Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್, ತಪ್ಪು ಅಭಿಪ್ರಾಯ ಬೇಡ, WHO ಎಚ್ಚರಿಕೆ!

By Kannadaprabha News  |  First Published Dec 15, 2021, 2:28 AM IST
  • ಒಮಿಕ್ರೋನ್‌ನ ತೀವ್ರತೆ ಸೌಮ್ಯ ಎಂಬ ತಪ್ಪು ಅಭಿಪ್ರಾಯ ಬೇಡ
  • ಸೋಂಕಿತರು ಸಾವನ್ನಪ್ಪುವ ಪ್ರಮಾಣ ಹೆಚ್ಚಬಹುದು
  • ಅಪಾಯ ಎದುರಿಸಲು ಸಜ್ಜಾಗಿ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೇವಾ(ಡಿ.15): ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್‌(Omicron) ಸಾಮರ್ಥ್ಯದ ಗೊಂದಲಗಳು ಇರುವ ಹೊತ್ತಿನಲ್ಲೇ, ಈ ವೈರಸ್‌ ಅತ್ಯಂತ ಸಾಂಕ್ರಾಮಿಕ. ಇದು ಕಂಡು ಕೇಳರಿಯದ ವೇಗದಲ್ಲಿ ವಿಶ್ವದಾದ್ಯಂತ ಹಬ್ಬುತ್ತಿದೆ. ಬಹುಷಃ ಈಗಾಗಲೇ ಅದು ವಿಶ್ವದ ಬಹುತೇಕ ದೇಶಗಳನ್ನು ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(world health organization) ಗಂಭೀರ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಒಮಿಕ್ರೋನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮತ್ತು ಸೋಂಕಿತರು ಸಾವನ್ನಪ್ಪುವ ಪ್ರಮಾಣ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಈ ನಡುವೆ ಆಫ್ರಿಕಾ(Africa) ಖಂಡದಲ್ಲಿ ಮೊದಲಿಗೆ ಪತ್ತೆಯಾದ ಒಮಿಕ್ರೋನ್‌, ಭಾರತದಲ್ಲಿ(India) ಅತಿ ವೇಗವಾಗಿ ಹಬ್ಬುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆ ಸೇರಿದಂತೆ ಕೋವಿಡ್‌ ಸೋಂಕಿತರ ನಿರ್ವಹಣೆ ವಿಷಯದಲ್ಲಿ ಗಂಭೀರ ಪರಿಸ್ಥಿತಿ ಎದುರಿಸಲು ಭಾರತ ಸರ್ಕಾರ ಸಿದ್ಧತೆ ನಡೆಸಬೇಕು ಎಂದು ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆಯೊಬ್ಬರು ಎಚ್ಚರಿಕೆ ರೂಪದ ಸಲಹೆ ನೀಡಿದ್ದಾರೆ.

Latest Videos

undefined

Section 144 in Mumbai: ಮುಂಬೈನಲ್ಲಿ ಒಮಿಕ್ರಾನ್ ಕೇಸ್ ಹೆಚ್ಚಿದ ಬೆನ್ನಲ್ಲೇ 144 ಸೆಕ್ಷನ್ ಜಾರಿ

ಅಪಾಯಕಾರಿ:
ವೈರಸ್‌ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ಮುಖ್ಯಸ್ಥ ಟೆಡ್ರೋಸ್‌ ಅಧೋನಾಮ್‌ ಘೇಬ್ರಿಯೇಸಸ್‌(tedros adhanom) ‘ಇದುವರೆಗೂ 77 ದೇಶಗಳಿಗೆ ಸೋಂಕು ಹಬ್ಬಿರುವ ವರದಿ ಇದೆ. ಆದರೆ ವಾಸ್ತವ ಅಂಶವೆಂದರೆ, ಇನ್ನೂ ಖಚಿತಪಡದೇ ಇದ್ದರೂ ಅದು ಈಗಾಗಲೇ ವಿಶ್ವದ ಬಹುತೇಕ ದೇಶ ಪ್ರವೇಶ ಮಾಡಿರುವ ಸಾಧ್ಯತೆ ಇದೆ. ಈ ಹಿಂದಿನ ಯಾವುದೇ ವೈರಸ್‌ಗಳೂ ಹಬ್ಬದ ವೇಗದಲ್ಲಿ ಒಮಿಕ್ರೋನ್‌ ಪ್ರಸರಣಗೊಳ್ಳುತ್ತಿದೆ. ಜೊತೆಗೆ ಒಮಿಕ್ರೋನ್‌ ಅತ್ಯಂತ ಸೌಮ್ಯ ಲಕ್ಷಣ ಹೊಂದಿದೆ ಎಂಬ ತಪ್ಪು ನಂಬಿಕೆಯಲ್ಲಿ ಯಾರೂ ಇರಬಾರದು. ವೈರಸ್‌ ಬಗ್ಗೆ ನಾವೆಷ್ಟುತಪ್ಪು ಅಂದಾಜಿಸಿದ್ದೆವು ಎಂಬ ವಿಷಯವನ್ನು ನಾವು ಈಗಾಗಲೇ ಕಂಡುಕೊಂಡಿದ್ದೇವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಸೋಂಕಿತರು ಆಸ್ಪತ್ರೆ ದಾಖಲಾಗುವ ಮತ್ತು ಸಾವನ್ನಪ್ಪುವ ಪ್ರಮಾಣ ಹೆಚ್ಚಳದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Covid-19 Threat: ಕ್ರಿಸ್‌ಮಸ್‌ ಆಚರಣೆಗೆ ಷರತ್ತುಬದ್ಧ ಅನುಮತಿ, ಯಾವೆಲ್ಲಾ ರೂಲ್ಸ್‌ ಫಾಲೋ ಮಾಡ್ಬೇಕು?

ಅಪಾಯ ಎದುರಿಸಲು ಸಜ್ಜಾಗಿ:
ಈ ನಡುವೆ ಆಫ್ರಿಕಾವನ್ನು ಆವರಿಸಿರುವ ಒಮಿಕ್ರೋನ್‌ ಸೋಂಕು ಮುಂದಿನ ದಿನಗಳಲ್ಲಿ ಭಾರತದಲ್ಲೂ ಅತ್ಯಂತ ವೇಗವಾಗಿ ಹಬ್ಬಲಿದೆ. ಈ ಮೊದಲು ಸೋಂಕಿತರಾದವರಿಗೆ ಮರಳಿ ಸೋಂಕು ತಗಲುವ ಪ್ರಮಾಣ ಅತ್ಯಂತ ಹೆಚ್ಚಿದೆ ಎಂದು ದಕ್ಷಿಣ ಆಫ್ರಿಕಾದ ಡಿಎಸ್‌ಐ-ಎನ್‌ಎಸ್‌ಫ್‌ ಸಾಂಕ್ರಾಮಿಕ ಮಾದರಿ ಅಧ್ಯಯನ ಮತ್ತು ವಿಶ್ಲೇಷಣಾ ಕೇಂದ್ರದ ನಿರ್ದೇಶಕಿ ಜ್ಯೂಲಿಯೆಟ್‌ ಪುಲ್ಲಿಯೆಮ್‌ ಎಚ್ಚರಿಸಿದ್ದಾರೆ.

ಸಂದರ್ಶನವೊಂದಲ್ಲಿ ಈ ಮಾಹಿತಿ ನೀಡಿರುವ ಅವರು, ವೈರಸ್‌ನ ತೀವ್ರತೆ ಬಗ್ಗೆ ಈಗಲೇ ಏನೂ ಹೇಳಲಾಗದು. ಆದರೆ ಈ ಹಿಂದೆ ಸೋಂಕಿತರಾದವರು ಮತ್ತು ಲಸಿಕೆ ಪಡೆದವರ ಮೇಲೆ ಸೌಮ್ಯ ಪರಿಣಾಮ ಹೊಂದಿರಲಿದೆ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಹಿಂದಿನ ವೈರಸ್‌ಗಳು ತೋರಿದ ಪ್ರಭಾವವನ್ನೇ ತೋರಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ವೃದ್ಧಿ ಸೇರಿದಂತೆ ಸೋಂಕು ನಿರ್ವಹಣೆ ವಿಷಯದಲ್ಲಿ ಗಂಭೀರ ಪರಿಸ್ಥಿತಿ ಎದುರಿಸಲು ಭಾರತ ಸಜ್ಜಾಗುವುದು ಒಳಿತು ಎಂದು ಹೇಳಿದ್ದಾರೆ. ಜೊತೆಗೆ ಬೂಸ್ಟರ್‌ ಡೋಸ್‌ ನೀಡುವ ಕುರಿತು ಇನ್ನೂ ಚಿಂತನೆ ನಡೆಸುವ ಹೊತ್ತಲ್ಲ ಇದು. ತ್ವರಿತ ನಿರ್ಧಾರ ಅತ್ಯಂತ ಅವಶ್ಯಕ ಎಂದು ಹೇಳಿದ್ದಾರೆ.

ಒಂದೇ ದಿನ 19 ಒಮಿಕ್ರೋನ್‌ ಕೇಸ್‌ ಪತ್ತೆ
ಮಂಗಳವಾರ ಮಹಾರಾಷ್ಟ್ರದಲ್ಲಿ 8, ದೆಹಲಿಯಲ್ಲಿ 4 ಮತ್ತು ರಾಜಸ್ಥಾನದಲ್ಲಿ 7 ಒಮಿಕ್ರೋನ್‌ ಕೋವಿಡ್‌ ತಳಿಯ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಂದೇ ದಿನದಲ್ಲಿ 19 ಒಮಿಕ್ರೋನ್‌ ಕೇಸ್‌ ದೃಢಪಟ್ಟಂತಾಗಿದೆ. ಮಹಾರಾಷ್ಟ್ರದಲ್ಲಿ ಹೊಸ ಸೋಂಕಿತರ ಪೈಕಿ ಯಾರಿಗೂ ವಿದೇಶಿ ಪ್ರಯಾಣದ ಇತಿಹಾಸ ಹೊಂದಿಲ್ಲ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳ ತಿಳಿಸಿದ್ದಾರೆ. ಇನ್ನು ಒಟ್ಟು ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 6 ಮತ್ತು ರಾಜಸ್ಥಾನದಲ್ಲಿ 17ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60ಕ್ಕೆ ಹೆಚ್ಚಿದೆ.
 

click me!