ಮೋದಿ 3ನೇ ಸೆಲ್ಫಿ ವಿಡಿಯೋ: ಆಧಾರ್ ಶಿಲ್ಪಿ ಕನ್ನಡಿಗ ನಂದನ್ ನಿಲೇಕಣಿ ನೇತೃತ್ವದಲ್ಲಿ NTA ಪರೀಕ್ಷಾ ಸುಧಾರಣೆ ಕಾರ್ಯಪಡೆ

Sathish Kumar KH   | Kannada Prabha
Published : Jul 27, 2026, 05:20 AM IST
Nandan Nilekani Narendra Modi

ಸಾರಾಂಶ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದಾರೆ. 'ಆಧಾರ್ ಶಿಲ್ಪಿ' ನಂದನ್ ನಿಲೇಕಣಿ ಈ ಕಾರ್ಯಪಡೆಯ ನೇತೃತ್ವ ವಹಿಸಿದ್ದು, ಇಸ್ರೋ ಮಾಜಿ ಮುಖ್ಯಸ್ಥ ಎಸ್. ಸೋಮನಾಥ್ ಸೇರಿದಂತೆ ಹಲವು ತಜ್ಞರು ಸದಸ್ಯರಾಗಿದ್ದಾರೆ. ಈ ಸಮಿತಿಯು ಎನ್‌ಟಿಎ ನಡೆಸುವ ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲಿದೆ.

ನವದೆಹಲಿ (ಜು.27):  ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕಂಡು ಕೇಳರಿಯದಷ್ಟು ಕೋಲಾಹಲ ಸೃಷ್ಟಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಲೆದಂಡಕ್ಕೆ ಕಾರಣವಾದ ಬೆನ್ನಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಮತ್ತೊಂದು ಮಹತ್ವದ ಕ್ರಮ ಘೋಷಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಪರೀಕ್ಷೆಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಶಿಫಾರಸು ಮಾಡಲು ‘ಆಧಾರ್‌ ಕಾರ್ಡ್‌ ಶಿಲ್ಪಿ’ ಎಂದೇ ಹೆಸರಾದ ಕನ್ನಡಿಗ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಿದ್ದಾರೆ.

ಈ ಮೂಲಕ ಕೇಂದ್ರ ಶಿಕ್ಷಣ ಸಚಿವ ಖಾತೆಯು ಧಾರವಾಡ ಸಂಸದ ಪ್ರಹ್ಲಾದ ಜೋಶಿ ಪಾಲಾದ ಬೆನ್ನಲ್ಲೇ ಕನ್ನಡಿಗನಿಗೆ ಮತ್ತೊಂದು ಮಹತ್ವದ ಹುದ್ದೆ ಒಲಿದುಬಂದಿದೆ.

ಕಾರ್ಯಪಡೆಯಲ್ಲಿ ನಿಲೇಕಣಿ ಅಲ್ಲದೆ, ಇಸ್ರೋ ಮಾಜಿ ಮುಖ್ಯಸ್ಥ ಎಸ್‌. ಸೋಮನಾಥ್‌, ಗುಪ್ತಚರ ಬ್ಯೂರೋ (ಐಬಿ) ಮಾಜಿ ನಿರ್ದೇಶಕ ತಪನ್ ಡೇಕಾ, ಐಐಟಿ ಚೆನ್ನೈ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್ ಮತ್ತು ಸರಕು ಸಾಗಣೆ (ಲಾಜಿಸ್ಟಿಕ್ಸ್) ತಜ್ಞ ಅಮೃತ್ ಲಾಲ್ ಮೀನಾ ಇದ್ದಾರೆ.

3ನೇ ವಿಡಿಯೋ ಮೂಲಕ ಘೋಷಣೆ:

ಇತ್ತೀಚೆಗೆ ಜಿರಳೆ ಪಾರ್ಟಿ ಯುವಕರ ದಂಗೆ ತಣಿಸಲು 2 ಸೆಲ್ಫಿ ಇನ್‌ಸ್ಟಾಗ್ರಾಂ ವಿಡಿಯೋ ಬಿಡುಗಡೆ ಮಾಡಿದ್ದ ಮೋದಿ ಭಾನುವಾರ 3ನೇ ಇನ್‌ಸ್ಟಾ ವಿಡಿಯೋದಲ್ಲಿ ಮತ್ತೊಂದು ಮಹತ್ವದ ಘೋಷಣೆ ಮಾಡಿದರು.

‘ಪ್ರಖ್ಯಾತಜಾಗತಿಕ ತಂತ್ರಜ್ಞಾನ ತಜ್ಞ ನಂದನ್ ನಿಲೇಕಣಿ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆಯ ಸಲಹೆಗಳ ಮೇರೆಗೆ ಸರ್ಕಾರವು ದೀರ್ಘಕಾಲೀನ ರಚನಾತ್ಮಕ ಸುಧಾರಣೆಗಳನ್ನು ತರಲು, ತಂತ್ರಜ್ಞಾನ ದೃಷ್ಟಿಕೋನವನ್ನು ಜಾರಿಗೊಳಿಸಲು ಮತ್ತು ವ್ಯವಸ್ಥೆಯಲ್ಲಿನ ರಚನಾತ್ಮಕ ಸುಧಾರಣೆಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಇದು ಪರಿಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸಲು ಕೆಲಸ ಮಾಡುತ್ತದೆ’ ಎಂದು ಪ್ರಧಾನಿ ಹೇಳಿದರು.

‘ಸರ್ಕಾರವು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದವರು ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ನಾವು ಈಗಾಗಲೇ (ನೀಟ್‌ ಲೀಕ್‌ ಸಂಬಂಧಿಸಿದ ಪ್ರಕರಣಗಳ ತನಿಖೆಗೆ) ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ವಹಿಸಿದ್ದೇವೆ. ನಾಳೆ ಸಂಸತ್ತಿನಲ್ಲಿ, ಕಠಿಣ ನಿಬಂಧನೆಗಳನ್ನು ಒಳಗೊಂಡ ಹೊಸ ಕಾನೂನನ್ನು ಜಾರಿಗೆ ತರಲಿದ್ದೇವೆ’ ಎಂಬ ಮಾಹಿತಿಯನ್ನೂ ನೀಡಿದರು.

ಆಧಾರ್‌ ಶಿಲ್ಪಿಗೆ ಮಣೆ ಏಕೆ?:

ಬಯೋಮೆಟ್ರಿಕ್ ಗುರುತಿನ ಚೀಟಿಯಾದ ಆಧಾರ್‌ ಕಾರ್ಡ್‌ಅನ್ನು ಅಭಿವೃದ್ಧಿಪಡಿಸಿದ್ದ, ಇನ್ಫೋಸಿಸ್‌ನ ಸಹ-ಸಂಸ್ಥಾಪಕರೂ ಆಗಿರುವ ನಂದನ್‌ ನಿಲೇಕಣಿ ಅವರನ್ನು, ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಚನೆಯಾಗಿರುವ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿರುವುದು ಗಮನಾರ್ಹ.

ಮುಂಬರುವ ವರ್ಷಗಳಲ್ಲಿ ಪರೀಕ್ಷೆಗಳನ್ನು ನಡೆಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವ ಕಾರಣದಿಂದ, ಡಿಜಿಟಲ್‌ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ಅನುಭವವುಳ್ಳ ಇವರಿಗೆ ಈ ಜವಾಬ್ದಾರಿ ನೀಡಲಾಗಿದೆ. ನೀಟ್‌ ಸೇರಿ ಅನೇಕ ಮಹತ್ವದ ಪರೀಕ್ಷೆಗಳನ್ನು ಎನ್‌ಟಿಎ ನಡೆಸುತ್ತಿದ್ದು, ಅವುಗಳ ಸುಧಾರಣೆಗೆ ನಿಲೇಕಣಿ ಟೀಂ ಶಿಫಾರಸು ಮಾಡಲಿದೆ.

ನಿಲೇಕಣಿ ಅಪ್ರತಿಮ ಸಾಧಕ:

ಕನ್ನಡಿಗರಾದ ನಂದನ್‌ ನಿಲೇಕಣಿ ಅವರು ಐಐಟಿ ಬಾಂಬೆಯಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿಯನ್ನು ಪಡೆದವರು. 1981ರಲ್ಲಿ ಎನ್‌.ಆರ್‌. ನಾರಾಯಣ ಮೂರ್ತಿ ಅವರೊಂದಿಗೆ ಸೇರಿ ಇನ್ಫೋಸಿಸ್‌ ಎಂಬ ಟೆಕ್‌ ಸಂಸ್ಥೆ ಹುಟ್ಟುಹಾಕಿದ ಇವರು, 2002-2007ರ ಅವಧಿಯಲ್ಲಿ ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದರು.

ಬಳಿಕ ಭಾರತೀಯರಿಗೆ ವಿಶೇಷ ಬಯೋಮೆಟ್ರಿಕ್ ಗುರುತನ್ನು ನೀಡುವ ಆಧಾರ್‌ ಜಾರಿಗೆ ತರಲೆಂದು ರಚಿಸಲಾದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಡಿಎಐ) ಮುಖ್ಯಸ್ಥರನ್ನಾಗಿ ನಿಲೇಕಣಿ ಅವರನ್ನು 2009ರಲ್ಲಿ ನೇಮಿಸಲಾಯಿತು. ಆಗ ಆಧಾರ್‌ ಕಾರ್ಡ್‌ ತಂತ್ರಜ್ಞಾನವನ್ನು ರೂಪಿಸಿ ಜನಜನಿತರಾದರು. ಈ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಅವರು ಇನ್ಫೋಸಿಸ್‌ ತೊರೆದಿದ್ದರು, 2017ರಲ್ಲಿ ಮತ್ತೆ ಅದರ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಸೇರಿಕೊಂಡರು.

ಈ ನಡುವೆ 2014ರಲ್ಲಿ ನಿಲೇಕಣಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಎಚ್.ಎನ್‌. ಅನಂತಕುಮಾರ್‌ ವಿರುದ್ಧ ಸೋತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್‌ನಲ್ಲಿ ಯಾರಿದ್ದಾರೆ?
3ನೇ ಬಾರಿ ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ