
ನವದೆಹಲಿ (ಏಪ್ರಿಲ್ 22, 2023): ಸೂಡಾನ್‌ನಲ್ಲಿ ಆಂತರಿಕ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಲ್ಲಿ ನೆಲೆಸಿರುವ ಅಂದಾಜು 3000 ಭಾರತೀಯರನ್ನು ಸೂಕ್ತ ಸಮಯ ನೋಡಿ ತೆರವುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಯೋಜನೆಗಳನ್ನು ಸಿದ್ಧಪಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಯಾವುದೇ ಕ್ಷಣದಲ್ಲಿ ಮತ್ತೊಂದು ಏರ್‌ಲಿಫ್ಟ್‌ಗೆ ಸಜ್ಜಾಗುವಂತೆ ಸೂಚಿಸಿದ್ದಾರೆ.
ಸೂಡಾನ್‌ನಲ್ಲಿರುವ (Sudan) ಭಾರತೀಯ (India) ಸ್ಥಿತಿಗತಿಯ ಕುರಿತಾಗಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಕ್ರವಾರ ಸಂಪುಟ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಸೂಡಾನ್‌ನಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯ ಮಾಹಿತಿಯನ್ನು ಅಧಿಕಾರಿಗಳು ನೀಡಿದರು. ಈ ವೇಳೆ ಸೂಡಾನ್‌ನಲ್ಲಿ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕುರಿತಾಗಿ ಗಮನ ಹರಿಸುವಂತೆ ಸೂಚಿಸಿದರು. ರಕ್ಷಣೆಗೆ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗೆ ಸೂಚನೆ ನೀಡಿದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ (Prime Minister Office) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ: ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ
ವರ್ಚುವಲ್ ಆಗಿ ನಡೆದ ಈ ಸಭೆಯಲ್ಲಿ ವಿದೇಶಾಂಗ ಸಚಿವ (External Affairs Minister) ಎಸ್.ಜೈಶಂಕರ್ (S Jaishankar), ವಾಯುಪಡೆ, ನೌಕಾಪಡೆಯ ಮುಖ್ಯಸ್ಥರು, ವಿದೇಶಾಂಗ ಇಲಾಖೆಯ ಪ್ರಮುಖ ಅಧಿಕಾರಿಗಳು ಮತ್ತು ರಕ್ಷಣಾ ವಿಭಾಗದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ, ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಪ್ರಧಾನಿ ಪರಿಶೀಲಿಸಿದರು. ಅಲ್ಲದೆ, ಗುಂಡಿನ ದಾಳಿಯಲ್ಲಿ ಕಳೆದ ವಾರ ಮೃತಪಟ್ಟ ಭಾರತೀಯ ಪ್ರಜೆ ಸಾವಿಗೀಡಾಗಿದ್ದು, ಈ ಹಿನ್ನೆಲೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತೀಯರ ಸುರಕ್ಷತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವಾಗ ತೀವ್ರ ಎಚ್ಚರಿಕೆಯಿಂದ ಮತ್ತು ಬೆಳವಣಿಗೆಗಳ ಮೇಲೆ ನಿಗಾ ಇಡಲು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಆದೇಶಿಸಿದರು. ಸಿಲುಕಿರುವ ಭಾರತೀಯರಿಗೆ ಅಗತ್ಯವಿರುವ ಯಾವುದೇ ರೀತಿಯ ಸಹಾಯವನ್ನು ಒದಗಿಸುವಂತೆಯೂ ಅಧಿಕಾರಿಗಳಿಗೆ ಪ್ರಧಾನಿ ಒತ್ತಾಯಿಸಿದರು.
ಈ ಅಸ್ಥಿರ ಪರಿಸ್ಥಿತಿಯಲ್ಲಿ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಕಸ್ಮಿಕ ಸ್ಥಳಾಂತರಿಸುವ ಯೋಜನೆಗಳನ್ನು ರಚಿಸಲು ಮತ್ತು ಇತರ ಆಯ್ಕೆಗಳಿಗಾಗಿ ಪರಿಶೀಲಿಸಿ ಎಂದು ಪ್ರಧಾನಿ ಮೋದಿ ಸೂಚನೆಗಳನ್ನು ನೀಡಿದರು. ಸೂಡಾನ್‌ನ ಗಡಿಯಲ್ಲಿರುವ ರಾಷ್ಟ್ರಗಳೊಂದಿಗೆ ಮತ್ತು ಅಲ್ಲಿ ವಾಸಿಸುವ ನಿವಾಸಿಗಳ ಗಣನೀಯ ಪ್ರಮಾಣದ ಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳೊಂದಿಗೆ ಬಲವಾದ ಸಂಬಂಧವನ್ನು ಇಟ್ಟುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ರಾಜಕೀಯ ಮಾಡಬೇಡಿ, ಸುಡಾನ್ ಕನ್ನಡಿಗರ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿದ ಸಿದ್ದುಗೆ ಜೈಶಂಕ್ ತಿರುಗೇಟು!
ಭಾರತ ಸರ್ಕಾರವು ನಾಗರಿಕರಿಗೆ ಆಶ್ರಯ ಪಡೆಯಲು ಮತ್ತು ಜಾಗರೂಕರಾಗಿರಲು ಎಚ್ಚರಿಕೆ ನೀಡಲು ಮೂರು ಸಲಹೆಗಳನ್ನು ನೀಡಿದೆ.ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರೊಂದಿಗೆ ವಿಷಯ ಪ್ರಸ್ತಾಪಿಸಿದರು. ಮಾತುಕತೆಯ ಸಂದರ್ಭದಲ್ಲಿ, ಸೂಡಾನ್ ಬಿಕ್ಕಟ್ಟನ್ನು ಪರಿಹರಿಸುವ ಮತ್ತು ಅಲ್ಲಿನ ಭಾರತೀಯರನ್ನು ರಕ್ಷಿಸುವ ಅಗತ್ಯವನ್ನು ಜೈಶಂಕರ್ ಒತ್ತಿ ಹೇಳಿದರು.
"ನಿಸ್ಸಂಶಯವಾಗಿ, ನಾವು ಈ ವಿಷಯದಲ್ಲಿ ಬಹಳ ಬಲವಾದ ಆಸಕ್ತಿಯನ್ನು ಹೊಂದಿದ್ದೇವೆ ಏಕೆಂದರೆ ಅಲ್ಲಿ ಹಲವಾರು ಭಾರತೀಯರು ಇದ್ದಾರೆ" ಎಂದು ಆಂಟೋನಿಯೋ ಗುಟೆರೆಸ್ ಅವರೊಂದಿಗಿನ ಭೇಟಿಯ ನಂತರ ಜೈಶಂಕರ್ ಗುರುವಾರ ಹೇಳಿದರು.
ಇದನ್ನೂ ಓದಿ: ಹಿಂಸಾಪೀಡಿತ ಸುಡಾನ್‌ನಲ್ಲಿ 31 ಜನ ಕನ್ನಡಿಗ ಹಕ್ಕಿಪಿಕ್ಕಿಗಳು ಅತಂತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ