ನಂಬಿಕಸ್ಥ, ನಿಸ್ವಾರ್ಥ ಪ್ರಾಣಿಗೆ ಸೈನಿಕನ ಸೆಲ್ಯೂಟ್!| ವೈರಲ್ ಆದ ಫೋಟೋದಲ್ಲಿ ಭಾರತೀಯ ಸೇನಾ ಪರಂಪರೆ ಅನಾವರಣ| ಮನಗೆದ್ದ ಫೋಟೋ ಹಿಂದಿದೆ, ಸುಂದರ ಕತೆ
ನವದೆಹಲಿ[ಡಿ.17]: ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಸೇನಾಧಿಕಾರಿಯೊಬ್ಬರು ಹಲವಾರು ಜನರ ಪ್ರಾಣ ಕಾಪಾಡಿದ ನಂಬಿಕೆಗೆ ಹಾಗೂ ನಿಸ್ವಾರ್ಥಕ್ಕೆ ಹೆಸರುವಾಸಿಯಾಗಿರುವ ಶ್ವಾನಕ್ಕೆ ಸೆಲ್ಯೂಟ್ ಹೊಡೆಯುವ ಫೋಟೋ ನೆಟ್ಟಿಗರ ಮನ ಗೆದ್ದಿದೆ.
ಚಿನಾರ್ ಕಾರ್ಪ್ಸ್ ನ ಕಮಾಂಡರ್ ಕೆಜೆಎಸ್ ಡಿಲಾನ್ ರವರು ಶ್ವಾನಕ್ಕೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಲೆಫ್ಟಿನೆಂಟ್ ಜನರಲ್ ಡಿಲಾನ್ ಖುದ್ದು ಈ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೇನಾಧಿಕಾರಿಯೊಬ್ಬರು ತನ್ನ ಯೂನಿಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯ[ಶ್ವಾನ]ನಿಗೆ ಸೆಲ್ಯೂಟ್ ಹೊಡೆದಿದ್ದು, ಈ ವೇಳೆ ಆ ಶ್ವಾನವೂ ಅಷ್ಟೇ ಗಾಂಭಿರ್ಯದಿಂದ ಅಧಿಕಾರಿ ನೀಡಿದ ಗೌರವ ಸ್ವೀಕರಿಸಿದೆ.
Day Salute to the Buddy who saved many a lives many a times 🙏🇮🇳✊ https://t.co/Xr7PQkUiWM
— KJS DHILLON (@Tiny_Dhillon)ಟ್ವೀಟ್ ಮಾಡಿರುವ ಡಿಲಾನ್ 'RVC ದಿನದಂದು ಈ ಪುಟ್ಟ ಸೈನಿಕನಿಗೆ ನನ್ನ ಸೆಲ್ಯೂಟ್. ಇದು ಹಲವಾರು ಸಂದರ್ಭದಲ್ಲಿ ಹಲವಾರು ಜನರ ಪ್ರಾಣ ಕಾಪಾಡಿದೆ' ಎಂದು ಬರೆದಿದ್ದಾರೆ.
ಸಾಮಾನ್ಯವಾಗಿ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುವ ಶ್ವಾನಗಳ ಹಲವಾರು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಈ ಫೋಟೋ ಸೇನಾಧಿಕಾರಿಯೊಬ್ಬರು ಮತ್ತೊಬ್ಬ ಸೈನಿಕನಿಗೆ[ಸೇನೆಯಲ್ಲಿ ಸೇವೆ ಸಲ್ಲಿಸುವ ಶ್ವಾನಗಳನ್ನೂ ಸೇನಿಕನೆಂದೇ ಕರೆಯಲಾಗುತ್ತದೆ. ಇವುಗಳಿಗೆ ಸೈನಿಕರಂತೆ ವಿಶೇಷ ತರಬೇತಿ ನೀಡಲಾಗುತ್ತದೆ] ಮೊಣಕಾಲೂರಿ ಸೆಲ್ಯೂಟ್ ಹೊಡೆಯುತ್ತಿರುವ ಈ ದೃಶ್ಯ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ. ಈ ಫೋಟೋ ಅಮರನಾಥ ಯಾತ್ರೆಯ ಹಿಂದಿನ ದಿನ ಅಂದರೆ ಜುಲೈ 1ರಂದು ತೆಗೆದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಸೈನ್ಯಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಡಿಲಾನ್ ಅಮರನಾಥ ಗುಹೆ ಪ್ರವೇಶಿಸಿ ದರ್ಶನ ಪಡೆಯಲು ತೆರಳುತ್ತಿದ್ದರು. ಈ ವೇಳೆ 50 ಮೀಟರ್ ದೂರದಲ್ಲಿ ಶ್ವಾನ ತನ್ನ ಕರ್ತವ್ಯ ನಿರ್ವಹಿಸುತ್ತಿತ್ತು. ಕಮಾಂಡರ್ ಶ್ವಾನದ ಬಳಿ ತಲುಪುತ್ತಿದ್ದಂತೆ ಶ್ವಾನ ಅವರಿಗೆ ಸಲಾಂ ಹೊಡೆದಿದೆ. ಭಾರತೀಯ ಸೇನಾ ಪರಂಪರೆಯನ್ವಯ ಕಿರಿಯ ಸೈನಿಕರು ಸೆಲ್ಯೂಟ್ ಹೊಡೆದರೆ ಅದಕ್ಕೆ ಪ್ರತಿಯಾಗಿ ಸೀನಿಯರ್ಸ್ ಸೆಲ್ಯೂಟ್ ಹೊಡೆದು ಗೌರವಿಸಬೇಕು. ಹೀಗಾಗಿ ಡಿಲಾನ್ ಶ್ವಾನಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ.