ಶಾಂತಿಯ ಪ್ರತಿ ಪ್ರಯತ್ನಕ್ಕೂ ಪಾಕ್‌ನಿಂದ ದ್ರೋಹ: ಅಮೆರಿಕದ ಪಾಡ್‌ಕಾಸ್ಟರ್‌ ಜೊತೆ ಮೋದಿ ವಿಸ್ತೃತ ಸಂವಾದ

ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಾರೆ. ಅಲ್ಲಿನ ಜನರು ಕೂಡಾ ಕಲಹ, ಅಶಾಂತಿ ಮತ್ತು ನಿರಂತರ ಭಯೋತ್ಪಾದನೆಯಲ್ಲಿ ಬದುಕುವುದರಿಂದ ಬೇಸತ್ತಿರಬೇಕು. ಅಲ್ಲಿ ಮುಗ್ಧ ಮಕ್ಕಳು ಸಹ ಕೊಲ್ಲಲ್ಪಡುತ್ತಾರೆ. ಲೆಕ್ಕವಿಲ್ಲದಷ್ಟು ಜೀವಗಳು ನಾಶವಾಗುತ್ತಿವೆ ಎಂದು ಮೋದಿ ಹೇಳಿದ್ದಾರೆ.
 

PM Modi Speaks Pakistan Terror Links Gives Friendly Advice To Ukraine President In Podcast gvd

ನವದೆಹಲಿ (ಮಾ.17): ಪಾಕಿಸ್ತಾನದ ಜೊತೆಗೆ ಶಾಂತಿ ಸ್ಥಾಪನೆಗೆ ನಡೆಸಿದ ಪ್ರತಿಯೊಂದು ಪ್ರಯತ್ನವೂ ದ್ರೋಹ ಮತ್ತು ಹಗೆತನದಿಂದ ಮುಕ್ತಾಯಗೊಂಡಿದೆ. ಮುಂದಾದರೂ ಅವರು ಶಾಂತಿಯ ಮಾರ್ಗ ಅನುಸರಿಸುತ್ತಾರೆ ಎಂಬ ಆಶಾಭಾವನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಪಾಡ್‌ಕಾಸ್ಟರ್‌ ಲೆಕ್ಸ್‌ ಪ್ರೀಡ್‌ಮನ್‌ ಜೊತೆಗಿನ ಸಂದರ್ಶನದಲ್ಲಿ ಪಾಕಿಸ್ತಾನದ ಬಗ್ಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎರಡೂ ದೇಶಗಳ ನಡುವೆ ಶಾಂತಿಯನ್ನು ಬೆಳೆಸುವ ಪ್ರತಿ ಪ್ರಯತ್ನವೂ ಹಗೆತನ ಮತ್ತು ದ್ರೋಹವನ್ನು ಎದುರಿಸಿತು. ಅವರು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. 

ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಾರೆ. ಅಲ್ಲಿನ ಜನರು ಕೂಡಾ ಕಲಹ, ಅಶಾಂತಿ ಮತ್ತು ನಿರಂತರ ಭಯೋತ್ಪಾದನೆಯಲ್ಲಿ ಬದುಕುವುದರಿಂದ ಬೇಸತ್ತಿರಬೇಕು. ಅಲ್ಲಿ ಮುಗ್ಧ ಮಕ್ಕಳು ಸಹ ಕೊಲ್ಲಲ್ಪಡುತ್ತಾರೆ. ಲೆಕ್ಕವಿಲ್ಲದಷ್ಟು ಜೀವಗಳು ನಾಶವಾಗುತ್ತಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಬಗ್ಗೆಯೂ ಮಾತನಾಡಿರುವ ಪ್ರಧಾನಿ, ತಮ್ಮ ಪ್ರಯತ್ನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲಿ ನನ್ನ ಮೊದಲ ಹೆಜ್ಜೆ ಸದ್ಭಾವನೆ ಬೆಳೆಸುವುದಾಗಿತ್ತು. ಇದು ದಶಕಗಳಲ್ಲಿ ಹಿಂದೆಂದೂ ನಡೆಯದ ಘಟನೆಯಗಿತ್ತು. ನನ್ನ ವಿದೇಶಾಂಗ ನೀತಿಯ ವಿಧಾನವನ್ನು ಪ್ರಶ್ನಿಸಿದ ಜನರೇ, ನಾನು ಎಲ್ಲಾ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದೇನೆ ಎಂದು ತಿಳಿದಾಗ ಆಶ್ಚರ್ಯಚಕಿತರಾದರು. 

Latest Videos

ಗೋಧ್ರಾ ಗಲಭೆಯಲ್ಲಿ ನನ್ನನ್ನು ಬಲಿಪಶು ಮಾಡಲು ಸಂಚು: ಕೈಗೆ ಪ್ರಧಾನಿ ಮೋದಿ ಚಾಟಿ

ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆ ಐತಿಹಾಸಿಕ ಸೂಚನೆಯನ್ನು ತಮ್ಮ ಆತ್ಮಚರಿತ್ರೆಯಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಭಾರತದ ವಿದೇಶಾಂಗ ನೀತಿ ಎಷ್ಟು ಸ್ಪಷ್ಟ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಮೋದಿ ಉಭಯ ದೇಶಗಳ ನಡುವಿನ ಸಂಬಂಧ ಹೊಸ ಹಾದಿಯನ್ನು ಹಿಡಿಯಬಹುದು ಎನ್ನುವ ಕಾರಣಕ್ಕೆ 2014ರಲ್ಲಿ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದನ್ನು ನೆನಪಿಸಿಕೊಂಡರು.

ಕ್ರಿಕೆಟ್‌ನಲ್ಲಿ ಪಾಕ್‌ಗಿಂತ ಭಾರತ ತಂಡವೇ ಶ್ರೇಷ್ಠ: ಕೆಲವೇ ದಿನಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆದಿದೆ. ಅವುಗಳಲ್ಲಿ ಯಾವ ತಂಡ ಉತ್ತಮ ಎಂಬುದನ್ನು ಫಲಿತಾಂಶಗಳೇ ತೋರಿಸಿವೆ. ಕ್ರಿಕೆಟ್‌ನ ತಂತ್ರಗಳ ವಿಷಯಕ್ಕೆ ಬಂದರೆ, ನಾನು ತಜ್ಞನಲ್ಲ. ಆದರೆ ಯಾವ ತಂಡ ಮತ್ತು ಯಾವ ಆಟಗಾರರು ಉತ್ತಮ ಎಂಬುದನ್ನು ಫಲಿತಾಂಶಗಳೇ ತೋರಿಸುತ್ತವೆ ಎಂದು ಇತ್ತೀಚಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಹೀನಾಯವಾಗಿ ಸೋತ ಪಾಕ್‌ ತಂಡದ ವಿರುದ್ಧ ಪರೋಕ್ಷವಾಗಿ ಪ್ರಧಾನಿ ಮೋದಿ ಹೇಳಿದರು.

ಮರಡೋನ ನಿಜವಾದ ಹೀರೋ: 1980ರ ದಶಕದಲ್ಲಿ ಫುಟ್‌ಬಾಲ್ ಜಗತ್ತಿನಲ್ಲಿ ಎದ್ದು ಕಾಣುತ್ತಿದ್ದ ಹೆಸರು ಡಿಗೋ ಮರಡೋನಾ. ಆ ಪೀಳಿಗೆಗೆ ಅವರು ನಿಜವಾದ ಹೀರೋ ಆಗಿದ್ದರು. ಅವರು ದಶಕಗಳ ಹಿಂದೆ ಮಧ್ಯಪ್ರದೇಶದ ಶಾದೋಲ್‌ಗೆ ಆಗಮಿಸಿ ಜನರ ಮನಸೂರೆಗೊಂಡಿದ್ದು ನನಗಿನ್ನೂ ನೆನಪಿದೆ. ಇಂದಿನ ಪೀಳಿಗೆಗೆ ಲಿಯೋನೆಲ್ ಮೆಸ್ಸಿ ಅವರು ಹೀರೋ ಎಂದು ಪ್ರಧಾನಿ ಮೋದಿ ಹೇಳಿದರು.

ಪುಟಿನ್‌ - ಜೆಲೆನ್‌ಸ್ಕಿ ಇಬ್ಬರಿಗೂ ಪಾಠ ಹೇಳುವ ಸ್ನೇಹ ನನಗಿದೆ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಇಬ್ಬರಿಗೂ ಯುದ್ಧ ನಿಲ್ಲಿಸಿ ಎಂದು ಪಾಠ ಹೇಳುವ ಸ್ನೇಹ ನನಗಿದೆ. ಪುಟಿನ್‌ ಪಕ್ಕದಲ್ಲಿಯೇ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಹೇಳುತ್ತೇನೆ. ಅದೇ ರೀತಿ ಜೆಲೆನ್‌ಸ್ಕಿಗೂ ‘ಎಷ್ಟೇ ಜನರು ನಿಮ್ಮ ಬೆಂಬಲಕ್ಕೆ ನಿಂತರೂ ಯುದ್ಧ ಭೂಮಿಯಲ್ಲಿ ನಿರ್ಣಯ ಆಗುವುದಿಲ್ಲ ಎಂದು ಸ್ನೇಹಪೂರ್ವಕವಾಗಿ ಹೇಳುತ್ತೇನೆ. ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ದೇಶವಲ್ಲ. ಅಂದು ಇಂದು ಮುಂದು ಶಾಂತಿ ಪರ ವಹಿಸುತ್ತದೆ. ನಮ್ಮದು ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಅವರ ದೇಶ. ಶಾಂತಿ ನೆಲೆಸಲು ಶ್ರಮಿಸಲು ನಾವು ಸಿದ್ಧ. ಈಗ ಸಮಯ ತಿಳಿಯಾಗುತ್ತಿದೆ. ಶಾಂತಿ ಸ್ಥಾಪಿಸಲು ಇದು ಸೂಕ್ತ ಸಮಯ ಎಂದು ರಷ್ಯಾ- ಉಕ್ರೇನ್‌ ವಿಷಯದಲ್ಲಿ ಭಾರತದ ನಿಲುವನ್ನು ಮೋದಿ ವ್ಯಕ್ತಪಡಿಸಿದರು.

ಭಾರತ - ಚೀನಾ ಸ್ಪರ್ಧೆ ಸಂಘರ್ಷವಾಗಬಾರದು: ಭಾರತ ಮತ್ತು ಚೀನಾದ ನಡುವಿನ ಭಿನ್ನಾಭಿಪ್ರಾಯ ಸಹಜ. ಆದರೆ ನೆರೆಯ ದೇಶಗಳ ನಡುವಿನ ಹಿತಾಸಕ್ತಿ ಮತ್ತು ರಾಜಕೀಯ ಸ್ಥಿರತೆಗಾಗಿ ಬಲವಾದ ಸಹಕಾರ ಅಗತ್ಯ. ಚೀನಾ ಅಧ್ಯಕ್ಷ ಕ್ಸಿ ಜೊತೆಗಿನ ಇತ್ತೀಚೆಗಿನ ಮಾತುಕತೆ ಬಳಿಕ ಎರಡು ದೇಶಗಳ ನಡುವಿನ ಗಡಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವುದನ್ನು ನೋಡಬಹುದು. 2020ಕ್ಕಿಂತ ಹಿಂದಿದ್ದ ಪರಿಸ್ಥಿತಿಗೆ ಮರಳಲು ಕೆಲಸ ಮಾಡುತ್ತಿದ್ದೇವೆ. ನಿಧಾನವಾಗಿಯಾದರೂ ಖಂಡಿತವಾಗಿ ನಂಬಿಕೆ, ಉತ್ಸಾಹ, ಶಕ್ತಿ, ಮರಳಬೇಕು. 5 ವರ್ಷಗಳ ಅಂತರವಾಗಿದೆ ಹಾಗಾಗಿ ಸಮಯ ತೆಗೆದುಕೊಳ್ಳುತ್ತದೆ. ಭಾರತ ಮತ್ತು ಚೀನಾದ ನಡುವಿನ ಸಹಕಾರ ಎರಡೂ ದೇಶಗಳಿಗೆ ಮಾತ್ರ ಒಳ್ಳೆಯದಲ್ಲ. ಬದಲಿಗೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೂ ಅತ್ಯಗತ್ಯ. 21ನೇ ಶತಮಾನ ಏಷ್ಯಾದ ಶತಮಾನವಾಗಿರುವುದರಿಂದ ಭಾರತ ಮತ್ತು ಚೀನಾ ನಡುವಿನ ಸ್ಪರ್ಧೆ ಆರೋಗ್ಯಕರ ಮತ್ತು ನೈಸರ್ಗಿಕವಾಗಿ ಇರಬೇಕು. ಸ್ಪರ್ಧೆ ಕೆಟ್ಟದಲ್ಲ. ಆದರೆ ಅದು ಎಂದಿಗೂ ಸಂಘರ್ಷಕ್ಕೆ ತಿರುಗಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನನ್ನ ರೂಪಿಸುವಲ್ಲಿ ಆರ್‌ಎಸ್‌ಎಸ್‌: ಪಾತ್ರ ಅತ್ಯಂತ ನಿರ್ಣಾಯಕ: ಆರ್‌ಎಸ್‌ಎಸ್‌ನ ಪ್ರಮುಖ ಮೌಲ್ಯಗಳಲ್ಲಿ ಒಂದು, ನೀವು ಏನೇ ಮಾಡಿದರೂ ಅದನ್ನು ಒಂದು ಉದ್ದೇಶದಿಂದ ಮಾಡಿ ಎಂಬುದು. ಜೀವನದಲ್ಲಿ ನಿಜವಾದ ಉದ್ದೇಶದ ಕಡೆಗೆ ಆರ್‌ಎಸ್‌ಎಸ್ ಸ್ಪಷ್ಟ ನಿರ್ದೇಶನ ನೀಡುತ್ತದೆ. ರಾಷ್ಟ್ರವೇ ಸರ್ವಸ್ವ ಮತ್ತು ಜನರ ಸೇವೆ ದೇವರ ಸೇವೆಗೆ ಸಮಾನ ಎಂಬುದು ಆರೆಸ್ಸೆಸ್‌ನ ಧ್ಯೇಯ. ಆರ್‌ಎಸ್‌ಎಸ್‌ನಷ್ಟು ಬೃಹತ್ತಾದ ಸ್ವಯಂಸೇವಕ ಸಂಘಟನೆ ಜಗತ್ತಿನ ಬೇರೆಲ್ಲೂ ಇಲ್ಲ. ಲಕ್ಷಾಂತರ ಜನ ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ. ಆರ್‌ಎಸ್‌ಎಸ್‌ನ ಸೇವಾ ಆಧರಿತ ಚಿಂತನೆ ನನ್ನನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇಂತಹ ಪವಿತ್ರ ಸಂಘಟನೆಯಿಂದ ಮೌಲ್ಯಗಳನ್ನು ಪಡೆದಿದ್ದಕ್ಕೆ ನಾನು ಧನ್ಯನಾಗಿದ್ದೇನೆ’ ಎಂದು ಹೇಳಿದರು.

ಎಐ ಎಂದಿಗೂ ಮಾನವನ ಕಲ್ಪನೆಗೆ ಸರಿಸಾಟಿಯಲ್ಲ: ಕೃತಕ ಬುದ್ಧಿಮತ್ತೆ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಎಂದಿಗೂ ಮಾನವನ ಕಲ್ಪನೆಯ ಆಳಕ್ಕೆ ಹೊಂದಿಕೆಯಾಗಲು ಸಾಧ್ಯವಾಗದಿರಬಹುದು. ಜಗತ್ತು ಎಐನೊಂದಿಗೆ ಏನೇ ಮಾಡಿದರೂ ಭಾರತವಿಲ್ಲದೇ ಅಪೂರ್ಣವಾಗಿ ಉಳಿಯುತ್ತದೆ ಎಂದು ಮೋದಿ ಹೇಳಿದ್ದಾರೆ. ಪ್ರತಿಯೊಂದು ಯುಗದಲ್ಲೂ ಮಾನವೀಯತೆ ಮತ್ತು ತಂತ್ರಜ್ಞಾನದ ನಡುವೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗಿತ್ತು. ಇದು ಮಾನವನ ಅಸ್ತಿತ್ವಕ್ಕೆ ಸವಾಲು ಎನ್ನುವಂತೆ ಚಿತ್ರಿಸಲಾಗಿತ್ತು. ಆದರೆ ತಂತ್ರಜ್ಞಾನ ಮುಂದುವರೆದಂತೆ ಮಾನವರು ಹೊಂದಿಕೊಂಡು ಯಾವಾಗಲೂ ಒಂದು ಹೆಜ್ಜೆ ಮುಂದಿದ್ದರು. ಮಾನವರು ತಂತ್ರಜ್ಞಾನವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಎಐ ನಿಜವಾದ ಶಕ್ತಿ. ಆದರೆ ಮನುಷ್ಯನ ಕಲ್ಪನೆಯೇ ಇಂಧನ. 

ವಿಷಯಗಳನ್ನು ಸೃಷ್ಟಿಸಬಹುದು, ಹೆಚ್ಚಿದ್ದನ್ನು ಸಾಧಿಸಬಹುದು. ಆದರೆ ಯಾವುದೇ ತಂತ್ರಜ್ಞಾನ ಮಾನವನ ಮನಸ್ಸಿನ ಮಿತಿ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಜೊತೆಗೆ, ಜಗತ್ತು ಎಐನೊಂದಿಗೆ ಏನೇ ಮಾಡಿದರೂ, ಭಾರತವಿಲ್ಲದೇ ಅದು ಅಪೂರ್ಣವಾಗಿ ಉಳಿಯುತ್ತದೆ. ಭಾರತವು ಕೇವಲ ಸೈದ್ಧಾಂತಿಕ ಎಐ ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಎಐ ಚಾಲಿತ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಜೀವಂತಗೊಳಿಸುತ್ತಿದೆ. ನಾವು ಬಹಳ ಹಿಂದುಳಿದ್ದೇವೆ ಎಂದು ಜಗತ್ತು ಆರಂಭದಲ್ಲಿ ನಂಬಿತ್ತು. ಆದರೆ 5ಜಿ ನೆಟ್‌ವರ್ಕ್‌ ಬಳಸುವಲ್ಲಿ ಜಾಗತಿಕವಾಗಿ ನಾವು ಅತ್ಯಂತ ವೇಗದ ರಾಷ್ಟ್ರವಾದೆವು ಎಂದು ಪ್ರಧಾನಿ ಮೋದಿ 5ಜಿ ಉದಾಹರಣೆಯನ್ನು ಉಲ್ಲೇಖಿಸಿದರು.

ಮೊದಲ ಸಲಕ್ಕಿಂತ ಈ ಬಾರಿ ಟ್ರಂಪ್‌ ಸನ್ನದ್ಧ: ತಮ್ಮ ಮೊದಲ ಅಧ್ಯಕ್ಷೀಯ ಅವಧಿಗೆ ಹೋಲಿಸಿದರೆ ಈ ಬಾರಿ ದೇಶ ಮುನ್ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಚ್ಚು ಸನ್ನದ್ಧರಾಗಿದ್ದಾರೆ. ಅವರು ತಾನು ಹೋಗಬೇಕಾದ ಹಾದಿಯ ಬಗ್ಗೆ ಸ್ಪಷ್ಟ ಗುರಿ ಹೊಂದಿದ್ದಾರೆ ಅದರತ್ತವೇ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಉತ್ತಮ ತಂಡವಿದ್ದು ಅವರ ಗುರಿಯನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುತ್ತಿದ್ದರು. ನನ್ನ ಪ್ರಕಾರ ಆ ತಂಡ ಟ್ರಂಪ್ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಮೋದಿ ಹೇಳಿದ್ದಾರೆ. ಜೊತೆಗೆ ಟ್ರಂಪ್‌ರೊಂದಿಗೆ ಪರಸ್ಪರ ನಂಬಿಕೆ, ಬಾಂಧವ್ಯವಿದೆ. ಅವರು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆ ಇಡುವುದರಿಂದ ಇಬ್ಬರ ನಡುವೆ ಉತ್ತಮ ಸಂಪರ್ಕಕ್ಕೆ ಕಾರಣ ಎಂದು ಮೋದಿ

ಉಪವಾಸದಿಂದ ಗ್ರಹಿಕೆ ಸಾಮರ್ಥ್ಯ ಹೆಚ್ಚಳ: ಉಪವಾಸದಿಂದ ಗ್ರಹಣಶಕ್ತಿ ಹೆಚ್ಚು ತೀಕ್ಷ್ಣವೂ ಜಾಗೃತವೂ ಆಗುತ್ತದೆ. ಇಂದ್ರಿಯಗಳು ಪೂರ್ಣ ಕ್ರಿಯಾಶೀಲವಾಗುತ್ತವೆ. ಗಮನಿಸುವ ಮತ್ತು ಗ್ರಹಿಸುವ ಸಾಮರ್ಥ್ಯ ಬಲಗೊಳ್ಳುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಲೆಕ್ಸ್‌ ಜೊತೆಗಿನ ಸಂದರ್ಶನದ ವೇಳೆ ತಮ್ಮ ಉಪವಾಸದ ಅನುಭವವನ್ನು ಹಂಚಿಕೊಂಡ ಪ್ರಧಾನಿ ‘ನಮ್ಮ ಧರ್ಮಗ್ರಂಥಗಳಲ್ಲಿ ಮನಸ್ಸು, ಆತ್ಮ, ದೇಹ, ಬುದ್ಧಿ ಮತ್ತು ಮಾನವೀಯತೆಯನ್ನು ಉನ್ನತೀಕರಿಸುವ ಬಗ್ಗೆ ಆಳವಾದ ಚರ್ಚೆ ಇದೆ. ಇದನ್ನು ಸಾಧಿಸಲು ವಿವಿಧ ಆಚರಣೆಗಳನ್ನು ವಿವರಿಸಲಾಗಿದೆ. ಉಪವಾಸ ಅಂಥ ಆಚರಣೆಗಳಲ್ಲಿ ಒಂದು ಎಂದು ವಿವರಿಸಿದರು.

ಒಬಾಮಾ ನೀಡಿದ 2 ಊಟದ ಸಲಹೆ: ತಾವು ಉಪವಾಸ ವ್ರತದಲ್ಲಿದ್ದ ವೇಳೆ ಅಮೆರಿಕ ಭೇಟಿಯನ್ನು ಸ್ಮರಿಸಿದ ಮೋದಿ, ‘ನಾನು ಪ್ರಧಾನಿಯಾದ ಬಳಿಕ ಅಮೆರಿಕ ಅಧ್ಯಕ್ಷ ಒಬಾಮಾ ಅವರೊಂದಿಗೆ ದ್ವಿಪಕ್ಷೀಯ ಸಭೆಗಾಗಿ ಶ್ವೇತಭವನಕ್ಕೆ ತೆರಳಿದ್ದೆ. ಅಲ್ಲಿ ಭೋಜನ ಏರ್ಪಡಿಸಿದ್ದರು. ದಯವಿಟ್ಟು ನಮ್ಮೊಂದಿಗೆ ಭೋಜನಕ್ಕೆ ಸೇರಿ ಎಂದು ಅಲ್ಲಿದ್ದ ಒಬ್ಬರು ಹೇಳಿದರು. ಆದರೆ ಪ್ರಧಾನಿ ಮೋದಿ ಊಟ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದು ಅವರನ್ನು ಕಳವಳಕ್ಕೆ ದೂಡಿತು. ಆದರೆ ನಾನು ಒಂದು ಲೋಟ ಬಿಸಿ ನೀರು ತರಿಸಿಕೊಂಡು, ಇದೇ ನನ್ನ ಭೋಜನ ಎಂದೆ. ಮುಂದಿನ ಸಲ ಅಮೆರಿಕಕ್ಕೆ ಹೋದಾಗ, ನೀವು ಕಳೆದ ಸಲ ಊಟ ಮಾಡಿಲ್ಲ. ಹಾಗಾಗಿ ಈ ಬಾರಿ 2 ಸಲ ಊಟ ಮಾಡಬೇಕೆಂದು ಒಬಾಮಾ ತಮಾಷೆ ಮಾಡಿದರು’ ಎಂದು ನೆನಪಿಸಿಕೊಂಡರು.

ಸಾವಿನ ಬಗ್ಗೆ ಚಿಂತಿಸುವ ಬದಲು ಜೀವನ ಸ್ವೀಕರಿಸಿ: ಸಾವು ಅನಿವಾರ್ಯ. ಆದರೆ ನಿಜವಾಗಿಯೂ ಮುಖ್ಯವಾಗಿರುವುದು ನಾವು ಹೇಗೆ ಬದುಕುತ್ತೇವೆ ಎನ್ನುವುದು, ಸಾವಿನ ಬಗ್ಗೆ ಚಿಂತಿಸುವ ಮುನ್ನ ಜೀವನವನ್ನು ಅಪ್ಪಿಕೊಳ್ಳಿ ಎಂದು ಮೋದಿ ಹೇಳಿದ್ದಾರೆ. ಸಾವಿನ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ ಜೀವನವು ಸಾವಿನ ಪಿಸುಮಾತಿನ ಭರವಸೆ ಎಂಬುದು ನಮಗೆ ತಿಳಿದಿದೆ. ಆದರೂ ಜೀವನ ಏಳಿಗೆ ಹೊಂದುವ ಉದ್ದೇಶ ಹೊಂದಿದೆ. ಜೀವನ ಮತ್ತು ಸಾವಿನ ನೃತ್ಯದಲ್ಲಿ ಸಾವು ಮಾತ್ರ ಖಚಿತ. ಅದಕ್ಕಾಗಿ ನೀವು ಸಾವಿನ ಬಗ್ಗೆ ಚಿಂತಿಸುವ ಬದಲು ಜೀವನವನ್ನು ಸ್ವೀಕರಿಸಿ. ಏಕೆಂದರೆ ಅನಿಶ್ಚತತೆ ನಡುವೆಯೂ ಜೀವನ ಅಭಿವೃದ್ಧಿ ಹೊಂದುತ್ತದೆ ಮತ್ತು ವಿಕಸನಗೊಳ್ಳುತ್ತದೆ’ ಎಂದಿದ್ದಾರೆ. ಪ್ರತಿ ಕ್ಷಣವನ್ನು ಉದ್ದೇಶಪೂರ್ವಕವಾಗಿ ಕಳೆಯಬೇಕು ಎಂದಿರುವ ಪ್ರಧಾನಿ, ‘ಸಾವು ಬಂದು ಬಡಿಯುವ ಮುನ್ನ ನೀವು ಬದುಕಲು ಸಾಧ್ಯವಾಗುವಂತೆ ಸಂಪೂರ್ಣ ಜೀವನವನ್ನು ರೂಪಿಸಿಕೊಳ್ಳಿ. ಸಾವು ಅನಿವಾರ್ಯ ಮತ್ತು ಅದು ಯಾವಾಗ ಬರುತ್ತದೆ ಎಂದು ಚಿಂತಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಯಾವಾಗ ಬರಬೇಕೋ ಆಗಲೇ ಬರುತ್ತದೆ’ ಎಂದು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕಿಂತ ಶ್ರೇಷ್ಠ: ಪ್ರಧಾನಿ ಮೋದಿ

ಅಂಕಗಳು ವಿದ್ಯಾರ್ಥಿಯ ಸಾಮರ್ಥ್ಯ ನಿರ್ಧರಿಸಲ್ಲ: ಅಂಕಗಳು ಮಾತ್ರ ವಿದ್ಯಾರ್ಥಿಯ ನಿಜವಾದ ಸಾಮರ್ಥ್ಯಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಪರೀಕ್ಷೆಗಳು ಜ್ಞಾನ ಮತ್ತು ಸ್ವಯಂ ಬೆಳವಣಿಗೆಯ ದೊಡ್ಡ ಪ್ರಯಾಣದ ಒಂದು ಸಣ್ಣ ಭಾಗ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಇಂದು ಸಮಾಜದಲ್ಲಿ ಒಂದು ವಿಚಿತ್ರ ಮನಸ್ಥಿತಿ ಬೆಳೆದಿದೆ. ಶಾಲೆಗಳು ವಿದ್ಯಾರ್ಥಿಗಳ ಶ್ರೇಯಾಂಕದ ಮೂಲಕ ತಮ್ಮ ಯಶಸ್ಸನ್ನು ಅಳೆಯುತ್ತವೆ. ಮಗು ಹಚ್ಚು ಅಂಕ ಗಳಿಸಿದಾಗ ಪೋಷಕರು ಹೆಮ್ಮೆಪಡುತ್ತಾರೆ. ಅದು ಮಗುವಿನ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ಎತ್ತರಿಸುತ್ತದೆ ಎಂಬುದು ಅವರ ಭಾವನೆ. ಈ ಮನಸ್ಥಿತಿಯು ಮಕ್ಕಳ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಿದೆ. ಮಕ್ಕಳು ಸಮಾಜದ ಮುಂದೆ ಪ್ರದರ್ಶಿಸಲು ಇರುವ ಟ್ರೋಫಿಗಳಲ್ಲ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಈ ಸಮಸ್ಯೆಯನ್ನು ಪರಿಹರಿಸಲು ನಾವು ಹೊಸ ಶಿಕ್ಷಣ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸಿದ್ದೇವೆ’ ಎಂದರು.

click me!