ತಾಯಿ ನಿಧನದ ದು:ಖದಲ್ಲೂ ಮೋದಿ ಕರ್ತವ್ಯಕ್ಕೆ ಹಾಜರ್‌: ಅಂತ್ಯಸಂಸ್ಕಾರ ನಡೆದ 1.5 ತಾಸಲ್ಲೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ

By Kannadaprabha NewsFirst Published Dec 31, 2022, 7:48 AM IST
Highlights

ತಾಯಿ ಅಂತ್ಯಸಂಸ್ಕಾರ ನಡೆದ 1.5 ತಾಸಿನಲ್ಲೇ ಪ್ರಧಾನಿ ಮೋದಿ ಕರ್ತವ್ಯಕ್ಕೆ ಹಾಜರಾಗಿದ್ದು, ಕೋಲ್ಕತಾದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಪಘಾತಕ್ಕೊಳಗಾದ ರಿಷಬ್‌ ಪಂತ್‌ ತಾಯಿಗೂ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಪೂರ್ವನಿಗದಿತ ಕಾರ‍್ಯಕ್ರಮ ರದ್ದು ಮಾಡದಂತೆ ಸಚಿವರಿಗೆ ಸೂಚನೆ ನೀಡಿದ್ದು, ಅಬ್ಬರದ ಶವಯಾತ್ರೆ ನಡೆಸದೆ ಸರಳ ರೀತಿಯಲ್ಲಿ ಅಂತಿಮಸಂಸ್ಕಾರ ನಡೆದಿದೆ. 

ಅಹಮದಾಬಾದ್‌/ನವದೆಹಲಿ: ಹೆತ್ತ ತಾಯಿ (Mother) ನಿಧನರಾದ ಅತೀವ ದುಃಖದಲ್ಲೂ ಅಂತ್ಯಸಂಸ್ಕಾರ (Final Rites) ಮುಗಿದ ಒಂದೂವರೆ ತಾಸಿನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ತವ್ಯಕ್ಕೆ (Duty) ಹಾಜರಾಗಿದ್ದಾರೆ. ಅವರ ಕಾರ್ಯತತ್ಪರತೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಜತೆಗೆ ಯಾವುದೇ ಅಬ್ಬರ ಮಾಡದೆ, ಶವಯಾತ್ರೆಯ ಮೆರವಣಿಗೆ (Funeral Procession) ಹೆಸರಿನಲ್ಲಿ ಸಂಚಾರ ದಟ್ಟಣೆ ಸೃಷ್ಟಿಸದೆ ಅತ್ಯಂತ ಸರಳ ರೀತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮಾದರಿಯಾಗಿದ್ದಾರೆ.

ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್‌ (Heeraben) ಶುಕ್ರವಾರ ನಸುಕಿನ ಜಾವ ಗುಜರಾತ್‌ನ (Gujarat) ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಸುದ್ದಿ ತಿಳಿದ ತಕ್ಷಣವೇ ದೆಹಲಿಯಿಂದ (Delhi) ಹೊರಟು ಬೆಳಗ್ಗೆ 6.30ರ ವೇಳೆಗೆ ಗುಜರಾತಿನ ಅಹಮದಾಬಾದ್‌ಗೆ (Ahmedabad) ಮೋದಿ ಆಗಮಿಸಿದರು. ಅಷ್ಟರಲ್ಲಾಗಲೇ ಹೀರಾಬೆನ್‌ ಅವರ ಕಳೇಬರವನ್ನು ಅವರ ಮತ್ತೊಬ್ಬ ಪುತ್ರನ ಮನೆಯಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಧಾವಿಸಿದ ಮೋದಿ ಅಂತಿಮ ದರ್ಶನ ಪಡೆದರು. ತಾಯಿಯ ಮೃತದೇಹಕ್ಕೆ ಹೆಗಲು ಕೊಟ್ಟು, ಸರ್ಕಾರಿ ಚಿತಾಗಾರಕ್ಕೆ ಒಯ್ದು ಅಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಬೆಳಗ್ಗೆ 9.30ರ ವೇಳೆಗೆ ಅಂತ್ಯಸಂಸ್ಕಾರ ಮುಗಿಸಿದರು.

ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ

ಪೂರ್ವ ನಿಗದಿತ ಕಾರ್ಯಕ್ರಮದಂತೆ ಶುಕ್ರವಾರ ಮೋದಿ ಅವರು ಕೋಲ್ಕತಾಗೆ ತೆರಳಿ ವಂದೇ ಭಾರತ್‌ ರೈಲು, ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ತಾಯಿ ನಿಧನ ಹಿನ್ನೆಲೆಯಲ್ಲಿ ಗುಜರಾತಿಗೆ ಆಗಮಿಸಿದ್ದ ಕಾರಣ ಅವರು ಅಲ್ಲಿನ ರಾಜಭವನದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಖುದ್ದು ಭಾಗಿಯಾಗಲು ಆಗದ್ದಕ್ಕೆ ಜನರ ಕ್ಷಮೆ ಕೇಳಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಬ್‌ ಪಂತ್‌ ಅವರ ತಾಯಿಗೂ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದರು.

ಪ್ರಧಾನಿ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ದೇಶ- ವಿದೇಶಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಂತಾಪಗಳ ಮಹಾಪೂರದ ಜತೆಗೆ ಕೇಂದ್ರ ಸಂಪುಟದ ಹಲವು ಸಚಿವರು ತಮ್ಮ ಪೂರ್ವನಿಗದಿತ ಕಾರ್ಯಕ್ರಮ ರದ್ದುಪಡಿಸಿ ಗುಜರಾತಿನತ್ತ ಪ್ರಯಾಣಿಸಲು ಅಣಿ ಆದರು. ಆದರೆ ‘ಯಾರೂ ಬರುವುದು ಬೇಡ. ನಿಮ್ಮ ಕಾರ್ಯವನ್ನು ಪೂರ್ಣಗೊಳಿಸಿಯೇ ದೆಹಲಿಗೆ ಮರಳಿ’ ಎಂದು ಮೋದಿ ಸೂಚನೆ ನೀಡಿದರು ಎನ್ನಲಾಗಿದೆ. ಹೀಗಾಗಿ ಬೆಂಗಳೂರು, ಮಂಡ್ಯದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಯಾರೊಬ್ಬರೂ ಗುಜರಾತಿಗೆ ಹೋಗದೆ ತಮ್ಮ ಕಾರ್ಯಕ್ರಮದಲ್ಲಿ ವ್ಯಸ್ತರಾದರು. ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಕೇರಳದ ಕಾರ್ಯಕ್ರಮ ಮುಂದುವರಿಸಿದರು.

ಇದನ್ನೂ ಓದಿ: ಮೈಸೂರು ಸಮೀಪ ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ!

ಅಂತ್ಯಕ್ರಿಯೆಗೆ ಜನ ಸೇರಬೇಡಿ:
ಅಂತ್ಯಕ್ರಿಯೆಗೆ ಭಾರಿ ಸಂಖ್ಯೆಯ ಜನ ಸೇರಬಹುದು ಎಂಬುದನ್ನು ಮೊದಲೇ ನಿರೀಕ್ಷಿಸಿದ ಮೋದಿ ಹಾಗೂ ಅವರ ಕುಟುಂಬ ವರ್ಗದವರು ‘ನಿಮ್ಮ ಕೆಲಸಗಳನ್ನು ಎಂದಿನಂತೆ ಮುಂದುವರೆಸಿ, ಅದೇ ನೀವು ನಮ್ಮ ತಾಯಿಗೆ ಸಲ್ಲಿಸುವ ಗೌರವ’ ಎಂದು ಮನವಿ ಮಾಡಿದರು. ಹೀಗಾಗಿ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತರ ಹೊರತಾಗಿ ಯಾರೂ ಹೀರಾಬೆನ್‌ರ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ.

ಹೆಚ್ಚಿನ ಜನಸಂದಣಿಗೆ ಅವಕಾಶ ನೀಡದೆ ಆ್ಯಂಬುಲೆನ್ಸ್‌ ಮೂಲಕ ಚಿತಾಗಾರಕ್ಕೆ ಹೀರಾಬೆನ್‌ ಶವವನ್ನು ಕೊಂಡೊಯ್ಯಲಾಯಿತು. ಈ ವೇಳೆ ದೊಡ್ಡ ಮಟ್ಟದ ಶವಯಾತ್ರೆಗೆ ಅವಕಾಶ ಇದ್ದರೂ ಮೋದಿ ಅದನ್ನು ನಿರಾಕರಿಸಿದರು. ಹೀಗಾಗಿ ದೊಡ್ಡ ದೊಡ್ಡ ನಾಯಕರ ಕುಟುಂಬ ಸದಸ್ಯರು ನಿಧನರಾದಾಗ ಕಂಡುಬರುವ ಟ್ರಾಫಿಕ್‌ ಜಾಮ್‌, ಘೋಷಣೆ ಕೂಗುವ ಯಾವುದೇ ದೃಶ್ಯಗಳೂ ಕಂಡುಬರಲಿಲ್ಲ.

ಹೀರಾಬೆನ್‌ನ ಅಂತಿಮ ಯಾತ್ರೆಯನ್ನು ಸರ್ಕಾರಿ ಚಿತಾಗಾರದಲ್ಲೇ ನಡೆಸಲು ಕುಟುಂಬ ನಿರ್ಧರಿಸಿತ್ತು. ಅಲ್ಲಿಗೆ ದೇಹ ತಲುಪಿದ ಕೂಡಲೇ ತಮ್ಮ ತಾಯಿ ದೇಹಕ್ಕೆ ಸಹೋದರರ ಜೊತೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಪುತ್ರನ ಹೊಣೆ ನಿರ್ವಹಿಸಿದರು.

ನನ್ನ ಅಮ್ಮ ನಿಸ್ವಾರ್ಥಿ, ತಪಸ್ವಿ
ತಪಸ್ವಿ, ನಿಸ್ವಾರ್ಥ ಕೆಲಸ ಮತ್ತು ಮೌಲ್ಯಗಳಿಗೆ ಸಮರ್ಪಿತವಾದ ಜೀವನ ಎಂಬ 3 ಗುಣಗಳನ್ನು ನನ್ನ ತಾಯಿಯಲ್ಲಿ ಕಂಡಿದ್ದೇನೆ. ‘ನಿಮ್ಮ ಮೆದುಳನ್ನು ಬಳಸಿ ಕೆಲಸ ಮಾಡಿ ಮತ್ತು ನಿಷ್ಕಲ್ಮಶ ಶುದ್ಧ ಜೀವನ ನಡೆಸಿ’ ಎಂಬುದೇ ಆಕೆಯ ಬೋಧನೆ ಆಗಿತ್ತು.
- ನರೇಂದ್ರ ಮೋದಿ, ಪ್ರಧಾನಿ

click me!