* ಕೇಂದ್ರ ಸಚಿವ ಸಂಪುಟಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ
* ಶೀಘ್ರದಲ್ಲೇ ಮೋದಿ ಸಂಪುಟ ಪುನಾರಚನೆ ಸಾಧ್ಯತೆ
* ಎನ್‌ಡಿಎ ಅಂಗಪಕ್ಷ, ಹೊಸ ಮುಖಗಳಿಗೆ ಆದ್ಯತೆ?
ನವದೆಹಲಿ(ಜೂ.13): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬಂದು 2 ವರ್ಷಗಳು ಆಗಿರುವ ಹೊತ್ತಿನಲ್ಲೇ ಸಚಿವ ಸಂಪುಟ ಪುನಾರಚನೆಯ ಕುರಿತಾದ ಸುದ್ದಿ ಮುನ್ನೆಲೆಗೆ ಬಂದಿದೆ. ಸಂಪುಟದಲ್ಲಿ ಹಾಲಿ ಸಚಿವರ ಸಾಧನೆಯ ಮೌಲ್ಯಮಾಪನ ಮಾಡಿ, ಹೊಸ ಮುಖಗಳಿಗೆ ಆದ್ಯತೆ ನೀಡಲು ಚಿಂತನೆ ನಡೆದಿದೆ.
ಇದರ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಮುಖಂಡರಿಗೂ ಮಂತ್ರಿ ಸ್ಥಾನ ನೀಡುವ ನಿಟ್ಟಿನಲ್ಲಿ ವರಿಷ್ಠರು ಸಿದ್ಧತೆ ಆರಂಭಿಸಿದ್ದಾರೆ. ಅಲ್ಲದೇ ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಉತ್ಸಾಹ ತುಂಬಲು ಹಾಗೂ ಸರ್ಕಾರಕ್ಕೆ ಹೊಸ ವರ್ಚಸ್ಸು ನೀಡಲು ಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
400 ಕೋಣೆಯ ಈ ಭವ್ಯ ಅರಮನೆಯಲ್ಲಿ 'ರಾಜ'ನಂತಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ!
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಅಸ್ಸಾಂನ ಸರಬಾನಂದ ಸೋನೊವಾಲ್ ಹಾಗೂ ಉತ್ತರಾಖಂಡದ ತ್ರಿವೇಂದ್ರ ಸಿಂಗ್ ರಾವತ್ ಹೆಸರುಗಳು ಮುಂಚೂಣಿಯಲ್ಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮಧ್ಯೆ ಇತ್ತೀಚೆಗೆ ಸರಣಿ ಸಭೆಗಳು ನಡೆದಿದ್ದು, ಸಂಪುಟ ವಿಸ್ತರಣೆ ವದಂತಿಗೆ ಇನ್ನಷ್ಟುಪುಷ್ಟಿದೊರೆತಿದೆ.
ಖಾಲಿ ಸ್ಥಾನ ಭರ್ತಿಗೆ ಆದ್ಯತೆ:
ಎನ್‌ಡಿಎ ಮೈತ್ರಿಕೂಟದಿಂದ ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳ ಹೊರ ನಡೆದಿರುವುದು ಹಾಗೂ ಎಲ್‌ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದಾಗಿ ಹಲವು ಸಚಿವ ಸ್ಥಾನಗಳು ಖಾಲಿ ಆಗಿವೆ.
ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಾಳಯಕ್ಕೆ ಸೇರ್ಪಡೆ ಆಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ರಾಜ್ಯಸಭೆಯಲ್ಲಿ ಸ್ಥಾನ ಗಿಟ್ಟಿಸಿರುವ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ. ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಇತ್ತೀಚಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಇವರ ಜೊತೆ ಎನ್‌ಡಿಎ ಮೈತ್ರಿಕೂಟದ ಜೆಡಿಯುನ ಮುಖಂಡರೊಬ್ಬರು ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?
ಇದೇ ವೇಳೆ ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಆಪ್ನಾ ದಳಕ್ಕೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ. ಆಪ್ನಾ ದಳದ ಮುಖಂಡ ಅನುಪ್ರಿಯಾ ಪಟೇಲ್ ಅವರು ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಕೇಂದ್ರ ಸಂಪುಟದಲ್ಲಿ ಆಪ್ನಾ ದಳಕ್ಕೆ ಸ್ಥಾನ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಚಿವರ ಖಾತೆ ಮೌಲ್ಯಮಾಪನ:
ಇದೇ ವೇಳೆ ಸಚಿವರ ಖಾತೆಗಳ ಮೌಲ್ಯಮಾಪನ ನಡೆಸಿ ಪುನರ್ ವ್ಯವಸ್ಥೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಸದ್ಯ ಹಲವು ಮಂದಿ ಸಚಿವರು 2ಕ್ಕಿಂತ ಹೆಚ್ಚಿನ ಖಾತೆಗಳನ್ನು ನಿಭಾಯಿಸುತ್ತಿದ್ದು, ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಿಂದ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಮಧ್ಯೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳನ್ನು ತುಂಬುವ ನಿಟ್ಟಿನಲ್ಲಿಯೂ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!
ಸಂಭಾವ್ಯ ಸಚಿವರು
- ಜ್ಯೋತಿರಾದಿತ್ಯ ಸಿಂಧಿಯಾ
- ಸರಬಾನಂದ ಸೋನೊವಾಲ್
- ತ್ರಿವೇಂದ್ರ ಸಿಂಗ್ ರಾವತ್
- ಸುಶೀಲ್ ಕುಮಾರ್ ಮೋದಿ
- ಅನುಪ್ರಿಯಾ ಪಟೇಲ್