
ನವದೆಹಲಿ(ಜ.17): ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಈಗಾಗಲೇ ಮೂರು ಪಕ್ಷಗಳು ಬಿರುಸಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ನಡುವೆ ಅಧಿಕೃತ ಸರ್ಕಾರಿ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿರುವುದು ಬಿಜೆಪಿ ಉತ್ಸಾಹ ಇಮ್ಮಡಿಗೊಳಿಸಿದೆ. ಇತ್ತೀಚೆಗೆ ಯುವಜನೋತ್ಸವ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ಮೋದಿ, ಇದೀಗ ಜನವರಿ 19ಕ್ಕೆ ಕಲಬುರಗಿ ಹಾಗೂ ಯಾದಗಿರಿಗೆ ಆಗಮಿಸುತ್ತಿದ್ದಾರೆ. ಕರ್ನಾಟಕದಲ್ಲಿ 10,800 ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಿಲನ್ಯಾಸ ಮಾಡಲಿದ್ದಾರೆ.
ಜನವರಿ 19ರ ಮಧ್ಯಹ್ನಾ 12 ಗಂಟೆಗೆ ಯಾದಗಿರಿ ಜಿಲ್ಲೆಯ ಕೋಡೇಕಲ್‌ನಲ್ಲಿ ನೀರಾವರಿ, ಕುಡಿಯುವ ನೀರು, ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನಗಳ ಉದ್ಘಾಟನೆ ಹಾಗೂ ಶಿಲನ್ಯಾಸ ನೇರವೇರಿಸಲಿದ್ದಾರೆ. ಬಳಿಕ 2.15ಕ್ಕೆ ಕಲಬುರಗಿ ಜಿಲ್ಲೆಯ ಮಳಖೇಡ್‌ಗೆ ತೆರಳಲಿರುವ ಮೋದಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.
ಯಾದಗಿರಿ: ಮೋದಿ ಆಗಮನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಯಾದಗಿರಿಯಲ್ಲಿ ಮೋದಿ, ಜಲಜೀವನ ಮಿಶನ್ ಅಡಿಯಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಅಡಗಲ್ಲು ಹಾಕಲಿದ್ದಾರೆ. ಈ ಯೋಜನೆ ಅಡಿ ಕೋಡೇಕಲ್ ಜಿಲ್ಲೆಯಲ್ಲಿ 117 ನೀರು ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತದೆ. ಯಾದಿಗಿರಿಯ 2.3 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಈ ಯೋಜನೆಗೆ 2,050 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಇದೇ ಕಾರ್ಯಕ್ರಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಹಾಗೂ ನವೀಕರಣ ಯೋಜನೆ ಉದ್ಘಾಟಿಸಲಿದ್ದಾರೆ. ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್-ರಿಮೋಟ್ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಉದ್ಘಾಟನೆ, ಜಲಧಾರೆ, ಅಮೃತ್ ಎರಡನೇ ಹಂತದ ಅಟಲ್ ಮಿಷನ್ ಸೇರಿ 4700 ಕೋಟಿ ರು.ಗಳ ವೆಚ್ಚದ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. 10,000 ಕ್ಯುಸೆಕ್‌ಗಳ ನೀರಿನ ಸಾಮರ್ಥ್ಯ ಈ ಕಾಲುವೆ 4.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಿದೆ. ಕಲಬುರ್ಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ 560 ಗ್ರಾಮಗಳ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.
ಮಳಖೇಡಕ್ಕೆ ಆಗಮಿಸಲಿರುವ ಪ್ರಧಾನಿಗೆ ವಿಶೇಷ ಉಡುಗೊರೆ
ಬಸವಸಾಗರದ ಜಲಾಶಯದ ಅಡಿಗಲ್ಲನ್ನು 1964ರಲ್ಲಿ ದಿ. ಲಾಲ ಬಹದ್ದೂರ ಶಾಸ್ತ್ರೀ ನೇರವೇರಿಸಿದ ಬಳಿಕ, 59ವರ್ಷದ ನಂತರ ನಾರಾಯಣಪುರದ ಬಸವಸಾಗರ ಜಲಾಶಯದ ಸ್ಕಾಡಾ ತಂತ್ರಜ್ಞಾನದ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಸವಸಾಗರ ಜಲಾಶಯಕ್ಕೆ ಬೇಟಿ ನೀಡುತ್ತಿರುವ 2ನೇ ಪ್ರಧಾನಿ ಮಂತ್ರಿಗಳಾಗಲಿದ್ದು ಇದೊಂದು ಮಹತ್ತರ ಮೈಲುಗಲ್ಲಾಗಲಿದೆ.
ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರದ ಐದು ಜಿಲ್ಲೆಗಳ 1,475 ದಾಖಲೆ ಇಲ್ಲದ ವಸತಿಯನ್ನು ಹೊಸ ಕಂದಾಯ ಗ್ರಾಮಳಾಗಿ ಘೋಷಿಸಲಾಗಿದೆ. ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ 30 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳ ಐವತ್ತು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ.
ಇದೇ ಕಾರ್ಯಕ್ರಮದಲ್ಲಿ ಮೋದಿ, NH-150C ರಾಷ್ಟ್ರೀಯ ಹೆದ್ದಾರಿ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇ ಭಾಗವಾಗಿರುವ ಈ ಯೋಜನೆಗೆ 2,100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ಹೆದ್ದಾರಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದು ಹೋಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ