‘ಕೈ’ಗೆ ಮೋದಿ ಸವಾಲ್!| ಎರಡು ಪಂಥಾಹ್ವಾನ ನೀಡಿದ ಪ್ರಧಾನಿ| 1. ಎಲ್ಲ ಪಾಕಿಸ್ತಾನೀಯರಿಗೂ ಭಾರತೀಯ ಪೌರತ್ವ ಕೊಡುತ್ತೇವೆ ಎಂದು ಘೋಷಿಸಿ| 2. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ವಾಪಸ್ ತರುತ್ತೇವೆಂದು ಹೇಳಿ ನೋಡೋಣ
ಜಾರ್ಖಂಡ್[ಡಿ.18]: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ಸಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆ ಪಕ್ಷಕ್ಕೆ ಎರಡು ಸವಾಲನ್ನೂ ಹಾಕಿದ್ದಾರೆ. ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಧೈರ್ಯ ಇದ್ದರೆ ಪಾಕಿಸ್ತಾನದ ಪ್ರತಿಯೊಬ್ಬ ಪ್ರಜೆಗೂ ಭಾರತೀಯ ಪೌರತ್ವ ನೀಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಲಿ. ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ 370ನೇ ವಿಧಿಯನ್ನು ವಾಪಸ್ ತರುತ್ತೇವೆ ಎಂದು ಪ್ರಕಟಿಸಲಿ ಎಂದು ಅಬ್ಬರಿಸಿದ್ದಾರೆ.
ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾರಯಲಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಹೊಸ ಪೌರತ್ವ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಹೊಸ ಕಾನೂನಿನ ಕುರಿತು ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಪೌರತ್ವ ಕಾಯ್ದೆ ಯಾವುದೇ ಭಾರತೀಯರ ಹಕ್ಕುಗಳನ್ನು ಕುಸಿಯುವುದಿಲ್ಲ. ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟು ಮಾಡುವುದಿಲ್ಲ ಎಂದು ತಿಳಿಸಿದರು.
undefined
ಧಾರ್ಮಿಕ ಶೋಷಣೆಯ ಕಾರಣಗಳಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಆಷ್ಘಾನಿಸ್ತಾನ ತೊರೆದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆ ಭಾರತೀಯ ಮುಸ್ಲಿಮರ ಹಕ್ಕುಗಳನ್ನು ಯಾವ ರೀತಿ ಅತಿಕ್ರಮಿಸಿಕೊಂಡಿದೆ ಎಂಬುದನ್ನು ತಿಳಿಯುವ ಕುತೂಹಲ ನನಗೂ ಇದೆ ಎಂದು ಹೇಳಿದರು.
ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ಬೀದಿಗೆ ಇಳಿದು ಹಿಂಸಾಚಾರ ನಡೆಸುತ್ತಿರುವ ವಿದ್ಯಾರ್ಥಿಗಳನ್ನೂ ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಿ ಮೋದಿ ‘ಪ್ರತಿಭಟನೆಯಲ್ಲಿ ತೊಡಗಿರುವ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಸರ್ಕಾರದ ಜತೆಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾತುಕತೆಗೆ ತರಬೇಕು. ನಮ್ಮ ನೀತಿಗಳ ಬಗ್ಗೆ ನೀವು ಚರ್ಚೆ ನಡೆಸಿ. ನಮಗೆ ಭಾರತೀಯ ಸಂವಿಧಾನವೇ ಪವಿತ್ರ ಪುಸ್ತಕ. ನಿಮ್ಮ ಮಾತುಗಳನ್ನು ಆಲಿಸಲು ನಾವು ಸಿದ್ಧ. ಆದರೆ ಹಿಂಸಾಚಾರಕ್ಕೆ ಕೈಹಾಕಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ತೊಂದರೆ ಸೃಷ್ಟಿಸುವ ಉದ್ದೇಶದಿಂದ ನಗರ ನಕ್ಸಲರು ಯುವಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.