿಯಲ್ಲಿ ವಿರೋಧಿಸಿದ ಮದನದಾಸ್ ದೇವಿಜಿ ಈಗ ಬೆಂಗಳೂರಿನ ಸಂಘ ಕಾರ್ಯಾಲಯದ ಕೇಶವ ಕೃಪಾದ ಎರಡನೇ ಮಹಡಿಯಲ್ಲಿ ಮರಣಶಯ್ಯೆಯಲ್ಲಿದ್ದಾರೆ. ಯಾರಿಗೆ ಆದರೂ ವೃದ್ಧಾಪ್ಯ ಒಂದು ಶಾಪ. ಅದು ಎಂಥೆಂಥ ಕರ್ಮಯೋಗಿಗಳನ್ನು ಹಣ್ಣು ಮಾಡಿಬಿಡುತ್ತದೆ. ಇದೇ ಜೀವನದ ಪರಮ ಸತ್ಯ.
ಚುನಾವಣೆ ತಯಾರಿಗೆ ಬಂದ ಆರೆಸ್ಸೆಸ್
ಬಿಜೆಪಿ ಸ್ಥಳೀಯ ನಾಯಕರ ಬಗ್ಗೆ ಜನರಿಗೇನಾದರೂ ಬೇಸರವಿದ್ದರೆ ಅದನ್ನು ಸರಿಪಡಿಸುವ ಶಕ್ತಿ ಇರುವುದು ಒಂದು ಮೋದಿ ಹೆಸರಿಗೆ ಮತ್ತೊಂದು ಆರ್‌ಎಸ್‌ಎಸ್ ಕೇಡರ್‌ಗೆ. ಮೇ ತಿಂಗಳಲ್ಲಿ ನಡೆಯುವ ಚುನಾವಣಾ ತಯಾರಿಗೆಂದೇ ಕೇಶವಕೃಪದಲ್ಲಿ ನಡೆದ ಸಂಘ ಪರಿವಾರದ ಸಮನ್ವಯ ಸಭೆಯಲ್ಲಿ ರಾಜ್ಯ ಬಿಜೆಪಿ ಸ್ಥಿತಿಗತಿ, 4 ವರ್ಷದಲ್ಲಿ ಆದ ತಪ್ಪು-ಒಪ್ಪುಗಳು, ನಿರ್ಣಯಗಳು, ಜಿಲ್ಲಾ ಮಟ್ಟದಲ್ಲಿ ಏನು ಸ್ಥಿತಿಯಿದೆ ಎಂಬುದರ ಬಗ್ಗೆ ಗಂಟೆಗಳ ಕಾಲ ಮುಕ್ತ ಚರ್ಚೆ ನಡೆದಿದೆ. ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ ಮುಕುಂದ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಕೊನೆಗೆ ಬಿ.ಎಲ್.ಸಂತೋಷ್ ದಿಲ್ಲಿ ಬಿಜೆಪಿ ನಾಯಕರ ಕರ್ನಾಟಕದ ನೈಜ ಸ್ಥಿತಿಯ ಬಗೆಗಿನ ಅಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಿಂದುತ್ವ, ಮೋದಿ ಬಗ್ಗೆಯೇ ಹೆಚ್ಚು ಪ್ರಚಾರ ಮಾಡಿ, ಸಂಘದ ನೆಟ್‌ವರ್ಕ್ ಪೂರ್ತಿ ಅಖಾಡಕ್ಕೆ ಇಳಿದು, ಜಾತಿ ಸಮೀಕರಣಗಳನ್ನು ಸರಿಪಡಿಸಿ ಚುನಾವಣೆಗೆ ಹೋದರೆ ಮಾತ್ರ ನಷ್ಟಕಡಿಮೆ ಮಾಡಬಹುದು ಎಂಬುದು ಸಮನ್ವಯ ಸಭೆಯ ಒಟ್ಟು ಅಭಿಪ್ರಾಯ ಆಗಿತ್ತು ಎಂದು ಮೂಲಗಳು ತಿಳಿಸಿವೆ.