India Gate: ಮೋದಿ, ಶಾ ಬರ್ತಾರೆ, ಎಲ್ಲ ಸರಿ ಮಾಡ್ತಾರೆ!
ಗುಜರಾತ್‌ನಲ್ಲಿ ಹಿಂದುತ್ವ ಮತ್ತು ಮೋದಿ ಮುಖದ ಮೇಲೆ ವೋಟಿಂಗ್ ಆದರೆ ಬಿಜೆಪಿಗೆ ಲಾಭ ಪಕ್ಕಾ. ಹಿಂದುಳಿದ ವರ್ಗಗಳು ಮತ್ತು ಪಾಟಿದಾರರ ಮಧ್ಯೆ ಬಿರುಕು ಏರ್ಪಟ್ಟು ಜಾತಿ ಸಮೀಕರಣಗಳೇ ಮುಖ್ಯವಾದರೆ ಕಾಂಗ್ರೆಸ್‌ಗೆ ಲಾಭ ಜಾಸ್ತಿ. ಇನ್ನೂ ಎಷ್ಟು ಬಾರಿ ಇದೇ ಸರ್ಕಾರ ನೋಡಬೇಕು, ಬದಲಾವಣೆ ಇರಲಿ ಅಂದುಕೊಂಡು ಗುಜರಾತಿಗಳು ಮತಗಟ್ಟೆಗೆ ಬಂದರೆ ಆಮ್ ಆದ್ಮಿಗೆ ಲಾಭ ಜಾಸ್ತಿ.
India Gate Column by Prashant Natu
ಒಂದು ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರುವಾ ‘ಇಂದಿರಾ ಅಂದರೆ ಇಂಡಿಯಾ ಮತ್ತು ಇಂಡಿಯಾ ಅಂದರೆ ಇಂದಿರಾ’ ಎಂದು ಹೇಳಿಕೆ ಕೊಟ್ಟಿದ್ದರು. ಇವತ್ತು ನಿಧಾನವಾಗಿ ಬಿಜೆಪಿ ಪರಿಸ್ಥಿತಿಯೂ ಹಾಗೇ ಆಗುತ್ತಿದೆ. ಬಿಜೆಪಿ ಅಂದರೆ ಮೋದಿ ಮತ್ತು ಮೋದಿ ಅಂದರೆ ಬಿಜೆಪಿ ಅನ್ನುವ ರೀತಿ. ಈಗ ಗುಜರಾತ್ ಚುನಾವಣೆ ಇರಲಿ ಅಥವಾ ಕರ್ನಾಟಕದ ಚುನಾವಣೆ ಬರಲಿ, ಬಿಜೆಪಿ ಬಳಿ ಇರುವ ಪಾಶುಪತಾಸ್ತ್ರ: ಮೋದಿ ಮೋದಿ ಮೋದಿ! ಇತ್ತೀಚೆಗೆ ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಮಾತಿಗೆ ಎಳೆದರೆ, ‘ನೋಡ್ತಾ ಇರಿ, ಜನವರಿ ಮೊದಲ ವಾರದಿಂದ ಮೋದಿ ಮತ್ತು ಅಮಿತ್ ಶಾ ಬರುತ್ತಾರೆ.
ಏನೇನು ಸಮಸ್ಯೆಗಳಿವೆಯೋ ಎಲ್ಲ ಸರಿ ಮಾಡುತ್ತಾರೆ. ಯಾರೂ ಕೂಡ ಕಮಕ್ ಕಿಮಕ್ ಅನ್ನೋಹಂಗಿಲ್ಲ’ ಎನ್ನುವ ಉತ್ತರ ಬರುತ್ತದೆ. ಸ್ಥಳೀಯ ನಾಯಕರ ರಣತಂತ್ರಗಳೇನು ಎಂದು ಕೇಳಿದರೆ, ‘ಅಮಿತ್ ಶಾ ಹೇಳಿದ್ದು ಚಾಚೂತಪ್ಪದೆ ಪಾಲಿಸೋದು. ಕಾಂಗ್ರೆಸ್‌ನವರು ಏನೇ ಹವಾ ಮಾಡಿಕೊಳ್ಳಲಿ, ಕೊನೆಯ 15 ದಿನ ಮೋದಿ ಬಂದಾಗ ನೋಡಿ ಎಲ್ಲರ ಸರ್ವೇಗಳು ತಿರುವು ಮುರುವು ಆಗುತ್ತವೆ’ ಎನ್ನುವ ಉತ್ತರ ಬರುತ್ತದೆ. ಅರ್ಥ ಸ್ಪಷ್ಟ: ಕರ್ನಾಟಕದಲ್ಲಿ ಬಿಜೆಪಿ ಮೋದಿ ಮುಖ ಮತ್ತು ಅಮಿತ್ ಶಾ ಬರುವಿಕೆಯನ್ನು ಮತ್ತು ಅವರು ಹೆಣೆಯುವ ರಣತಂತ್ರಗಳಿಗಾಗಿ ಕಾಯುತ್ತಿದೆ.
ಕಾಂಗ್ರೆಸ್, ಜೆಡಿಎಸ್ ಇದಕ್ಕೆ ತದ್ವಿರುದ್ಧ: ಒಂದು ಕಡೆ ದಿಲ್ಲಿ ಬಿಜೆಪಿ ಚುನಾವಣಾ ಪ್ರಬಂಧನ, ರಣತಂತ್ರ, ಹಣಕಾಸಿನ ಸೌಕರ್ಯ ಮತ್ತು ಮೋದಿ ಹೆಸರಿನ ಮೇಲೆ ವೋಟು ಹೀಗೆ ಎಲ್ಲವನ್ನೂ ಕೊಡುವ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು ಕಡೆ ದಿಲ್ಲಿ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್‌ಗೆ ದುಡ್ಡು, ರಣತಂತ್ರ, ವೋಟು ತರುವ ಮುಖ ಹೀಗೆ ಯಾವ ವಿಷಯದಲ್ಲೂ ನೆರವು ನೀಡುವ ಸ್ಥಿತಿಯಲ್ಲಿ ಇಲ್ಲ. ತಮ್ಮ ತಮ್ಮ ಬೆಂಬಲಿಗರಿಗೆ ತಾವೇ ದುಡ್ಡಿನ ಸಹಾಯ ಮಾಡಿ ತಮ್ಮ ಹೆಸರಿನ ಮೇಲೂ ಸ್ವಲ್ಪ ವೋಟು ಹಾಕಿಸಿ ಗೆಲ್ಲಿಸಿಕೊಂಡು ಬರಬೇಕಾದ ಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇದ್ದಾರೆ.
India Gate: ಹಿಂದೂ ಅವಹೇಳನದ ಇಳಿಜಾರು ಹಾದಿ: ಕಾಂಗ್ರೆಸ್‌ಗೆ ಇಕ್ಕಟ್ಟು
ಅದರಲ್ಲೂ ಮುಖ್ಯಮಂತ್ರಿ ಆಗಿಯೇ ಬಿಡುತ್ತೇವೆ ಎಂಬ ಉಮೇದಿಯಲ್ಲಿರುವ ಸಿದ್ದು ಮತ್ತು ಡಿಕೆಶಿ ದುರ್ಬಲ ದಿಲ್ಲಿ ನಾಯಕತ್ವದ ಕಾರಣದಿಂದ ಒಬ್ಬರ ಅಭ್ಯರ್ಥಿಗಳನ್ನು ಇನ್ನೊಬ್ಬರು ಸೋಲಿಸುವ ಆಟವನ್ನೇನಾದರೂ ಶುರುಮಾಡಿದರೆ ಕಾಂಗ್ರೆಸ್‌ಗೆ ಕೈಗೆ ಬರುತ್ತೆ ಅನ್ನುವ ತುತ್ತು ಬಾಯಿಗೆ ಬರದೇ ಇರಬಹುದು. ಇನ್ನು ಜೆಡಿಎಸ್‌ಗೆ ಒಕ್ಕಲಿಗರ ಭಾಗದಲ್ಲಿ ಸಹಜವಾಗಿ ವೋಟು ಹಾಕಿಸಬಲ್ಲ ದೇವೇಗೌಡರ ಹೆಸರು ಇದೆ. ಆದರೆ ಕನಿಷ್ಠ 50ರಿಂದ 60 ಅಭ್ಯರ್ಥಿಗಳಿಗೆ ದುಡ್ಡು ಕಾಸು ಹೊಂದಿಸುವುದು ಹೇಗೆ ಎಂಬ ತುಮುಲದಲ್ಲಿ ಕುಮಾರಸ್ವಾಮಿ ಇದ್ದಾರೆ. ಅದಕ್ಕಾಗಿಯೇ ಹೈದರಾಬಾದ್‌ಗೆ ಹೋಗಿದ್ದ ಕುಮಾರಣ್ಣ ಕೆ.ಸಿ.ಚಂದ್ರಶೇಖರ ರಾವ್ ಬಳಿ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿಕೊಂಡು ಬಂದಿದ್ದಾರೆ. ಬರೀ ಹವಾ ಮೇಲೆ ಚುನಾವಣೆ ನಡೆಯುವ ದಿನಗಳು ಈಗಿಲ್ಲ. ಆ ಹವಾ ಉಳಿಸಿ ಬೆಳೆಸಿ ಇಂಧನ ಉತ್ಪಾದಿಸಲು ಅಪಾರ ಬಂಡವಾಳ ಕೂಡ ಅನಿವಾರ್ಯ ಆಗಿರುವ ದಿನಗಳು ಇವು.
ಗುಜರಾತಲ್ಲಿ ಅಮಿತ್ ಶಾ ವಿಜಯ!: ಮೋದಿ ಮತ್ತು ಅಮಿತ್ ಶಾ ಎಷ್ಟೇ ಗಳಸ್ಯ ಕಂಠಸ್ಯ ಇದ್ದರೂ ಕೂಡ ಗುಜರಾತ್ ವಿಷಯದಲ್ಲಿ ಪ್ರಧಾನಿ ಮೋದಿ ಅಮಿತ್ ಶಾ ಜೊತೆಗೆ ಆನಂದಿ ಬೆನ್ ಪಟೇಲ್, ಸಿ.ಆರ್. ಪಾಟೀಲ್, ಪುರುಷೋತ್ತಮ ರೂಪಾಲಾ ಹೀಗೆ ಎಲ್ಲರ ಅಭಿಪ್ರಾಯ ಆಲಿಸಿ ನಿರ್ಣಯ ತೆಗೆದುಕೊಳ್ಳುತ್ತಾರೆಯೇ ಹೊರತು ಒಬ್ಬರನ್ನೇ ಕೇಳಿ ನಿರ್ಣಯ ತೆಗೆದುಕೊಳ್ಳುವುದಿಲ್ಲ. 2014ರಲ್ಲಿ ಮೋದಿ ಗುಜರಾತ್ ಬಿಟ್ಟು ಬರುವಾಗ ಅಮಿತ್ ಶಾಗೆ ಇಷ್ಟಇಲ್ಲ ಅಂತ ಗೊತ್ತಿದ್ದರೂ ಆನಂದಿ ಬೆನ್ ಪಟೇಲ್‌ಗೆ ಮುಖ್ಯಮಂತ್ರಿ ಕುರ್ಚಿ ಕೊಟ್ಟು ಬಂದಿದ್ದರು. 2001ರ ಮೋದಿ ಕಾಲದಿಂದಲೂ ಮೋದಿ ನಿಷ್ಠರಲ್ಲಿಯೇ ಎರಡು ಬಣಗಳಿವೆ. ಒಂದು ಅಮಿತ್ ಶಾ ಬಣ, ಇನ್ನೊಂದು ಆನಂದಿ ಬೆನ್ ಪಟೇಲ್ ಬಣ.
ಆದರೆ 2016ರಲ್ಲಿ ಆನಂದಿ ಬೆನ್ ಪಟೇಲ್ ಕೈಯಿಂದ ಪಾಟಿದಾರ ಮೀಸಲಾತಿ ಚಳವಳಿ ನಿಭಾಯಿಸಲು ಆಗದೇ ಇದ್ದಾಗ ಅಮಿತ್ ಶಾ ತಮ್ಮ ಮಿತ್ರ ಜೈನ್ ಸಮುದಾಯದ ವಿಜಯ ರೂಪಾನಿಯನ್ನು ಮುಖ್ಯಮಂತ್ರಿಯಾಗಿ ಕೂರಿಸಿದ್ದರು. 2021ರಲ್ಲಿ ಪಾಟಿದಾರರು ಮುನಿಸಿಕೊಂಡು ಆಪ್ ಕಡೆ ಹೋದಾರು ಎಂದು ಅನ್ನಿಸುತ್ತಿದ್ದಂತೆ ಆನಂದಿ ಬೆನ್ ಪಟೇಲ್ ಆಪ್ತರಾಗಿದ್ದ ಮೊದಲ ಬಾರಿಯ ಶಾಸಕ ಭೂಪೇಂದ್ರ ಭಾಯಿ ಪಟೇಲ್‌ರನ್ನು ಮುಖ್ಯಮಂತ್ರಿ ಮಾಡಿದ್ದರು. ಆದರೆ ಈಗ ಮರಳಿ ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ, ಪ್ರಬಂಧನ ಹೀಗೆ ಎಲ್ಲ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಅಮಿತ್ ಭಾಯಿಗೆ ಕೊಟ್ಟಿದ್ದಾರೆ. ಇವತ್ತಿನ ದಿನಮಾನಗಳಲ್ಲಿ ಸೋಲಿನ ದವಡೆಯಿಂದಲೂ ಗೆಲುವು ಕಸಿದುಕೊಂಡು ಬರುವ ರಣತಂತ್ರ ಹೆಣೆಯುವ ಸಾಮರ್ಥ್ಯ ಇರುವ ಅಮಿತ್ ಶಾರಂಥ ಇನ್ನೊಬ್ಬ ನಾಯಕ ಬರೀ ಬಿಜೆಪಿ ಅಲ್ಲ ಬೇರೆ ಪಕ್ಷಗಳಲ್ಲೂ ಕಾಣುತ್ತಿಲ್ಲ ಬಿಡಿ.
ವಿಜಯ ರೂಪಾನಿ ತೆಗೆದಿದ್ದು ಯಾಕೆ?: 2021ರಲ್ಲಿ ಅರವಿಂದ ಕೇಜ್ರಿವಾಲ್ ಗುಜರಾತ್‌ನ ಲೆಹುವಾ ಪಟೇಲರ ಕೇಂದ್ರ ಖೋಡಲ ಧಾಮ್‌ಗೆ ಹೋಗಿ ಬಂದ ನಂತರ ಪಾಟಿದಾರ ಸಮುದಾಯದ ನಾಯಕ ನರೇಶ್ ಪಟೇಲ್ ಮತ್ತು ಕೇಜ್ರಿವಾಲ್ ನಡುವೆ ಮಾತುಕತೆಗಳು ಆರಂಭ ಆಗಿದ್ದವು. ಅದು ಎಲ್ಲಿಯವರೆಗೆ ಅಂದರೆ ನರೇಶ್ ಪಟೇಲ್‌ರನ್ನು ದಿಲ್ಲಿಯಿಂದ ರಾಜ್ಯಸಭೆಗೆ ಕಳುಹಿಸಿ ಗುಜರಾತ್‌ನಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವುದು. ನರೇಶ್ ಪಟೇಲ್ ಆಶೀರ್ವಾದ ಮತ್ತು ಬೆಂಬಲ ಇದ್ದಿದ್ದರಿಂದಲೇ ಹಾರ್ದಿಕ ಪಟೇಲ್ ಅಷ್ಟೊಂದು ದೊಡ್ಡ ಮೀಸಲಾತಿ ಆಂದೋಲನ ಕಟ್ಟಲು ಸಾಧ್ಯವಾಗಿದ್ದು.
ಪಾಟಿದಾರರಲ್ಲಿ ಪ್ರಭಾವಿ ನರೇಶ್ ಪಟೇಲ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದರೆ 2ರಿಂದ 3 ಪ್ರತಿಶತ ಮಾತ್ರ ಇರುವ ‘ಜೈನ’ ಮುಖ್ಯಮಂತ್ರಿ ಇಟ್ಟುಕೊಂಡು ಎದುರಿಸುವುದು ಕಷ್ಟಅನ್ನುವ ಕಾರಣದಿಂದಲೇ ರಾತ್ರೋರಾತ್ರಿ ಮುಖ್ಯಮಂತ್ರಿ ಬದಲಾಯಿಸುವ ತೀರ್ಮಾನಕ್ಕೆ ಬರಲಾಗಿತ್ತು. ಅದು ಹೇಗೆ ಅಂದರೆ, ಪಾಟಿದಾರರ ಸಮಾವೇಶದಲ್ಲಿ ವಿಜಯ ರೂಪಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಂಡ ನಂತರ 10 ನಿಮಿಷದಲ್ಲಿ ಗುಜರಾತ್ ಬಿಜೆಪಿ ಕಾರ್ಯಾಲಯದಿಂದ ವಿಜಯ ರೂಪಾನಿಗೆ ‘ಭೂಪೇಂದ್ರ ಯಾದವ್ ಕರೆಯುತ್ತಿದ್ದಾರೆ ಬನ್ನಿ’ ಎಂದು ಫೋನ್ ಬರುತ್ತದೆ. ನಂತರ ಅರ್ಧ ಗಂಟೆಯಲ್ಲಿ ರೂಪಾನಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ಹೊರಬರುತ್ತಾರೆ. ಸಂಜೆ ಹೊಚ್ಚ ಹೊಸ ಶಾಸಕ ಭೂಪೇಂದ್ರ ಪಟೇಲ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗುತ್ತಾರೆ. ರಾಜಕೀಯದಲ್ಲಿ ಎರಡು ಹೆಜ್ಜೆ ಮುಂದೆ ಹೋಗಿ ಒಂದು ಹೆಜ್ಜೆ ಹಿಂದೆ ಬರುವವರಿಗೆ ಬಾಳಿಕೆ ಜಾಸ್ತಿ.
2 ತಲೆಮಾರು ಈಗ ತೆರೆಯ ಮರೆಗೆ: ಇಂದಿರಾ ಗಾಂಧಿ ತಮಗಿಂತ ಹಿರಿಯರಾಗಿದ್ದ ಕಾಮರಾಜ್, ನಿಜಲಿಂಗಪ್ಪ, ಎಸ್.ಕೆ.ಪಾಟೀಲ್, ಅತುಲ್ಯ ಘೋಷ್, ನೀಲಂ ಸಂಜೀವ್ ರೆಡ್ಡಿಯನ್ನು ನಿಭಾಯಿಸಲು ಸಾಧ್ಯ ಆಗದೇ 3 ವರ್ಷ ತಡಕಾಡಿ ಕಾಂಗ್ರೆಸ್ ಪಾರ್ಟಿಯನ್ನೇ ಒಡೆಯಬೇಕಾಯಿತು. ಆದರೆ ಮೋದಿ ಮತ್ತು ಅಮಿತ್ ಶಾ ಪಾರ್ಟಿ ಒಡೆಯಲು ಬಿಡದೆ ಪೊಲಿಟಿಕಲಿ ಚೆಕ್ ಮೇಟ್ ಮಾಡಿ ಎರಡು ಬಿಜೆಪಿ ತಲೆಮಾರುಗಳು ತೆರೆಯ ಹಿಂದೆ ಸರಿಯುವಂತೆ ಮಾಡಿದ್ದಾರೆ. ಗುಜರಾತ್ ಬಿಜೆಪಿಯಲ್ಲಿ ತಮಗಿಂತ ಹಿರಿಯರು ಅಥವಾ ಸಮಕಾಲೀನರಾಗಿದ್ದ ಕೇಶುಭಾಯಿ ಪಟೇಲ್, ಕಾಶಿರಾಮ್ ರಾಣಾ, ಸುರೇಶ್ ಮೆಹ್ತಾ, ದಿಲೀಪ್ ಪಾರಿಖ್, ಸಂಜಯ್ ಭಾಯಿ ಜೋಶಿ, ಗೋವರ್ಧನ್ ಝಡಪಿಯಾರನ್ನು ತಣ್ಣಗೆ ಬದಿಗೆ ಸರಿಸಿದರು.
ಆದರೆ ಈಗ ಆಡಳಿತ ವಿರೋಧಿ ಅಲೆ ಅಪ್ಪಳಿಸಿದರೆ ಕಷ್ಟಅನ್ನುವ ಎಚ್ಚರಿಕೆಯಿಂದ ಸುದೀರ್ಘ ಅವಧಿಯವರೆಗೆ ಮಂತ್ರಿ ಆಗಿದ್ದ ನಿತಿನ್ ಪಟೇಲ್‌ರಿಂದ ಹಿಡಿದು ಸ್ವತಃ ಮುಖ್ಯಮಂತ್ರಿ ಆಗಿದ್ದ ವಿಜಯ ರೂಪಾನಿ, ಪಾರ್ಟಿ ಅಧ್ಯಕ್ಷ ಆಗಿದ್ದ ಆರ್.ಸಿ.ಫಾಲ್ದುವರೆಗೆ 9 ಹಿರಿಯರನ್ನು ಮನೆಯಲ್ಲಿ ಕೂರಿಸಿದ್ದಾರೆ. ಉಳಿದ ರಾಜಕಾರಣಿಗಳಂತೆ ಮೋದಿ ಮತ್ತು ಅಮಿತ್ ಶಾ ಅವರಿಗೂ ಕೂಡ ಯಾರ ಮೇಲೂ ವಿಶೇಷ ಮಮಕಾರ ಇಲ್ಲ. ಚುನಾವಣೆ ಗೆಲ್ಲಬೇಕು ಅಷ್ಟೆ. ಅದಕ್ಕೆ ಏನೇನು ಮಾಡಬೇಕೋ ಅದನ್ನು ಮುಲಾಜಿಲ್ಲದೆ ಮಾಡಬೇಕು. ಅದರಲ್ಲಿ ನಮ್ಮವರು ನಿಮ್ಮವರು, ಟೀಕೆ ಟಿಪ್ಪಣಿಗೆಲ್ಲ ಜಾಗವಿಲ್ಲ. ಇವೆಲ್ಲ ಕೆಲವರಿಗೆ ಸರಿ ಅನ್ನಿಸಬಹುದು, ಕೆಲವರಿಗೆ ತಪ್ಪು ಅನ್ನಿಸಬಹುದು.
India Gate: ಡಿಕೆಶಿ ಮರಳಿ ಬನ್ನಿ ಫ್ರೆಂಡ್ಸ್ ರಾಗದ ಹಿಂದೆ..!
ಗುಜರಾತ್: ಸರ್ವೇಗಳೇನು ಹೇಳುತ್ತಿವೆ?: ಗುಜರಾತ್‌ನಲ್ಲಿ ಯಾರಿಗೆ ಎಷ್ಟುಸೀಟು ಅನ್ನುವುದರ ಬಗ್ಗೆ ಈಡೀ ದೇಶದಲ್ಲಿ ಭಾರೀ ಕುತೂಹಲವಿದೆ. ಬಿಜೆಪಿ ಪಾರ್ಟಿಯಿಂದ ಕಳೆದ ವಾರ ನಡೆಸಿರುವ ಆಂತರಿಕ ಸರ್ವೇ ಪ್ರಕಾರ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ನಡುವಿನ ಮತ ವಿಭಜನೆಯಿಂದ ಲಾಭವಾಗಿ 120ರಿಂದ 125 ಸೀಟು ಬರಲಿವೆ. ಕಾಂಗ್ರೆಸ್ 40ರಿಂದ 50 ಸೀಟು ಪಡೆಯಲಿದ್ದು, ಆಮ್ ಆದ್ಮಿ ಪಾರ್ಟಿ 15 ಪ್ರತಿಶತ ವೋಟಿನ ಜೊತೆಗೆ 12ರಿಂದ 15 ಸೀಟು ಪಡೆಯಲಿದೆ. ಆದರೆ ಕಾಂಗ್ರೆಸ್ ನಡೆಸಿರುವ ಸರ್ವೇ ಪ್ರಕಾರ ಕಳೆದ ಬಾರಿ 77 ಪಡೆದಿದ್ದ ಕಾಂಗ್ರೆಸ್ ಈ ಬಾರಿ 64 ಸೀಟು ಪಡೆಯಲಿದ್ದು, ಬಿಜೆಪಿ 90ರಿಂದ 100 ಸೀಟು ಉಳಿಸಿಕೊಳ್ಳಲಿದೆ.
ಆಪ್‌ಗೆ 10ರಿಂದ 12 ಸೀಟು ಸಿಗಬಹುದು. ಆಪ್ ತಾನು ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರೂ 20 ಪ್ರತಿಶತ ವೋಟು, 20ರಿಂದ 25 ಸೀಟು ಗಳಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ನ ಪರ್ಯಾಯ ಜಾಗವನ್ನು ನಿಧಾನವಾಗಿಯಾದರೂ ತುಂಬಿಕೊಳ್ಳಬಹುದು ಎಂಬ ತಯಾರಿಯಲ್ಲಿದೆ. ಒಟ್ಟಾರೆ ಗುಜರಾತ್‌ನಲ್ಲಿ ಹಿಂದುತ್ವ ಮತ್ತು ಮೋದಿ ಮುಖದ ಮೇಲೆ ವೋಟಿಂಗ್ ಆದರೆ ಬಿಜೆಪಿಗೆ ಹೆಚ್ಚು ಲಾಭ ಪಕ್ಕಾ. ಹಿಂದುಳಿದ ವರ್ಗಗಳು ಮತ್ತು ಪಾಟಿದಾರರ ಮಧ್ಯೆ ಬಿರುಕು ಏರ್ಪಟ್ಟು ಜಾತಿ ಸಮೀಕರಣಗಳೇ ಮುಖ್ಯವಾದರೆ ಕಾಂಗ್ರೆಸ್‌ಗೆ ಲಾಭ ಜಾಸ್ತಿ. ಇನ್ನು ಗುಜರಾತಿಗಳು ಬದಲಾವಣೆ ಇರಲಿ, ಎಷ್ಟುಬಾರಿ ಇದೇ ಸರ್ಕಾರ ನೋಡಬೇಕು ಅಂದುಕೊಂಡು ಮತಗಟ್ಟೆಗೆ ಬಂದರೆ ಆಮ್ ಆದ್ಮಿಗೆ ಲಾಭ ಜಾಸ್ತಿ. ಈಗಿನ ಚುನಾವಣೆಗಳು ಟಿ20 ಪಂದ್ಯ ಇದ್ದ ಹಾಗೆ. ಕೊನೆ ಬಾಲ್‌ವರೆಗೆ ಹೀಗೆ ಎಂದು ಹೇಳುವುದು ಅವಸರವಾದೀತು.