58 ಮತದಾರರ ಭೇಟಿಗೆ 24 ಕಿ.ಮೀ ನಡೆದ ಸಿಎಂ

By Kannadaprabha NewsFirst Published Sep 11, 2020, 9:12 AM IST
Highlights

ಚುನಾವಣೆ ಮುಗಿದ ನಂತರ ಜನ ಪ್ರತಿನಿಧಿಗಳು ಜನರ ಸಮಸ್ಯೆ ಮರೆಯುವುದು ಸಾಮಾನ್ಯ. ಇದಕ್ಕೆ ಅಪವಾದವೆಂಬಂತೆ ತಮ್ಮ ಕ್ಷೇತ್ರದ 58 ಮತದಾರರ ಕಷ್ಟಸುಖ ಅರಿಯಲು ಸ್ವತಃ ಮುಖ್ಯಮಂತ್ರಿಯೇ 24 ಕಿ.ಮೀ ನಡೆದ ಅಚ್ಚರಿಯ ಘಟನೆಯೊಂದು ಅರುಣಾಚಲಪ್ರದೇಶದಲ್ಲಿ ನಡೆದಿದೆ.

ಗುವಾಹಟಿ (ಸೆ.11): ಅಧಿಕಾರ ಸಿಕ್ಕಿದ ಮೇಲೆ ಜನಪ್ರತಿನಿಧಿಗಳು, ಮತದಾರರನ್ನು ಮರೆಯುವ ನಿದರ್ಶನಗಳು ನಿತ್ಯವೂ ಕಣ್ಣ ಮುಂದಿರುವ ಹೊತ್ತಿನಲ್ಲೇ, ತನ್ನ ಕ್ಷೇತ್ರದ 58 ಮತದಾರರ ಕಷ್ಟಸುಖ ಅರಿಯಲು ಸ್ವತಃ ಮುಖ್ಯಮಂತ್ರಿಯೇ 24 ಕಿ.ಮೀ ನಡೆದ ಅಚ್ಚರಿಯ ಘಟನೆಯೊಂದು ಅರುಣಾಚಲಪ್ರದೇಶದಲ್ಲಿ ನಡೆದಿದೆ.

ಅರುಣಾಚಲ ಸಿಎಂ ಪೆಮಾ ಖಂಡು, ತವಾಂಗ್‌ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲುಗುಥಾಂಗ್‌ ಎಂಬ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಕುಗ್ರಾಮವಾಗಿದೆ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದ ಇಲ್ಲಿರುವುದು ಕೇವಲ 10 ಕುಟುಂಬ ಮತ್ತು ಅದರ 58 ಸದಸ್ಯರು. ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲ.

ಅರುಣಾಚಲ ಪ್ರದೇಶ ನಮ್ಮದು ಎಂದ ಚೀನಾ

ಈ ಹಿನ್ನೆಲೆಯಲ್ಲಿ ಸ್ವತಃ ಅವರ ಸಮಸ್ಯೆ ಅರಿಯಲೆಂದು ಸಿಎಂ ಪೆಮಾ ಖಂಡು 3 ದಿನಗಳ ಹಿಂದೆ ಸುಮಾರು 11 ತಾಸು ಸತತವಾಗಿ ನಡೆದು 24 ಕಿ.ಮೀ ದೂರವನ್ನು ಕ್ರಮಿಸಿ ಲುಗುಥಾಂಗ್‌ ತಲುಪಿದ್ದಾರೆ. ಬಳಿಕ ಅಲ್ಲಿಯೇ 2 ದಿನ ಕಳೆದು ಅವರ ಸಮಸ್ಯೆಯನ್ನು ಆಲಿಸಿ ಮರಳಿದ್ದಾರೆ. ಈ ವೇಳೆ ಅವರೊಂದಿಗೆ ಕೇವಲ ಒಬ್ಬ ಭದ್ರತಾ ಮತ್ತು ಕೆಲ ಗ್ರಾಮಸ್ಥರು ಮಾತ್ರವೇ ಇದ್ದರು. ಈ ವಿಷಯವನ್ನು ಸ್ವತಃ ಖಂಡು ಗುರುವಾರ ಬಹಿರಂಗಪಡಿಸಿದ್ದಾರೆ.

 

A 24 Kms trek, 11 hours of fresh air & Mother Nature at her best; crossing Karpu-La (16000 ft) to Luguthang (14500 ft) in Tawang district. A paradise untouched. pic.twitter.com/Jxh4Ymtv8K

— Pema Khandu པདྨ་མཁའ་འགྲོ་། (@PemaKhanduBJP)

 

ಪೆಮಾ ಖಂಡು ಅವರ ತಂದೆ ದೋರ್ಜಿ ಖಂಡು ಅವರು ಕೂಡಾ ಮುಖ್ಯಮಂತ್ರಿಯಾಗಿದ್ದವರು. 2011ರ ಏ.30ರಂದು ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ್ದರು. ಘಟನೆ ನಡೆದ 5 ದಿನಗಳ ಬಳಿಕ ಅವರ ಶವ ಸಿಕ್ಕಿತ್ತು.

ಅರುಣಾಚಲ ಪ್ರದೇಶದ ಐವರನ್ನು ಅಪಹರಿಸಿದ ಚೀನಾ

ಒಟ್ಟಿನಲ್ಲಿ ಚುನಾವಣೆ ಮುಗಿದ ನಂತರ ಮತದಾರರನ್ನು ಸಂಪೂರ್ಣವಾಗಿ ಮರೆತು, ಮುಂದಿನ ಚುನಾವಣೆವರೆಗೂ ಅವರ ಕಡೆ ಮಖ ತೋರದ ಅನೇಕ ಜನ ಪ್ರತಿನಿಧಿಗಳಿಗೆ ಅರುಣಾಚಲ ಪ್ರದೇಶ ಸಿಎಂ ನಡೆ ನಿಜಕ್ಕೂ ಮಾದರಿ. ಇಂಥವರ ಸಂಖ್ಯೆ ಹೆಚ್ಚಾದಲ್ಲಿ ದೇಶ ಪ್ರಗತಿ ಪಥದಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುವುದು ಅನೇಕರ ಭಾರತೀಯ ಅಭಿಪ್ರಾಯ. 

click me!