
ಅಮರಾವತಿ(ಜು.22) ಆಂಧ್ರಪ್ರದೇಶದ ರಕ್ತಸಿಕ್ತ ರಾಜಕೀಯ ಅಧ್ಯಾಯದಲ್ಲಿ ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣವೂ ಒಂದು. 2019ರಲ್ಲಿ ನಡೆದ ಕೊಲೆಗೆ ರಾಜಕೀಯವೇ ಕಾರಣ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ YSRTP ಪಕ್ಷದ ಅಧ್ಯಕ್ಷೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ಹೇಳಿಕೆಯನ್ನು ದಾಖಲಿಸಿದೆ. ಪ್ರಮುಖವಾಗಿ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದ ಹಿಂದೆ ರಾಜಕೀಯ ಕಾರಣವಿತ್ತು ಎಂದು ಶರ್ಮಿಳಾ ಹೇಳಿದ್ದಾರೆ. ಇಷ್ಟೇ ಅಲ್ಲ ಕೊಲೆ ಹಿಂದಿನ ಘಟನೆಯನ್ನು ಚಾರ್ಚ್‌ಶೀಟ್‌ನಲ್ಲಿ ಸಿಬಿಐ ಅಧಿಕಾರಿಗಳು ವಿವರಿಸಿದ್ದಾರೆ. ಶರ್ಮಿಳಾ ಹೇಳಿಕೆ ಇದೀಗ ಆಂಧ್ರ ಪ್ರದೇಶ ಮುಖ್ಯಮಂತ್ರ ಜಗನ್ ಮೋಹನ್ ರೆಡ್ಡಿಗೆ ಹಿನ್ನಡೆ ತಂದಿದೆ.
ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ವೈಎಸ್ ಶರ್ಮಿಳಾರನ್ನು ಪ್ರಕರಣದ 259ನೇ ಸಾಕ್ಷಿಯಾಗಿ ಸಿಬಿಐ ಪರಿಗಣಿಸಿದೆ. ಈ ಕೊಲೆ ಪ್ರಕರಣ ಸಂಬಂಧ ವೈಎಸ್ ಶರ್ಮಿಳಾ ಹೇಳಿಕೆಯನ್ನು ಅಕ್ಟೋಬರ್ 7, 2022ರಲ್ಲಿ ಸಿಬಿಐ ಅಧಿಕಾರಿಗಳು ದಾಖಲಿಸಿದ್ದರು. ಲೋಕಸಭಾ ಚುನಾವಣೆ ವೇಳೆ ಕಡಪಾ ಕ್ಷೇತ್ರದಿಂದ ವೈಎಸ್ ಅವಿನಾಶ್ ರೆಡ್ಡಿ ಸ್ಪರ್ಧಿಸುತ್ತಿರುವುದು ವಿವೇಕಾನಂದ ರೆಡ್ಡಿಗೆ ಇಷ್ಟವಿರಲಿಲ್ಲ. ಈ ಕ್ಷೇತ್ರದಿಂದ ತಾನೇ ಸ್ಪರ್ಧಿಸುವುದಾಗಿ ನನ್ನ ಬಳಿ ಹೇಳಿದ್ದರು ಎಂದು ಶರ್ಮಿಳಾ ಹೇಳಿದ್ದಾರೆ.
ಬಚ್ಚಲು ಮನೆಯಲ್ಲಿ ಪತ್ತೆಯಾಯ್ತು ಮಾಜಿ ಸಚಿವನ ರಕ್ತ ಸಿಕ್ತ ಶವ!
ವಿವೇಕ ರೆಡ್ಡಿ ನಿರ್ಧಾರ, ವೈಎಸ್ ಜಗನ್ ಮೋಹನ್ ರೆಡ್ಡಿಗೂ ಇಷ್ಟವಿರಲಿಲ್ಲ. ಆದರೆ ವಿವೇಕಾನಂದ ರೆಡ್ಡಿ ಎಲ್ಲರನ್ನೂ ಒಪ್ಪಿಸಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಈ ಕುರಿತು ನಮ್ಮ ಮನಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅವಿನಾಶ್ ರೆಡ್ಡಿಗೆ ಟಿಕೆಟ್ ನೀಡದೇ ತನಗೆ ನೀಡುವಂತೆ ಜಗನ್ ಬಳಿ ಮಾತುಕತೆ ನಡೆಸಲು ವಿವೇಕಾನಂದ ರೆಡ್ಡಿ ಮುಂದಾಗಿದ್ದರು ಎಂದು ಶರ್ಮಿಳಾ , ಸಿಬಿಐಗೆ ಹೇಳಿಕೆ ನೀಡಿದ್ದಾರೆ.
ಇದರ ಜೊತೆಗೆ ಕೌನ್ಸಿಲ್ ಚುನಾವಣೆಯಲ್ಲಿ ವಿವೇಕಾನಂದ ರೆಡ್ಡಿ ಸೋಲು ಅನುಭವಿಸಿದ್ದರು. ಇವೆಲ್ಲಾ ಕಾರಣಗಳಿಂದ ಜಗನ್ ಮೋಹನ್ ರೆಡ್ಡಿಗೆ ವಿವೇಕಾನಂದ ರೆಡ್ಡಿಗೆ ಟಿಕೆಟ್ ನೀಡಲು ಇಷ್ಟವಿರಲಿಲ್ಲ. ಇತ್ತ ಅವಿನಾಶ್ ರೆಡ್ಡಿ, ಮಾವ ವೈಎಸ್ ಭಾಸ್ಕರ್ ರೆಡ್ಡಿ ಸೇರಿದಂತೆ ವೈಎಸ್ ಕುಟುಂಬದ ವಿರೋಧ ಕಟ್ಟಿಕೊಂಡ ವಿವೇಕಾನಂದ ರೆಡ್ಡಿಯನ್ನು ರಾಜಕೀಯ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಶರ್ಮಿಳಾ ಹೇಳಿದ್ದಾರೆ. ಈ ಹೇಳಿಕೆಯಿಂದ ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಂಕಷ್ಟ ಎದುರಾಗಿದೆ. ಶರ್ಮಿಳಾ ನೀಡಿದ ಹೇಳಿಕೆಗಳು ಜಗನ್ ವಿರುದ್ಧವಾಗಿದೆ.
ವಿವೇಕಾನಂದ ರೆಡ್ಡಿ, ಜಗನ್ ತಂದೆ, ದಿವಂಗತ ಮಾಜಿ ಮುಖ್ಯಮಂತ್ರಿ ವೈಎಸ ರಾಜಶೇಖರ್ ರೆಡ್ಡಿಯ ಕಿರಿಯ ಸಹೋದರನಾಗಿದ್ದರು. ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿರುವ ವಿವೇಕಾನಂದ ರೆಡ್ಡಿ ನಿವಾಸದ ಬಚ್ಚಲುಮನೆಯಲ್ಲಿ ಕೊಲೆ ನಡೆದಿತ್ತು. 68 ವರ್ಷದ ವಿವೇಕ ರೆಡ್ಡಿ ತಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಕುಟುಂಬದವರು ಹೈದರಾಬಾದ್‌ನಲ್ಲಿತ್ತು.
ಸಿಎಂ ಜಗನ್ ಕುಟುಂಬಸ್ಥರ ದರ್ಪ, ಸಹೋದರಿ ಬೆನ್ನಲ್ಲೇ ಮಹಿಳಾ ಪೊಲೀಸ್ ಕಪಾಳಕ್ಕೆ ಹೊಡೆದ ತಾಯಿ!
ವಿವೇಕ ರೆಡ್ಡಿ ಈ ಹಿಂದೆ ಆಂಧ್ರದ ಕಿರಣಕುಮಾರ್ ರೆಡ್ಡಿಯವರ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಮೂರು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದರಾಗಿದ್ದರು. ವೈಎಸ್‌ಆರ್ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್ಮೋಹನ ರೆಡ್ಡಿಯವರ ಚಿಕ್ಕಪ್ಪನಾಗಿರುವ ಇವರು ಹಿಂದೆ ವೈಎಸ್‌ಆರ್ ಸಾವಿನ ನಂತರ ಜಗನ್ಮೋಹನ ರೆಡ್ಡಿ ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷ ಸ್ಥಾಪಿಸಿದಾಗ ಅಲ್ಲಿಗೆ ಹೋಗದೆ ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದರು. ನಂತರ ಜಗನ್ ತಾಯಿ ವಿಜಯಮ್ಮ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ