20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಧಾನ, ಇಬ್ಬರು ಮಕ್ಕಳಿಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿದ್ಯಾಕೆ?

Published : Dec 26, 2025, 06:05 PM IST
Rashtriya Bal Puraskar

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 20 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು. ಇದರಲ್ಲಿ, ಬೇರೆಯವರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಬಿಹಾರದ ಕಮಲೇಶ್ ಕುಮಾರ್ ಮತ್ತು ತಮಿಳುನಾಡಿನ ವ್ಯೋಮ ಪ್ರಿಯಾ ಅವರಿಗೆ ಮರಣೋತ್ತರವಾಗಿ ಈ ಗೌರವ ಸಂದಿದೆ.  

ನವದೆಹಲಿ: ಭಾರತದಲ್ಲಿ ಶೌರ್ಯ, ಕಲೆ ಮತ್ತು ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು. ಇದರಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಸೇರಿ 20 ಮಕ್ಕಳು ಈ ಪುರಸ್ಕಾರ ಪಡೆದರು. ಆದರೆ ಇದರಲ್ಲಿ ಇಬ್ಬರು ಮಕ್ಕಳಿಗೆ ಮರಣೋತ್ತರ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದರು. ಆ ಇಬ್ಬರು ಮಕ್ಕಳು ಜೀವ ಉಳಿಸುವ ಸಾಹಸದಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಅವರ ಸಾಹಸಗಾಥೆ ಇಲ್ಲಿದೆ.

ನದಿಯಲ್ಲಿ ಮುಳುಗುತ್ತಿದ್ದ ಮಗುವಿನ ಪ್ರಾಣ ಉಳಿಸಿ ತಾನು ಜೀವ ಬಿಟ್ಟ ಕಮಲೇಶ್‌

ಬಿಹಾರದ ಕೈಮೂರ್ ಜಿಲ್ಲೆಯ ಜೈಪುರ ಗ್ರಾಮದ 11 ವರ್ಷದ ಬಾಲಕ ಕಮಲೇಶ್ ಕುಮಾರ್ ಅವರ ಅಸಾಧಾರಣ ಧೈರ್ಯ ಮತ್ತು ಮಾನವೀಯ ಶೌರ್ಯಕ್ಕೆ ಮರಣೋತ್ತರವಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (PMRBP) ಗೌರವ ಪ್ರದಾನ ಮಾಡಲಾಗಿದೆ.

ದುರ್ಗಾವತಿ ನದಿಯಲ್ಲಿ ಮುಳುಗುತ್ತಿದ್ದ ಮತ್ತೊಬ್ಬ ಮಗುವನ್ನು ರಕ್ಷಿಸಲು ಜೀವದ ಅಪಾಯವನ್ನೂ ಲೆಕ್ಕಿಸದೇ ನೀರಿಗೆ ಹಾರಿದ ಕಮಲೇಶ್ ಕುಮಾರ್, ಧೈರ್ಯಶಾಲಿ ಮತ್ತು ಸಹಜ ಪ್ರಯತ್ನದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದರು. ಅವರ ಈ ಸಾಹಸ ಕಾರ್ಯ ದೇಶಾದ್ಯಂತ ಜನಮನ ಗೆದ್ದಿದೆ. ಡಿಸೆಂಬರ್ 26, 2025 ರಂದು ನವದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ, ಕಮಲೇಶ್ ಕುಮಾರ್ ಅವರ ಪರವಾಗಿ ಅವರ ಕುಟುಂಬದ ಸದಸ್ಯರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಿರಿಯ ವಯಸ್ಸಿನಲ್ಲೇ ಅಪಾರ ಧೈರ್ಯ, ಮಾನವೀಯತೆ ಮತ್ತು ತ್ಯಾಗವನ್ನು ತೋರಿದ ಕಮಲೇಶ್ ಕುಮಾರ್ ಅವರ ಶೌರ್ಯ, ಅನೇಕ ಮಕ್ಕಳಿಗೂ ಹಾಗೂ ನಾಗರಿಕರಿಗೂ ಶಾಶ್ವತ ಪ್ರೇರಣೆಯಾಗಿ ಉಳಿಯಲಿದೆ.

6ವರ್ಷದ ಮಗುವನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕಿ ಪ್ರಿಯಾಗೆ ಮರಣೋತ್ತರ ಪ್ರಶಸ್ತಿ

ತಮಿಳುನಾಡಿನ ಕೊಯಮತ್ತೂರಿನ 8 ವರ್ಷದ ಬಾಲಕಿ ವ್ಯೋಮ ಪ್ರಿಯಾ ಅವರ ಅಪಾರ ಧೈರ್ಯ ಮತ್ತು ಮಾನವೀಯ ಶೌರ್ಯಕ್ಕೆ ಮರಣೋತ್ತರವಾಗಿ ಶೌರ್ಯ ಕ್ಷೇತ್ರದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಪಾರ್ಟ್‌ಮೆಂಟ್ ಸಂಕೀರ್ಣದ ಮಕ್ಕಳ ಉದ್ಯಾನವನದಲ್ಲಿ ನಡೆದ ದುರಂತ ಘಟನೆಯಲ್ಲಿ, ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಆರು ವರ್ಷದ ಬಾಲಕ ಜಿಯಾನ್ಶ್ ರೆಡ್ಡಿಯನ್ನು ರಕ್ಷಿಸಲು 8 ವರ್ಷದ ವ್ಯೋಮ ಪ್ರಿಯಾ ಧೈರ್ಯವಾಗಿ ಮುಂದಾದರು. ಆದರೆ, ಆತನನ್ನು ಉಳಿಸಲು ಯತ್ನಿಸುವ ಸಂದರ್ಭದಲ್ಲಿ ಸ್ವತಃ ವಿದ್ಯುತ್ ಪ್ರವಾಹಕ್ಕೆ ಸಿಲುಕಿ ವ್ಯೋಮ ಪ್ರಿಯಾ ದುರಂತವಾಗಿ ಪ್ರಾಣ ಕಳೆದುಕೊಂಡರು. ಉದ್ಯಾನವನದಲ್ಲಿದ್ದ ಹಾನಿಗೊಳಗಾದ ಭೂಗತ ವಿದ್ಯುತ್ ಕೇಬಲ್ ಮೇಲೆ ಸ್ಲೈಡ್ ಅಳವಡಿಸಲಾಗಿದ್ದು, ಅದು ಸ್ಲೈಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಅದರ ಮೇಲೆ ಆಟವಾಡುತ್ತಿದ್ದ ಜಿಯಾನ್ಶ್ ರೆಡ್ಡಿ ಅಚಾನಕ್‌ ವಿದ್ಯುತ್ ಪ್ರವಾಹಕ್ಕೆ ಒಳಗಾದಾಗ, ವ್ಯೋಮ ಪ್ರಿಯಾ ಪ್ರಾಣ ಕಳೆದುಕೊಂಡರು.

ದಿವಂಗತ ಮಗಳು ವ್ಯೋಮ ಪ್ರಿಯಾ ಪರವಾಗಿ ಅವರ ತಾಯಿ ಅರ್ಚನಾ ಶಿವರಾಮಕೃಷ್ಣನ್ ಅವರು ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಅವರು, “ನಮ್ಮ ಮಗಳು ವ್ಯೋಮ ಪ್ರಿಯಾ ಪರವಾಗಿ ಈ ಶೌರ್ಯ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿದ್ದೇನೆ. ಈ ಗೌರವ ನಮಗೆ ಹೆಮ್ಮೆಯ ಜೊತೆಗೆ ಅತೀವ ನೋವನ್ನು ಕೂಡ ತಂದಿದೆ. ಈ ಪ್ರಶಸ್ತಿಯನ್ನು ಸ್ವತಃ ಸ್ವೀಕರಿಸಲು ನಮ್ಮ ಮಗಳು ಇಲ್ಲೇ ಇದ್ದಾಳೆ ಅಂದುಕೊಳ್ಳುವೆ ಎಂದರು.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (PMRBP) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಈ ಬಾಲ ಪುರಸ್ಕೃತ ಮಕ್ಕಳು ತಮ್ಮ ಕುಟುಂಬಗಳು, ಸಮುದಾಯಗಳು ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಅವರು ಹೇಳಿದರು.

ಈ ಪ್ರಶಸ್ತಿಗಳು ಕೇವಲ ಗೌರವಕ್ಕೆ ಮಾತ್ರವಲ್ಲ, ದೇಶಾದ್ಯಂತ ಇರುವ ಲಕ್ಷಾಂತರ ಮಕ್ಕಳಿಗೆ ಸ್ಫೂರ್ತಿಯ ಮೂಲವಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ಸಮಾಜದ ಒಳಿತಿಗಾಗಿ ತಮ್ಮ ಧೈರ್ಯ, ಪ್ರತಿಭೆ, ಸೇವಾ ಮನೋಭಾವ ಮತ್ತು ಸಾಧನೆಗಳಿಂದ ವಿಶಿಷ್ಟ ಕೊಡುಗೆ ನೀಡಿದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಡಿಸೆಂಬರ್ 26ರಂದು ಆಚರಿಸಲಾಗುವ ವೀರ್ ಬಲ್ ದಿವಸ್ ಮಹತ್ವವನ್ನು ನೆನಪಿಸಿಕೊಂಡ ದ್ರೌಪದಿ ಮುರ್ಮು ಅವರು, ಸುಮಾರು 320 ವರ್ಷಗಳ ಹಿಂದೆ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿದ ಹತ್ತನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಜಿ ಹಾಗೂ ಅವರ ನಾಲ್ವರು ಪುತ್ರರು ಮಾಡಿದ ಮಹಾನ್ ತ್ಯಾಗಗಳನ್ನು ಸ್ಮರಿಸಿದರು. ಗುರು ಗೋವಿಂದ್ ಸಿಂಗ್ ಜಿ ಮತ್ತು ಅವರ ಪುತ್ರರು ತೋರಿದ ಧೈರ್ಯ ಮತ್ತು ತ್ಯಾಗವು ಎಲ್ಲಾ ಭಾರತೀಯರಿಗೆ ಪೂಜ್ಯವಾಗಿದ್ದು, ಅವರ ಜೀವನ ಮೌಲ್ಯಗಳು ಇಂದಿಗೂ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ವಿಶೇಷವಾಗಿ, ಕಿರಿಯ ಸಾಹಿಬ್‌ಜಾದಾಗಳಾದ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಶೌರ್ಯವನ್ನು ಉಲ್ಲೇಖಿಸಿದ ರಾಷ್ಟ್ರಪತಿ, ಸತ್ಯ ಮತ್ತು ನ್ಯಾಯಕ್ಕಾಗಿ ಹೆಮ್ಮೆಯಿಂದ ತಮ್ಮ ಪ್ರಾಣವನ್ನೇ ಅರ್ಪಿಸಿದ ಈ ಮಹಾನ್ ಬಾಲ ವೀರರನ್ನು ಭಾರತದಲ್ಲಿಯೇ ಅಲ್ಲದೆ ವಿದೇಶಗಳಲ್ಲೂ ಗೌರವದಿಂದ ಸ್ಮರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಬಾಲ ಶೌರ್ಯದ ಸಮಕಾಲೀನ ಉದಾಹರಣೆಯನ್ನೂ ರಾಷ್ಟ್ರಪತಿ ಪ್ರಸ್ತಾಪಿಸಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಯುದ್ಧ ಸಂಬಂಧಿತ ಅಪಾಯಗಳು ಎದುರಾಗುತ್ತಿದ್ದರೂ, ಕೇವಲ ಹತ್ತು ವರ್ಷದ ಶ್ರವಣ್ ಸಿಂಗ್ ತನ್ನ ಮನೆಯ ಸಮೀಪ ಗಡಿಯಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೈನಿಕರಿಗೆ ನಿಯಮಿತವಾಗಿ ನೀರು, ಹಾಲು ಮತ್ತು ಲಸ್ಸಿಯನ್ನು ತಲುಪಿಸುವ ಮೂಲಕ ಅಪಾರ ಧೈರ್ಯ ಮತ್ತು ಸೇವಾಭಾವ ತೋರಿಸಿದ್ದಾನೆ ಎಂದು ಮುರ್ಮು ಹೇಳಿದರು. ಈ ರೀತಿಯ ಮಕ್ಕಳ ಶೌರ್ಯ ಮತ್ತು ದೇಶಭಕ್ತಿಯ ಮನೋಭಾವವೇ ಭಾರತದ ಶಕ್ತಿ ಮತ್ತು ಭವಿಷ್ಯ ಎಂದು ಅವರು ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಕ್ಷರತೆಯಲ್ಲಿ ನಂ:1 ರಾಜ್ಯವಾದ್ರೂ, ರಾಹುಕಾಲಕ್ಕೆ ಹೆದರಿಕೆ; ಕಚೇರಿಯೊಳಗೆ ಹೋಗಲು ಹಿಂಜರಿದ ಅಧ್ಯಕ್ಷೆ!
ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು