ದಂಗೆಕೋರರಿಗೆ ಪ್ರಧಾನಿ ಮೋದಿ ತರಾಟೆ

By Kannadaprabha NewsFirst Published Dec 26, 2019, 7:39 AM IST
Highlights

ಪೌರತ್ವ ಕಾಯ್ದೆ ವಿರೋಧಿಸಿ ಹೋರಾಟದ ವೇಳೆ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾದ ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಖನೌ [ಡಿ.26]:  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್‌ಆರ್‌ಸಿ) ವಿರೋಧಿಸಿ ನಡೆಯುತ್ತಿರುವ ಹೋರಾಟದ ವೇಳೆ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾದ ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಿ ನಾಶ ಮಾಡಿದ ಬಗ್ಗೆ ತೀವ್ರ ಅತೃಪ್ತಿ, ಆಕ್ರೋಶ ಹೊರಹಾಕಿರುವ ಮೋದಿ, ಗಲಭೆಕೋರರು ಯಾವುದನ್ನು ನಾಶಗೊಳಿಸಿದ್ದಾರೋ, ಅವು ಅವರ ಮಕ್ಕಳಿಗೆ ಉಪಯೋಗಕ್ಕೆ ಬರುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಕುರಿತು ಗಲಭೆಯಂತಹ ಕೃತ್ಯಕ್ಕೆ ಕೈಹಾಕುವವರು ಸ್ವವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಇಲ್ಲಿನ ಲೋಕಭವನದಲ್ಲಿ ಬುಧವಾರ ಅಟಲ್‌ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ‘ಅವರು (ಗಲಭೆಕೋರರು) ತಾವು ಮಾಡಿದ್ದು ಸರಿಯಾ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ತಮ್ಮ ಯೋಚನಾ ಕ್ರಮ ಸರಿಯಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅವರು ಏನನ್ನು ಸುಟ್ಟು ಹಾಕಿದ್ದಾರೋ, ಅವೆಲ್ಲ ಅವರ ಮಕ್ಕಳಿಗೆ ಉಪಯೋಗಕ್ಕೆ ಬರುತ್ತಿರಲಿಲ್ಲವೇ?’ ಎಂದು ತೀಕ್ಷ$್ಣವಾಗಿ ಪ್ರಶ್ನಿಸಿದರು.

‘ಘೋರ ಹಿಂಸಾಚಾರದಲ್ಲಿ ಮೃತಪಟ್ಟವರ ಬಗ್ಗೆ ಯೋಚಿಸಲಿ. ಗಲಭೆ ವೇಳೆ ಗಾಯಗೊಂಡ ಜನಸಾಮಾನ್ಯರು ಹಾಗೂ ಪೊಲೀಸ್‌ ಸಿಬ್ಬಂದಿಯ ಬಗ್ಗೆ ಚಿಂತಿಸಲಿ. ಸಂತ್ರಸ್ತರ ಕುಟುಂಬ ಸದಸ್ಯರ ಮನಸ್ಸಿಗೆ ಎಷ್ಟುಆಘಾತವಾಗಿರಬಹುದು ಎಂಬ ಬಗ್ಗೆ ವಿಮರ್ಶೆ ಮಾಡಿಕೊಳ್ಳಲಿ’ ಎಂದು ಮೋದಿ ಹರಿಹಾಯ್ದರು.

‘ಪ್ರತಿಭಟನೆಯ ಹೆಸರಿನಲ್ಲಿ ಹಲವರು ಭಾರೀ ಹಿಂಸಾಚಾರ ನಡೆಸಿದರು. ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶ ಮಾಡಿದರು. ಹೀಗೆ ಮಾಡಿದವರು ತಾವು ಆಯ್ದುಕೊಂಡ ಮಾರ್ಗ ಸರಿಯೇ ಎಂದು ಪ್ರಶ್ನಿಸಿಕೊಳ್ಳಬೇಕು’ ಎಂದ ಪ್ರಧಾನಿ, ‘ಸ್ವಾತಂತ್ರ್ಯನಂತರ ನಾವು ಹಕ್ಕುಗಳ ಬಗ್ಗೆಯೇ ಮಾತನಾಡುತ್ತ ಬಂದಿದ್ದೇವೆ. ಈಗ ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾಗುತ್ತಿವೆ. ಈ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳಿಗೂ ಸಮಾನ ಆದ್ಯತೆ ನೀಡಬೇಕು ಎಂಬುದನ್ನು ನಾನು ಗಲಭೆಕೋರರಿಗೆ ನೆನಪಿಸಬಯಸುತ್ತೇನೆ’ ಎಂದು ಕುಟುಕಿದರು.

ಅಜಾತಶತ್ರುವಿಗೆ 95: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಟಲ್ ಸ್ಮರಣೆ!..

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ ಮೋದಿ, ‘ಆಷ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದ ಜನರು ತಮ್ಮ ಹೆಣ್ಣುಮಕ್ಕಳ ಗೌರವ ಉಳಿಸಬೇಕು ಎಂಬ ಉದ್ದೇಶ ಹೊಂದಿದವರು. ಅದಕ್ಕೆ ದೇಶದ 130 ಕೋಟಿ ಜನರು ಪರಿಹಾರ ಕಂಡು ಹಿಡಿದರು. ಹೊಸ ಆತ್ಮವಿಶ್ವಾಸದೊಂದಿಗೆ ಹಿಂದುಸ್ತಾನಿಗಳು ಹೊಸ ದಶಕಕ್ಕೆ ಪ್ರವೇಶಿಸಿದ್ದಾರೆ. ಏನು ಬಾಕಿ ಉಳಿದಿದೆಯೋ ಅದಕ್ಕೆಲ್ಲ ಪರಿಹಾರ ಕಂಡುಹಿಡಿಯುತ್ತಿದ್ದಾರೆ. ಸವಾಲಿಗೇ ಸವಾಲು ಹಾಕುವ ಮನೋಭಾವದೊಂದಿಗೆ ನಾವಿದ್ದೇವೆ’ ಎಂದರು.

ಇನ್ನು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದಯಪಾಲಿಸಿದ್ದ ಪರಿಚ್ಛೇದ 370ನ್ನು ರದ್ದುಗೊಳಿಸಿದ್ದನ್ನು ಪ್ರಸ್ತಾಪಿಸಿದ ಅವರು, ‘ಪರಿಚ್ಛೇದ 370 ಎಂಬುದು ಹಳೆಯ ರೋಗ. ಅದು ತುಂಬಾ ಸಮಸ್ಯೆಯಾಗಿ ಕಾಡಿತು. ಇಂತಹ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದುನಮ್ಮ ಜವಾಬ್ದಾರಿ. ಹಾಗಾಗಿ ಸುಲಭವಾಗಿ ಇದನ್ನು ವಾಸಿ ಮಾಡಲಾಯಿತು. ಎಲ್ಲರ ಊಹೆಗಳು ಚೂರು ಚೂರಾದವು’ ಎಂದರು.

‘ರಾಮಜನ್ಮಭೂಮಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲಾಯಿತು’ ಎಂದೂ ಅವರು ಹೇಳಿದರು.

click me!