ಚೈತ್ರಾ ಬಿಜೆಪಿ ಟಿಕೆಟ್‌ ಡೀಲ್‌ ಕೇಸ್‌: ಎಲೆಕ್ಷನ್‌ ಟಿಕೆಟ್‌ ಪಡೆಯಲು ಹೀಗೂ ಉಂಟೇ, ಪ್ರಶಾಂತ್‌ ನಾತು

By Prashant Natu  |  First Published Sep 17, 2023, 11:16 AM IST

ಚೈತ್ರಾ ಕುಂದಾಪುರ ಪ್ರಕರಣ ರೋಗಲಕ್ಷಣ । ಬಿಜೆಪಿ, ಆರೆಸ್ಸೆಸ್ಸಿಗರ ನಿರ್ಲಕ್ಷ್ಯದಿಂದ ಸಂಭವಿಸಿದ ಭಾನಗಡಿ?


ಬೆಂಗಳೂರು(ಸೆ.17): ದುಡ್ಡು ವಾಪಸ್‌ ಪಡೆಯಲು ಬಿಜೆಪಿಯೊಳಗೆ ಯತ್ನಿಸಿ ವಿಫಲನಾದ ಬಳಿಕ ಗೋವಿಂದ ಪೂಜಾರಿ ಸಂಘದ ಹಿರಿಯರೊಬ್ಬರನ್ನು ಭೇಟಿಯಾಗಿ, ‘ದೂರು ಕೊಟ್ಟರೆ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ನೀವೇ ಕರೆದು ಮಾತನಾಡಿ ದುಡ್ಡು ಕೊಡಿಸಿ’ ಎಂದು ಕೇಳಿಕೊಂಡಿದ್ದಾರೆ. ಆ ನಾಯಕರು, ‘ಮುಚ್ಚಿ ಹಾಕಿದರೆ ಇದು ಅಪಾಯಕಾರಿ. ಎಲ್ಲರಿಗೂ ಒಂದು ಪಾಠ ಆಗಲಿ. ಪೊಲೀಸರಿಗೆ ದೂರು ಕೊಡಿ’ ಎಂದಿದ್ದಾರೆ. ಆಗ ಗೋವಿಂದ ಪೂಜಾರಿ ದೂರು ಕೊಟ್ಟಿದ್ದಾರೆ.

ಯಾರೋ ಮರಿ ಪುಡಾರಿ ರಾಜಕಾರಣಿಗಳು ನಕಲಿ ಪಾತ್ರಗಳನ್ನು ಸೃಷ್ಟಿಸಿ ಇನ್ನೊಬ್ಬ ಮಹತ್ವಾಕಾಂಕ್ಷಿ ಟಿಕೆಟ್ ಆಸಕ್ತನಿಗೆ ವಂಚಿಸಿದ್ದರೆ ಇಷ್ಟೊಂದು ದೊಡ್ಡ ಸುದ್ದಿ ಆಗುತ್ತಿರಲಿಲ್ಲವೇನೋ. ಇಂಥದ್ದು ನಡೆಯುತ್ತಿರುತ್ತದೆ ಎಂದು ಒಮ್ಮೆ ದಿಟ್ಟಿಸಿ ಓದಿ-ನೋಡಿ ಜನರು ಸುಮ್ಮನಾಗುತ್ತಿದ್ದರು. ಆದರೆ ಒಂದು ಸಿದ್ಧಾಂತದ ಪರಿವಾರಕ್ಕೆ ಸೇರಿದ, ಮಾತೆತ್ತಿದರೆ ಋಷಿ ಮುನಿಗಳು, ಅಪರಿಗ್ರಹ, ವಿಶ್ವ ಗುರು ಅಂತೆಲ್ಲ ಮಾತನಾಡುವ ವ್ಯಕ್ತಿಗಳ ಗುಂಪು ಕಲೆತು ಹೀಗೆಲ್ಲ ಮಾಡಲು ಸಾಧ್ಯವೇ? ಅವರಿಗೆ ಮನಸ್ಸು ಹೇಗೆ ಬರುತ್ತದೆ? ನೈತಿಕತೆಯ ಬಗ್ಗೆ ಮಾತನಾಡುವವರು ಇಷ್ಟೊಂದು ಪ್ರಪಾತಕ್ಕೆ ಜಾರಬಹುದಾ ಎನ್ನುವುದೇ ಈ ಪ್ರಕರಣದ ಬಗ್ಗೆ ಇಷ್ಟೊಂದು ಚರ್ಚೆ ಆಗಲು ಮುಖ್ಯ ಕಾರಣ. ಜಾತಿಗಳ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪ್ರವರ್ಧಮಾನಕ್ಕೆ ಬಂದ ಅನೇಕ ವ್ಯಕ್ತಿ ಮತ್ತು ಸಂಘಟನೆಗಳು ಕೆಲವೊಮ್ಮೆ ವಿಚಾರ ಜನರಿಗೆ ಇಷ್ಟವಾದರೂ ಆಚಾರ ಶುದ್ಧಿ ಇಲ್ಲ ಎಂಬ ಕಾರಣಕ್ಕೆ ಪ್ರಸ್ತುತತೆ ಕಳೆದುಕೊಂಡಿವೆ. ಆದರೆ ಆರ್‌ಎಸ್ಎಸ್, ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಮಾರ್ಕ್ಸ್‌ವಾದಿಗಳು, ಮಾವೋವಾದಿಗಳ ಸಿದ್ಧಾಂತವನ್ನು ಜನರು ಒಪ್ಪಿದರೂ, ಒಪ್ಪದಿದ್ದರೂ, ಆ ವಿಚಾರ ಹೇಳುವ ಬಹುಪಾಲು ವ್ಯಕ್ತಿಗಳಲ್ಲಿ ಮಾತು, ಕೃತಿ ಮತ್ತು ಹಣಕಾಸಿನ ವಿಷಯದಲ್ಲಿ ಪರಿಶುದ್ಧತೆ ಇರುತ್ತದೆ ಅನ್ನುವುದೇ ಈ ಸಂಘಟನೆಗಳು ಹತ್ತಿರ ಹತ್ತಿರ ನೂರು ವರ್ಷ ಉಳಿಯಲು ಮತ್ತು ಬೆಳೆಯಲು ಮುಖ್ಯ ಕಾರಣ. ಆದರೆ ಇವೇ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದು, ದಿನ ಬೆಳಗಾದರೆ ಭಾಷಣ, ಸಂಘಟನೆ, ಹೋರಾಟ ಎಂದು ಹೋಗುತ್ತಿದ್ದ ಚೈತ್ರಾಳ ಗುಂಪು ವಂಚಕರ ಜಾಲವಾಗಿ ಬದಲಾದದ್ದು ಏಕೆ ಮತ್ತು ಹೇಗೆ ಎಂಬುದರ ಆತ್ಮವಿಮರ್ಶೆ ನಡೆಯಬೇಕಿದೆ. ಈ ಪ್ರಕರಣ ರೋಗದ ಗುಣಲಕ್ಷಣವನ್ನು ಬಹಿರಂಗಪಡಿಸಿದೆ. ಈ ಜಾಲವನ್ನು ಪಕ್ಕಕ್ಕೆ ತಳ್ಳಿ, ಇದು ನಮಗೆ ಸಂಬಂಧಿಸಿದ್ದಲ್ಲ ಎಂದು ಹೇಳಿ, ನೋವನ್ನು ನಿರ್ಲಕ್ಷಿಸಿದರೂ ಕೂಡ, ಈ ರೋಗ ಪಸರಿಸದಂತೆ ತಡೆಯಬೇಕಾದರೆ ಮದ್ದು ಮಾಡುವ ಅವಶ್ಯಕತೆ ಇದೆ. ಇದು ಮೇಲೆ ಹೆಸರಿಸಿದ ಸಂಘಟನೆಗಳ ವಿಷಯ ಮಾತ್ರವಲ್ಲ. ಸಾಮಾಜಿಕ ಜೀವನದಲ್ಲಿರುವ ಎಲ್ಲಾ ಆಯಾಮದ ಸಂಘಟನೆಗಳು ಎದುರಿಸುತ್ತಿರುವ ಸಂಕಟ.

Latest Videos

undefined

ಬಿಜೆಪಿ ಜತೆ ಮೈತ್ರಿಗೆ ಸಿದ್ಧರಾದ್ರಾ ದೊಡ್ಡಗೌಡರು? ಮೋದಿ ಕರೆ ಬಂದ ಬೆನ್ನಲ್ಲೇ ದಿಲ್ಲಿಗೆ ಹೋಗಿದ್ದೇಕೆ?

ಏಪ್ರಿಲ್‌ನಲ್ಲಿಯೇ ಗೊತ್ತಾಗಿತ್ತು

ಬಹುತೇಕ ಮಾರ್ಚ್‌ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ ತನ್ನ ಹೆಸರು ದಿಲ್ಲಿಗೆ ಕಳುಹಿಸದೆ ಇದ್ದಾಗಲೇ ಗೋವಿಂದ ಪೂಜಾರಿಗೆ ಚೈತ್ರಾ ಮತ್ತು ತಂಡ ತನಗೆ ಮೂರು ನಾಮ ಹಾಕಿದೆ ಎಂಬುದು ಗೊತ್ತಾಗಿತ್ತಂತೆ. ಅದನ್ನು ಉಡುಪಿ ಜಿಲ್ಲೆಯ ಕೆಲ ಬಿಜೆಪಿ ನಾಯಕರ ಗಮನಕ್ಕೆ ಅವರು ತಂದರಾದರೂ ಚುನಾವಣೆಯ ಗಡಿಬಿಡಿಯಲ್ಲಿ ಯಾರೂ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಘಂಟಿಹೊಳಿಗೆ ಟಿಕೆಟ್ ನೀಡಿದಾಗ ರಾಜ್ಯ ಬಿಜೆಪಿ ನಾಯಕರು ಬೈಂದೂರಿನಲ್ಲಿ ನೀವು ಓಡಾಡಬೇಕು ಎಂದು ಗೋವಿಂದ ಪೂಜಾರಿಗೆ ಹೇಳಿದ್ದಾರೆ. ಆಗ ಅವರು ತನಗಾದ ಮೋಸದ ಕತೆ ಹೇಳಿಕೊಂಡಿದ್ದಾರೆ. ಬಿಜೆಪಿ ನಾಯಕರು ಚುನಾವಣೆ ನಂತರ ಅವರನ್ನು ಕೂರಿಸಿ ಮಾತನಾಡೋಣ, ಈಗ ಓಡಾಡಿ ಎಂದಿದ್ದಾರೆ. ಹೀಗಾಗಿ ಗೋವಿಂದ ಪೂಜಾರಿ ಪ್ರಚಾರ ಕೂಡ ಮಾಡಿದ್ದಾರೆ. ಆಮೇಲೆ ಕೆಲ ಸಂಘ ಪರಿವಾರದ ಹಿರಿಯರು ಅಭಿನವ ಹಾಲಶ್ರೀ, ಚೈತ್ರಾ ಮತ್ತು ಗಗನ್‌ರನ್ನು ಕೂರಿಸಿ ಬುದ್ಧಿ ಹೇಳಿ ದುಡ್ಡು ವಾಪಸ್ ಕೊಡಿ ಎಂದು ಹೇಳಿದ್ದಾರೆ. ಇವರು ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಎಂದು ಹೇಳಿ ದಿನ ದೂಡಿದ್ದಾರೆ. ಕೊನೆಗೆ ಗೋವಿಂದ ಪೂಜಾರಿ ಪೊಲೀಸರಿಗೆ ದೂರು ಕೊಡುವ ಅರ್ಜಿಯ ಪ್ರತಿಯನ್ನು ಚೈತ್ರಾಗೆ ವಾಟ್ಸ್ಅಪ್ ಮಾಡಿದಾಗ ಅವರ ಆಫೀಸಿಗೆ ಹೋಗಿ ವಿಷ ಕುಡಿಯುತ್ತೇವೆ ಎಂದು ನಾಟಕ ಮಾಡಿ ಹೆದರಿಸಿದ್ದಾರೆ. ಇನ್ನೊಂದು ಕಡೆ ಹಾಲಶ್ರೀ ಒಂದೂವರೆ ಕೋಟಿಯನ್ನು ದಿಲ್ಲಿಯ ಆ ನಾಯಕರಿಗೆ ಕೊಟ್ಟಿದ್ದೇವೆ, ಈ ನಾಯಕರಿಗೆ ಕೊಟ್ಟಿದ್ದೇವೆ ಎಂದು ಕತೆ ಹೇಳುತ್ತಲೇ, ನಿಮ್ಮ ದುಡ್ಡು 45 ದಿನದಲ್ಲಿ ಕೊಡುತ್ತೇನೆ ಎಂದು ಕಾಲಹರಣ ಮಾಡಿದ್ದಾರೆ. ಇಷ್ಟಾದ ಮೇಲೂ ಗೋವಿಂದ ಪೂಜಾರಿ ಸಂಘದ ಹಿರಿಯರೊಬ್ಬರನ್ನು ಭೇಟಿಯಾಗಿ, ‘ದೂರು ಕೊಟ್ಟರೆ ಸಂಘಟನೆಗೆ ಕೆಟ್ಟ ಹೆಸರು ಬರುತ್ತದೆ. ನೀವೇ ಕರೆದು ಮಾತನಾಡಿ ದುಡ್ಡು ಕೊಡಿಸಿ’ ಎಂದು ಕೇಳಿಕೊಂಡಾಗ ಆ ನಾಯಕರು, ‘ಮುಚ್ಚಿಹಾಕಿದರೆ ಇದು ಅಪಾಯಕಾರಿ. ಎಲ್ಲರಿಗೂ ಒಂದು ಪಾಠ ಆಗಲಿ. ಪೊಲೀಸರಿಗೆ ಹೋಗಿ ದೂರು ಕೊಡಿ’ ಎಂದಿದ್ದಾರೆ. ಆಗ ಗೋವಿಂದ ಪೂಜಾರಿ ದೂರು ಕೊಟ್ಟಿದ್ದಾರೆ. ಕಪಾಟಿನಲ್ಲಿದ್ದ ಕೊಳೆತ ಅಸ್ಥಿಪಂಜರಗಳು ಹೊರಬಂದಿದ್ದೇ ಆಗ.

ಹೆಜ್ಜೆ ಹೆಜ್ಜೆಗೂ ಇಂಥವರು ಇದ್ದಾರೆ

ಇಂದು ರಾಜಕಾರಣ ಅಂದರೆ ಹೆಜ್ಜೆಹೆಜ್ಜೆಗೆ ಅಗ್ನಿಪರೀಕ್ಷೆ. ನೀವು ಈಗ ರಾಜಕಾರಣ ಮಾಡುವ ಯಾರನ್ನಾದರೂ ಕೇಳಿನೋಡಿ, ‘ಅಯ್ಯೋ ಎಲ್ಲರನ್ನೂ ಸಂಭಾಳಿಸುವುದು, ಕೆಲಸ ಮಾಡಿಕೊಡುವುದು, ಕೈಕಾಲು ಮುಗಿಯುವುದು, ಇಷ್ಟೆಲ್ಲಾ ಮಾಡಿ ಅದೇ ಜನರಿಗೆ ಹೋಗಿ ಹಣ ಕೊಟ್ಟು ಗೆಲ್ಲಿಸಿ ಎಂದು ಬೇಡೋದು, ಇದೆಲ್ಲಾ ಯಾಕೆ ಬೇಕು ಸಹವಾಸ’ ಅನ್ನುತ್ತಾರೆ. ಆದರೆ ಅಲ್ಲಿರುವ ಅಧಿಕಾರ, ದುಡ್ಡು, ಗತ್ತು, ಪ್ರತಿಷ್ಠೆಯಿಂದಾಗಿ ಬೇರೆ ಕ್ಷೇತ್ರಗಳಲ್ಲಿ ಹೆಸರು ಹಾಗೂ ದುಡ್ಡು ಮಾಡಿದವರಿಗೆ ಪೊಲಿಟಿಕ್ಸ್‌ನ ಗ್ಲಾಮರ್ ಕೈಬೀಸಿ ಕರೆಯುತ್ತದೆ. ಆದರೆ ರಾಜಕೀಯಕ್ಕೆ ಹೇಗೆ ಬರಬೇಕು ಎಂಬ ಮಾರ್ಗ ಗೊತ್ತಿರುವುದಿಲ್ಲ. ಬಿಸಿನೆಸ್‌ನಲ್ಲಿ ಹೇಗೆ ದುಡ್ಡು ಹಾಕಿ ದುಡ್ಡು ತೆಗೆಯಬಹುದೋ ಹಾಗೆಯೇ ಇಲ್ಲೂ ಮಾಡಿದರೆ ಟಿಕೆಟ್‌ ಸಿಗುತ್ತದೆ ಎಂದುಕೊಳ್ಳುತ್ತಾರೆ. ಇವನ್ನೆಲ್ಲ ನಯ ನಾಜೂಕಿನಿಂದ ಮಾಡಿ, ಟಿಕೆಟ್ ಕೊಡಿಸುವುದರಿಂದ ಹಿಡಿದು ಪ್ರಚಾರ ಮಾಡಿ ಬೂತ್ ಏಜೆಂಟ್‌ವರೆಗೆ ಹೊಂದಿಸಿಕೊಡುವ ಹೈಫೈ ದಲ್ಲಾಳಿಗಳು ಪೊಲಿಟಿಕಲ್ ಕನ್ಸಲ್ಟೆನ್ಸಿಗಳ ಮೂಲಕ ನಡೆಸುತ್ತಾರೆ. ಇನ್ನು ಕೆಲವರು ಹಣ ತೆಗೆದುಕೊಂಡು, ಟಿಕೆಟ್ ಕೊಡಿಸಲು ಆಗದೇ ಇದ್ದರೆ ದುಡ್ಡು ವಾಪಸ್ ಕೊಡುತ್ತಾರೆ. ಅವರು ಒಂದು ರೀತಿ ‘ಪ್ರಾಮಾಣಿಕ’ ಏಜೆಂಟರು. ಆದರೆ ಗೋವಿಂದ ಪೂಜಾರಿಯ ದೂರು ನೋಡಿದರೆ ಚೈತ್ರಾ ಮತ್ತು ತಂಡ ಮಾಡಿದ್ದು ವಂಚನೆ. ಮೋಸಕ್ಕೆ ಒಳಗಾಗುವ ಗೋವಿಂದ ಪೂಜಾರಿಯಂಥ ಮಹತ್ವಾಕಾಂಕ್ಷಿ ಮುಗ್ಧರು ಇರುವವರೆಗೆ ಮೋಸ ಮಾಡುವವರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ ಬಿಡಿ. ಅದು ಒಂದು ರೀತಿ ಬೇಡಿಕೆ ಮತ್ತು ಪೂರೈಕೆಯ ಚಕ್ರವಿದ್ದ ಹಾಗೆ.

ನಮ್ಮನ್ನು ಆಳುವವರು ಇವರು

ರಾಜನಾಗಬೇಕು ಅನ್ನುವವನಿಗೆ ನೀತಿ, ನಿಯತ್ತು, ಕರುಣೆ, ತಾಳ್ಮೆ, ಪರಿಶ್ರಮ ಈ ಗುಣಗಳು ಇರಲೇಬೇಕು. ಆದರೆ ಈಗ ನಮ್ಮನ್ನು ಆಳುವವರಿಗೆ ಅದೆಲ್ಲ ಬೇಕಾಗಿಲ್ಲ ಮತ್ತು ಅವರಲ್ಲಿ ಇವೆಲ್ಲ ಇರೋದಿಲ್ಲ ಎಂಬುದು ಬೇರೆ ವಿಷಯ. 2015ರ ಆಸುಪಾಸು. ಬೆಂಗಳೂರಿನ ಒಬ್ಬ ವಂಚಕ ಸುಮಾರು 15 ಶಾಸಕರಿಗೆ ಪತ್ರಕರ್ತರ ಹೆಸರು ಬಳಸಿ ಫೋನ್ ಮಾಡುತ್ತಾನೆ. ಎಷ್ಟು ದಿನ ಹೀಗೆ ಶಾಸಕರಾಗಿಯೇ ಇರುತ್ತೀರಿ? ಮಂತ್ರಿ ಆಗಿ. ನನಗೊಬ್ಬರು ದಿಲ್ಲಿಯಲ್ಲಿ ಪರಿಚಯದ ವ್ಯಕ್ತಿ ಇದ್ದಾರೆ. ಅವರು ಮಾಡಿಸುತ್ತಾರೆ ಅನ್ನುತ್ತಾರೆ. ಅನುಮಾನ ಬಂದು ಕೆಲವರು ಆ ಪತ್ರಕರ್ತರಿಗೆ ಕಾಲ್ ಮಾಡಿದಾಗ ಅದು ಸುಳ್ಳು ಕರೆ ಎಂದು ಗೊತ್ತಾಗುತ್ತದೆ. ಅಲ್ಲಿಗೇ ಸುಮ್ಮನಾಗುತ್ತಾರೆ. ಆದರೆ ಒಬ್ಬ ಶಾಸಕಿ ಹಿಂದೆಮುಂದೆ ನೋಡದೆ ಮಂತ್ರಿ ಆಗುತ್ತೇನೆ ಎಂಬ ಉತ್ಸಾಹದಲ್ಲಿ ದಿಲ್ಲಿ ವ್ಯಕ್ತಿ ಫೋನ್ ಮಾಡಿ ಹೇಳಿದ ಜಾಗಕ್ಕೆ ಹೋಗಿ ಮೂರನೇ ವ್ಯಕ್ತಿಯ ಕೈಗೆ ದುಡ್ಡು ಕೊಟ್ಟು ಬರುತ್ತಾರೆ. ಎರಡು ತಿಂಗಳಾದರೂ ಮಂತ್ರಿ ಸ್ಥಾನ ಬಿಡಿ, ದಿಲ್ಲಿಯಿಂದ ಫೋನು ಕೂಡ ಬರುವುದಿಲ್ಲ. ಕೊನೆಗೆ ನಂಬರ್ ಜಾಡು ಹಿಡಿದು ಪೊಲೀಸರಿಗೆ ದೂರು ಕೊಟ್ಟಾಗ ಆ ವಂಚಕ ಪ್ರತಿದೂರು ಕೊಟ್ಟು, ಕೊನೆಗೆ ಆ ಶಾಸಕರು ವಂಚಕನೊಂದಿಗೇ ಸಂಧಾನ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಈಗ ಹೇಳಿ ತಪ್ಪು ಯಾರದು? ಅದಕ್ಕೇ ಆ ಗಾದೆ ಹುಟ್ಟಿಕೊಂಡಿರಬೇಕು- ಕೊಟ್ಟವನು ಕೋಡಂಗಿ, ಇಸಕೊಂಡವನು ಈರಭದ್ರ ಅಂತ.

India Gate: ಏಕರೂಪ ಸಂಹಿತೆ ದ್ವಂದ್ವದಲ್ಲಿ ಬಿಜೆಪಿ: ಪ್ರಶಾಂತ್‌ ನಾತು

ಹೀಗೂ ಇರುತ್ತಾರೆ ವಂಚಕರು

ಹತ್ತು ಹನ್ನೆರಡು ವರ್ಷ ಹಿಂದಿನ ಮಾತು. ಗಣಿ ವ್ಯಾಪಾರ ಮಾಡುತ್ತಿದ್ದ ಒಬ್ಬ ರಾಜಕಾರಣಿಗೆ ಒಂದು ಪಾರ್ಟಿಯಿಂದ ಇನ್ನೊಂದು ಪಾರ್ಟಿಗೆ ಹೋಗಬೇಕಿತ್ತು. ಆಗ ಭೇಟಿಯಾದ ಒಬ್ಬ ದಲ್ಲಾಳಿಯು ಪಾರ್ಟಿಯ ಮುಖ್ಯಸ್ಥರು ಇಲ್ಲದ ಸಮಯದಲ್ಲಿ ಈ ರಾಜಕಾರಣಿಯನ್ನು ಮನೆ ಒಳಗೆ ಕರೆದುಕೊಂಡು ಹೋಗಿ ರೌಂಡ್ ಹೊಡೆಸಿದ್ದಕ್ಕೆ 5 ಲಕ್ಷ ರು., ನಾಳೆ ಭೇಟಿ ಮಾಡಿಸಲು 20 ಲಕ್ಷ ರು. ಕೊಡಿ ಎಂದನಂತೆ. ವ್ಯಾಪಾರಿ ದುಡ್ಡು ಕೊಟ್ಟಿದ್ದಾರೆ. ಆದರೆ ಭೇಟಿಗೆಂದು ಹೋದಾಗ ಪಾಪ ಏನೂ ಗೊತ್ತಿಲ್ಲದ ದೊಡ್ಡ ನಾಯಕರು ಎಲ್ಲರಿಗೂ ಮಾಡುವಂತೆ ಕೂರಿಸಿ ಚಹಾ ಕುಡಿಸಿ ಫೋಟೋ ತೆಗೆಸಿ ಕಳುಹಿಸಿದ್ದಾರೆ. ಅಷ್ಟಕ್ಕೇ ಈತ ಕೊಟ್ಟಿದ್ದು 20 ಲಕ್ಷ ಹಣ. ಅಳುವಂತೆಯೂ ಇಲ್ಲ ನಗುವಂತೆಯೂ ಇಲ್ಲ. ಇನ್ನೊಬ್ಬ ದಲ್ಲಾಳಿ ಮಹಾಶಯ ಇದ್ದ. ಶುಭ್ರ ವೇಷ, ಹಣೆಯಲ್ಲಿ ಕುಂಕುಮ. ದಿಲ್ಲಿಯಲ್ಲಿ ದೊಡ್ಡ ದೊಡ್ಡವರ ಮನೆಗೆ ಹೋಗುವುದು, ಫೋಟೋ ತೆಗೆಸಿಕೊಳ್ಳುವುದು, ಕರ್ನಾಟಕಕ್ಕೆ ಬಂದು ಮರಿ ನಾಯಕರಿಗೆ ತೋರಿಸಿ ಅದು ಮಾಡಿಸುತ್ತೇನೆ ಇದು ಮಾಡಿಸುತ್ತೇನೆ ಎಂದು ಹೇಳಿ ದುಡ್ಡು ತೆಗೆದುಕೊಳ್ಳೋದು ಇದೇ ಅವನ ಕೆಲಸ. ಅವನನ್ನು ನಂಬಿದವರು ಹೇಗಿದ್ದರೂ ಕೊಡುವುದು ಕಪ್ಪು ಹಣ. ಕೊಟ್ಟ ನಂತರ ಬಾಯಿ ಬಡಿದುಕೊಳ್ಳಬೇಕಷ್ಟೆ. ಲೆಕ್ಕ ಇಲ್ಲದ ಹಣಕ್ಕೆ ದೂರು ಕೊಡುವುದು ಹೇಗೆ? ತಮಾಷೆ ಏನೆಂದರೆ, ಯಾವುದೋ ಪ್ರಕರಣದಲ್ಲಿ ಒಳಗೆ ಹೋಗಿ ಮುದ್ದೆ ಮುರಿದು ಬಂದ ಆ ದಲ್ಲಾಳಿ ಅಚಾನಕ್ಕಾಗಿ ಕಾಫಿಗೆ ಸಿಕ್ಕಿದ್ದ. ಆಗ ಹೇಳಿದ್ದೇನು ಗೊತ್ತೇ? ‘ನೋಡ್ರಿ, ದುಡಿದು ದುಡ್ಡು ಮಾಡುವವರಿಂದ ತೆಗೆದುಕೊಂಡಿದ್ದೇನಾ? ಇಲ್ಲ ತಾನೇ. ಅವರು ಮಾಡಿದ್ದು ಕಪ್ಪು ಹಣ, ಕೊಡುತ್ತಾರೆ ಬಿಡಿ. ಆಮೇಲೆ ಅನುಭವಿಸುತ್ತಾರೆ. ಜನಸಾಮಾನ್ಯರಿಗೇನೂ ತೊಂದರೆ ಆಯ್ತಾ ಇಲ್ಲವಲ್ಲ!’ ತಾತ್ಪರ್ಯ ಇಷ್ಟೆ- ರಾಜಕೀಯಕ್ಕೆ ಬರುವವರು ದಲ್ಲಾಳಿಗಳಿಂದ ದೂರವಿರಿ.

ಪ್ರಚಾರಕ ಅಂದರೆ ಯಾರು?

ಒಂದು ಊರಿನಿಂದ ಇನ್ನೊಂದು ಊರಿಗೆ ತಿರುಗಾಡಿ ಹಿಂದುತ್ವ, ಬದ್ಧತೆ ಎಂದೆಲ್ಲ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಮತ್ತು ಗಗನ್ ಇಬ್ಬರೂ ಕೂಡ ಒಂದು ಕಾಲದಲ್ಲಿ ವಿದ್ಯಾರ್ಥಿ ಪರಿಷತ್ತಿನಲ್ಲಿ ಕೆಲಸ ಮಾಡಿದವರಂತೆ. ಅಂದರೆ ಆರ್‌ಎಸ್‌ಎಸ್‌ ಪ್ರಚಾರಕರು ಮತ್ತು ಆ ವ್ಯವಸ್ಥೆಯನ್ನು ತಿಳಿದವರು. ಪ್ರಚಾರಕರು ಎಂದರೆ ಸಂಘಕ್ಕಾಗಿ ಮನೆ ಬಿಟ್ಟು ಬಂದು ಮದುವೆ ಆಗದೆ ಪೂರ್ಣ ಕಾಲ ಒಂದು ಪೈಸೆ ಗೌರವಧನ ತೆಗೆದುಕೊಳ್ಳದೆ ಸಂಘಟನೆಯ ಪ್ರಚಾರ ಮತ್ತು ಪ್ರಸಾರಕ್ಕೋಸ್ಕರ ನಿರಂತರ ಪ್ರವಾಸ ಮಾಡುವವರು. ಒಂದು ರೀತಿ ಕಾವಿ ಹಾಕಿಕೊಳ್ಳದ ಸನ್ಯಾಸಿಗಳಿವರು. ಇಂಥ ಪ್ರಚಾರಕರ ಹೆಸರಿನಲ್ಲಿ ಚೈತ್ರಾ ಮತ್ತು ಗಗನ್ ವಂಚನೆಗೆ ಹೋಗುತ್ತಾರೆಂದರೆ ಇದು ಕೇವಲ ವ್ಯಕ್ತಿಗಳ ದೋಷ ಅಲ್ಲ. ವ್ಯಕ್ತಿತ್ವದ ನಿರ್ಮಾಣಕ್ಕೆ ಹೊರಟ ಸಂಘಟನೆಗಳು ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ತರಬೇತಿಯ ಮಟ್ಟದಲ್ಲೋ ಅಥವಾ ತರಬೇತಿ ಕೊಡುವವರ ಮಟ್ಟದಲ್ಲೋ ದೋಷವುಂಟಾಗಲು ಅವಕಾಶ ನೀಡುತ್ತಿರುವಂತೆ ಕಾಣಿಸುತ್ತಿದೆ. ಅಂಥ ದೋಷವನ್ನು ಗುರುತಿಸಿ ಸುಧಾರಿಸುವುದು ಜಾಣತನ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಇಲ್ಲ ಎಂಬುದು ಸಾರ್ವತ್ರಿಕ ಸತ್ಯ.

click me!