ಸಾಕ್ಷರತೆಯಲ್ಲಿ ನಂ:1 ರಾಜ್ಯವಾದ್ರೂ, ರಾಹುಕಾಲಕ್ಕೆ ಹೆದರಿಕೆ; ಕಚೇರಿಯೊಳಗೆ ಹೋಗಲು ಹಿಂಜರಿದ ಅಧ್ಯಕ್ಷೆ!

Published : Dec 26, 2025, 05:36 PM IST
SANGEETHA

ಸಾರಾಂಶ

ಪುರಸಭೆಯ ನೂತನ ಅಧ್ಯಕ್ಷೆ 'ರಾಹುಕಾಲ'ದ ಕಾರಣ ನೀಡಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆಯಿಂದಾಗಿ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು 45 ನಿಮಿಷ ಕಾಯಬೇಕಾಯಿತು, ಇದು ಸಾರ್ವಜನಿಕ ಸೇವೆಯಲ್ಲಿ ವೈಜ್ಞಾನಿಕ ಮನೋಭಾವದ ಚರ್ಚೆಯನ್ನು ಹುಟ್ಟುಹಾಕಿದೆ.

ಸಾರ್ವಜನಿಕ ಸೇವೆಯ ಜವಾಬ್ದಾರಿಯುತ ಸ್ಥಾನಕ್ಕೇರುವಾಗ ವೈಜ್ಞಾನಿಕ ಮನೋಭಾವ ಇರಬೇಕೇ ಅಥವಾ ವೈಯಕ್ತಿಕ ನಂಬಿಕೆಗಳೇ ಮೇಲಾಗಬೇಕೇ ಎಂಬ ಚರ್ಚೆಗೆ ಕೇರಳದ ಪೆರುಂಬಾವೂರ್ ಪುರಸಭೆಯ ಘಟನೆ ನಾಂದಿ ಹಾಡಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷೆಯೊಬ್ಬರು 'ರಾಹುಕಾಲ'ದ ಹಿನ್ನೆಲೆಯಲ್ಲಿ ಕಚೇರಿ ಪ್ರವೇಶಿಸಲು ನಿರಾಕರಿಸಿದ ಕಾರಣ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಾಯುವಂತಾದ ವಿಲಕ್ಷಣ ಘಟನೆ ನಡೆದಿದೆ.

ನಡೆದಿದ್ದೇನು?

ಪೆರುಂಬಾವೂರ್ ಪುರಸಭೆಯ ಅಧ್ಯಕ್ಷೆಯಾಗಿ ಯುಡಿಎಫ್ (UDF) ಮೈತ್ರಿಕೂಟದ ಕೆ.ಎಸ್. ಸಂಗೀತ ಅವರು ಇಂದು ಅಧಿಕಾರ ವಹಿಸಿಕೊಳ್ಳಬೇಕಿತ್ತು. ಬೆಳಿಗ್ಗೆ 11:15ಕ್ಕೆ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ನಿಯಮದಂತೆ ಪ್ರಮಾಣವಚನ ಮುಗಿದ ಕೂಡಲೇ ಅವರು ಅಧ್ಯಕ್ಷರ ಕಚೇರಿಗೆ ತೆರಳಿ ಕುರ್ಚಿಯ ಮೇಲೆ ಕುಳಿತು ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ, ಇಲ್ಲೇ ಒಂದು ಅನಿರೀಕ್ಷಿತ ಟ್ವಿಸ್ಟ್ ಎದುರಾಯಿತು.

ರಾಹುಕಾಲದ ಭಯ: 

ಪ್ರಮಾಣವಚನ ಮುಗಿದರೂ ಸಂಗೀತ ಅವರು ಕಚೇರಿಯೊಳಗೆ ಪ್ರವೇಶಿಸಲು ನಿರಾಕರಿಸಿದರು. ಕಾರಣ ಕೇಳಿದಾಗ, ‘ಈಗ ರಾಹುಕಾಲ ನಡೆಯುತ್ತಿದೆ, 12 ಗಂಟೆಯ ನಂತರವಷ್ಟೇ ಶುಭ ಘಳಿಗೆ ಇರುವುದರಿಂದ ಅಲ್ಲಿಯವರೆಗೆ ನಾನು ಕಚೇರಿಗೆ ಕಾಲಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಸಂಗೀತ ಅವರ ಈ ಹಠದಿಂದಾಗಿ ಪುರಸಭೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರಿಗೆ ಹೂಗುಚ್ಛ ನೀಡಲು ಬಂದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಸುಮಾರು 45 ನಿಮಿಷಗಳ ಕಾಲ ಕಚೇರಿಯಲ್ಲೇ ಅಧ್ಯಕ್ಷರಿಗಾಗಿ ಕಾಯಬೇಕಾಯಿತು.

ರಾಜಕೀಯ ಚಿತ್ರಣ

ಒಟ್ಟು 29 ಸದಸ್ಯ ಬಲದ ಪೆರುಂಬಾವೂರ್ ಪುರಸಭೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಸಂಗೀತ ಅವರು 16 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಎಲ್‌ಡಿಎಫ್ (LDF) ಅಭ್ಯರ್ಥಿಗೆ 11 ಮತಗಳು ಲಭಿಸಿದವು. ಇಬ್ಬರು ಸದಸ್ಯರನ್ನು ಹೊಂದಿರುವ ಎನ್‌ಡಿಎ (NDA) ಚುನಾವಣೆಯಿಂದ ದೂರ ಉಳಿದಿತ್ತು.

ಕೇರಳದಂತಹ ಸಾಕ್ಷರ ರಾಜ್ಯದಲ್ಲಿ, ಪ್ರಜಾಪ್ರಭುತ್ವದ ಆಶಯದಡಿ ಅಧಿಕಾರ ಹಿಡಿದವರು ಸಂವಿಧಾನದ ಆಶಯಕ್ಕಿಂತ ಮೌಢ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. "ಜನರ ಕೆಲಸ ಮಾಡಲು ಸಮಯ ಕಾಯಬಾರದು, ಆದರೆ ಇಲ್ಲಿ ಸಮಯಕ್ಕಾಗಿ ಜನರೇ ಕಾಯುವಂತಾಗಿದೆ" ಎಂಬ ಮಾತುಗಳು ಕೇಳಿಬರುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು
4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್ : ಮಹಿಳೆಯೂ ಆರೋಪಿ