
ನವದೆಹಲಿ (ನ.19): ಕಾರ್ಪೊರೇಟ್ ತೆರಿಗೆ ದರ ಕಡಿತ ಮತ್ತು ಸರ್ಕಾರದ ಇತರ ಸುಧಾರಣಾ ಕ್ರಮಗಳ ನಂತರ ಭಾರತೀಯ ಕಂಪನಿಗಳು ಉದ್ಯೋಗ ಸೃಷ್ಟಿಸಲು ಹಾಗೂ ಉದ್ಯೋಗಿಗಳ ವೇತನ ಹೆಚ್ಚಿಸಲು ಸಾಕಷ್ಟು ಕೆಲಸ ಮಾಡಿವೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇರವಾಗಿ ಪ್ರಶ್ನಿಸಿದ್ದಾರೆ. ಭಾರತದ ಆರ್ಥಿಕ ಪರಿವರ್ತನೆಗೆ ಉದ್ಯಮ ವಲಯವು ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದು ಕರೆ ನೀಡಿರುವ ಪ್ರಧಾನಿ, ಆಮದು ಅವಲಂಬನೆ ತಗ್ಗಿಸಿ ದೇಶೀಯ ಉತ್ಪಾದನೆಯಲ್ಲಿ ಹೂಡಿಕೆ ಮಾಡುವಂತೆ ಸೂಚಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಫಿಕ್ಕಿ (FICCI) ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಉದ್ಯಮಗಳಿಗೆ ಅವಕಾಶಗಳನ್ನು ಸುಧಾರಿಸಲು ಸರ್ಕಾರವು ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಿದೆ, ಆದಾಯ ತೆರಿಗೆ ವಿನಾಯಿತಿ ನೀಡಿದೆ, ನಿಯಮಾವಳಿಗಳನ್ನು (Compliance) ಸರಳಗೊಳಿಸಿದೆ ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದರು. ಆದರೆ, ಈ ಸೌಲಭ್ಯಗಳನ್ನು ಬಳಸಿಕೊಂಡು ತಾವು ಏನು ಸಾಧಿಸಿದ್ದೇವೆ ಎಂಬುದನ್ನು ಉದ್ಯಮ ವಲಯವೂ ತೋರಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಕಂಪನಿಗಳು ಉದ್ಯೋಗಿಗಳ ಆದಾಯವನ್ನು ಹೆಚ್ಚಿಸಿವೆಯೇ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಿವೆಯೇ ಎಂದು ಪ್ರಶ್ನಿಸಿದ ಮೋದಿ, ದೇಶದ ಅಭಿವೃದ್ಧಿಯನ್ನು ಸರ್ಕಾರವೊಂದೇ ಮುನ್ನಡೆಸುತ್ತದೆ ಎಂದು ಉದ್ಯಮಗಳು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.ಅವಕಾಶಗಳನ್ನು ಗುರುತಿಸಲು ಸರ್ಕಾರವನ್ನೇ ಅವಲಂಬಿಸುವ ಬದಲು, ಭಾರತದ ವಿಸ್ತರಿಸುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳ (Free Trade Agreements) ಜಾಲದ ಲಾಭ ಪಡೆಯಲು ಉದ್ಯಮ ವಲಯವು ದೃಢವಾದ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಪ್ರಧಾನಿ ಸೂಚಿಸಿದರು.
ಭಾರತದ ಬೃಹತ್ ದೇಶೀಯ ಗ್ರಾಹಕರ ನೆಲೆಯು ಉದ್ಯಮಗಳಿಗೆ 'ಕಂಫರ್ಟ್ ಝೋನ್' (Comfort zone) ಆಗಬಾರದು ಎಂದು ಎಚ್ಚರಿಸಿದ ಪ್ರಧಾನಿ, ವಿದೇಶಿ ಮಾರುಕಟ್ಟೆಗಳಲ್ಲಿ ಕಂಪನಿಗಳು ನೀಡುವ ಗುಣಮಟ್ಟದ ಉತ್ಪನ್ನಗಳನ್ನೇ ಭಾರತೀಯ ಗ್ರಾಹಕರೂ ಪಡೆಯಲು ಅರ್ಹರಾಗಿದ್ದಾರೆ ಎಂದು ಒತ್ತಿ ಹೇಳಿದರು.
"ನನ್ನ ದೇಶವಾಸಿಗಳು ಗುಣಮಟ್ಟದ ವಸ್ತುಗಳನ್ನು ಪಡೆಯಲು ಅರ್ಹರು. ಉತ್ಪನ್ನಗಳನ್ನು 'ರಫ್ತು ಗುಣಮಟ್ಟದ್ದು' (Export quality) ಎಂದು ಮಾರಾಟ ಮಾಡುವ ಪರಿಪಾಠ ಸರಿಯಲ್ಲ; ದೇಶೀಯ ಗ್ರಾಹಕರನ್ನು ಕೇವಲ ಒಂದು ಖಚಿತ ಮಾರುಕಟ್ಟೆಯಂತೆ (Captive market) ಪರಿಗಣಿಸಬಾರದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಲಿಷ್ಠ ಉತ್ಪಾದನಾ ಅಥವಾ ಕಚ್ಚಾ ವಸ್ತುಗಳ ನೆಲೆ ಹೊಂದಿದ್ದರೂ ಭಾರತ ಇನ್ನೂ ಆಮದುಗಳ ಮೇಲೆ ಅವಲಂಬಿತವಾಗಿರುವ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆ ಮಾಡುವಂತೆ ಮೋದಿ ಕರೆ ನೀಡಿದರು.
ಭಾರತೀಯ ಆರ್ಥಿಕತೆಯ ಸುಧಾರಿತ ಬೆಳವಣಿಗೆಯ ಅಂದಾಜುಗಳು ಮತ್ತು ಬಲಿಷ್ಠ ಸರಕು ರಫ್ತು ಸಾಧನೆಯ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಮತ್ತು ಮೂಡೀಸ್ (Moody's) ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಬೆಳವಣಿಗೆಯ ಅಂದಾಜನ್ನು ಮೇಲ್ಮುಖವಾಗಿ ಪರಿಷ್ಕರಿಸಿದ್ದು, ಭಾರತವು ಶೇ. 7 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯಲಿದೆ ಎಂದು ನಿರೀಕ್ಷಿಸುತ್ತಿವೆ ಎಂದು ಮೋದಿ ತಿಳಿಸಿದರು. ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಸರಕು ರಫ್ತು (Merchandise exports) ಕಳೆದ ವರ್ಷಕ್ಕಿಂತ ಶೇ. 45.1ರಷ್ಟು ಏರಿಕೆಯಾಗಿ ದಾಖಲೆಯ $49.47 ಬಿಲಿಯನ್ ತಲುಪಿದೆ.
ತಕ್ಷಣದ ಲಾಭ ನೀಡುವ ಕ್ಷೇತ್ರಗಳನ್ನಷ್ಟೇ ನಂಬಿ ಕೂರದೆ, 'ವಿಕಸಿತ ಭಾರತ' ಗುರಿಯತ್ತ ಸಾಗುತ್ತಿರುವ ಮುಂದಿನ ಎರಡು ದಶಕಗಳ ದೇಶೀಯ ಮತ್ತು ಜಾಗತಿಕ ಬೇಡಿಕೆಯ ಬದಲಾವಣೆಗಳನ್ನು ಊಹಿಸಿ ಉದ್ಯಮಗಳು ಸಿದ್ಧವಾಗಬೇಕು. ಜಾಗತಿಕ ಮಟ್ಟದಲ್ಲಿ ಸಂಪನ್ಮೂಲಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ (Weaponisation of resources) ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ವಾವಲಂಬನೆಯನ್ನು ಬಲಪಡಿಸುವ 'ಇಂಡಿಯಾ-ಫಸ್ಟ್' (India-first) ಧೋರಣೆಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ಸರ್ಕಾರ ಮುಕ್ತವಾಗಿದೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನೀತಿ ಬದಲಾವಣೆಗಳ ಕುರಿತು ಸಲಹೆಗಳನ್ನು ನೀಡುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿದ ಪ್ರಧಾನಿ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸರ್ಕಾರ ಮತ್ತು ಉದ್ಯಮ ವಲಯದ ಹಂಚಿಕೆಯ ಬದ್ಧತೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ