
ಲಖನೌ [ಡಿ.26]: ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ಎಸಗಿದ ಗಲಭೆಕೋರರ ವಿರುದ್ಧ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮಗಳನ್ನು ಮುಂದುವರೆಸಿದೆ. ರಾಂಪುರ, ಗೋರಖ್‌ಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆಸಿದ್ದ 300ಕ್ಕೂ ಹೆಚ್ಚು ಮಂದಿಗೆ ಸ್ಥಳೀಯ ಜಿಲ್ಲಾಡಳಿಗಳು ನೋಟಿಸ್ ಜಾರಿ ಮಾಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಮಾಡಿದ ಹಾನಿಗೆ ನಷ್ಟಭರಿಸುವಂತೆ ಸೂಚಿಸಿವೆ. ಈ ಪೈಕಿ ರಾಂಪುರ ಜಿಲ್ಲೆಯೊಂದರಲ್ಲೇ 28 ಜನರಿಗೆ ಒಟ್ಟಾರೆ 25 ಲಕ್ಷ ರು. ದಂಡ ಪಾವತಿಸಲು ಸೂಚಿಸಲಾಗಿದೆ. ನಿಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ವಾದವೇನು ತಿಳಿಸಿ ಇಲ್ಲವೇ ಸಾರ್ವಜನಿಕ ಆಸ್ತಿಗೆ ಮಾಡಿದ ಹಾನಿಗೆ ಪರಿಹಾರ ನೀಡಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಉತ್ತರ ನೀಡಲು 7 ದಿನಗಳ ಗಡುವು ನೀಡಲಾಗಿದೆ. ಈ ಮೂಲಕ ಸಾರ್ವಜನಿಕ ಆಸ್ತಿ ಹಾನಿ ಮಾಡಿದವರಿಂದಲೇ ಅದರ ಮೌಲ್ಯ ವಸೂಲಿಗೆ ಮುಂದಾಗಿದೆ.
ಕರ್ನಾಟಕದಲ್ಲೂ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯಾಗಿದ್ದು, ಯಡಿಯೂರಪ್ಪ ಸರ್ಕಾರ ಕೂಡ ಉತ್ತರ ಪ್ರದೇಶ ಸರ್ಕಾರದ ಮಾದರಿ ಅನುಸರಿಸುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಗಲಭೆಕೋರರಿಗೆ ನೋಟಿಸ್:
ರಾಂಪುರದಲ್ಲಿ ನಡೆದ ಘಟನೆ ಸಂಬಂಧ ಅಧಿಕಾರಿಗಳು ಒಟ್ಟು 28 ಜನರಿಗೆ ನೋಟಿಸ್ ನೀಡಿದ್ದು, ಒಟ್ಟಾರೆ 25 ಲಕ್ಷ ರು. ಪರಿಹಾರ ತುಂಬಿಕೊಡುವಂತೆ ಸೂಚಿಸಿದ್ದಾರೆ. ರಾಂಪುರದಲ್ಲಿ ನಡೆದ ಹಿಂಸಾಚಾರದ ವೇಳೆ ಗಲಭೆಕೋರರು 4 ಮೋಟರ್ ಸೈಕಲ್ ಹಾಗೂ ಒಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದರು. ಇದಲ್ಲದೆ ಇತರೆ ಸಾರ್ವಜನಿಕ ಆಸ್ತಿಗೂ ಹಾನಿ ಮಾಡಿದ್ದರು. ಈ ಹಾನಿಯನ್ನು ಭರಿಸುವುದಲ್ಲದೆ, ಗಲಭೆ ಮಾಡಿದವರಿಗೆ ಪೊಲೀಸರ ಹೆಲ್ಮೆಟ್ ಹಾಗೂ ಲಾಠಿಗಳು ಮುರಿದಿದ್ದಕ್ಕೂ ದಂಡ ತೆರಿ ಎಂದು ಸೂಚಿಸಲಾಗಿದೆ. ಪೊಲೀಸರು ಹಾರಿಸಿದ ಗುಂಡಿನ ಪರಿಹಾರವನ್ನೂ ಕೊಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಗಲಭೆ ಸಂಬಂಧ ರಾಂಪುರದಲ್ಲಿ 33 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ 150 ಜನರ ಕೈವಾಡ ಶಂಕಿಸಲಾಗಿದೆ.
ವಿವಾದದ ನಡುವೆಯೇ ಏಪ್ರಿಲ್‌ನಿಂದ ಎನ್‌ಪಿಆರ್ ಪ್ರಕ್ರಿಯೆ ಶುರು!...
ಇನ್ನು ಗೋರಖ್‌ಪುರ ಆಡಳಿತವು ಇದೇ ರೀತಿಯಲ್ಲಿ 33 ಜನರಿಗೆ ನೋಟಿಸ್ ಜಾರಿ ಮಾಡಿದ್ದು, ದಂಡ ಪಾವತಿಸುವಂತೆ ಸೂಚಿಸಿದೆ. ಒಂದು ವೇಳೆ ಠಾಣೆಗೆ ಹಾಜರಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದಲ್ಲಿ ಆಸ್ತಿ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಇತರೆ ಹಲವು ಜಿಲ್ಲೆಗಳಲ್ಲೂ ಇದೇ ರೀತಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಹೀಗೆ ನೋಟಿಸ್ ಜಾರಿ ಮಾಡಲ್ಪಟ್ಟವರ ಸಂಖ್ಯೆ 300 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಎಚ್ಚರಿಕೆ ನೀಡಿದ್ದ ಯೋಗಿ
ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಗಲಭೆಕೋರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ’ ಎಂದಿದ್ದರು. ಇದರ ಬೆನ್ನಲ್ಲೇ ಗಲಭೆಪೀಡಿತ ಮುಜಫ್ಫರ್‌ನಗರದಲ್ಲಿ 67 ಗಲಭೆಕೋರರ ಅಂಗಡಿಗಳಿಗೆ ಸೀಲ್ ಜಡಿದು ಜಪ್ತಿ ಮಾಡಲಾಗಿತ್ತು ಹಾಗೂ ಲಖನೌನಲ್ಲಿ ಗಲಾಟೆ ಮಾಡಿದವರಿಗೆ ದಂಡ ತೆರಲು ನೋಟಿಸ್ ನೀಡಲಾಗಿತ್ತು. ದಂಡ ಪಾವತಿಸಲು ವಿಫಲವಾದರೆ ಆಸ್ತಿ ಜಪ್ತಿ ಮಾಡುವ ಎಚ್ಚರಿಕೆ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ