
ಅಲೂಗಡ್ಡೆಯಲ್ಲಿ ಮೂಡಿಬಂದ ದೇವರ ರೂಪವನ್ನು ನೋಡಲು ಜನ ಮುಗಿಬಿದ್ದಂತಹ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಸಂಭಾಲ್‌ನ ದೇಗುಲವೊಂದರಲ್ಲಿ ನಡೆದಿದೆ. ಇಲ್ಲಿನ ತುಳಸಿ ಮಾನಸ ದೇಗುಲಕ್ಕೆ ಭಕ್ತರೊಬ್ಬರು ಈ ಅಲೂಗಡ್ಡೆಯಲ್ಲಿ ಮೂಡಿದ ದೇವರ ರೂಪವನ್ನು ತಂದು ನೀಡಿದ್ದು, ಇದನ್ನು ನೋಡಲು ಭಕ್ತರು ಗುಂಪು ಗುಂಪಾಗಿ ದೇಗುಲಕ್ಕೆ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ತುಳಸಿ ಮಾನಸ ದೇಗುಲದ ರಾಮ ದರ್ಬಾರ್‌ನಲ್ಲಿ ಇರಿಸಲಾಗಿದ್ದು, ಈ ಆಲೂಗಡ್ಡೆಯನ್ನು 'ದೇವರ ಅವತಾರ' ಎಂದು ಪರಿಗಣಿಸಲಾಗಿದೆ. ಹೀಗಾಗಿ ಹತ್ತಿರದ ಮತ್ತು ದೂರದ ಭಕ್ತರು ಇದನ್ನು ನೋಡಲು ಆಗಮಿಸುತ್ತಿದ್ದಾರೆ.
ಕಳೆದ ವರ್ಷ ಗಲಭೆಯಿಂದ ಸುದ್ದಿಯಾಗಿದ್ದ ಸಂಭಾಲ್
ಕಳೆದ ವರ್ಷ ನವೆಂಬರ್ 24 ರಂದು ಸಂಭಾಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ನಂತರ ಇಲ್ಲಿ ಗಲಭೆ ಭುಗಿಲೆದ್ದಿತ್ತು, ನಂತರ ಇಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಈಗ ಇಲ್ಲಿನ ದೇಗುಲದಲ್ಲಿ ಅಲೂಗಡ್ಡೆಯಲ್ಲಿ ಮೂಡಿಬಂದ ದೇವರ ಪ್ರತಿರೂಪವನ್ನು ಇಡಲಾಗಿದೆ. ಈ ಬಗ್ಗೆ ದೇವಾಲಯದ ಮಹಾಂತ್ (ಪ್ರಧಾನ ಅರ್ಚಕ) ಶಂಕರ್ ದಾಸ್ ಪ್ರತಿಕ್ರಿಯಿಸಿದ್ದು, ದೇವರ ಹೋಲಿಕೆ ಇರುವ ಆಲೂಗಡ್ಡೆ ದೇವರ ಅವತಾರದ ಒಂದು ರೂಪವಾಗಿದೆ. ಇದು ವಂಶ್ ಗೋಪಾಲ್ ತೀರ್ಥ ಬಳಿಯ ಖೇಮಾ ಗ್ರಾಮದಲ್ಲಿ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಭಲ್ ಮಸೀದಿ ಪ್ರತಿ ಹೆಜ್ಜೆಯಲ್ಲೂ ದೇವಸ್ಥಾನ ಇರುವ ಸಾಕ್ಷ್ಯ ಪತ್ತೆ: ಸಮೀಕ್ಷೆ ವರದಿಯಲ್ಲಿದೆ ವಿವರ
ನಂದಿ ಶಿವ ಆಮೆಯನ್ನು ಹೋಲುವ ರೂಪ
ಅಲ್ಲಿ ದರ್ಶನಕ್ಕೆ ಬಂದಿದ್ದ ಒಬ್ಬರು ಆಲೂಗಡ್ಡೆಯಲ್ಲಿ ದೇವರ ರೂಪ ಕಾಣಿಸಿಕೊಂಡಿದೆ ಎಂದು ಹೇಳಿದರು. ಆದ್ದರಿಂದ ನಾವು ಅದನ್ನು ದೇವಾಲಯದಲ್ಲಿ ಸ್ಥಾಪಿಸಲು ನಿರ್ಧರಿಸಿದೆವು. ಭಗವಾನ್ ಕಲ್ಕಿ ಸಂಭಾಲ್‌ನಲ್ಲಿ ತನ್ನ ಅವತಾರವನ್ನು ತೆಗೆದುಕೊಳ್ಳುತ್ತಾನೆ ಎಂದು ನಂಬಿಕೆ ಇರುವುದರಿಂದ ಈ ದೇವರ ಅಭಿವ್ಯಕ್ತಿಯನ್ನು ಅವನ ಆಗಮನದ ಮೊದಲ ಸಂಕೇತ ಎಂದು ನೋಡಲಾಗುತ್ತಿದೆ ಎಂದು ಮಹಾಂತ್ ಶಂಕರ್ ದಾಸ್ ಹೇಳಿದ್ದಾರೆ. ಈ ಪವಿತ್ರ ಮೂರ್ತಿಯೂ ಹೋಳಿ ಹಬ್ಬಕ್ಕೆ ಮೆರೆಗು ನೀಡಿದೆ (14ರಂದು ಹೋಳಿ ಹಬ್ಬ ನಡೆಯಲಿದೆ) ಅಲೂಗಡ್ಡೆಯಲ್ಲಿ ಮೂಡಿ ಬಂದಿರುವ ರೂಪವೂ ನಂದಿ, ಶಿವ ಹಾಗೂ ಆಮೆಯನ್ನು ಹೋಲುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈ ದೇಗುಲಕ್ಕೆ ಆಗಮಿಸಿದ ಭಕ್ತರಲ್ಲಿ ಒಬ್ಬರಾದ ಮೋಹಿತ್ ರಸ್ತೋಗಿ ಎಂಬುವವರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ತುಳಸಿ ಮಾನಸ ದೇಗುಲದಲ್ಲಿ ದೇವರು ಆಲೂಗಡ್ಡೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುದ್ದಿ ಕೇಳಿ ಇಲ್ಲಿಗೆ ಬಂದಿದ್ದು ದೇವರನ್ನು ನೋಡಿದೆ. ಇದನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ಭಗವಾನ್ ಕಲ್ಕಿಯ ಆಗಮನ ಹತ್ತಿರದಲ್ಲಿದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.
ಸಂಭಲ್ ದಂಗೆಕೋರರಿಂದಲೇ ಆಸ್ತಿ ಹಾನಿಯ ಮೊತ್ತ ವಸೂಲಿ!
ಹೋಳಿ ಆಚರಣೆಗೆ ಭಾರೀ ಭದ್ರತೆ
ಕೋಮು ಸೂಕ್ಷತೆ ಹೊಂದಿರುವ ಸಂಭಾಲ್‌ನಲ್ಲಿ ಮಾರ್ಚ್ 14 ರಂದು ಮಧ್ಯಾಹ್ನ 2.20ರವರೆಗೆ ಹಿಂದೂಗಳಿಗೆ ಹೋಳಿ ಆಚರಿಸಲು ಅವಕಾಶ ನೀಡಲಾಗಿದೆ ಹಾಗೆಯೇ ಮಧ್ಯಾಹ್ನ 2.30ರ ನಂತರ ಇಲ್ಲಿ ಮುಸ್ಲಿಮರೂ ಜುಮ್ಮಾ ನಮಾಜ್ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಭದ್ರತೆಗಾಗಿ ಹೋಳಿ ಉತ್ಸವಕ್ಕೂ ಮೊದಲು ಪ್ರಾಂತೀಯ ಸಶಸ್ತ್ರಪಡೆಯ 7 ಕಂಪನಿಗಳನ್ನು ನಿಯೋಜಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ