ಕುಟುಂಬ ರಾಜಕೀಯಕ್ಕೆ ಬ್ರೇಕ್‌ ಹಾಕಬೇಕು: ಮೋದಿ

By Kannadaprabha NewsFirst Published Jan 13, 2021, 8:57 AM IST
Highlights

ಕುಟುಂಬ ರಾಜಕೀಯಕ್ಕೆ ಬ್ರೇಕ್‌ ಹಾಕಬೇಕು: ಮೋದಿ| ಯುವಕರಿಗೆ ಪ್ರಧಾನಿ ಕರೆ| ಕಾಂಗ್ರೆಸ್‌ ಸೇರಿ ವಿಪಕ್ಷಗಳ ಕುಟುಂಬ ರಾಜಕೀಯಕ್ಕೆ ಕಿಡಿ| ಪ್ರಜಾಪ್ರಭುತ್ವಕ್ಕೆ ವಂಶ ಪರಂಪರೆ ದೊಡ್ಡ ಶತ್ರು

ನವದೆಹಲಿ(ಜ.13): ಇಂದಿಗೂ ಜೀವಂತವಾಗಿರುವ ಪ್ರಜಾಪ್ರಭುತ್ವದ ಬಹುದೊಡ್ಡ ಶತ್ರುವಾದ ವಂಶಪರಂಪರೆಯನ್ನು ಬೇರುಸಹಿತ ಕಿತ್ತುಹಾಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಅಲ್ಲದೆ ಇದೀಗ ಮನೆತನದ ಹೆಸರುಗಳಿಂದಲೇ ಚುನಾವಣೆಗಳನ್ನು ಗೆಲ್ಲುತ್ತಿದ್ದವರ ಸಂಖ್ಯೆ ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಬಣ್ಣಿಸಿದ್ದಾರೆ. ತನ್ಮೂಲಕ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಹೆಸರೆತ್ತದೆ ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಯುವ ಸಂಸತ್ತಿನ 2ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಂಗಳವಾರ ಮಾತನಾಡಿದ ಅವರು, ‘ಯುವ ಜನಾಂಗ ರಾಜಕೀಯಕ್ಕೆ ಪ್ರವೇಶಿಸಬೇಕು. ಇಲ್ಲದಿದ್ದರೆ ವಂಶಪರಂಪರೆ ಎಂಬ ವಿಷವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು ಮುಂದುವರಿಯಲಿದೆ. ಇದೀಗ ಕೇವಲ ಮನೆತನದ ಹೆಸರಿನಿಂದಲೇ ಚುನಾವಣೆ ಗೆಲ್ಲುತ್ತಿದ್ದವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಹಲವು ಪಕ್ಷಗಳಲ್ಲಿ ಇನ್ನೂ ವಂಶಪರಂಪರೆ ಜೀವಂತವಾಗಿದೆ’ ಎಂದರು. ಈ ಮೂಲಕ ಕಾಂಗ್ರೆಸ್‌ ಸೇರಿದಂತೆ ಇನ್ನಿತರ ಪ್ರತಿಪಕ್ಷಗಳನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡರು.

ಈ ಹಿಂದೆ ರಾಜಕೀಯವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಬದಲಾಯಿಸಬಹುದು ಎನ್ನುತ್ತಿದ್ದರು. ಆದರೆ ಇದೀಗ ದೇಶದ ಜನತೆ ಈ ಬಗ್ಗೆ ಎಚ್ಚರಗೊಂಡಿದ್ದು, ಪ್ರಾಮಾಣಿಕ ವ್ಯಕ್ತಿಗಳನ್ನು ಜನ ಗುರುತಿಸುತ್ತಿದ್ದಾರೆ. ಜೊತೆಗೆ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದವರಿಗೆ ಮನೆ ಬಾಗಿಲು ತೋರಿಸುತ್ತಿದ್ದಾರೆ ಎಂದರು.

click me!