
ನವದೆಹಲಿ (ಸೆ.11): ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ ಗುರಿಯ ಭಾಗವಾಗಿ, ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ರಫ್ತು ಹೆಚ್ಚಳ ಮಾಡಲು 20,050 ಕೋಟಿ ರು. ವೆಚ್ಚದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ)ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.
ಇದೇ ವೇಳೆ, ಯಾವ ಸಂದರ್ಭದಲ್ಲಿ ಲಸಿಕೆ ಹಾಕಿಸಬೇಕು ಎಂಬುದು ಸೇರಿದಂತೆ ರಾಸುಗಳ ಕುರಿತಂತೆ ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಇ- ಗೋಪಾಲ ಆ್ಯಪ್ ಅನ್ನು ಕೂಡ ಲೋಕಾರ್ಪಣೆ ಮಾಡಿದ್ದಾರೆ.
ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಮೀನುಗಾರಿಕೆ ಹಾಗೂ ಪಶುಸಂಗೋಪನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಉದ್ಘಾಟಿಸುವ ಸಂದರ್ಭದಲ್ಲೇ ಈ ಎರಡೂ ಕಾರ್ಯಕ್ರಮಗಳಿಗೂ ಮೋದಿ ನಿಶಾನೆ ತೋರಿದ್ದಾರೆ.
ವಿಸ್ಮಯಕಾರಿಯಾಗಿ ಸಮುದ್ರದಲ್ಲಿ ಪತ್ತೆಯಾದ ಮೀನುಗಾರರು
ದೇಶದ ಮೀನುಗಾರಿಕಾ ಕ್ಷೇತ್ರಕ್ಕೆ 20 ಸಾವಿರ ಕೋಟಿ ರು. ಅನುದಾನವನ್ನು ನೀಡುತ್ತಿರುವುದು ಇದೇ ಮೊದಲು. ಹೀಗಾಗಿ ಈ ಯೋಜನೆಯ ಬಗ್ಗೆ ಭಾರಿ ನಿರೀಕ್ಷೆ ಇದೆ. 2020-21ರಿಂದ 2024-25ರ ಅವಧಿಯಲ್ಲಿ ಇಷ್ಟೂಹಣವನ್ನು ವ್ಯಯಿಸಲು ನಿರ್ಧರಿಸಲಾಗಿದೆ. ಇದು ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿರಲಿದೆ.
2024-25ರೊಳಗೆ ದೇಶದಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚುವರಿಯಾಗಿ 70 ಲಕ್ಷ ಟನ್‌ನಷ್ಟುಏರಿಸುವ ಹಾಗೂ ಮೀನುಗಾರಿಕೆ ರಫ್ತು ಆದಾಯವನ್ನು 1 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಇ-ಗೋಪಾಲ ಆ್ಯಪ್ ಎಂಬುದು ಹೈನುಗಾರಿಕಾ ತಳಿಗಳ ಸಮಗ್ರ ಸುಧಾರಣೆ ಮಾರುಕಟ್ಟೆಹಾಗೂ ಮಾಹಿತಿ ತಾಣವಾಗಿರಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ರೋಗರಹಿತ ರಾಸುಗಳ ನಿರ್ವಹಣೆ ಹಾಗೂ ಖರೀದಿಗೆ ನೆರವಾಗಲಿದೆ. ಗುಣಮಟ್ಟದ ರಾಸುಗಳು ಲಭ್ಯವಾಗಲಿವೆ. ರಾಸುಗಳಿಗೆ ನೀಡಬೇಕಾಗಿರುವ ಪೋಷಕಾಂಶ, ಸೂಕ್ತ ಔಷಧ ಮೂಲಕ ನೀಡಬೇಕಾಗಿರುವ ಚಿಕಿತ್ಸೆ ಮಾಹಿತಿಯನ್ನು ಒದಗಿಸಲಿದೆ. ರಾಸುಗಳಿಗೆ ಯಾವಾಗ ಲಸಿಕೆ ಹಾಕಿಸಬೇಕು ಎಂಬ ಅಲರ್ಟ್‌ಗಳನ್ನೂ ನೀಡಲಿದೆ.
ಇದೇ ವೇಳೆ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ 75 ಎಕರೆಯಷ್ಟುವಿಶಾಲ ಪ್ರದೇಶದಲ್ಲಿ 84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಜಾನುವಾರು ವೀರ್ಯ ಕೇಂದ್ರವನ್ನು ಮೋದಿ ಉದ್ಘಾಟಿಸಿದರು.
ಆತ್ಮನಿರ್ಭರ ಭಾರತ ಪ್ಯಾಕೇಜ್ ಭಾಗವಾಗಿ ದೇಶದ ಮೀನುಗಾರಿಕಾ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 20,050 ಕೋಟಿ ರು. ವೆಚ್ಚ ಮಾಡುವ ಉದ್ದೇಶವನ್ನು ಮತ್ಸ್ಯ ಸಂಪದ ಯೋಜನೆ ಹೊಂದಿದೆ. 2020-21ನೇ ಸಾಲಿನಿಂದ 2024-25ರವರೆಗೆ ಇಷ್ಟೂಹಣ ವೆಚ್ಚ ಮಾಡಲಾಗುತ್ತದೆ. ಮೀನುಗಾರಿಕಾ ಕ್ಷೇತ್ರಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ