
ನವದೆಹಲಿ(ಡಿ.15): ಜನರ ಜೀವನಮಟ್ಟಸುಧಾರಣೆಗೆ ಬಿಜೆಪಿ(BJP) ಆಡಳಿತದ ಎಲ್ಲಾ ಸರ್ಕಾರಗಳು ಆದ್ಯತೆ ನೀಡಬೇಕು. ಜೊತೆಗೆ ಪ್ರತಿ ಸರ್ಕಾರಗಳು ಒಂದಲ್ಲಾ ಒಂದು ವಿಷಯದಲ್ಲಿ ವಿಶೇಷ ಸಾಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi), ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಾರಾಣಸಿಯಲ್ಲಿ(Varanasi) ಕರ್ನಾಟಕ(Karnataka) ಸೇರಿದಂತೆ ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದರು. ಈ ವೇಳೆ ಮೋದಿ ಅವರು ಆಯಾ ರಾಜ್ಯಗಳ ಅಭಿವೃದ್ಧಿ ಚಟುವಟಿಕೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಮಾಹಿತಿ ಪಡೆದರು. ಇದೇ ವೇಳೆ, ಅಭಿವೃದ್ಧಿ ಕುರಿತಾದ ತಮ್ಮ ಸಲಹೆ-ಸೂಚನೆಗಳನ್ನೂ ನೀಡಿದರು.
Kashi Vishwanath Corridor: ಕೇವಲ 9 ಕ್ಯಾಬಿನೆಟ್ ಸಭೆ, ಮೋದಿ ಕನಸು ಸಾಕಾರಗೊಳಿಸಿದ ಸಿಎಂ ಯೋಗಿ!
ಹಲವು ಸಲಹೆ: ಸಭೆಯಲ್ಲಿ ಮಾತನಾಡಿದ ಮೋದಿ, ಜನರ ಜೀವನ ಮಟ್ಟಸುಧಾರಣೆಗೆ ಸರ್ಕಾರಗಳು ಆದ್ಯತೆ ನೀಡಬೇಕು. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬೇಕು ಮತ್ತು ಆತ್ಮನಿರ್ಭರ ಭಾರತ ಸೃಷ್ಟಿಯತ್ತ ಹೆಜ್ಜೆ ಇಡಬೇಕು. ಈ ಯೋಜನೆಗಳು ಫಲಕೊಡುತ್ತಲೇ, ಇಂಥ ಉತ್ಪನ್ನಗಳನ್ನು ವಿದೇಶಕ್ಕೆ ರಪ್ತು ಮಾಡುವ ಮೂಲಕ ಅವುಗಳಿಗೆ ಜಾಗತಿಕ ಮಾರುಕಟ್ಟೆಸೃಷ್ಟಿಸಬೇಕು. ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳ ಗುಣಮಟ್ಟಕಾಪಾಡುವ ಮೂಲಕ ಬ್ರ್ಯಾಂಡ್ ಸೃಷ್ಟಿಸಬೇಕು ಎಂದು ಕರೆಕೊಟ್ಟರು.
ಇದೇ ವೇಳೆ ಆಡಳಿತದಲ್ಲಿ ತಂತ್ರಜ್ಞಾನ(Technology) ಬಳಕೆಯ ಮಹತ್ವ ಪ್ರತಿಪಾದಿಸಿದ ಪ್ರಧಾನಿ, ದತ್ತಾಂಶ ಆಧರಿತ ಆಡಳಿತದ ಮೂಲಕ ಸರ್ಕಾರದ ಪ್ರತಿ ಸೌಲಭ್ಯವೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣ ಪ್ರತಿ ಸರ್ಕಾರದ ಆದ್ಯತಾ ವಲಯಗಳಾಗಬೇಕು. ಅಪೌಷ್ಠಿತತೆ ನಿವಾರಿಸಲು ಪೋಷಕಾಂಶ ಅಭಿಯಾನ ಬಲಗೊಳಿಸಬೇಕು. ಯುವ ಸಮೂಹದಲ್ಲಿ ಕ್ರೀಡೆ ಮತ್ತು ದೈಹಿಕ ಕ್ಷಮತೆ ಸಂಸ್ಕೃತಿ ಹೆಚ್ಚಿಸಬೇಕು. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಜಾರಿಯಾಗಬೇಕು. ಜಾರಿಯಲ್ಲಿಲ್ಲದ, ಬಳಕೆಯಾಗದ ಪುರಾತನ ಕಾನೂನು ರದ್ದುಪಡಿಸಬೇಕು’ ಎಂದು ಕರೆಕೊಟ್ಟರು.
Banaras Station ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ತಡ ರಾತ್ರಿ ರೈಲು ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಮೋದಿ!
ಸಭೆ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಪರಿಸರ ಸ್ನೇಹಿ ಮೂಲಸೌಕರ್ಯ ಯೋಜನೆ, ಕುಟುಂಬ ಗುರುತಿನ ಚೀಟಿ, ನೈಸರ್ಗಿಕ ಕೃಷಿ, ಗ್ರಾಮೀಣ ಯೋಜನೆ, ಸ್ವಸಹಾಯ ಸಂಘ ಮೊದಲಾದ ವಿಷಯ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.’
ಸಾರನಾಥ್, ಸಂಕಟಮೋಚನ ಮಂದಿರ ಭೇಟಿ:
ಈ ನಡುವೆ, ಮಂಗಳವಾರ ಎಲ್ಲ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಸಪತ್ನೀಕರಾಗಿ ಕಾಶಿ ಸನಿಹದ ಸಾರನಾಥ್‌ಗೂ ಭೇಟಿ ನೀಡಿದರು. ಗೋಪಾಲನೆ ಹಾಗೂ ಸಾವಯವ ಕೃಷಿ ಕುರಿತು ತಿಳಿದುಕೊಳ್ಳಲು ಸಹಾರನ್‌ಪುರಕ್ಕೂ ಭೇಟಿ ನೀಡಿದರು.
ಇಂದು ಅಯೋಧ್ಯೆಗೆ:
ಕಾಶಿ ಭೇಟಿ ಪೂರ್ಣಗೊಳಿಸಿರುವ 12 ಬಿಜೆಪಿ ಮುಖ್ಯಮಂತ್ರಿಗಳ ಪೈಕಿ 11 ಮುಖ್ಯಮಂತ್ರಿಗಳು ಹಾಗೂ 3 ಉಪಮುಖ್ಯಮಂತ್ರಿಗಳು ಮಂಗಳವಾರ ರಾಮಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಮೊದಲು ಹನುಮಾನ್‌ಗಢಿ ಮಂದಿರಕ್ಕೆ ಭೇಟಿ ನೀಡಿ ನಂತರ ರಾಮಜನ್ಮಸ್ಥಾನದ ದರ್ಶನ ಪಡೆಯಲಿದ್ದಾರೆ. ಮೂಲಗಳ ಪ್ರಕಾರ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಯೋಧ್ಯೆ ಭೇಟಿ ಪಟ್ಟಿಯಲ್ಲಿ ಇಲ್ಲ.
ಮೋದಿ ಸಭೆಯ ಹೈಲೈಟ್ಸ್:
- ಜನರ ಜೀವನಮಟ್ಟಸುಧಾರಣೆಗೆ ಆದ್ಯತೆ ನೀಡಿ. ಆಡಳಿತದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಳ ಮಾಡಿ
- ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬಿ
- ಸ್ಥಳೀಯ ಉತ್ಪನ್ನಗಳನ್ನು ವಿದೇಶಕ್ಕೆ ರಪ್ತು ಮಾಡಿ, ಅವುಗಳಿಗೆ ಜಾಗತಿಕ ಬ್ರ್ಯಾಂಡ್ ಸೃಷ್ಟಿಸಿ
- ಪೋಷಕಾಂಶ ಅಭಿಯಾನ ಬಲಗೊಳಿಸಿ. ಯುವ ಸಮೂಹದಲ್ಲಿ ಕ್ರೀಡೆ, ದೈಹಿಕ ಕ್ಷಮತೆ ಸಂಸ್ಕೃತಿ ಹೆಚ್ಚಿಸಿ
- ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಜಾರಿಗೊಳಿಸಿ. ಬಳಕೆಯಾಗದ ಪುರಾತನ ಕಾನೂನು ರದ್ದುಗೊಳಿಸಿ
- ಪ್ರತಿ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತ್ವರಿತ, ಪಾರದರ್ಶಕವಾಗಿ ತಲುಪುವಂತೆ ನೋಡಿಕೊಳ್ಳಿ
- ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣವನ್ನು ಆದ್ಯತಾ ವಲಯಗಳನ್ನಾಗಿ ಪರಿಗಣಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ