ಅಮರಾವತಿ[ಮಾ.16]: ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಕ್ತಸಿಕ್ತ ರಾಜಕಾರಣದ ಅಧ್ಯಾಯವೂ ತೆರೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ವೈ.ಎಸ್‌.ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆಗೈಯಲಾಗಿದೆ. ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿರುವ ವಿವೇಕಾನಂದ ರೆಡ್ಡಿ ನಿವಾಸದ ಬಚ್ಚಲುಮನೆಯಲ್ಲಿ ಶುಕ್ರವಾರ ಬೆಳಗ್ಗೆ ರಕ್ತದ ಕಲೆಗಳ ಜೊತೆಗೆ ಅವರ ಶವ ಪತ್ತೆಯಾಗಿದೆ.

68 ವರ್ಷದ ವಿವೇಕ ರೆಡ್ಡಿ ತಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಕುಟುಂಬದವರು ಹೈದರಾಬಾದ್‌ನಲ್ಲಿದ್ದರು. ಅವರ ತಲೆಗೆ ಗಾಯಗಳಾಗಿರುವುದು ಹಾಗೂ ರಕ್ತದ ಕಲೆಗಳನ್ನು ನೋಡಿದರೆ ಇದು ಕೊಲೆ ಅನ್ನಿಸುತ್ತದೆ. ಹೀಗಾಗಿ ಪರಿಚ್ಛೇದ 302ರ ಅಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಕಡಪ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವಿವೇಕ ರೆಡ್ಡಿ ಈ ಹಿಂದೆ ಆಂಧ್ರದ ಕಿರಣಕುಮಾರ್‌ ರೆಡ್ಡಿಯವರ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಮೂರು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದರಾಗಿದ್ದರು. ವೈಎಸ್‌ಆರ್‌ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್ಮೋಹನ ರೆಡ್ಡಿಯವರ ಚಿಕ್ಕಪ್ಪನಾಗಿರುವ ಇವರು ಹಿಂದೆ ವೈಎಸ್‌ಆರ್‌ ಸಾವಿನ ನಂತರ ಜಗನ್ಮೋಹನ ರೆಡ್ಡಿ ಕಾಂಗ್ರೆಸ್‌ ತೊರೆದು ತಮ್ಮದೇ ಪಕ್ಷ ಸ್ಥಾಪಿಸಿದಾಗ ಅಲ್ಲಿಗೆ ಹೋಗದೆ ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದರು.

ನಂತರ ಜಗನ್‌ ತಾಯಿ ವಿಜಯಮ್ಮ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇತ್ತೀಚೆಗೆ ಜಗನ್‌ ಜೊತೆಗಿನ ಭಿನ್ನಮತ ಬಗೆಹರಿಸಿಕೊಂಡು ಕಾಂಗ್ರೆಸ್‌ ತೊರೆದು ವೈಎಸ್‌ಆರ್‌ ಕಾಂಗ್ರೆಸ್‌ ಸೇರಿದ್ದ ಅವರು, ಮೊನ್ನೆಯಷ್ಟೇ ಪುಲಿವೆಂದುಲದಲ್ಲಿ ಜಗನ್‌ ಪಕ್ಷದ ಪರ ಪ್ರಚಾರವನ್ನೂ ನಡೆಸಿದ್ದರು. ವಿವೇಕ ರೆಡ್ಡಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.