ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಲೋಕಸಭೆಗೆ ಆಂಗ್ಲೋ ಇಂಡಿಯನ್ ಸದಸ್ಯರ ನಾಮನಿರ್ದೇಶನವಾಗಿಲ್ಲ.
ಬೆಂಗಳೂರು (ಡಿ. 17): ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಹಾಗೂ ಆಂಗ್ಲೋ ಇಂಡಿಯನ್ನರಿಗೆ ಕಳೆದ 70 ವರ್ಷಗಳಿಂದ ನೀಡಲಾಗುತ್ತಿರುವ ಮೀಸಲಾತಿಯು 2020 ಜನವರಿ 25ಕ್ಕೆ ಅಂತ್ಯಗೊಳ್ಳಲಿದೆ. ಕಳೆದ ವಾರ ಸಂವಿಧಾನದ 126ನೇ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಸರ್ಕಾರ ಪ.ಜಾತಿ ಹಾಗೂ ಪ.ಪಂಗಡದ ಮೀಸಲಾತಿಯನ್ನು ಇನ್ನೂ 10 ವರ್ಷಗಳ ಕಾಲ ವಿಸ್ತರಿಸಿದೆ.
ಆದರೆ ಆಂಗ್ಲೋ ಇಂಡಿಯನ್ ಮೀಸಲಾತಿ ರದ್ದತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅದು ಅಂಗೀಕಾರವೂ ಆಗಿದೆ. ಆದರೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಂಗ್ಲೋ ಇಂಡಿಯನ್ನರು ಎಂದರೆ ಯಾರು, ಸಂವಿಧಾನದಲ್ಲಿ ಅವರಿಗೆ ನೀಡಲಾಗಿರುವ ಮೀಸಲಾತಿ ಏನು, ಅವರಿಗೇಕೆ ಈ ಪ್ರಾತಿನಿಧ್ಯ ಎಂಬ ವಿಸ್ತೃತ ಮಾಹಿತಿ ಇಲ್ಲಿದೆ.
ನಿರ್ಭಯಾ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ CJI, ದೋಷಿಗಳಿಗೆ ಗಲ್ಲು ವಿಳಂಬ?
ಆಂಗ್ಲೋ ಇಂಡಿಯನ್ ಎಂದರೆ ಯಾರು?
ಆಂಗ್ಲ ಅಧಿಕಾರಿಗಳು ಭಾರತದ ಸ್ಥಳೀಯ ಯುವತಿಯನ್ನು ವಿವಾಹವಾಗುವುದನ್ನು ಪ್ರೋತ್ಸಾಹಿಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹೆಸರಿಸಿದ ಅಧಿಕೃತ ಸಮುದಾಯವೇ ಆಂಗ್ಲೋ ಇಂಡಿಯನ್. ಆಂಗ್ಲೋ ಇಂಡಿಯನ್ ಎಂಬ ಪದ ಮೊಟ್ಟಮೊದಲಿಗೆ ಕಾಣಿಸಿಕೊಂಡಿದ್ದು 1935ರ ಭಾರತ ಸರ್ಕಾರ ಕಾಯ್ದೆಯಲ್ಲಿ.
ಸದ್ಯ ಭಾರತ ಸಂವಿಧಾನದ 366ನೇ ವಿಧಿಯ ಪ್ರಕಾರ ಆಂಗ್ಲೋ ಇಂಡಿಯನ್ ಎಂದರೆ, ಓರ್ವ ಆಂಗ್ಲೋ ಇಂಡಿಯನ್‌ನ ವಂಶಸ್ಥರು ಅಥವಾ ಅವನ ವಂಶಾವಳಿಯ ಪುರುಷರು ಯುರೋಪಿಯನ್ ಮೂಲದವರಾಗಿದ್ದು, ಆತ ಭಾರತದ ಪ್ರಾದೇಶಿಕ ಗಡಿಯೊಳಗೆ ವಾಸಿಸುತ್ತಿದ್ದರೆ ಅಥವಾ ಇದೇ ಪ್ರದೇಶದಲ್ಲಿ ಜನಸಿದವರಾಗಿದ್ದರೆ ಅಥವಾ ಅವರ ತಂದೆ, ತಾಯಿ ಪೋಷಕರು ಇಲ್ಲಿಗೆ ಸೇರಿದವರಾಗಿದ್ದರೆ ಅವರನ್ನು ಆಂಗ್ಲೋ ಇಂಡಿಯನ್ ಎಂದು ಕರೆಯಲಾಗುತ್ತದೆ. ಆದರೆ ಅವರು ತಾತ್ಕಾಲಿಕವಾಗಿ ಇಲ್ಲಿನ ನಿವಾಸಿಗಳಾಗಿರದೆ ಶಾಶ್ವತ ನಿವಾಸಿಗಳಾಗಿರಬೇಕು. ಸ್ವಾತಂತ್ರ್ಯಾ ನಂತರ ಇದೊಂದು ಅಧಿಕೃತ ಅಲ್ಪಸಂಖ್ಯಾತ ಸಮುದಾಯವೆಂದು ಸಂವಿಧಾನದಲ್ಲಿ ಗುರುತಿಸಲಾಗಿದೆ.
ರೈಲ್ವೆಯ ಮಕ್ಕಳಿವರು!
ಬ್ರಿಟಿಷರು ಭಾರತದಲ್ಲಿ ರೈಲು ಸೇವೆ ಮತ್ತು ಟೆಲಿಫೋನ್ ಸೇವೆ ಆರಂಭಿಸಿದಾಗ ಯುರೋಪಿನ ಜನರು ಈ ಕ್ಷೇತ್ರದಲ್ಲಿ ಪರಿಣತರಾಗಿದ್ದರಿಂದ ಅವರನ್ನು ಭಾರತಕ್ಕೆ ಕರೆತಂದು ರೈಲ್ವೆ ಕ್ಷೇತ್ರಗಳಲ್ಲಿ ನಿಯೋಜಿಸಿದ್ದರು. ಇವರಲ್ಲಿ ಬಹುತೇಕರು ಭಾರತದ ಸ್ಥಳೀಯ ಹೆಣ್ಣು ಮಕ್ಕಳನ್ನು ವಿವಾಹವಾಗಿ ಕ್ರಮೇಣ ಇಲ್ಲಿಯೇ ನೆಲೆಸಿದರು. ಆಂಗ್ಲೋ ಇಂಡಿಯನ್ ಸಮುದಾಯದ ಹಲವರಿಗೆ ರೈಲ್ವೆಯೊಂದಿಗೆ ಅವಿನಾಭಾವ ಸಂಪರ್ಕವಿದೆ. ಹಾಗಾಗಿಯೇ ಇವರನ್ನು ‘ರೈಲ್ವೆ ಮಕ್ಕಳು’ ಎಂದು ಕರೆಯಲಾಗುತ್ತದೆ.
SC, ST ಮೀಸಲಾತಿ 10 ವರ್ಷ ಮುಂದುವರಿಕೆ: ರಾಜ್ಯದ ಮೀಸಲು ಕ್ಷೇತ್ರಗಳು ಎಷ್ಟು?ಯಾವುವು?
ಭಾರತದಲ್ಲಿ ಎಷ್ಟು ಜನರಿದ್ದಾರೆ?
2011ರ ಜನಗಣತಿ ಪ್ರಕಾರ ಭಾರತದಲ್ಲಿ ಕೇವಲ 296 ಆಂಗ್ಲೋ ಇಂಡಿಯನ್ನರಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ಸದನದಲ್ಲಿ ಹೇಳಿದ್ದಾರೆ. ಆದರೆ ಅಖಿಲ ಭಾರತ ಆಂಗ್ಲೋ-ಇಂಡಿಯನ್ ಸಂಘವು ಕೇಂದ್ರ ಸಚಿವರ ಈ ಹೇಳಿಕೆಯನ್ನು ಅಲ್ಲಗಳೆದಿದೆ. ಅಲ್ಲದೆ ಸಂಘದ ಅಧ್ಯಕ್ಷರು ಪ್ರಧಾನಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. ಅವರು ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಸದ್ಯ ಭಾರತದಲ್ಲಿ 1.5 ಲಕ್ಷದಿಂದ 4 ಲಕ್ಷ ಆಂಗ್ಲೋ ಇಂಡಿಯನ್ನರಿದ್ದಾರೆ ಎನ್ನಲಾಗುತ್ತಿದೆ.
ಏನೇನು ಮೀಸಲಾತಿ ಇದೆ?
ಭಾರತದಲ್ಲಿ ಈವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿವೆ. ಲೋಕಸಭೆಯ ಒಟ್ಟು ಗರಿಷ್ಠ ಸ್ಥಾನಗಳು 552 (530 ರಾಜ್ಯಗಳಿಂದ ಆಯ್ಕೆಯಾಗುವ ಸಂಸದರು +20 ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗುವ ಸದಸ್ಯರು+ 2 ಆಂಗ್ಲೋ ಇಂಡಿಯನ್ನರು). ಸಂವಿಧಾನದ 331ನೇ ವಿಧಿ ಪ್ರಕಾರ ಲೋಕಸಭೆಯಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ನರ ನಾಮನಿರ್ದೇಶನಕ್ಕೆ ಅವಕಾಶವಿದೆ. ಅದರಲ್ಲಿ ‘ಶಾಸನ ಸಭೆಯಲ್ಲಿ ಆಂಗ್ಲೋ ಇಂಡಿಯನ್ನರನ್ನು ಪ್ರತಿನಿಧಿಸುವವರು ಯಾರೂ ಇಲ್ಲ ಎಂದು ರಾಷ್ಟ್ರಪತಿಗಳು ಭಾವಿಸಿದಲ್ಲಿ ಅವರು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ಲೋಕಸಭೆಗೆ ನಾಮ ನಿರ್ದೇಶನ ಮಾಡಬಹುದು’ ಎಂದಿದೆ.
ಹಾಗೆಯೇ ಆರ್ಟಿಕಲ್ 333ಯು ‘ರಾಜ್ಯಗಳ ವಿಧಾನ ಸಭೆಯಲ್ಲಿ ಆಂಗ್ಲೋ ಇಂಡಿಯನ್ನರನ್ನು ಪ್ರತಿನಿಧಿಸುವವರು ಸದಸ್ಯರು ಇಲ್ಲ ಎಂದು ರಾಜ್ಯಪಾಲರು ಭಾವಿಸಿದಲ್ಲಿ ಅವರು ಒಬ್ಬ ಆಂಗ್ಲೋ ಇಂಡಿಯನ್‌ನನ್ನು ವಿಧಾನಸಭೆಗೆ ನಾಮ ನಿರ್ದೇಶನ ಮಾಡಬಹುದು’ ಎಂದು ಹೇಳುತ್ತದೆ. ಸದ್ಯ 14 ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸದಸ್ಯರನ್ನು ನೇಮಕ ಮಾಡಲಾಗಿದೆ. ಅವೆಂದರೆ ಆಂಧ್ರಪ್ರದೇಶ, ಬಿಹಾರ, ಚತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
6 ತಿಂಗಳ ಒಳಗಾಗಿ ರಾಜಕೀಯ ಪಕ್ಷದ ಸದಸ್ಯತ್ವ ಪಡೆಯಬೇಕು
ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಆಯ್ಕೆಯಾಗುವ ಆಂಗ್ಲೋ ಇಂಡಿಯನ್ ಸದಸ್ಯರು ನಾಮ ನಿರ್ದೇಶನವಾದ 6 ತಿಂಗಳ ಒಳಗಾಗಿ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಸದಸ್ಯತ್ವ ಹೊಂದಬೇಕು.
ಲೋಕಸಭೆ ಅಥವಾ ವಿಧಾನಸಭೆಯ ಇತರ ಸದಸ್ಯರಿಗಿರುವ ಎಲ್ಲಾ ಅಧಿಕಾರಗಳೂ ಇವರಿಗೆ ಇರುತ್ತವೆ. ಆದರೆ ಇವರು ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಳ್ಳುವುದರಿಂದ ರಾಷ್ಟ್ರಪತಿ ಚುನಾವಣೆ ವೇಳೆ ಮತ ಹಾಕುವ ಹಕ್ಕಿರುವುದಿಲ್ಲ.
ಆಂಗ್ಲೋ ಇಂಡಿಯನ್ನರಿಗೆ ಪ್ರಾತಿನಿಧ್ಯ ಏಕೆ?
ವಕೀಲರು ಹಾಗೂ ಶಿಕ್ಷಣ ತಜ್ಞರಾಗಿದ್ದ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ್ದ ಫ್ರಾಂಕ್ ಆ್ಯಂಥೋನಿ ಅವರು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ವಲ್ಲಭಾ ಬಾಯಿ ಪಟೇಲ್ ಅವರ ಆಪ್ತ ಸಲಹಾಗಾರರೂ ಆಗಿದ್ದರು. ಅಲ್ಲದೆ ಇವರು 1942ರಿಂದ 1993ರ ವರೆಗೆ ಅಖಿಲ ಭಾರತ ಆಂಗ್ಲೋ ಇಂಡಿಯನ್ ಅಸೋಸಿಯೇಶನ್‌ನ ಅಧ್ಯಕ್ಷರೂ ಹೌದು. ಆ್ಯಂಥೋನಿ ಅವರು ಸಂವಿಧಾನ ರಚನೆ ವೇಳೆ, ಆಂಗ್ಲೋ ಇಂಡಿಯನ್ ಸಮುದಾಯ ಭಾರತದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದು.
ಹಾಗಾಗಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಈ ಸಮುದಾಯದ ಹಿತಾಸಕ್ತಿಯ ರಕ್ಷಣೆಗಾಗಿ ಮೀಸಲಾತಿ ಮುಖ್ಯ ಎಂದು ಸಂವಿಧಾನ ರಚನಾಕಾರರಿಗೆ ಮನವರಿಕೆ ಮಾಡಿದ್ದರು. ಆಂಗ್ಲೋ ಇಂಡಿಯನ್ ಮೀಸಲಾತಿ ಕಲ್ಪಿಸಲು ನೆಹರುಗೆ ಸಲಹೆ ನೀಡಿದ್ದರು. ಅದರನ್ವಯ ಭಾರತ ಸಂವಿಧಾನದಲ್ಲಿ ಈ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಯ್ತು. ಆದಾಗ್ಯೂ, ಸಂವಿಧಾನ ರಚನೆಯಾದ ದಿನಾಂಕದಿಂದ 70 ವರ್ಷಗಳಲ್ಲಿ ಆಂಗ್ಲೋ-ಇಂಡಿಯನ್ನರ ಮೀಸಲಾತಿ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಆರ್ಟಿಕಲ… 334 ಹೇಳುತ್ತದೆ. ಹಾಗಾಗಿ 25 ಜನವರಿ 2020ರ ನಂತರ, ಈ ಮೀಸಲಾತಿಯನ್ನು ಸಂಸತ್ತು ವಿಸ್ತರಣೆಯನ್ನು ಮಾಡದಿದ್ದರೆ ಇದು ಅಸ್ತಿತ್ವದಲ್ಲಿ ಇರುವುದಿಲ್ಲ.
ಈ ಬಾರಿ ನಾಮನಿರ್ದೇಶನ ಮಾಡಿಲ್ಲ
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಲೋಕಸಭೆಗೆ ಆಂಗ್ಲೋ ಇಂಡಿಯನ್ ಸದಸ್ಯರ ನಾಮನಿರ್ದೇಶನವಾಗಿಲ್ಲ. ಆಂಗ್ಲೋ ಇಂಡಿಯನ್ ಮೀಸಲಾತಿ ಕೋಟಾ ರದ್ದು ಮಾಡುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಮಾಜ ಕಲ್ಯಾಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನೊಳಗೊಂಡ ನಿಯೋಗ ಶಿಫಾರಸು ನೀಡಿತ್ತು. ಅದರನ್ವಯ ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಮೀಸಲಾಗಿದ್ದ ಕೋಟಾ ರದ್ದು ಮಾಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇನ್ನು ರಾಜ್ಯಸಭೆಯಲ್ಲಿ ಮಸೂದೆ ಪಾಸಾಗುವುದೊಂದೇ ಬಾಕಿ ಇದೆ.
ಹೆಚ್ಚಿನವರು ವಲಸೆ ಹೋಗಿದ್ದಾರೆ
ಆಂಗ್ಲೊ-ಇಂಡಿಯನ್ಸ್, ಮೆಸ್ಟಿಕೊಸ್ (ಮಿಶ್ರಿತ ಪೊರ್ಚುಗೀಸ್ ಮತ್ತು ಭಾರತೀಯ), ಇಂಡೋ-ಡಚ್, ಇಂಡೋ-ಫ್ರೆಂಚ್ ಸಮುದಾಯವು ಭಾರತದ ಸ್ವಾತಂತ್ರ್ಯಕ್ಕಿಂತ ಮೊದಲು ಸಣ್ಣ ಒಂದು ಅಲ್ಪಸಂಖ್ಯಾತ ಸಮೂಹವಾಗಿ ಭಾರತದಲ್ಲಿತ್ತು. ಆದರೆ ಸ್ವಾತಂತ್ರ್ಯಾನಂತರ ಅವರುಗಳಲ್ಲಿ ಹೆಚ್ಚಿನವರು ಹೊರ ದೇಶಗಳಿಗೆ ವಲಸೆ ಹೋಗಿದ್ದಾರೆ.
ಬಹಳಷ್ಟು ಜನರು ಬ್ರಿಟನ್ , ಆಸ್ಪ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆನಡಾ ಮತ್ತು ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಹಾಗಾಗಿ ಆಂಗ್ಲೋ ಇಂಡಿಯನ್ ಸಮುದಾಯದ ಜನಸಂಖ್ಯೆ ತೀರಾ ಕಡಿಮೆ ಇದೆ. ಹೀಗೆ ವಲಸೆ ಹೋದವರಲ್ಲಿ ಅನುಕೂಲಸ್ಥರೇ ಹೆಚ್ಚು, ಭಾರತದಲ್ಲಿ ಉಳಿದಿರುವುದು ಬಡವರು ಮಾತ್ರ ಎನ್ನಲಾಗುತ್ತಿದೆ.
ಮೀಸಲಾತಿ ರದ್ದತಿ ವಿರುದ್ಧ ಸಣ್ಣ ದನಿಯಲ್ಲಿ ವಿರೋಧ
126ನೇ ತಿದ್ದುಪಡಿ ಮಸೂದೆಯು ಲೋಕಸಭೆ ಹಾಗೂ ವಿವಿಧ ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ಸಂಬಂಧಿಸಿದೆ. ಈ ಮಸೂದೆಯ ಮುಖ್ಯ ಉದ್ದೇಶ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸುವ ಕ್ರಮವನ್ನು ಇನ್ನೂ ಹತ್ತು ವರ್ಷಗಳವರೆಗೆ ಮುಂದುವರಿಸಬೇಕು ಎಂಬುದಾಗಿದೆ. ಹಾಗೆಯೇ ಲೋಕಸಭೆ ಒಳಗೊಂಡಂತೆ ದೇಶದ ಎಲ್ಲ ಶಾಸನಸಭೆಗಳಿಗೆ ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುವ ಕ್ರಮವನ್ನು ನಿಷೇಧಿಸಬೇಕೆಂಬ ಆಶಯವನ್ನೂ ಒಳಗೊಂಡಿದೆ.
ಪರಿಶಿಷ್ಟಜಾತಿ ಹಾಗೂ ಪಂಗಡದ ಮೀಸಲಾತಿಯನ್ನು ಈಗಾಗಲೇ ಇನ್ನೂ 10 ವರ್ಷಗಳ ವರೆಗೆ ವಿಸ್ತರಿಸಲಾಗಿದೆ. ಆಂಗ್ಲೋ ಇಂಡಿಯನ್ ಮೀಸಲಾತಿ ರದ್ದತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕೋಲ್ಕತಾ ಕೇಂದ್ರಿತ ಅಖಿಲ ಭಾರತ ಆಂಗ್ಲೋ ಇಂಡಿಯನ್ನರ ಸಂಘದಿಂದ ಕ್ಷೀಣ ದನಿಯಲ್ಲಿ ಪ್ರತಿಭಟಿಸುತ್ತಿದೆ. ಈ ಸಂಘವು ಅಷ್ಟೊಂದು ಪ್ರಬಲವಾಗಿಲ್ಲದ ಕಾರಣ ವಿರೋಧವು ಹೆಚ್ಚು ಸುದ್ದಿಯಾಗುತ್ತಿಲ್ಲ.
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ