ರೈತರ ಹಿತಕ್ಕಾಗಿ ಕೃಷಿ ಕಾಯ್ದೆ, ದೇಶದ ಹಿತಾಸಕ್ತಿಗಾಗಿ ರದ್ದು: PM Narendra Modi

By Kannadaprabha NewsFirst Published Feb 10, 2022, 1:12 AM IST
Highlights

ಪಂಚ ರಾಜ್ಯಗಳ ಚುನಾವಣೆಗೆ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ಎಎನ್‌ಐ ಸುದ್ದಿಸಂಸ್ಥೆಗೆ ವಿಸ್ತೃತ ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿ ಕೃಷಿ ಕಾಯ್ದೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆ, ಇತ್ತೀಚಿನ ಸಂಸತ್‌ ಭಾಷಣದಲ್ಲಿ ಮಾಜಿ ಪ್ರಧಾನಿ ನೆಹರೂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ (ಫೆ.10): ಪಂಚ ರಾಜ್ಯಗಳ ಚುನಾವಣೆಗೆ (Five State Election) ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಎಎನ್‌ಐ ಸುದ್ದಿಸಂಸ್ಥೆಗೆ ವಿಸ್ತೃತ ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿ ಕೃಷಿ ಕಾಯ್ದೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆ, ಇತ್ತೀಚಿನ ಸಂಸತ್‌ ಭಾಷಣದಲ್ಲಿ ಮಾಜಿ ಪ್ರಧಾನಿ ನೆಹರೂ (Jawaharlal Nehru) ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಹುಲ್‌ ಗಾಂಧಿ (Rahul Gandhi) ಸವಾಲು, ವಂಶಾಡಳಿತ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

5 ರಾಜ್ಯಗಳಲ್ಲಿ ಜಯ ನಮ್ಮದೆ: ಬಿಜೆಪಿ ಎಂದಿಗೂ ಜನರ ಸೇವೆ ಮಾಡುತ್ತದೆ. ನಾವು ಅಧಿಕಾರದಲ್ಲಿದ್ದಾಗ ‘ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌’ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ. ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಈ ಅಲೆಯನ್ನು ನೋಡುತ್ತಿದ್ದೇನೆ. ನಾವು 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಅಭೂತಪೂರ್ವ ಬಹುಮತದೊಂದಿಗೆ ಗೆಲ್ಲುತ್ತೇವೆ. ಪಂಚರಾಜ್ಯಗಳ ಜನರು ರಾಜ್ಯದ ಸೇವೆಗೆ ಅವಕಾಶ ಕಲ್ಪಿಸಲಿದ್ದಾರೆ. ನಾವು ಕೂಡಾ ಹಲವು ಬಾರಿ ಸೋತ ನಂತರವೇ ಗೆದ್ದಿದ್ದು. ಗೆದ್ದಾಗ ನಾವು ತಳಮಟ್ಟದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ, ಕಲ್ಲಿನಂಥ ಹೃದಯವನ್ನೂ ಬಿಡುವುದಿಲ್ಲ. 

ಸೋತಾಗಲೂ ನಾವು ಭರವಸೆ ಕಳೆದುಕೊಳ್ಳುವುದಿಲ್ಲ. ನಮಗೆ ಚುನಾವಣೆಗಳು ಮುಕ್ತ ವಿಶ್ವವಿದ್ಯಾನಿಲಯಗಳಂತಿದ್ದು, ಹೊಸ ನೇಮಕಾತಿ ಮತ್ತು ನಮ್ಮನ್ನು ನಾವು ಮೆರುಗುಗೊಳಿಸಲು ನಿರಂತರ ಅವಕಾಶಗಳಿವೆ ಎಂದು ಭಾವಿಸುತ್ತೇವೆ. 2014ರಲ್ಲಿ ಗೆದ್ದೆವು. 2017 ಮತ್ತು 2019ರಲ್ಲೂ ಗೆದ್ದೆವು. ಈ ಮೂಲಕ ರಾಜ್ಯದಲ್ಲಿ ಒಂದು ಪಕ್ಷ ಒಮ್ಮೆ ಮಾತ್ರ ಅಧಿಕಾರಕ್ಕೆ ಬರಬಲ್ಲದು ಎಂಬ ಹಳೆಯ ಸಿದ್ಧಾಂತವನ್ನು ಉತ್ತರ ಪ್ರದೇಶದ ಜನರು ಬದಲು ಮಾಡಿದರು. ಅವರು 2014, 2017 ಮತ್ತು 2019ರಲ್ಲಿ ಒಪ್ಪಿಕೊಂಡಿದ್ದಾರೆ. ನಮ್ಮ ಕೆಲಸವನ್ನು ನೋಡಿ 2022ರಲ್ಲೂ ಒಪ್ಪಿಕೊಳ್ಳುತ್ತಾರೆ.

Rahul Slams PM ನೆಹರು ದೇಶಸೇವೆಗೆ ಯಾರ ಪ್ರಮಾಣ ಪತ್ರ ಬೇಕಿಲ್ಲ: ರಾಹುಲ್‌ ತಿರುಗೇಟು!

ನಾವು ಒಡೆದು ಆಳಲ್ಲ: ನಾವು ವಿವಿಧತೆಯಲ್ಲಿ ಏಕತೆ ಎಂಬ ಸಿದ್ಧಾಂತ ನಂಬುತ್ತೇವೆ. ಆದರೆ ಕೆಲ ನಾಯಕರು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ನಾವು ದೇಶದಲ್ಲಿ 100ಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಿದ್ದೇವೆ. ಇಂದು ಈ ಪೈಕಿ ಕೆಲವು ಜಿಲ್ಲೆಗಳು ಹಲವು ಮಾನದಂಡಗಳಲ್ಲಿ ರಾಷ್ಟ್ರೀಯ ಸರಾಸರಿಯನ್ನು ದಾಟಿವೆ. ಇದು ಪ್ರಾದೇಶಿಕ ಆಕಾಂಕ್ಷೆಗಳನ್ನು ಸಾಧಿಸಲು ಒಂದು ಮಾರ್ಗ. ಈ ಮುಂಚೆ ನಾಯಕರು ಭಾರತಕ್ಕೆ ಬಂದಾಗ ದೆಹಲಿಗೆ ಮಾತ್ರ ಭೇಟಿ ನೀಡುತ್ತಿದ್ದರು. ಆದರೆ ನಾನು ಅವರನ್ನು ವಿವಿಧ ರಾಜ್ಯಗಳಿಗೂ ಕರೆದುಕೊಂಡು ಹೋಗುತ್ತೇನೆ.

ವಂಶರಾಜಕಾರಣ ದೊಡ್ಡ ಶತ್ರು: ಒಂದು ಕುಟುಂಬವು ತಲೆಮಾರುಗಳವರೆಗೆ ಪಕ್ಷವನ್ನು ನಡೆಸಿದಾಗ ಮತ್ತು ಅಲ್ಲಿ ವಂಶಪಾರಂಪರ್ಯ ಆಡಳಿತವಿದ್ದಾಗ ಬೆಳವಣಿಗೆ, ಚಲನೆ ಎರಡೂ ಸಾಧ್ಯವಿಲ್ಲ. ಜಮ್ಮು-ಕಾಶ್ಮೀರದಿಂದ ಹಿಡಿದು ಹರಾರ‍ಯಣ, ಜಾರ್ಖಂಡ್‌, ಉತ್ತರ ಪ್ರದೇಶ ಮತ್ತು ತಮಿಳುನಾಡಿನವರೆಗೆ ಎರಡು ಪ್ರತ್ಯೇಕ ಕುಟುಂಬಗಳಿಂದ ಆಳಲ್ಪಟ್ಟಿರುವ ಎರಡು ಪಕ್ಷಗಳಲ್ಲಿ ಈ ಟ್ರೆಂಡ್‌ ಕಾಣುತ್ತಿದ್ದೇವೆ. ವಂಶ ಪಾರಂಪರ್ಯ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು.

ಯಾರ ತಂದೆ, ಮುತ್ತಜ್ಜನ ಬಗ್ಗೆ ಮಾತಾಡಿಲ್ಲ: ಸಂಸತ್ತಿನಲ್ಲಿ ಮಾಜಿ ಪ್ರಧಾನಿ ನೆಹರೂ ವಿರುದ್ಧ ನಡೆಸಿದ ವಾಗ್ದಾಳಿ ಉಲ್ಲೇಖಿಸಿದ ಮೋದಿ, ನಾನು ಯಾರ ತಂದೆ ಅಥವಾ ಮುತ್ತಜ್ಜನ ವಿರುದ್ಧವೂ ಮಾತನಾಡಿಲ್ಲ. ಮಾಜಿ ಪ್ರಧಾನಿಯೊಬ್ಬರು ಏನು ಹೇಳಿದ್ದರೋ ಅದನ್ನೇ ಹೇಳಿದೆ. ಆ ಬಗ್ಗೆ ತಿಳಿದುಕೊಳ್ಳುವುದು ದೇಶದ ಹಕ್ಕು. ನಾವು ಹೆಸರು ಪ್ರಸ್ತಾಪಿಸದಿದ್ದರೆ ನೆಹರೂ ಹೆಸರನ್ನು ಪ್ರಸ್ತಾಪಿಸುವುದಿಲ್ಲ ಎನ್ನುತ್ತಾರೆ. ಪ್ರಸ್ತಾಪಿಸಿದರೆ ಆಗಲೂ ಕಷ್ಟವಿದೆ. ಈ ಭಯ ಏಕೆ ಅರ್ಥವಾಗುತ್ತಿಲ್ಲ ಎಂದರು.

ರಾಹುಲ್‌ ಸಂಸತ್ತಿಗೇ ಬರಲ್ಲ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ನಿರುದ್ಯೋಗ, ಭಾರತ-ಚೀನಾ ಗಡಿ ವಿವಾದದ ಬಗ್ಗೆ ಕೇಂದ್ರ ಸರ್ಕಾರದಿಂದ ವಿವರ ಕೇಳಿದ್ದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸಂಸತ್‌ ಅಧಿವೇಶನಕ್ಕೇ ಗೈರಾಗುವ, ಕಲಾಪ ಕೇಳಿಸಿಕೊಳ್ಳದ ವ್ಯಕ್ತಿಯ ಪ್ರಶ್ನೆಗೆ ಉತ್ತರ ನೀಡುವುದಾದರೂ ಹೇಗೆ? ಎಂದು ವ್ಯಂಗ್ಯವಾಡಿದರು. ಕೆಲವರು ವಾಗ್ದಾಳಿ ನಡೆಸಲು ಬಳಸುವ ಭಾಷೆ ನನಗೆ ಬರಲ್ಲ. ಅದು ನನ್ನ ಸ್ವಭಾವವೂ ಅಲ್ಲ. ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ. ಬದಲಾಗಿ ಚರ್ಚೆ ಮಾಡುತ್ತೇವೆ. ಕೆಲವೊಮ್ಮೆ ಚರ್ಚೆಗೆ ಅಡಚಣೆಯುಂಟಾಗುತ್ತದೆ. ಅದನ್ನೂ ಸ್ವಾಗತಿಸುತ್ತೇನೆ. ರಾಹುಲ್‌ ಪ್ರಶ್ನೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಆಗಾಗ ವಿವರ ನೀಡಿದ್ದಾರೆ. ಆದರೆ ಸಂಸತ್‌ನಲ್ಲಿ ಕೂರದ, ಕೇಳಿಸಿಕೊಳ್ಳದ ವ್ಯಕ್ತಿಗೆ ಉತ್ತರಿಸುವುದು ಹೇಗೆ ಎಂದರು.

ಕೃಷಿ ಕಾಯ್ದೆ ರದ್ದು ಮಾಡಿದ್ದೇಕೆ?: ನಾನು ರೈತರ ಹೃದಯ ಗೆಲ್ಲಲು ಬಂದೆ ಮತ್ತೆ ಗೆದ್ದೆ ಸಹ. ಸಣ್ಣ ರೈತರ ನೋವು ನನಗೆ ಗೊತ್ತು. ನೂತನ ಕೃಷಿ ಕಾಯ್ದೆಯನ್ನು ರೈತರ ಅನುಕೂಲಕ್ಕಾಗಿ ಜಾರಿ ಮಾಡಿದೆವು. ರಾಷ್ಟ್ರೀಯ ಹಿತಾಸಕ್ತಿಗಾಗಿ ಅದನ್ನು ವಾಪಸ್‌ ಪಡೆದೆವು. ಹಲವು ರೈತರ ಬಲಿ ಪಡೆದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕವಾಗಿದೆ. ಸುಪ್ರೀಂಕೋರ್ಟ್‌ ಯಾವ ಸಮಿತಿಯನ್ನು ರಚಿಸಲು ಬಯಸಿತ್ತೋ, ಯಾವ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಬಯಸಿತೋ ಅದಕ್ಕೆ ಉತ್ತರ ಪ್ರದೇಶ ರಾಜ್ಯಸರ್ಕಾರ ಸಮ್ಮತಿ ನೀಡಿದೆ.

PM On Rahul Gandhi : ಸದನದಲ್ಲಿ ಇರೋದಿಲ್ಲ, ಹೇಳಿದನ್ನ ಕೇಳಿಸಿಕೊಳ್ಳೋದೂ ಇಲ್ಲ!

ಭದ್ರತಾ ಲೋಪದ ಬಗ್ಗೆ ಮಾತಾಡಲ್ಲ: ಪಂಜಾಬ್‌ ಫಿರೋಜ್‌ಪುರ ಭದ್ರತಾ ಲೋಪದ ಬಗ್ಗೆ ನಾನು ಮೌನವಾಗಿದ್ದೇನೆ. ನ್ಯಾಯಾಲಯ ಈ ಬಗ್ಗೆ ಗಂಭೀರವಾಗಿ ವಿಚಾರಣೆ ನಡೆಸುತ್ತಿದೆ. ನನ್ನ ಹೇಳಿಕೆ ಈ ತನಿಖೆ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಈ ಬಗ್ಗೆ ಏನೂ ಹೇಳುವುದಿಲ್ಲ.

ಉ.ಪ್ರ ರೌಡಿಗಳೀಗ ಶರಣಾಗುತ್ತಾರೆ: ಇವತ್ತು ಮಹಿಳೆಯರು ಕತ್ತಲಲ್ಲೂ ಮನೆಯಿಂದ ಹೊರ ಬರಬಹುದು ಎನ್ನುತ್ತಾರೆ. ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಗೂಂಡಾಗಳು ಏನು ಬೇಕಾದರೂ ಮಾಡಬಹುದಿತ್ತು. ಅದು ಮಾಫಿಯಾ ರಾಜ್ಯ, ಗೂಂಡಾ ರಾಜ್ಯವಾಗಿತ್ತು. ರೌಡಿಗಳಿಗೆ ಸರ್ಕಾರವೇ ಆಶ್ರಯ ತಾಣವಾಗಿತ್ತು. ಆದರೆ ಇವತ್ತು ಇವರೆಲ್ಲ ಸರ್ಕಾರಕ್ಕೆ ಶರಣಾಗುತ್ತಾರೆ. ಯೋಗಿ ಆದಿತ್ಯನಾಥ ಭದ್ರತೆಗೆ ಆದ್ಯತೆ ನೀಡುತ್ತಾರೆ ಮತ್ತು ಅದರೊಂದಿಗೆ ರಾಜೀ ಆಗುವುದಿಲ್ಲ.

click me!